ಶನಿವಾರ, 29 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

T20 WC | ಸೆಮಿ 'ಗುಮ್ಮ' ಮೆಟ್ಟಿನಿಂತ ದಕ್ಷಿಣ ಆಫ್ರಿಕಾ; ಅಫ್ಗನ್ ಮಣಿಸಿ ಫೈನಲ್‌ಗೆ

Published 27 ಜೂನ್ 2024, 2:03 IST
Last Updated 27 ಜೂನ್ 2024, 2:03 IST
ಅಕ್ಷರ ಗಾತ್ರ

ತರೂಬಾ (ಟ್ರಿನಿಡಾಡ್‌): ಅಫ್ಗಾನಿಸ್ತಾನ ತಂಡದ ಅಮೋಘ ಯಶಸ್ಸಿನ ಓಟಕ್ಕೆ ಗುರುವಾರ ನಡೆದ ಸೆಮಿಫೈನಲ್‌ನಲ್ಲಿ ಸುಲಭವಾಗಿ ತಡೆಹಾಕಿದ ದಕ್ಷಿಣ ಆಫ್ರಿಕಾ ತಂಡ ಪ್ರಪ್ರಥಮ ಬಾರಿ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪ್ರವೇಶಿಸಿತು.

ಟೂರ್ನಿಯಲ್ಲಿ ಪ್ರಬಲ ತಂಡಗಳನ್ನು ಮಣಿಸಿ ಈ ಹಂತಕ್ಕೆ ಬಂದಿದ್ದ ರಶೀದ್ ಖಾನ್‌ ಬಳಗ, ಈ ಸೋಲಿನ ಹೊರತಾಗಿಯೂ, ಸಾಧನೆಯ ನೆನಪಿನೊಡನೆ ತವರಿಗೆ ಹೆಮ್ಮೆಯಿಂದ ಹಿಂತಿರುಗಲಿದೆ.

ವೇಗದ ಬೌಲರ್‌ಗಳಾದ ಮಾರ್ಕೊ ಯಾನ್ಸೆನ್‌ (16ಕ್ಕೆ3), ಕಗಿಸೊ ರಬಾಡ (14ಕ್ಕೆ2) ಮತ್ತು ಆ್ಯನ್ರಿಚ್‌ ನಾಕಿಯಾ (7ಕ್ಕೆ2) ಅವರು ಅಫ್ಗಾನಿಸ್ತಾನದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ನಂತರ ಲೆಗ್‌ ಸ್ಪಿನ್ನರ್‌ ತಬ್ರೇಜ್ ಶಂಸಿ (6ಕ್ಕೆ3) ಅವರು ಬಾಲ ಬೆಳೆಯಲು ಬಿಡಲಿಲ್ಲ. ತಂಡ 11.5 ಓವರುಗಳಲ್ಲಿ ಕೇವಲ 56 ರನ್‌ಗಳಿಗೆ ಉರುಳಿತು. ಕ್ವಿಂಟನ್‌ ಡಿ ಕಾಕ್‌ ಅವರ ವಿಕೆಟ್‌ ಬೇಗ ಕಳೆದುಕೊಂಡರೂ, ದಕ್ಷಿಣ ಆಫ್ರಿಕಾ 8.5 ಓವರುಗಳಲ್ಲಿ 1 ವಿಕೆಟ್‌ಗೆ 60 ರನ್ ಹೊಡೆಯಿತು.‌ ಚೋಕರ್ಸ್‌ (ಒತ್ತಡಕ್ಕೆ ಒಳಗಾಗುವ) ಎಂಬ ಹಣೆಪಟ್ಟಿ ಹೊಂದಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ, ಇದು ಯಾವುದೇ ಮಾದರಿಯ ವಿಶ್ವಕಪ್‌ನಲ್ಲಿ ಮೊದಲ ಫೈನಲ್ ಆಗಿದೆ.

ರೀಜಾ ಹೆಂಡ್ರಿಕ್ಸ್‌ (ಔಟಾಗದೇ 29) ಟೂರ್ನಿಯಲ್ಲಿ ತಮ್ಮ ಅತ್ಯಧಿಕ ಸ್ಕೋರ್ ದಾಖಲಿಸಿದರೆ, ನಾಯಕ ಏಡನ್ ಮರ್ಕರಂ (ಔಟಾಗದೇ 23) ಸುರಕ್ಷಿತವಾಗಿ ತಂಡ ಗುರಿತಲುಪುವಂತೆ ನೋಡಿಕೊಂಡರು.

‌ಸೆಮಿಫೈನಲ್‌ವರೆಗೆ ತನ್ನೆಲ್ಲಾ ಸಾಮರ್ಥ್ಯ ತೋರಿದ್ದ ಅಫ್ಗಾನಿಸ್ತಾನ ಈ ನಿರ್ಣಾಯಕ ಪಂದ್ಯದಲ್ಲಿ ಸುಲಭವಾಗಿ ಶರಣಾಯಿತು. ಬ್ಯಾಟರ್‌ಗಳು ಯಾರೂ ಹೋರಾಟ ತೋರಲಿಲ್ಲ. ಪವರ್‌ಪ್ಲೇ ಅವಧಿಯಲ್ಲೇ 28 ರನ್ನಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡ ಅಫ್ಗಾನಿಸ್ತಾದ ತಂಡ ನಂತರ ಚೇತರಿಸಲಿಲ್ಲ. ಇದು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಕಡಿಮೆ ಮೊತ್ತ. ಅಲ್ಲಿಗೇ ಸೆಮಿ ಕನಸು ಕೂಡ ದೂರವಾಯಿತು.

ಪಿಚ್‌ನಲ್ಲಿ ಕೆಲವು ಎಸೆತಗಳು ಪುಟಿದೇಳುತ್ತಿದ್ದವು. ಉಳಿದಂತೆ ಯಾವುದೇ ರೀತಿಯ ‘ಗುಮ್ಮ’ ಕಾಡಲಿಲ್ಲ. ಅಫ್ಗನ್ ತಂಡದ ಯಶಸ್ವಿ ಆಟಗಾರ ರಹಮಾನುಲ್ಲಾ ಗುರ್ಬಾಝ್ ಮೊದಲಿಗರಾಗಿ ನಿರ್ಗಮಿಸಿದ್ದು ತಂಡಕ್ಕೆ ನುಂಗಲಾಗದ ತುತ್ತಾಯಿತು. ಆಫ್‌ಸ್ಟಂಪ್ ಆಚೆ ಹೋಗಿದ್ದ ಎಸೆತವನ್ನು ಅವರು ಸ್ಲಿಪ್‌ನಲ್ಲಿದ್ದ ರೀಝಾ ಹೆಂಡ್ರಿಕ್ಸ್‌ ಕೈಗೆ ಆಡಿದರು. ಯಾನ್ಸನ್‌ ಬೌಲಿಂಗ್‌ನಲ್ಲಿ ಒಳನುಗ್ಗಿದ ಎಸೆತಕ್ಕೆ ನೈಬ್ ಬೌಲ್ಡ್‌ ಆದರು. ರಬಾಡ ಎಸೆತವನ್ನು ಅರಿಯುವಲ್ಲಿ ಇಬ್ರಾಹಿಂ ಜದ್ರಾನ್ ಎಡವಿದರು. ಚೆಂಡು ಬ್ಯಾಟ್‌–ಪ್ಯಾಡ್‌ ಮಧ್ಯೆಯಿಂದ ಲೆಗ್‌ ಸ್ಟಂಪ್‌ಗೆ ಬಡಿಯಿತು. ಮೂರು ಎಸೆತಗಳ ತರುವಾಯ ನಬಿ (0) ಕೂಡ ಹೆಚ್ಚುಕಮ್ಮಿ ಅಂಥದ್ದೇ ಎಸೆತಕ್ಕೆ ಔಟಾದರು.

ಉಳಿದವರಿಂದಲೂ ಅಂಥ ಪ್ರತಿರೋಧ ಕಾಣಲಿಲ್ಲ. ಗುರ್ಬಾಜ್, ಜದ್ರಾನ್‌, ಒಮರ್‌ಝೈ ಅವರನ್ನೇ ತಂಡ ನೆಚ್ಚಿಕೊಂಡಿತ್ತು. ಆದರೆ ಈ ಮೂವರು ಸೇರಿ 12 ರನ್‌ಅಷ್ಟೇ ಗಳಿಸಿದ್ದು. ನಾಯಕ ರಶೀದ್ ಖಾನ್‌, ನಾಕಿಯಾ ಎಸೆತದಲ್ಲಿ ಬೌಲ್ಡ್‌ ಆದರು. ಇನಿಂಗ್ಸ್‌ನ ಅತಿ ಹೆಚ್ಚು ಕಾಣಿಕೆ ಇತರೆ (13) ರನ್‌ಗಳ ಮೂಲಕ ಬಂದವು.

ಸ್ಕೋರುಗಳು

ಅಫ್ಗಾನಿಸ್ತಾನ: 11.5 ಓವರುಗಳಲ್ಲಿ 56 (ಗುಲ್ಬದಿನ್ ನೈಬ್ 9, ಅಜ್ಮತ್‌ಉಲ್ಲಾ ಒಮರ್‌ಝೈ 10; ಮಾರ್ಕೊ ಯಾನ್ಸನ್ 16ಕ್ಕೆ3, ಕಗಿಸೊ ರಬಾಡ 14ಕ್ಕೆ2, ಆ್ಯನ್ರಿಚ್‌ ನಾಕಿಯಾ 7ಕ್ಕೆ2, ತಬ್ರೇಜ್ ಸಂಶಿ 6ಕ್ಕೆ3)

ದಕ್ಷಿಣ ಆಫ್ರಿಕಾ: 8.5 ಓವರುಗಳಲ್ಲಿ 1 ವಿಕೆಟ್‌ಗೆ 60 (ರೀಜಾ ಹೆಂಡ್ರಿಕ್ಸ್‌ ಔಟಾಗದೇ 29, ಏಡನ್ ಮರ್ಕರಂ ಔಟಾಗದೇ 23; ಫಜಲ್‌ಹಕ್ ಫರೂಕಿ 11ಕ್ಕೆ1). ಪಂದ್ಯದ ಆಟಗಾರ: ಮಾರ್ಕೊ ಯಾನ್ಸೆನ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT