ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್: ಪಿ.ಟಿ.ಉಷಾ ದಾಖಲೆ ಮುರಿದ ವಿತ್ಯಾ

ರೈಲ್ವೇಸ್‌ ಸಮಗ್ರ ಚಾಂಪಿಯನ್‌
Published : 2 ಸೆಪ್ಟೆಂಬರ್ 2024, 20:13 IST
Last Updated : 2 ಸೆಪ್ಟೆಂಬರ್ 2024, 20:13 IST
ಫಾಲೋ ಮಾಡಿ
Comments

ಬೆಂಗಳೂರು: ರಾಷ್ಟ್ರೀಯ ಓಪನ್‌ ಅಥ್ಲೆಟಿಕ್‌ ಕೂಟದಲ್ಲಿ 400 ಮೀ. ಹರ್ಡಲ್ಸ್‌ ಓಟವನ್ನು 57 ಸೆ.ಗಳ ಒಳಗೆ ಕ್ರಮಿಸಿದಲ್ಲಿ ಐದು ದಿನಗಳ ಹೆಚ್ಚುವರಿ ರಜೆ ನೀಡುವುದಾಗಿ ತಮಿಳುನಾಡಿನ ಆರ್‌.ವಿದ್ಯಾ ರಾಮರಾಜ್‌ ಅವರಿಗೆ ಕೋಚ್‌ ನೇಪಾಲ್‌ ಸಿಂಗ್ ಭರವಸೆ ನೀಡಿದ್ದರು. ಇದನ್ನೇ ಪ್ರೇರಣೆಯಾಗಿಸಿಕೊಂಡ ವಿದ್ಯಾ ಸೋಮವಾರ ಈ ಚಾಂಪಿಯನ್‌ಷಿಪ್‌ನಲ್ಲಿ 57 ಸೆ.ಗಳ ಒಳಗೆ ದೂರ ಕ್ರಮಿಸಿದರಲ್ಲದೇ, ದಂತಕಥೆ ಪಿ.ಟಿ.ಉಷಾ ಹೆಸರಿನಲ್ಲಿದ್ದ ದಾಖಲೆಯನ್ನೂ ಮುರಿದು ಗಮನಸೆಳೆದರು.

ಕೊಯಮತ್ತೂರಿನ ವಿದ್ಯಾ ಅವರು ಕಂಠೀರವ ಕ್ರೀಡಾಂಗಣದಲ್ಲಿ 56.23 ಸೆ.ಗಳಲ್ಲಿ ಗುರಿ ತಲುಪಿ, 1985ರಲ್ಲಿ ತಿರುವನಂತಪುರದಲ್ಲಿ ಉಷಾ ಸ್ಥಾಪಿಸಿದ್ದ 56.80 ಸೆಕೆಂಡುಗಳ ದಾಖಲೆ ಮುರಿದರು.

ರೈಲ್ವೇಸ್‌ನ ಸಿಂಚಲ್ (57.60ಸೆ.) ಮತ್ತು ಕರ್ನಾಟಕದ ಪ್ರಜ್ಞಾ (57.90ಸೆ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದರು.

‘ಈ ದಾಖಲೆ ಮುರಿಯಲು ಕಳೆದ ಎರಡು ವರ್ಷಗಳಿಂದ ಇನ್ನಿಲ್ಲದ ಪ್ರಯತ್ನ ನಡೆಸಿದ್ದೆ. ಅಂತಿಮವಾಗಿ ಈಡೇರಿದ್ದರಿಂದ ಸಂತಸವಾಗಿದೆ, ಅದೂ ಋತುವಿನ ಕೊನೆಯ ಕೂಟದಲ್ಲಿ’ ಎಂದು ವಿದ್ಯಾ ಸಂಭ್ರಮದಿಂದ ಪ್ರತಿಕ್ರಿಯಿಸಿದರು.

ಪುರುಷರ 200 ಮೀ. ಓಟದಲ್ಲಿ 20.66 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ವೇಗದ ಓಟಗಾರ ನಿತಿನ್ ಅವರು ಕೊನೆಯ ದಿನ ಕೂಟ ದಾಖಲೆ ಸ್ಥಾಪಿಸಿದರು. ಕಳೆದ ವರ್ಷ ಬೆಂಗಳೂರಿನಲ್ಲಿ ಅನಿಮೇಶ್ ಕುಜೂರ್ ಸ್ಥಾಪಿಸಿದ್ದ 20.74 ಸೆಕೆಂಡುಗಳ ದಾಖಲೆಯನ್ನು ತಮಿಳುನಾಡಿನ ಓಟಗಾರ ಮುರಿದರು.

ಮಹಿಳೆಯರ ಲಾಂಗ್‌ಜಂಪ್ ಸ್ಪರ್ಧೆಯು ಮತ್ತೊಂದು ಪೈಪೋಟಿಗೆ ಸಾಕ್ಷಿಯಾಯಿತು. ಸರ್ವಿಸಸ್ ಕ್ರೀಡಾ ನಿಯಂತ್ರಣ ಮಂಡಳಿಯ (ಎಸ್‌ಎಸ್‌ಸಿಬಿ) ಆನ್ಸಿ ಸೋಜನ್ ಅವರು 6.71 ಮೀ. ದೂರಕ್ಕೆ ಜಿಗಿದು ಚಿನ್ನದ ಪದಕದೊಡನೆ ಮಿಂಚಿದರು.

ರೈಲ್ವೇಸ್‌ನ ಕಾರ್ತಿಕಾ ಕೋದಂಡಪಾಣಿ (6.29 ಮೀ) ಮತ್ತು ಭವಾನಿ ಯಾದವ್ ಭಾಗವತ್ (6.25 ಮೀ) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ರೈಲ್ವೇಸ್‌ಗೆ ಸಮಗ್ರ ಪ್ರಶಸ್ತಿ:

ತಮಿಳುನಾಡಿನ ನಿತಿನ್‌ 1118 ಅಂಕಗಳೊಂದಿಗೆ ಮತ್ತು ಎಸ್‌ಎಸ್‌ಸಿಬಿಯ ಆ್ಯನ್ಸಿ ಸೋಜನ್‌ ಅವರು 1153 ಅಂಕಗಳೊಂದಿಗೆ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಅತ್ಯುತ್ತಮ ಅಥ್ಲೀಟ್‌ ಪ್ರಶಸ್ತಿ ಪಡೆದರು.

ಸರ್ವಿಸಸ್‌ ತಂಡ 137 ಪಾಯಿಂಟ್ಸ್‌ ಗಳಿಸಿ ಪುರುಷರ ವಿಭಾಗದಲ್ಲಿ ಚಾಂಪಿಯನ್ ಆದರೆ, 201 ಅಂಕ ಕಲೆಹಾಕಿದ ರೈಲ್ವೇಸ್‌ನ ತಂಡ ಮಹಿಳೆಯರ ವಿಭಾದಲ್ಲಿ ಚಾಂಪಿಯನ್‌ ಆಯಿತು. 318 ಅಂಕ ಕಲೆಹಾಕಿದ ರೈಲ್ವೇಸ್‌ ತಂಡ ಸಮಗ್ರ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಅಂತಿಮ ದಿನದ ಫಲಿತಾಂಶಗಳು (ಮೊದಲ ಸ್ಥಾನ ಪಡೆದವರು):

ಪುರುಷರು: 200 ಮೀ: ನಿತಿನ್ (ತಮಿಳುನಾಡು), ಕಾಲ: 20.66 ಸೆ.; 800 ಮೀ ಓಟ: ಮೊಹಮ್ಮದ್ ಪಿ. (ಎಸ್‌ಎಸ್‌ಸಿಬಿ), ಕಾಲ: 1ನಿ 48.10 ಸೆ.; 10000 ಮೀ: ಅಭಿಷೇಕ್ (ರೈಲ್ವೇಸ್‌), ಕಾಲ: 29ನಿ.48.18ಸೆ.

400 ಮೀ ಹರ್ಡಲ್ಸ್: ಅಮನ್ (ಹರಿಯಾಣ), ಕಾಲ: 50.52 ಸೆ.; 3000 ಮೀ ಸ್ಟೀಪಲ್‌ಚೇಸ್: ಸಿದ್ದಾಂತ್ ಪೂಜಾರಿ (ಮಹಾರಾಷ್ಟ್ರ), ಕಾಲ: 8ನಿ.46.05 ಸೆ.; 4x400ಮೀ ರಿಲೇ: ಎಸ್‌ಎಸ್‌ಸಿಬಿ, ಕಾಲ: 3ನಿ 07.11 ಸೆ.; ಟ್ರಿಪಲ್ ಜಂಪ್: ಮೊಹಮ್ಮದ್ ಎಸ್.ಎನ್. (ತಮಿಳುನಾಡು), ದೂರ: 16.28 ಮೀ.; ಜಾವೆಲಿನ್ ಥ್ರೊ: ವಿಕ್ರಾಂತ್ ಮಲಿಕ್ (ಹರಿಯಾಣ), ದೂರ: 80.02 ಮೀ.

ಮಹಿಳೆಯರು: 200 ಮೀ: ನಿತ್ಯಾ ಗಂಧೆ (ರೈಲ್ವೇಸ್‌)–1, ಕಾಲ: 23.51 ಸೆ.; 800ಮೀ: ಚಂದಾ (ರೈಲ್ವೇಸ್‌), ಕಾಲ: 2ನಿ 01.16 ಸೆ.; 400 ಮೀ.ಹರ್ಡಲ್ಸ್: ಆರ್.ವಿದ್ಯಾ ರಾಮರಾಜ್ (ರೈಲ್ವೇಸ್‌), ಕಾಲ: 56.23 ಸೆ., ನೂತನ ದಾಖಲೆ, ಹಳೆಯದು: ಪಿ.ಟಿ.ಉಷಾ, 56.80 ಸೆ.; 3000 ಮೀ ಸ್ಟೀಪಲ್‌ಚೇಸ್: ರೆಬಿ ಪಾಲ್ (ರೈಲ್ವೇಸ್‌), ಕಾಲ: 10ನಿ 21.28 ಸೆ.; 10000ಮೀ: ಸೀಮಾ (ಹಿಮಾಚಲ ಪ್ರದೇಶ), ಕಾಲ: 33ನಿ 56.86 ಸೆ.; 4x400ಮೀ. ರಿಲೇ: ರೈಲ್ವೇಸ್‌, ಕಾಲ: 3ನಿ 39.01ಸೆ–1.

ಲಾಂಗ್ ಜಂಪ್: ಆನ್ಸಿ ಸೋಜನ್ (ಸರ್ವಿಸಸ್‌), ದೂರ: 6.71 ಮೀ; ಹ್ಯಾಮರ್ ಥ್ರೋ: ಹರ್ಷಿತಾ ಸೆಹ್ರಾವತ್ (ದೆಹಲಿ), ದೂರ: 61.04ಮೀ; ಹೆಪ್ಟಾಥ್ಲಾನ್: ಅಗಸರ ನಂದಿನಿ (ತೆಲಂಗಾಣ), ಪಾಯಿಂಟ್ಸ್‌:  5526.

ಅತ್ಯುತ್ತಮ ಮಹಿಳಾ ಅಥ್ಲಿಟ್‌ ಪ್ರಶಸ್ತಿ ಪಡೆದ ಎಸ್‌ಎಸ್‌ಸಿಬಿಯ ಆ್ಯನ್ಸಿ ಸೋಜನ್‌ –ಪ್ರಜಾವಾಣಿ ಚಿತ್ರ/ಎಸ್‌.ಕೆ.ದಿನೇಶ್‌
ಅತ್ಯುತ್ತಮ ಮಹಿಳಾ ಅಥ್ಲಿಟ್‌ ಪ್ರಶಸ್ತಿ ಪಡೆದ ಎಸ್‌ಎಸ್‌ಸಿಬಿಯ ಆ್ಯನ್ಸಿ ಸೋಜನ್‌ –ಪ್ರಜಾವಾಣಿ ಚಿತ್ರ/ಎಸ್‌.ಕೆ.ದಿನೇಶ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT