ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

IND vs QAT | ವಿಶ್ವಕಪ್ ಕನಸು ಭಗ್ನ; ವಿವಾದಾತ್ಮಕ ಗೋಲಿನಿಂದಾಗಿ ಭಾರತಕ್ಕೆ ಸೋಲು

Published 12 ಜೂನ್ 2024, 9:39 IST
Last Updated 12 ಜೂನ್ 2024, 9:39 IST
ಅಕ್ಷರ ಗಾತ್ರ

ದೋಹಾ: ಫಿಫಾ ವಿಶ್ವಕಪ್‌ ಅರ್ಹತಾ ಟೂರ್ನಿಯ ‘ಎ’ ಗಂಪಿನ ಪಂದ್ಯದಲ್ಲಿ ಮಂಗಳವಾರ ಕತಾರ್ ವಿರುದ್ಧ ನಡೆದ ಪಂದ್ಯದಲ್ಲಿ 2–1 ಗೋಲುಗಳ ಅಂತರದ ಸೋಲು ಅನುಭವಿಸಿರುವ ಭಾರತದ ವಿಶ್ವಕಪ್ ಕನಸು ಭಗ್ನಗೊಂಡಿದೆ.

ಈ ಸೋಲಿನೊಂದಿಗೆ ವಿಶ್ವಕಪ್‌ ಅರ್ಹತಾ ಮೂರನೇ ಸುತ್ತಿನಲ್ಲಿ ಆಡಲು ಭಾರತಕ್ಕೆ ಅವಕಾಶ ನಷ್ಟವಾಗಿದೆ. ಗೆಲ್ಲಲೇಬೇಕಾದ ಪಂದ್ಯದಲ್ಲಿ ರೆಫರಿ ನೀಡಿರುವ ವಿವಾದಾತ್ಮಕ ಗೋಲಿನ ತೀರ್ಪು ಭಾರತಕ್ಕೆ ಮುಳುವಾಗಿ ಪರಿಣಮಿಸಿದೆ.

ಲಾಲಿಯನ್ಜುವಾಲಾ ಚಾಂಗ್ಟೆ 37ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಭಾರತ ಮುನ್ನಡೆ ಸಾಧಿಸಿತ್ತು. ಆದರೆ, 73ನೇ ನಿಮಿಷದಲ್ಲಿ ಕತಾರ್‌ನ ಯೂಸುಫ್ ಐಮೆನ್ ವಿವಾದಾತ್ಮಕ ಗೋಲು ಗಳಿಸಿದರು. ಇದು ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರುವಂತಾಗಿದೆ.

ಏನಿದು ಘಟನೆ?

ಅಬ್ದುಲ್ಲಾ ಅಲರಾಕ್ ಅವರ 'ಫ್ರಿ-ಕಿಕ್' ಅನ್ನು ಯೂಸೆಫ್ ಅಯೆಮ್ ಹೆಡರ್ ಮೂಲಕ ಭಾರತದ ಗೋಲು ಬಲೆಯೊಳಗೆ ಸೇರಿಸಲು ಯತ್ನಿಸಿದರು. ಆದರೆ ಗೋಲು ಪೋಸ್ಟ್ ಸಮೀಪದಲ್ಲಿ ಭಾರತೀಯ ಗೋಲು ಕೀಪರ್ ಗುರ್ಪಿತ್ ಸಿಂಗ್ ಸಂಧು ತಡೆಯಲು ಯತ್ನಿಸಿದಾಗ ಕೈಯಿಂದ ಕೈಚೆಲ್ಲಿದ ಚೆಂಡು ಗೆರೆ ದಾಟಿ ಹೊರಗೆ ಹೋಯಿತು. ಇದು ರಿಪ್ಲೇಯಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಆದರೆ ಈ ವೇಳೆ ಮೋಸದಾಟದ ಮೂಲಕ ಕತಾರ್ ಆಟಗಾರ ಹಶ್ಮಿ ಹುಸೇನ್ ಚೆಂಡನ್ನು ಮತ್ತೆ ಒಳಕ್ಕೆ ಒದೆಯುತ್ತಾರೆ. ಈ ವೇಳೆ ಮಗದೋರ್ವ ಕತಾರ್ ಆಟಗಾರ ಯೂಸುಫ್ ಐಮೆನ್ ಚೆಂಡನ್ನು ಬಲೆಯೊಳಗೆ ಸೇರಿಸುತ್ತಾರೆ.

ಭಾರತೀಯ ಆಟಗಾರರ ತೀವ್ರ ಪ್ರತಿಭಟನೆಯ ನಡುವೆಯೂ ರೆಫರಿ ಗೋಲು ಎಂದು ತೀರ್ಪು ನೀಡುತ್ತಾರೆ. ಇದರಿಂದಾಗಿ ಪಂದ್ಯದಲ್ಲಿ ಭಾರತ ಹಿನ್ನಡೆ ಅನುಭವಿಸಿತು. ಬಳಿಕ 85ನೇ ನಿಮಿಷದಲ್ಲಿ ಅಹ್ಮದ್ ಅಲ್-ರಾವಿ ಗಳಿಸಿದ ಗೋಲಿನಿಂದ ಕತಾರ್ ಗೆಲುವು ಸಾಧಿಸಿತ್ತು.

ಫಿಫಾ ನಿಯಮದ ಪ್ರಕಾರ ಚೆಂಡು ಭಾರತೀಯ ಗೋಲು ಕೀಪರ್ ಕೈಗೆ ತಾಗಿ ಹೊರ ಹೋಗಿರುವುದರಿಂದ ಆಟ ಅಲ್ಲಿಗೆ ನಿಲುಗಡೆಗೊಳ್ಳಬೇಕು. ಅಲ್ಲದೆ ಕತಾರ್‌ಗೆ 'ಕಾರ್ನರ್-ಕಿಕ್' ಪಡೆಯುವ ಅವಕಾಶ ಇರುತ್ತದೆ. ಆದರೆ ಕತಾರ್ ಆಟಗಾರರ ಮೋಸದಾಟ ಇಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಇದಕ್ಕೆ ರೆಫರಿ ಗೋಲು ತೀರ್ಪು ನೀಡಿರುವುದು ಇನ್ನಷ್ಟು ಕೆರಳಿಸುವಂತೆ ಮಾಡಿದೆ.

ತನಿಖೆ ಬಯಸಿದ ಎಐಎಫ್‌ಎಫ್...

ರೆಫರಿ ವಿವಾದಾತ್ಮಕ ತೀರ್ಪಿನ ಕುರಿತು ಭಾರತೀಯ ಅಭಿಮಾನಿಗಳು ಸೇರಿದಂತೆ ಫುಟ್‌ಬಾಲ್ ದಿಗ್ಗಜರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ದೂರು ದಾಖಲಿಸಿರುವ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ತನಿಖೆಯನ್ನು ಬಯಸಿದೆ.

ದಕ್ಷಿಣ ಕೊರಿಯಾದ ರೆಫರಿ ಕಿಮ್ ವೂ-ಸಂಗ್ ವಿವಾದಾತ್ಮಕ ಗೋಲು ತೀರ್ಪು ನೀಡಿದ್ದರು. ಇರಾನ್‌ನ ಹಮೆದ್ ಮೊಮೆನಿ ಮ್ಯಾಚ್ ರೆಫರಿ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT