ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | DC vs SRH: ರಿಷಭ್ ಸ್ವಾಗತಕ್ಕೆ ತವರಿನಂಗಳ ಸಿದ್ಧ

ದೀರ್ಘ ಸಮಯದ ನಂತರ ದೆಹಲಿಯಲ್ಲಿ ಪಂತ್ ಆಟ; ಡೆಲ್ಲಿ ಕ್ಯಾಪಿಟಲ್ಸ್‌–ಸನ್‌ರೈಸರ್ಸ್‌ ಹೈದರಾಬಾದ್ ಹಣಾಹಣಿ ಇಂದು
Published 20 ಏಪ್ರಿಲ್ 2024, 0:12 IST
Last Updated 20 ಏಪ್ರಿಲ್ 2024, 0:12 IST
ಅಕ್ಷರ ಗಾತ್ರ

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಅವರು ತಮ್ಮ ತವರಿನ ಅಭಿಮಾನಿಗಳ ಮುಂದೆ ದೀರ್ಘ ಅವಧಿಯ ನಂತರ ಮರಳುತ್ತಿದ್ದಾರೆ. 

ಇದರಿಂದಾಗಿ ಅವರ ಆಟವನ್ನು ನೋಡಲು ರಾಜಧಾನಿಯ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಶನಿವಾರ ಅರುಣ್ ಜೇ‌ಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ರಿಷಭ್ ನಾಯಕತ್ವದ ಡೆಲ್ಲಿ ತಂಡವು ಸನ್‌ರೈಸರ್ಸ್‌ ಹೈದರಾಬಾದ್  ತಂಡವನ್ನು ಎದುರಿಸಲಿದೆ.  ಆಡಿದ ಪಂದ್ಯಗಳಲ್ಲಿ ಎದುರಾಳಿ ಬೌಲರ್‌ಗಳನ್ನು ಹಣಿಯುತ್ತ ರನ್‌ಗಳನ್ನು ಸೂರೆ ಮಾಡುತ್ತ ನಡೆದಿರುವ ಪ್ಯಾಟ್ ಕಮಿನ್ಸ್‌ ನಾಯಕತ್ವದ ಸನ್‌ರೈಸರ್ಸ್ ತಂಡದ ಓಟಕ್ಕೆ ಇಲ್ಲಿ ಕಡಿವಾಣ ಬೀಳುವುದೇ ಎಂಬ ಕುತೂಹಲವೂ ಗರಿಗೆದರಿದೆ. 

2022ರಲ್ಲಿ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಿಷಭ್ ಸುಮಾರು ಒಂದೂವರೆ ವರ್ಷ ಕ್ರಿಕೆಟ್‌ನಿಂದ ದೂರವಿದ್ದರು. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅವರು ಮರಳಿ ಕಣಕ್ಕಿಳಿದಿದ್ದಾರೆ. ಉತ್ತಮ ಲಯದಲ್ಲಿಯೂ ಇದ್ದಾರೆ. ಕಳೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಎದುರು ಅಮೋಘವಾದ ವಿಕೆಟ್‌ಕೀಪಿಂಗ್ ಹಾಗೂ ಬ್ಯಾಟಿಂಗ್ ಮೂಲಕ ಪಂದ್ಯಶ್ರೇಷ್ಠ ಗೌರವಕ್ಕೂ ಪಾತ್ರರಾದರು. 

ಈ ಟೂರ್ನಿಯಲ್ಲಿ ಇದುವರೆಗೆ ಡೆಲ್ಲಿ ಆತಿಥ್ಯದ ಪಂದ್ಯಗಳು ವಿಶಾಖಪಟ್ಟಣ (ಎರಡನೇ ತವರು) ಕ್ರೀಡಾಂಗಣದಲ್ಲಿ ನಡೆದಿದ್ದವು. ಡೆಲ್ಲಿ ತಂಡವು ಇದುವೆಗೆ ಒಟ್ಟು ಏಳು ಪಂದ್ಯಗಳನ್ನು ಆಡಿದ್ದು 3 ಗೆದ್ದು, 4ರಲ್ಲಿ ಸೋತಿದೆ. ಇದೀಗ  ಎರಡನೇ ಸುತ್ತಿನಲ್ಲಿ ಹೆಚ್ಚು ಪಂದ್ಯಗಳನ್ನು ಗೆದ್ದು ಪ್ಲೇಆಫ್‌ಗೆ ಪ್ರವೇಶಿಸುವ ಛಲದಲ್ಲಿದೆ.

ಸನ್‌ರೈಸರ್ಸ್ ತಂಡವು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈ ತಂಡವು ಬೃಹತ್ ಮೊತ್ತಗಳ (3ಕ್ಕೆ277 ಹಾಗೂ 3ಕ್ಕೆ287) ದಾಖಲೆ ಬರೆಯುವ ಮೂಲಕ ಐಪಿಎಲ್ ಬ್ಯಾಟಿಂಗ್‌ ವ್ಯಾಖ್ಯಾನವನ್ನೇ ಬದಲಿಸಿಬಿಟ್ಟಿದೆ. ಟ್ರಾವಿಸ್ ಹೆಡ್ (235 ರನ್), ಅಭಿಷೇಕ್ ಶರ್ಮಾ (211 ರನ್), ಏಡನ್ ಮರ್ಕರಂ, ಹೆನ್ರಿಚ್ ಕ್ಲಾಸನ್ ಅವರೆಲ್ಲರೂ ಚೆಂಡು ಇರುವುದೇ ಬೌಂಡರಿಗೆರೆಯಾಚೆಗೆ ಹೊಡೆಯಲು ಎಂಬ ಧೋರಣೆಯೊಂದಿಗೆ ಆಡುತ್ತಿದ್ದಾರೆ.

ಅವರ ಈ ರಭಸಕ್ಕೆ ಡೆಲ್ಲಿ ತಂಡದ ಎಡಗೈ ವೇಗಿ ಖಲೀಲ್ ಅಹಮದ್, ಅನುಭವಿ ಇಶಾಂತ್ ಶರ್ಮಾ, ಮುಕೇಶ್ ಕುಮಾರ್, ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಹಾಗೂ ಅಕ್ಷರ್ ಪಟೇಲ್ ಅವರು ಕಡಿವಾಣ ಹಾಕಿದರೆ ಜಯದ ಹಾದಿ ಸುಲಭ. ಆತಿಥೇಯರ ಬ್ಯಾಟಿಂಗ್‌ನಲ್ಲಿ ಆರಂಭಿಕರಾದ ಪೃಥ್ವಿ ಶಾ ಮತ್ತು ಯುವ ಆಟಗಾರ ಜೇಕ್ ಫ್ರೆಸರ್ ಮೆಕ್‌ಗುರ್ಕ್ ಅವರು ಗಟ್ಟಿ ಅಡಿಪಾಯ ಹಾಕುವ ಅಗತ್ಯವಿದೆ. ರಿಷಭ್, ಟ್ರಿಸ್ಟನ್ ಸ್ಟಬ್ಸ್‌ ಹಾಗೂ ಶಾಯ್ ಹೋಪ್ ಅವರು ಮಧ್ಯಮ ಕ್ರಮಾಂಕದಲ್ಲಿದ್ಧಾರೆ. ಹೈದರಾಬಾದ್ ತಂಡದ ಕಮಿನ್ಸ್, ಭುವನೇಶ್ವರ್ ಕುಮಾರ್, ಟಿ. ನಟರಾಜನ್ ಹಾಗೂ ಮಯಂಕ್ ಮಾರ್ಕಂಡೆ ಅವರ ಬೌಲಿಂಗ್‌ ಎದುರಿಸುವ ಸವಾಲು ಅವರ ಮುಂದೆ ಇದೆ. 

ಡೆಲ್ಲಿಯಲ್ಲಿ ರಾತ್ರಿಯ ಹೊತ್ತು ಇಬ್ಬನಿಯ ಪ್ರಭಾವ ಹೆಚ್ಚಿದೆ. ಅಲ್ಲದೇ ಕ್ರೀಡಾಂಗಣದ ಪಿಚ್‌ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡುವ ಸಾಧ್ಯತೆ ಇದೆ. 

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್, ಜಿಯೊ ಸಿನಿಮಾ ಆ್ಯಪ್ 

ಸನ್‌ರೈಸರ್ಸ್‌ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್‌

ಸನ್‌ರೈಸರ್ಸ್‌ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್‌ 

–ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT