ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಏಷ್ಯನ್ ಚಾಂಪಿಯನ್ಸ್ ಹಾಕಿ ಟ್ರೋಫಿ: ಭಾರತದ ಗೆಲುವಿನಲ್ಲಿ ಮಿಂಚಿದ ಹರ್ಮನ್‌ಪ್ರೀತ್‌

Published : 12 ಸೆಪ್ಟೆಂಬರ್ 2024, 10:29 IST
Last Updated : 12 ಸೆಪ್ಟೆಂಬರ್ 2024, 10:29 IST
ಫಾಲೋ ಮಾಡಿ
Comments

ಹುಲುನ್‌ಬುಯಿರ್‌ (ಚೀನಾ): ನಾಯಕ ಹರ್ಮನ್‌ಪ್ರೀತ್ ಸಿಂಗ್‌ ಗಳಿಸಿದ ಎರಡು ಗೋಲುಗಳ ನೆರವಿನಿಂದ ಭಾರತ ತಂಡ, ಹೀರೊ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿ ಪಂದ್ಯದಲ್ಲಿ ಗುರುವಾರ 3–1 ಗೋಲುಗಳಿಂದ ದಕ್ಷಿಣ ಕೊರಿಯಾ ತಂಡವನ್ನು  ಸೋಲಿಸಿ ಅಜೇಯ ಓಟ ಮುಂದುವರಿಸಿತು. ಇದು ಈ ಟೂರ್ನಿಯಲ್ಲಿ ಭಾರತಕ್ಕೆ ಸತತ ನಾಲ್ಕನೇ ಜಯ.

ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತ ಭಾರತ ತಂಡವು, ಈ ಹಿಂದಿನ ಪಂದ್ಯಗಳಲ್ಲಿ ಚೀನಾ, ಜಪಾನ್‌ ಮತ್ತು ಕಳೆದ ವರ್ಷದ ರನ್ನರ್ ಅಪ್‌ ಮಲೇಷ್ಯಾ ತಂಡಗಳನ್ನು ಸೋಲಿಸಿತ್ತು. ಆರು ತಂಡಗಳ ಟೂರ್ನಿಯಲ್ಲಿ ಸೆಮಿಫೈನಲ್ ಸ್ಥಾನವನ್ನೂ ಖಚಿತಪಡಿಸಿಕೊಂಡಿತ್ತು.

ಲೀಗ್‌ ಪಂದ್ಯಗಳ ನಂತರ ಮೊದಲ ನಾಲ್ಕು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ಸೋಮವಾರ ಸೆಮಿಫೈನಲ್ ಪಂದ್ಯಗಳು ನಿಗದಿಯಾಗಿದ್ದು, ಮಂಗಳವಾರ ಫೈನಲ್ ನಡೆಯಲಿದೆ.‌

ಉತ್ತಮ ಲಯದಲ್ಲಿರುವ ಭಾರತ ತಂಡ ಅದನ್ನು ಮುಂದುವರಿಸುವಂತೆ ಆಡಿ, ಮೊದಲ ಕ್ವಾರ್ಟರ್‌ ಕೊನೆಗೆ 2–1 ಮುನ್ನಡೆ ಸಾಧಿಸಿತ್ತು. ಮಲೇಷ್ಯಾ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಎರಡು ಗೋಲುಗಳನ್ನು ಗಳಿಸಿದ್ದ ಅರಿಜಿತ್‌ ಸಿಂಗ್ ಹುಂಡಲ್ ಎಂಟನೇ ನಿಮಿಷ ಭಾರತಕ್ಕೆ ಮುನ್ನಡೆ ಒದಗಿಸಿದರು. ಹರ್ಮನ್‌ಪ್ರೀತ್ 9 ಮತ್ತು 43ನೇ ನಿಮಿಷ ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸಿದರು.

ಕೊರಿಯಾ ತಂಡದ ಏಕೈಕ ಗೋಲನ್ನು ಜಿಹುನ್ ಯಾಂಗ್ ಅವರು 30ನೇ ನಿಮಿಷ ಪೆನಾಲ್ಟಿ ಕಾರ್ನರ್ ಮೂಲಕ ಗಳಿಸಿದರು.

ಟೂರ್ನಿಯ ಈವರೆಗಿನ ಪಂದ್ಯಗಳಂತೆ ಕೊರಿಯಾ ಎದುರೂ ಭಾರತ ಆಕ್ರಮಣಕಾರಿಯಾಗಿಯೇ ಆಟ ಆರಂಭಿಸಿತು. ಮುನ್ನಡೆಗೆ ಹೆಚ್ಚು ಹೊತ್ತು ಕಾಯಬೇಕಾಗಿ ಬರಲಿಲ್ಲ. ಸುಖಜೀತ್‌ ಸಿಂಗ್ ಅವರಿಂದ ದೊರೆತ ಉತ್ತಮ ಪಾಸ್‌ನಲ್ಲಿ ಹುಂಡಲ್ ಚೆಂಡನ್ನು ಆಮೋಘವಾಗಿ ಗೋಲಿನೊಳಕ್ಕೆ ಹೊಡೆದರು.

ನಿಮಿಷದ ನಂತರ ಯುವ ಆಟಗಾರ ರಾಜಕುಮಾರ್ ಪಾಲ್ ಅವರಿಂದಾಗಿ ಪೆನಾಲ್ಟಿ ಕಾರ್ನರ್‌ ಅವಕಾಶ ಭಾರತಕ್ಕೆ ದೊರೆಯಿತು. ಈ ಅವಕಾಶವನ್ನು ಹರ್ಮನ್‌ಪ್ರೀತ್‌ ವ್ಯರ್ಥಪಡಿಸಲಿಲ್ಲ.

ಭಾರತದ ಮೀಸಲು ಗೋಲ್‌ ಕೀಪರ್‌ ಸೂರಜ್ ಕರ್ಕೆರಾ ಅವರ ಪ್ರದರ್ಶನ ಉತ್ತಮವಾಗಿದ್ದು, ಎರಡನೇ ಕ್ವಾರ್ಟರ್‌ನಲ್ಲಿ ಉತ್ತಮ ತಡೆಗಳ ಮೂಲಕ ಕೊರಿಯಾಕ್ಕೆ ಕೆಲವು ಗೋಲು ಅವಕಾಶಗಳನ್ನು ನಿರಾಕರಿಸಿದರು. ವಿರಾಮಕ್ಕೆ ಮೊದಲಿನ ಈ ಅವಧಿಯಲ್ಲಿ ಕೊರಿಯಾವೇ ನಿಯಂತ್ರಣ ಸಾಧಿಸಿ ಹೆಚ್ಚು ದಾಳಿಗಳನ್ನು ನಡೆಸಿತು. ಆದರೆ ಭಾರತದ ರಕ್ಷಣಾ ಪಡೆ ಎಚ್ಚರಿಕೆಯಿಂದ ಇತ್ತು.

ವಿರಾಮಕ್ಕೆ ಕೆಲವೇ ಕ್ಷಣಗಳಿರುವಾಗ ಕೊರಿಯಾ ಅಂತರ ಕಡಿಮೆ ಮಾಡುವಲ್ಲಿ ಯಶಸ್ಸು ಕಂಡಿತು. ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಯಾಂಗ್ ಹೊಡೆದ ಚೆಂಡು ಮನ್‌ಪ್ರೀತ್ ಅವರ ಸ್ಟಿಕ್‌ಗೆ ಸವರಿ ಗೋಲುಪೆಟ್ಟಿಗೆಗೆ ಧಾವಿಸಿತು.

ವಿರಾಮದ ನಂತರ 35ನೇ ನಿಮಿಷ ಕೊರಿಯಾ ಸತತವಾಗಿ ಎರಡು ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಪಡೆಯಿತು. ಆದರೆ ಗೋಲಾಗಲು ಭಾರತದ ಆಟಗಾರರು ಅವಕಾಶ ನೀಡಲಿಲ್ಲ. ಈ ಮಧ್ಯೆ 43ನೇ ನಿಮಿಷ ಭಾರತಕ್ಕೆ ದೊರೆತ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಹರ್ಮನ್‌ಪ್ರೀತ್ ಗೋಲಾಗಿ ಪರಿವರ್ತಿಸಿ ಮುನ್ನಡೆಯನ್ನು 3–1ಕ್ಕೆ ಏರಿಸಿದರು. ಅವರು ಹೊಡೆದ ಚೆಂಡು ಕೊರಿಯನ್ ಗೋಲ್‌ಕೀಪರ್‌ ಜೆಹಾನ್ ಕಿಮ್‌ ಅವರ ಎಡಗಡೆಯಿಂದ ಗೋಲಿನೊಳಕ್ಕೆ ಧಾವಿಸಿತು. ಭಾರತ, ಪಂದ್ಯದ ಉಳಿದ ಅವಧಿಗೆ ಹಿಡಿತ ಸಾಧಿಸಿ ಕೊರಿಯಾಕ್ಕೆ ಗೋಲಿನ ಅವಕಾಶವನ್ನೇ ನೀಡಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT