ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Arctic Open Super 500: ಕಣಕ್ಕಿಳಿಯಲಿರುವ ಸಿಂಧು, ಲಕ್ಷ್ಯ ಸೇನ್

ಆರ್ಕಟಿಕ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಇಂದಿನಿಂದ
Published : 7 ಅಕ್ಟೋಬರ್ 2024, 14:01 IST
Last Updated : 7 ಅಕ್ಟೋಬರ್ 2024, 14:01 IST
ಫಾಲೋ ಮಾಡಿ
Comments

ವಾಂತಾ, ಫಿನ್ಲೆಂಡ್: ಒಲಿಂಪಿಯನ್ ಆಟಗಾರರಾದ ಪಿ.ವಿ. ಸಿಂಧು ಹಾಗೂ ಲಕ್ಷ್ಯ ಸೇನ್ ಅವರು, ಮಂಗಳವಾರ ಆರಂಭವಾಗಲಿರುವ ಆರ್ಕಟಿಕ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. 

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸುವಲ್ಲಿ ವಿಫಲರಾಗಿದ್ದ ಸಿಂಧು ಮತ್ತು ಸೇನ್ ಅವರು ಈ ಟೂರ್ನಿಯ ಮೂಲಕ ಮತ್ತೆ ಲಯಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ. ಇವರಿಬ್ಬರೂ ಒಲಿಂಪಿಕ್ ಕೂಟದ ನಂತರ ಕಣಕ್ಕಿಳಿಯುತ್ತಿರುವ ಮೊದಲ ಟೂರ್ನಿಯೂ ಇದಾಗಿದೆ. 

ಸಿಂಧು ಅವರಿಗೆ ಕೋಚ್ ಆಗಿ ಈಚೆಗೆ ಕರ್ನಾಟಕದ ಅನೂಪ್ ಶ್ರೀಧರ್ ಹಾಗೂ ಕೋರಿಯಾದ ದಿಗ್ಗಜ ಕೋಚ್, ಲೀ ಸಿಯುನ್ ನೇಮಕವಾಗಿದ್ದಾರೆ. ಈ ಹಿಂದೆ ಇದ್ದ ಇಂಡೊನೇಷ್ಯಾದ ಕೋಚ್ ಅಗಸ್ ಡಿವಿ ಸ್ಯಾಂಟೋಸ್ ಅವರು ತಮ್ಮ ದೇಶಕ್ಕೆ ಮರಳಿದ್ದಾರೆ. 

ಈ ಟೂರ್ನಿಯಲ್ಲಿ ಸಿಂಧು ಅವರು ಮೊದಲ ಸುತ್ತಿನಲ್ಲಿ ಕೆನಡಾದ ಮಿಚೆಲ್ ಲೀ ವಿರುದ್ಧ ಸೆಣಸುವರು. ಹೈದರಾಬಾದಿನ  ಆಟಗಾರ್ತಿ ಪ್ಯಾರಿಸ್‌ನಲ್ಲಿ 16ರ ಘಟ್ಟದಲ್ಲಿ ಇದೇ ಎದುರಾಳಿ ವಿರುದ್ಧ ಸೋತಿದ್ದರು. ಮೊದಲ ಸುತ್ತಿನಲ್ಲಿ ಜಯಿಸಿದರೆ ಸಿಂಧು ಅವರು ಎರಡನೇಯದ್ದರಲ್ಲಿ ಜಪಾನಿನ ಟೊಮ್ಯಾಕೊ ಮಿಯಾಝಾಕಿ ವಿರುದ್ಧ ಕಣಕ್ಕಿಳಿಯುವರು. ಮಿಯಾಝಕಿ ಅವರು ಎರಡು ವರ್ಷಗಳ ಹಿಂದೆ ಜೂನಿಯರ್ ವಿಶ್ವ ಚಾಂಪಿಯನ್ ಆಗಿದ್ದರು.

ಲಕ್ಷ್ಯ ಸೇನ್ ಅವರು ಪ್ಯಾರಿಸ್‌ ಒಲಿಂಪಿಕ್ ಕೂಟದಲ್ಲಿ ಅಲ್ಪ ಅಂತರದಲ್ಲಿ ಪದಕ ಕೈತಪ್ಪಿಸಿಕೊಂಡಿದ್ದರು. ಅದರ ನಂತರ ಅವರು ಆಸ್ಟ್ರೀಯಾದ ರೆಡ್‌ಬುಲ್ ಅರೆನಾದಲ್ಲಿ ತಮ್ಮ ದೈಹಿಕ ಸಾಮರ್ಥ್ಯ ವಿಶ್ಲೇಷಣೆಗೊಳಗಾಗಿದ್ದರು. ಅವರು ಇಲ್ಲಿಮೊದಲ ಸುತ್ತಿನಲ್ಲಿ ಡೆನ್ಮಾರ್ಕಿನ ರಾಸ್ಮಸ್ ಗೆಮ್ಕೆ ವಿರುದ್ಧ ಆಡುವರು. 

ಅನುಭವಿ ಆಟಗಾರ ಕಿದಂಬಿ ಶ್ರೀಕಾಂತ್, ಯುವ ಆಟಗಾರರಾದ ಕಿರಣ ಜಾರ್ಜ್ ಮತ್ತು ಸತೀಶ್ ಕುಮಾರ್ ಕರುಣಾಕರನ್ ಕೂಡ ಭಾರತವನ್ನು ಪ್ರತಿನಿಧಿಸುವರು. 

ಮಹಿಳೆಯರ ಸಿಂಗಲ್ಸ್‌ನಲ್ಲಿ ಮಾಳವಿಕಾ ಬನ್ಸೋದ್ ಮತ್ತು ಆಕರ್ಷಿ ಕಶ್ಯಪ್ ಕೂಡ ಕಣದಲ್ಲಿದ್ದಾರೆ. 

ಆದರೆ ಪುರುಷರ ಡಬಲ್ಸ್‌ನಲ್ಲಿ ಈ ಬಾರಿ ಭಾರತದ ಸ್ಪರ್ಧಿಗಳು ಇಲ್ಲ. ಮಹಿಳೆಯರ ವಿಭಾಗದಲ್ಲಿ ಋತುಪರ್ಣಾ ಪಂಡಾ ಮತ್ತು ಶ್ವೇತಪರ್ಣ ಪಂಡಾ ಜೋಡಿ  ಕಣಕ್ಕಿಳಿಯಲಿದೆ. ಮಿಶ್ರ ಡಬಲ್ಸ್‌ನಲ್ಲಿ ಸತೀಶ್ ಮತ್ತು ಆದ್ಯಾ ವರಿಯತ್ ಜೋಡಿಯು ಸ್ಪರ್ಧಿಸಲಿದೆ. 

ಲಕ್ಷ್ಯ ಸೇನ್ 
ಲಕ್ಷ್ಯ ಸೇನ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT