ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Women's Asia Cup: ಬಾಂಗ್ಲಾ ವಿರುದ್ಧ 10 ವಿಕೆಟ್ ಜಯ, ಭಾರತ ಫೈನಲ್‌ಗೆ ಲಗ್ಗೆ

Published 26 ಜುಲೈ 2024, 9:17 IST
Last Updated 26 ಜುಲೈ 2024, 9:17 IST
ಅಕ್ಷರ ಗಾತ್ರ

ದಂಬುಲಾ (ಶ್ರೀಲಂಕಾ): ಹಾಲಿ ಚಾಂಪಿಯನ್ ಭಾರತ ಮಹಿಳೆಯರ ಕ್ರಿಕೆಟ್ ತಂಡವು ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್‌ಗೆ ಲಗ್ಗೆಯಿಟ್ಟಿತು. 

ರಣಗಿರಿ ದಂಬುಲಾ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ರೇಣುಕಾ ಸಿಂಗ್ (10ಕ್ಕೆ3) ಮತ್ತು ರಾಧಾ ಯಾದವ್ (14ಕ್ಕೆ3) ಅವರ ಅಮೋಘ ಬೌಲಿಂಗ್‌ನಿಂದಾಗಿ ಭಾರತ ತಂಡವು ಬಾಂಗ್ಲಾದೇಶ ಎದುರು 10 ವಿಕೆಟ್‌ಗಳಿಂದ ಗೆದ್ದಿತು. 

ಟಾಸ್ ಗೆದ್ದ ಬಾಂಗ್ಲಾದೇಶ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ರೇಣುಕಾ ಸಿಂಗ್ ಮತ್ತು ರಾಧಾ ಅವರ ದಾಳಿಯ ಮುಂದೆ ಕುಸಿಯಿತು. 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 80 ರನ್‌ಗಳ ಅಲ್ಪಮೊತ್ತ ಗಳಿಸಿತು. ನಾಯಕಿ ನಿಜರ್ ಸುಲ್ತಾನಾ (32; 51ಎ, 4X2) ಮತ್ತು ಶೋಮಾ ಅಕ್ತರ್ (ಔಟಾಗದೆ 19, 18ಎ, 4X2) ಅವರಿಬ್ಬರನ್ನು ಬಿಟ್ಟರೆ ಉಳಿದ ಬ್ಯಾಟರ್‌ಗಳು ಎರಡಂಕಿ ಮುಟ್ಟಲಿಲ್ಲ. 

ಈ ಗುರಿಯನ್ನು ಭಾರತದ ಆರಂಭಿಕ ಜೋಡಿಯು ಸುಲಭವಾಗಿ ಮುಟ್ಟಿತು. 11 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 83 ರನ್ ಗಳಿಸಿತು. ಅದರಲ್ಲಿ ಸ್ಮೃತಿ ಮಂದಾನ (ಔಟಾಗದೆ 55; 39ಎ, 4X9, 6X1) ಅರ್ಧಶತಕ ಗಳಿಸಿದರು. 

ಭಾರತ ತಂಡವು ಕಳೆದ ನಾಲ್ಕು ಟಿ20 ಏಷ್ಯಾ ಕಪ್ ಟೂರ್ನಿಗಳಲ್ಲಿ ಮೂರು ಬಾರಿ ಚಾಂಪಿಯನ್ ಆಗಿದೆ. ಇದೀಗ ನಾಲ್ಕನೇ ಪ್ರಶಸ್ತಿಯತ್ತ ಚಿತ್ತ ನೆಟ್ಟಿದೆ.

ಸಂಕ್ಷಿಪ್ತ ಸ್ಕೋರು:

ಬಾಂಗ್ಲಾದೇಶ: 20 ಓವರ್‌ಗಳಲ್ಲಿ 8ಕ್ಕೆ80 (ನಿಜರ್ ಸುಲ್ತಾನಾ 32, ಶೋಮಾ ಅಖ್ತರ್ ಔಟಾಗದೆ 19, ರೇಣುಕಾ ಸಿಂಗ್ 10ಕ್ಕೆ3, ರಾಧಾ ಯಾದವ್ 14ಕ್ಕೆ3)

ಭಾರತ: 11 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 83 (ಶಫಾಲಿ ವರ್ಮಾ ಔಟಾಗದೆ 26, ಸ್ಮೃತಿ ಮಂದಾನ ಔಟಾಗದೆ 55) ಫಲಿತಾಂಶ: ಭಾರತ ತಂಡಕ್ಕೆ 10 ವಿಕೆಟ್‌ಗಳ ಜಯ. 

ರೇಣುಕಾ 50 ವಿಕೆಟ್ ಸಾಧನೆ...

ಭಾರತದ ಪರ ನಿಖರ ದಾಳಿ ಸಂಘಟಿಸಿದ ರೇಣುಕಾ ಸಿಂಗ್, ನಾಲ್ಕು ಓವರ್‌ಗಳಲ್ಲಿ ಕೇವಲ 10 ರನ್ ಮಾತ್ರ ನೀಡಿ ಮೂರು ವಿಕೆಟ್ ಕಬಳಿಸಿ ಮಿಂಚಿದರು. ಇದರಲ್ಲಿ ಒಂದು ಮೇಡನ್ ಓವರ್ ಸೇರಿತ್ತು.

ಆ ಮೂಲಕ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ವಿಕೆಟ್‌ಗಳ ಸಾಧನೆ ಮಾಡಿದರು.

ರಾಧಾ ಯಾದವ್ ಸಹ ಕೇವಲ 14 ರನ್ ತೆತ್ತು ಮೂರು ವಿಕೆಟ್ ಕಬಳಿಸಿದರು.

ಭಾರತ ಅಜೇಯ ಓಟ...

'ಎ' ಗುಂಪಿನ ಎಲ್ಲ ಮೂರೂ ಪಂದ್ಯಗಳನ್ನು ಗೆದ್ದು ಭಾರತ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ಈಗ ಸೆಮಿಪೈನಲ್ ಪಂದ್ಯವನ್ನು ಜಯಿಸುವ ಮೂಲಕ ಅಜೇಯವಾಗಿ ಫೈನಲ್‌ಗೆ ಪ್ರವೇಶಿಸಿದೆ.

ಪಾಕಿಸ್ತಾನ ತಂಡವನ್ನು ಏಳು ವಿಕೆಟ್‌ಗಳಿಂದ ಮಣಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದ ಭಾರತ, ಎರಡನೇ ಪಂದ್ಯದಲ್ಲಿ ಯುಎಇ ವಿರುದ್ಧ 78 ರನ್‌ಗಳಿಂದ ಜಯಿಸಿತ್ತು. ಕೊನೆಯ ಲೀಗ್‌ ಪಂದ್ಯದಲ್ಲಿ ನೇಪಾಳ ತಂಡವನ್ನು 82 ರನ್‌ಗಳಿಂದ ಮಣಿಸಿತ್ತು.

ಇಂದು ರಾತ್ರಿ ನಡೆಯಲಿರುವ ದಿನದ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಆತಿಥೇಯ ಶ್ರೀಲಂಕಾದ ಸವಾಲನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT