ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

KKR vs PBKS Highlights: 42 ಸಿಕ್ಸರ್, 523 ರನ್; ಪಂಜಾಬ್‌ಗೆ ದಾಖಲೆಯ ಜಯ

Published 27 ಏಪ್ರಿಲ್ 2024, 2:48 IST
Last Updated 27 ಏಪ್ರಿಲ್ 2024, 2:48 IST
ಅಕ್ಷರ ಗಾತ್ರ

ಕೋಲ್ಕತ್ತ: ಜಾನಿ ಬೆಸ್ಟೊ (108*) ಬಿರುಸಿನ ಶತಕ ಮತ್ತು ಪ್ರಭಸಿಮ್ರನ್ ಸಿಂಗ್ (54) ಹಾಗೂ ಶಶಾಂಕ್ ಸಿಂಗ್ (68*) ಸ್ಫೋಟಕ ಅರ್ಧಶತಕಗಳ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಶುಕ್ರವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ದಾಖಲೆಯ ಎಂಟು ವಿಕೆಟ್ ಅಂತರದ ಗೆಲುವು ದಾಖಲಿಸಿತು.

ವಿಶ್ವ ದಾಖಲೆಯ ಜಯ...

ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ 262 ರನ್‌ಗಳನ್ನು ಬೆನ್ನತ್ತಿದ ಪಂಜಾಬ್ ತಂಡವು ಇನ್ನೂ ಎಂಟು ಎಸೆತಗಳು ಬಾಕಿಯಿರುವಾಗಲೇ ಗುರಿ ಮುಟ್ಟಿತು. ಅಲ್ಲದೇ ಟಿ20 ಕ್ರಿಕೆಟ್‌ನಲ್ಲಿ ಗುರಿ ಬೆನ್ನಟ್ಟಿ ಗೆದ್ದ ದೊಡ್ಡ ಮೊತ್ತ ಇದಾಗಿದೆ. ಕಳೆದ ವರ್ಷ ದಕ್ಷಿಣ ಆಫ್ರಿಕಾ ತಂಡವು ವೆಸ್ಟ್ ಇಂಡೀಸ್ ವಿರುದ್ಧ 259 ರನ್‌ಗಳ ಗುರಿ ಬೆನ್ನಟ್ಟಿ ಜಯಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಐಪಿಎಲ್‌ ಟೂರ್ನಿಯ ಇತಿಹಾಸದಲ್ಲಿಯೂ ಇದು ದಾಖಲೆಯಾಗಿದೆ. ಇದೇ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಇದೇ ಕ್ರೀಡಾಂಗಣದಲ್ಲಿ 224 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಮುಟ್ಟಿದ್ದ ದಾಖಲೆಯನ್ನೂ ಪಂಜಾಬ್ ಮೀರಿ ನಿಂತಿತು.

ಟಿ20 ರನ್ ಚೇಸಿಂಗ್‌ನಲ್ಲಿ ಗರಿಷ್ಠ ಮೊತ್ತ ದಾಖಲಿಸಿದ್ದ ಆರ್‌ಸಿಬಿ ದಾಖಲೆಯನ್ನು (262/7) ಪಂಜಾಬ್ ಸರಿಗಟ್ಟಿದೆ (262/2). ಐಪಿಎಲ್ ಇತಿಹಾಸದಲ್ಲಿ ತಂಡವೊಂದು ಒಟ್ಟು ಒಂಬತ್ತನೇ ಬಾರಿ 250ಕ್ಕೂ ಹೆಚ್ಚು ರನ್ ಗಳಿಸುವಲ್ಲಿ ಯಶಸ್ವಿಯಾಗಿದೆ.

ಸಿಕ್ಸರ್ ದಾಖಲೆ...

ಪಂಜಾಬ್ ಮತ್ತು ಕೋಲ್ಕತ್ತ ನಡುವಣ ಈ ಪಂದ್ಯದಲ್ಲಿ ಒಟ್ಟು 42 ಸಿಕ್ಸರ್‌ಗಳು ದಾಖಲಾದವು. ಇದು ಕೂಡ ದಾಖಲೆಯಾಗಿದೆ. ಇದೇ ಟೂರ್ನಿಯಲ್ಲಿ ಸನ್‌ರೈಸರ್ಸ್ ಹಾಗೂ ಆರ್‌ಸಿಬಿ ಮತ್ತು ಮುಂಬೈ ಹಾಗೂ ಹೈದರಾಬಾದ್ ನಡುವಣ ಪಂದ್ಯದಲ್ಲಿ ತಲಾ 38 ಸಿಕ್ಸರ್‌ಗಳು ದಾಖಲಾಗಿತ್ತು. ಪಂಜಾಬ್ ಇನಿಂಗ್ಸ್‌ನಲ್ಲಿ 24 ಹಾಗೂ ಕೋಲ್ಕತ್ತ ಇನ್ನಿಂಗ್ಸ್‌ನಲ್ಲಿ 18 ಸಿಕ್ಸರ್‌ಗಳು ದಾಖಲಾಯಿತು. ಈಚೆಗೆ ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧ ಸನ್‌ರೈಸರ್ಸ್ ತಂಡವು 22 ಸಿಕ್ಸರ್ ಹೊಡದಿದ್ದ ದಾಖಲೆಯನ್ನು ಪಂಜಾಬ್ ಮುರಿಯಿತು.

ಸಿಕ್ಸರ್ ಸಿಡಿಸಿದ ಬ್ಯಾಟರ್‌ಗಳ ಪಟ್ಟಿ:

ಪಿಲಿಫ್ ಸಾಲ್ಟ್: 6

ಸುನಿಲ್ ನಾರಾಯಣ್: 4

ವೆಂಕಟೇಶ್ ಅಯ್ಯರ್: 2

ಆ್ಯಂಡ್ರೆ ರಸೆಲ್: 2

ಶ್ರೇಯಸ್ ಅಯ್ಯರ್: 3

ರಮನ್‌ದೀಪ್ ಸಿಂಗ್: 1

ಪ್ರಭಸಿಮ್ರನ್ ಸಿಂಗ್: 5

ಜಾನಿ ಬೆಸ್ಟೊ: 9

ರಿಲೀ ರೂಸೊ: 2

ಶಶಾಂಕ್ ಸಿಂಗ್: 8

ಒಟ್ಟು 523 ರನ್...

ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್, ಸುನಿಲ್ ನಾರಾಯಣ್ (71 ರನ್, 32 ಎಸೆತ) ಹಾಗೂ ಪಿಲಿಫ್ ಸಾಲ್ಟ್ (75 ರನ್, 37 ಎಸೆತ) ಬಿರುಸಿನ ಅರ್ಧಶತಕಗಳ ನೆರವಿನಿಂದ ಆರು ವಿಕೆಟ್ ನಷ್ಟಕ್ಕೆ 261 ರನ್ ಗಳಿಸಿತು. ಈ ಗುರಿಯನ್ನು ಪಂಜಾಬ್ 18.4 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ತಲುಪಿತು. ಆ ಮೂಲಕ ಪಂದ್ಯದಲ್ಲಿ ಒಟ್ಟು 523 ರನ್ ದಾಖಲಾಯಿತು. ಇತ್ತೀಚೆಗೆ ಹೈದರಾಬಾದ್ ಹಾಗೂ ಮುಂಬೈ ನಡುವಣ ಪಂದ್ಯದಲ್ಲೂ 523 ರನ್ ದಾಖಲಾಗಿತ್ತು. ಇದೇ ಟೂರ್ನಿಯಲ್ಲಿ ಆರ್‌ಸಿಬಿ ಹಾಗೂ ಹೈದರಾಬಾದ್ ನಡುವಣ ಪಂದ್ಯದಲ್ಲಿ ಅತಿ ಹೆಚ್ಚು 549 ರನ್ ದಾಖಲಾಗಿದ್ದವು.

ಪಂಜಾಬ್ ಕಿಂಗ್ಸ್‌ಗೆ ಗೆಲುವು

ಪಂಜಾಬ್ ಕಿಂಗ್ಸ್‌ಗೆ ಗೆಲುವು

(ಪಿಟಿಐ ಚಿತ್ರ)

ಎಲ್ಲ 4 ಆರಂಭಿಕ ಬ್ಯಾಟರ್‌ಗಳಿಂದ ಅರ್ಧಶತಕ ಸಾಧನೆ...

ಇದೇ ಮೊದಲ ಬಾರಿಗೆ ಐಪಿಎಲ್ ಪಂದ್ಯವೊಂದರಲ್ಲಿ ಎಲ್ಲ ನಾಲ್ಕು ಬ್ಯಾಟರ್‌ಗಳು ಅರ್ಧಶತಕದ ಸಾಧನೆ ಮಾಡಿದ್ದಾರೆ. ಈ ಪಂದ್ಯದಲ್ಲಿ ಕೆಕೆಆರ್ ಪರ ಸುನಿಲ್ ನಾರಾಯಣ್ (71) ಹಾಗೂ ಪಿಲಿಫ್ ಸಾಲ್ಟ್ (75) ಮತ್ತು ಪಂಜಾಬ್ ಪರ ಜಾನಿ ಬೆಸ್ಟೊ (108*) ಹಾಗೂ ಪ್ರಭಸಿಮ್ರನ್ ಸಿಂಗ್ (68*) ಅರ್ಧಶತಕಗಳನ್ನು ಗಳಿಸಿದ್ದಾರೆ.

ಈ ಪಂದ್ಯದಲ್ಲಿ ಒಟ್ಟು ಐದು ಅರ್ಧಶತಕಗಳು 25ಕ್ಕೂ ಕಡಿಮೆ ಎಸೆತದಲ್ಲಿ (200ಕ್ಕಿಂತಲೂ ಹೆಚ್ಚು ಸ್ಟ್ರೈಕ್‌ರೇಟ್) ದಾಖಲಾಗಿವೆ. ಇದು ಕೂಡ ಐಪಿಎಲ್‌ನ ದಾಖಲೆಯಾಗಿದೆ. ಸಾಲ್ಟ್ (25), ನಾರಾಯಣ್ (23), ಪ್ರಭಸಿಮ್ರನ್ ಸಿಂಗ್ (18), ಬೆಸ್ಟೊ (23) ಮತ್ತು ಶಶಾಂಕ್ (23) ಎಸೆತಗಳಲ್ಲಿ ಅರ್ಧಶತಕಗಳ ಸಾಧನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT