ಶನಿವಾರ, 29 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

T20 World Cup | IND vs ENG: ಭಾರತಕ್ಕೆ ಇದು ಮುಯ್ಯಿ ತೀರಿಸಿಕೊಳ್ಳುವ ಹೊತ್ತು

Published 26 ಜೂನ್ 2024, 22:33 IST
Last Updated 26 ಜೂನ್ 2024, 22:33 IST
ಅಕ್ಷರ ಗಾತ್ರ

ಜಾರ್ಜ್‌ಟೌನ್, ಗಯಾನ: ಆಕ್ರಮಣಶೀಲ ಬ್ಯಾಟಿಂಗ್ ರೂಢಿಸಿಕೊಂಡಿರುವ ಭಾರತ ತಂಡವು  ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡದ ವಿರುದ್ಧ ‘ಮುಯ್ಯಿ’ ತೀರಿಸಿಕೊಳ್ಳುವ ಛಲದಲ್ಲಿದೆ. 

ಇದರೊಂದಿಗೆ ನಾಕೌಟ್ ಹಂತದ ವೈಫಲ್ಯವನ್ನು ಮೆಟ್ಟಿ ನಿಲ್ಲುವ ತವಕದಲ್ಲಿದೆ. ಗುರುವಾರ  ಇಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಎದುರಿಸಲಿದೆ. 

2022ರ ಚುಟುಕು ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಇಂಗ್ಲೆಂಡ್ ಜಯಿಸಿತ್ತು.  

ಆದರೆ ಈ ಬಾರಿಯ ಟೂರ್ನಿಯಲ್ಲಿ ಅಮೋಘ ಲಯದಲ್ಲಿರುವ ಭಾರತ ತಂಡವು ಇದುವರೆಗೆ ಒಂದೂ ಪಂದ್ಯದಲ್ಲಿ ಸೋಲದೇ  ನಾಲ್ಕರ ಹಂತಕ್ಕೆ ಪ್ರವೇಶಿಸಿದೆ. ಸೂಪರ್ 8ರ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಶರ್ಮಾ (92; 41ಎಸೆತ) ಅಬ್ಬರಿಸಿದ ರೀತಿಯಿಂದಾಗಿ ತಂಡದ ಬ್ಯಾಟಿಂಗ್ ವಿಭಾಗಕ್ಕೆ ನೂರಾನೆ ಬಲ ಬಂದಂತಾಗಿದೆ. ಅವರು ಇಲ್ಲಿಯ ಪ್ರಾವಿಡೆನ್ಸ್‌ ಕ್ರೀಡಾಂಗಣದಲ್ಲಿಯೂ ರೋಹಿತ್ ಅವರ ಬೀಸಾಟ ಮುಂದುವರಿಯುವ ನಿರೀಕ್ಷೆ ಇದೆ. 

ಅವರೊಂದಿಗೆ ವಿರಾಟ್ ಕೊಹ್ಲಿ ಕೂಡ ತಮ್ಮ ಲಯಕ್ಕೆ ಮರಳಿದರೆ ಇನಿಂಗ್ಸ್‌ಗೆ ಅಮೋಘ ಆರಂಭ ದೊರಕುವುದು ಖಚಿತ. ಅವರು ಬಹುತೇಕ ಎಲ್ಲ ಪಂದ್ಯಗಳಲ್ಲಿಯೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ರೋಹಿತ್ ಮತ್ತು ವಿರಾಟ್ ಅವರಿಬ್ಬರಿಗೂ ಬಹುತೇಕ ಇದು ಕೊನೆಯ ವಿಶ್ವಕಪ್ ಟೂರ್ನಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಗೆಲುವಿನ ಹೆಜ್ಜೆಗುರುತು ಉಳಿಸಿ ಹೋಗುವ ಛಲವೂ ಅವರಿಗೆ ಇದೆ. 

ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ ತಮ್ಮ ನೈಜ ಆಟವನ್ನು ತೋರುವಲ್ಲಿ ಪೂರ್ಣವಾಗಿ ಸಫಲರಾಗಿಲ್ಲ. ಉಳಿದಂತೆ ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ಅವರ ಮೇಲೆ ವಿಶ್ವಾಸವಿಡಬಹುದು. ಸೂರ್ಯಕುಮಾರ್  ಯಾದವ್ ಕೂಡ ಮಿಂಚಿದರೆ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಗಲಿದೆ. 

ಇಲ್ಲಿಯ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗುವ ಸಾಧ್ಯತೆ ಇದೆ. ಆದ್ದರಿಂದ ಮೂವರು ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್, ರವೀಂದ್ರ ಜಡೇಜ ಮತ್ತು ಅಕ್ಷರ್ ಪಟೇಲ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಬಹುದು. 

ಜಸ್‌ಪ್ರೀತ್ ಬೂಮ್ರಾ ಮತ್ತು ಅರ್ಷದೀಪ್ ಸಿಂಗ್ ಅವರು ಅಮೋಘ ಲಯದಲ್ಲಿದ್ದು  ಇಂಗ್ಲೆಂಡ್ ಬ್ಯಾಟರ್‌ಗಳಿಗೆ ಸವಾಲೊಡ್ಡಬಲ್ಲರು. 

ನಾಯಕ ಜೋಸ್ ಬಟ್ಲರ್, ಫೀಲ್ ಸಾಲ್ಟ್, ಜಾನಿ ಬೆಸ್ಟೊ ಹಾಗೂ ಹ್ಯಾರಿ ಬ್ರೂಕ್ ಅವರು ರನ್‌ಗಳ ಹೊಳೆ ಹರಿಸುವ ಸಮರ್ಥರು. ಆಲ್‌ರೌಂಡರ್ ಸ್ಯಾಮ್ ಕರನ್ ತಂಡಕ್ಕೆ ಆಸರೆಯಾಗುವ ಆಟಗಾರ. 

ವೇಗಿಗಳಾದ ಜೋಫ್ರಾ ಆರ್ಚರ್ ಮತ್ತು ಕ್ರಿಸ್ ಜೋರ್ಡನ್ ಕಳೆದ ಪಂದ್ಯಗಳಲ್ಲಿ ತಮ್ಮ ಭುಜಬಲವನ್ನು ತೋರಿಸಿದ್ದಾರೆ. ಅನುಭವಿ ಮೋಯಿನ್ ಅಲಿ ಮತ್ತು ಆದಿಲ್ ರಶೀದ್ ಅವರು ಪಂದ್ಯಕ್ಕೆ ‘ತಿರುವು’ ನೀಡಬಲ್ಲ ಸ್ಪಿನ್ನರ್‌ಗಳು. ಬ್ಯಾಟಿಂಗ್‌ನಲ್ಲಿಯೂ ಮಹತ್ವದ ಕಾಣಿಕೆ ನೀಡುವ ಸಮರ್ಥರು. 

ತಂಡಗಳು

ಭಾರತ: ರೋಹಿತ್ ಶರ್ಮಾ (ನಾಯಕ) ವಿರಾಟ್ ಕೊಹ್ಲಿ ರಿಷಭ್ ಪಂತ್ (ವಿಕೆಟ್‌ಕೀಪರ್) ಸೂರ್ಯಕುಮಾರ್ ಯಾದವ್ ಹಾರ್ದಿಕ್ ಪಾಂಡ್ಯ ಶಿವಂ ದುಬೆ ರವೀಂದ್ರ ಜಡೇಜ ಅಕ್ಷರ್ ಪಟೇಲ್ ಜಸ್‌ಪ್ರೀತ್ ಬೂಮ್ರಾ ಕುಲದೀಪ್ ಯಾದವ್ ಅರ್ಷದೀಪ್ ಸಿಂಗ್. 

ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ/ವಿಕೆಟ್‌ಕೀಪರ್) ಫಿಲ್ ಸಾಲ್ಟ್ ಜಾನಿ ಬೆಸ್ಟೊ ಹ್ಯಾರಿ ಬ್ರೂಕ್ ಮೋಯಿನ್ ಅಲಿ ಲಿಯಾಮ್ ಲಿವಿಂಗ್‌ಸ್ಟೋನ್ ಸ್ಯಾಮ್ ಕರನ್ ಕ್ರಿಸ್ ಜೋರ್ಡನ್ ಜೋಫ್ರಾ ಆರ್ಚರ್ ಆದಿಲ್ ರಶೀದ್ ರೀಸ್ ಟಾಪ್ಲಿ. ಪಂದ್ಯ ಅರಂಭ: ರಾತ್ರಿ 8

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT