ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು ಬೆನ್ನಲ್ಲೇ ಪಾಕಿಸ್ತಾನ ಆಯ್ಕೆ ಸಮಿತಿ ಪುನಾರಚನೆ

Published : 11 ಅಕ್ಟೋಬರ್ 2024, 9:48 IST
Last Updated : 11 ಅಕ್ಟೋಬರ್ 2024, 9:48 IST
ಫಾಲೋ ಮಾಡಿ
Comments

ಲಾಹೋರ್‌: ಮುಲ್ತಾನ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಹೀನಾಯ ಸೋಲುನುಭವಿಸಿದ ಬೆನ್ನಲ್ಲೇ, ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಪುನಾರಚನೆ ಮಾಡಿದೆ.

ಮಾಜಿ ಟೆಸ್ಟ್ ಆಟಗಾರರಾದ ಅಖಿಬ್ ಜಾವೇದ್, ಅಜರ್ ಅಲಿ, ಮಾಜಿ ಅಂಪೈರ್ ಅಲಿಂ ದಾರ್‌ ಹಾಗೂ ವಿಶ್ಲೇಷಕ ಹಸನ್ ಚೀಮಾ ಅವರನ್ನು ಸಮಿತಿಗೆ ನೇಮಕ ಮಾಡಿದೆ.

ಸಮಿತಿಯ ಎಲ್ಲಾ ಸದಸ್ಯರಿಗೂ ಮತದಾನದ ಹಕ್ಕು ಇರಲಿದೆ ಎಂದು ಪಿಸಿಬಿ ತಿಳಿಸಿದೆ. ಆದರೆ ಮುಖ್ಯ ಕೋಚ್‌ಗಳಾದ ಗ್ಯಾರಿ ಕಸ್ಟರ್ನ್ ಹಾಗೂ ಜೇಸನ್ ಗಿಲ್ಲೆಸ್ಪಿ ಸಮಿತಿಯಲ್ಲಿ ಮುಂದುವರಿಯಲಿದ್ದಾರೆಯೇ ಅಥವಾ ಅವರಿಗೆ ಮತದಾನ ಹಕ್ಕು ಇರಲಿದೆ ಎನ್ನುವುದರ ಬಗ್ಗೆ ಪಿಸಿಬಿ ಸ್ಪಷ್ಟ‍‍ಪಡಿಸಿಲ್ಲ.

ಅಖಿಬ್‌ ಜಾವೇದ್‌ ಈ ಹಿಂದೆ ಬೋರ್ಡ್ ಹಾಗೂ ತಂಡದ ಟೀಕಾಕಾರರಾಗಿದ್ದರು. ಅಲ್ಲದೆ ಇದೇ ಮೊದಲ ಬಾರಿಗೆ ಅಂಪೈರ್‌ ಒಬ್ಬರನ್ನು ರಾಷ್ಟ್ರೀಯ ತಂಡ ಆಯ್ಕೆಗಾರರಾಗಿ ಪಿಸಿಬಿ ನೇಮಕ ಮಾಡಿದೆ.

ಅಲಿಂ ಅವರು ಇತ್ತೀಚೆಗಷ್ಟೇ ಅಂತರರಾಷ್ಟ್ರೀಯ ಅಂಪೈರಿಂಗ್‌ಗೆ ವಿದಾಯ ಹೇಳಿದ್ದರು.

ಎರಡು ಅಧ್ಯಕ್ಷರ ನೇತೃತ್ವದಲ್ಲಿ ಕಳೆದ ಒಂದು ವರ್ಷದಲ್ಲಿ ಹಲವು ಬಾರಿ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ಪಿಸಿಬಿ ಪರಿಷ್ಕರಿಸಿದೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಉಳಿದೆರಡು ‍ಪಂದ್ಯಗಳಿಗೆ ಮತ್ತು ಮುಂಬರುವ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ತಂಡವನ್ನು ಆಯ್ಕೆ ಮಾಡುವ ಗುರುತರ ಜವಾಬ್ದಾರಿ ಹೊಸ ಸಮಿತಿ ಮೇಲಿದೆ.

ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ ರನ್ ಹೊಳೆಯಲ್ಲಿ ಕೊಚ್ಚಿ ಹೋಗಿದ್ದ ಪಾಕಿಸ್ತಾನ, ಇನಿಂಗ್ಸ್ ಹಾಗೂ 47 ರನ್‌ಗಳ ಅಂತರದಿಂದ ಸೋತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT