ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌: ಗುಲ್ಬರ್ಗಕ್ಕೆ ನಿರಾಯಾಸ ಗೆಲುವು

ಮಿಂಚಿದ ಲವನೀತ್‌, ಅಭಿಷೇಕ್ ಪ್ರಭಾಕರ್
Published 21 ಆಗಸ್ಟ್ 2024, 23:58 IST
Last Updated 21 ಆಗಸ್ಟ್ 2024, 23:58 IST
ಅಕ್ಷರ ಗಾತ್ರ

ಬೆಂಗಳೂರು: ಗುಲ್ಬರ್ಗ ಮಿಸ್ಟಿಕ್ಸ್ ತಂಡ, ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿ ಪಂದ್ಯದಲ್ಲಿ ಬುಧವಾರ ಶಿವಮೊಗ್ಗ ಲಯನ್ಸ್ ತಂಡವನ್ನು 9 ವಿಕೆಟ್‌ಗಳಿಂದ ನಿರಾಯಾಸವಾಗಿ ಸೋಲಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬ್ಯಾಟ್‌ ಮಾಡಲು ಕಳುಹಿಸಲ್ಪಟ್ಟ ಲಯನ್ಸ್ ತಂಡ, ಗುಲ್ಬರ್ಗದ ವೇಗದ ದಾಳಿಗೆ ಸಿಲುಕಿ 18.1 ಓವರುಗಳಲ್ಲಿ 126 ರನ್‌ಗಳಿಗೆ ಕುಸಿಯಿತು. ಆರಂಭ ಆಟಗಾರ ಹಾಗೂ ವಿಕೆಟ್‌ ಕೀಪರ್‌ ಲವನೀತ್ ಸಿಸೋಡಿಯಾ ಆಕ್ರಮಣಕಾರಿಯಾಗಿ ಆಡಿ ಅಜೇಯ 62 ರನ್ (35ಎ, 4x5, 6x5) ಗಳಿಸುವ ಮೂಲಕ ಮಿಸ್ಟಿಕ್ಸ್ ತಂಡ 11.4 ಓವರುಗಳಲ್ಲಿ 1 ವಿಕೆಟ್‌ಗೆ 127 ರನ್ ಗಳಿಸಿ ಸುಲಭ ಗೆಲುವು ದಾಖಲಿಸಿತು.

ಬೌಲಿಂಗ್‌ನಲ್ಲಿ 22 ರನ್ನಿಗೆ 3 ವಿಕೆಟ್‌ ಪಡೆದ ಗುಲ್ಬರ್ಗ ತಂಡದ ಅಭಿಷೇಕ್ ಪ್ರಭಾಕರ್ ನಂತರ 14 ಎಸೆತಗಳಲ್ಲಿ ಅಜೇಯ 31 ರನ್ ಸಿಡಿಸಿ ಪಂದ್ಯದ ಆಟಗಾರ ಗೌರವಕ್ಕೆ ಪಾತ್ರರಾದರು.

ಲವನೀತ್ ಮತ್ತು ನಾಯಕ ದೇವದತ್ತ ಪಡಿಕ್ಕಲ್ (27, 24ಎ) ಮೊದಲ ವಿಕೆಟ್‌ಗೆ ಕೇವಲ 7.1 ಓವರು ಗಳಲ್ಲಿ 77 ರನ್‌ ಸೇರಿಸಿ ಗುಲ್ಬರ್ಗ ತಂಡದ ವಿಜಯಕ್ಕೆ ಭದ್ರಬುನಾದಿ ಹಾಕಿಕೊಟ್ಟರು.

ಪಡಿಕ್ಕಲ್‌ ನಿರ್ಗಮಿಸಿದ ನಂತರ ಅಭಿಷೇಕ್ ಪ್ರಭಾಕರ್‌ ಅಜೇಯ 31 (14ಎ, 4x5, 6x1) ರನ್ ಹೊಡೆದರು. ಮುರಿಯದ ಎರಡನೇ ವಿಕೆಟ್‌ಗೆ ಲವನೀತ್ ಮತ್ತು ಅಭಿಷೇಕ್ ಕೇವಲ 21 ಎಸೆತಗಳಲ್ಲಿ 55 ರನ್‌ಗಳ  ಜೊತೆಯಾಟವಾಡಿದರು.

ಇದಕ್ಕೆ ಮೊದಲು ಅಭಿಷೇಕ್ ಪ್ರಭಾಕರ್ ಮತ್ತು ಯಶೋವರ್ಧನ್ ಪರಂತಾಪ್  ಅವರ ವೇಗದ ದಾಳಿಗೆ ಸಿಲುಕಿದ ಲಯನ್ಸ್ ತಂಡ 126 ರನ್‌ಗಳಿಗೆ ಕುಸಿಯಿತು. ಇಬ್ಬರೂ ಬೌಲರ್‌ಗಳು ತಲಾ 3 ವಿಕೆಟ್ ಪಡೆದರು. ಅಭಿನವ್ ಮನೋಹರ್‌ 36 ಎಸೆತಗಳಲ್ಲಿ 55 ರನ್ ಗಳಿಸಿದ್ದರಿಂದ ತಂಡ ನೂರರ ಗಡಿದಾಟಲು ಸಾಧ್ಯವಾಯಿತು.

ಸ್ಕೋರುಗಳು:

ಶಿವಮೊಗ್ಗ ಲಯನ್ಸ್‌: 18.1 ಓವರುಗಳಲ್ಲಿ 126 (ಮೋಹಿತ್‌ ಬಿ.ಎ. 13, ಧ್ರುವ್ ಪ್ರಭಾಕರ್‌ 15, ಅಭಿನವ್ ಮನೋಹರ್ 55; ಮೋನಿಶ್ ರೆಡ್ಡಿ 21ಕ್ಕೆ1, ರಿತೇಶ್‌ ಭಟ್ಕಳ್ 20ಕ್ಕೆ1, ಪೃಥ್ವಿರಾಜ್ ಶೇಖಾವತ್ 7ಕ್ಕೆ1, ಯಶೋವರ್ಧನ್ ಪರಂತಾಪ್ 24ಕ್ಕೆ3, ಅಭಿಷೇಕ್ ಪ್ರಭಾಕರ್ 22ಕ್ಕೆ3);

ಗುಲ್ಬರ್ಗ ಮಿಸ್ಟಿಕ್ಸ್‌: 11.4 ಓವರುಗಳಲ್ಲಿ 1 ವಿಕೆಟ್‌ಗೆ 127 (ಲವನೀತ್ ಸಿಸೋಡಿಯಾ ಔಟಾಗದೇ 62, ದೇವದತ್ತ ಪಡಿಕ್ಕಲ್ 27, ಅಭಿಷೇಕ್‌ ಪ್ರಭಾಕರ್‌ ಔಟಾಗದೇ 31).

ಮೈಸೂರು ವಾರಿಯರ್ಸ್‌: 19.3 ಓವರ್‌ಗಳಲ್ಲಿ 165 (ಕಾರ್ತಿಕ್‌ ಎಸ್‌.ಯು. 34, ಕರುಣ್‌ ನಾಯರ್‌ 66, ಕುಮಾರ್‌ ಎಲ್‌.ಆರ್‌. 39ಕ್ಕೆ 3, ಮನ್ವಂತ್‌ ಕುಮಾರ್‌ ಎಲ್‌. 34ಕ್ಕೆ 3, ಕೆ.ಸಿ. ಕಾರಿಯಪ್ಪ 26ಕ್ಕೆ 2).

ಹುಬ್ಬಳ್ಳಿ ಟೈಗರ್ಸ್‌: 17 ಓವರ್‌ಗಳಲ್ಲಿ 110 (ಮೊಹಮ್ಮದ್‌ ತಹಾ 22; ಜೆ.ಸುಚಿತ್‌ 14ಕ್ಕೆ 4, ವಿದ್ಯಾಧರ ಪಾಟೀಲ 21ಕ್ಕೆ 2, ಕೆ. ಗೌತಮ್‌ 22ಕ್ಕೆ 2). ಪಂದ್ಯದ ಆಟಗಾರ: ಜೆ ಸುಚಿತ್‌

ಮೈಸೂರು ವಾರಿಯರ್ಸ್‌ಗೆ ಸುಲಭ ಜಯ

ನಾಯಕ ಕರುಣ್‌ ನಾಯರ್‌ (66;36ಎ) ಅವರ ಅರ್ಧಶತಕ ಮತ್ತು ಜೆ.ಸುಚಿತ್‌ (14ಕ್ಕೆ 4) ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿಯ ಬಲದಿಂದ ದಿನದ ಮತ್ತೊಂದು ಪಂದ್ಯದಲ್ಲಿ ಮೈಸೂರು ವಾರಿಯರ್ಸ್‌ ತಂಡವು ಹುಬ್ಬಳ್ಳಿ ಟೈಗರ್ಸ್‌ ವಿರುದ್ಧ 55 ರನ್‌ಗಳ ಸುಲಭ ಜಯ ಸಾಧಿಸಿತು.

ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಮೈಸೂರು ತಂಡವು 19.3 ಓವರ್‌ಗಳಲ್ಲಿ 165 ರನ್‌ಗೆ ಆಲೌಟ್‌ ಆಯಿತು. ಕುಮಾರ್‌ ಎಲ್‌.ಆರ್‌. ಮತ್ತು ಮನ್ವಂತ್‌ ಕುಮಾರ್‌ ಎಲ್. ತಲಾ ಮೂರು ವಿಕೆಟ್‌ ಪಡೆದು ಮಿಂಚಿದರು.

ಹುಬ್ಬಳ್ಳಿ ತಂಡವು 17 ಓವರ್‌ಗಳಲ್ಲಿ 110 ರನ್‌ ಗಳಿಸಿ ಹೋರಾಟವನ್ನು ಮುಗಿಸಿತು. ಮೊಹಮ್ಮದ್‌ ತಹಾ (22) ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ವಿದ್ಯಾಧರ ಪಾಟೀಲ ಮತ್ತು ಕೆ. ಗೌತಮ್‌ ತಲಾ ಎರಡು ವಿಕೆಟ್‌ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT