ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡೈಮಂಡ್ ಲೀಗ್: ಒಲಿಂಪಿಕ್ಸ್‌ಗಿಂತ ಉತ್ತಮ ನಿರ್ವಹಣೆ ನೀಡಿಯೂ ನೀರಜ್‌ಗೆ 2ನೇ ಸ್ಥಾನ

Published 23 ಆಗಸ್ಟ್ 2024, 10:50 IST
Last Updated 23 ಆಗಸ್ಟ್ 2024, 10:50 IST
ಅಕ್ಷರ ಗಾತ್ರ

ಲುಸಾನ್‌: ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ, ಗುರುವಾರ ನಡೆದ ಲುಸಾನ್ ಡೈಮಂಡ್ ಲೀಗ್‌ ಕೂಟದಲ್ಲಿ 89.49 ಮೀಟರ್‌ ಎಸೆತದೊಡನೆ ಎರಡನೇ ಸ್ಥಾನ ಪಡೆದರು. ಫಿಟ್ನೆಸ್‌ ಸಂದೇಹಗಳ ಹೊರತಾಗಿಯೂ ಅವರು ಛಲದ ಪ್ರದರ್ಶನ ನೀಡಿ ಅಂತಿಮ ಯತ್ನದಲ್ಲಿ ಬೆಳ್ಳಿ ಒಲಿಸಿಕೊಂಡರು.

‌ಇದು 26 ವರ್ಷ ವಯಸ್ಸಿನ ನೀರಜ್‌ ಈ ಋತುವಿನಲ್ಲಿ ದಾಖಲಿಸಿದ ಉತ್ತಮ ಥ್ರೊ ಎನಿಸಿತು. ನಾಲ್ಕನೇ ಯತ್ನದವರೆಗೆ ಅವರು ನಾಲ್ಕನೇ ಸ್ಥಾನದಲ್ಲಿದ್ದರು. ಐದನೇ ಪ್ರಯತ್ನದಲ್ಲಿ 85.58 ಮೀ. ಎಸೆದರು. ಅಂತಿಮ ಯತ್ನದಲ್ಲಿ 89.49 ಮೀ. ಎಸೆದು ಎರಡನೇ ಸ್ಥಾನಕ್ಕೆ ಜಿಗಿದರು. ಪ್ಯಾರಿಸ್‌ ಒಲಿಂಪಿಕ್ಸ್‌ ಕ್ರೀಡೆಗಳಲ್ಲಿ ಅವರು ಭರ್ಚಿಯನ್ನು 89.45 ಮೀ. ಎಸೆದಿದ್ದು, ಇಲ್ಲಿ ಸ್ವಲ್ಪ ಸುಧಾರಣೆ ಕಂಡಿದ್ದಾರೆ.

ಅವರಿಗೆ ಆರನೇ ಯತ್ನ ಕೈತಪ್ಪುವ ಭೀತಿಯಿತ್ತು. ಆದರೆ ಐದನೇ ಎಸೆತದಲ್ಲಿ 85.58 ಮೀ. ದಾಖಲಿಸಿದ್ದು ಅವರಿಗೆ ನೆರವಾಯಿತು. ಐದು ಯತ್ನಗಳ ಬಳಿಕ ಮೊದಲ ಮೂರು ಸ್ಥಾನದಲ್ಲಿರುವವರು ಮಾತ್ರ ಅಂತಿಮ (ಆರನೇ) ಥ್ರೊ ಅವಕಾಶ ಪಡೆಯುತ್ತಾರೆ.

ಎರಡು ಬಾರಿಯ ವಿಶ್ವ ಚಾಂಪಿಯನ್ ಹಾಗೂ ಪ್ಯಾರಿಸ್ ಕ್ರೀಡೆಗಳ ಕಂಚಿನ ಪದಕ ವಿಜೇತ ಆ್ಯಂಡರ್ಸನ್ ಪೀಟರ್ಸ್‌ (ಗ್ರೆನೆಡಾ) ಅವರು 90.61 ಮೀ. ಗಳ ದೈತ್ಯ ಥ್ರೊದೊಡನೆ ಅಗ್ರಸ್ಥಾನ ಪಡೆದರು. ಜರ್ಮನಿಯ ಜೂಲಿಯನ್ ವೇಬರ್ (87.08 ಮೀ.) ಮೂರನೇ ಸ್ಥಾನ ಗಳಿಸಿದರು.

‘ಆರಂಭದಲ್ಲಿ ಅಳುಕು ಇತ್ತು. ಆದರೆ ಥ್ರೊಗಳ ಬಗ್ಗೆ ಸಮಾಧಾನ ಇದೆ. ಅದರಲ್ಲೂ ಕೊನೆಯ ಯತ್ನದಲ್ಲಿ ನನ್ನ ಎರಡನೇ ಅತಿ ಉತ್ತಮ ಸಾಧನೆ ದಾಖಲಾಯಿತು. ಕಠಿಣ ಆರಂಭ. ಆದರೆ ಉತ್ತಮ ಪುನರಾಗಮನ. ಹೋರಾಟದ ಮನೋಭಾವ ಖುಷಿ ಮೂಡಿಸಿದೆ’ ಎಂದು ಚೋಪ್ರಾ ಸ್ಪರ್ಧೆಯ ಬಳಿಕ ಪ್ರತಿಕ್ರಿಯಿಸಿದರು.

ಕಳೆದ ವರ್ಷದುದ್ದಕ್ಕೂ ಲಯ ಕಂಡುಕೊಳ್ಳಲು ಪರದಾಡಿದ್ದ ಪೀಟರ್ಸ್‌ ಆರಂಭದಿಂದಲೇ ಅಗ್ರಸ್ಥಾನ ಕಾಪಾಡಿಕೊಂಡಿದ್ದರು. ಅಂತಿಮ ಯತ್ನದಲ್ಲಿ 90 ಮೀ.ಗೂ ಹೆಚ್ಚು ದೂರ ದಾಖಲಿಸಿದರು. ಆದರೆ ಅವರ ಅತ್ಯುತ್ತಮ ಸಾಧನೆ (2022ರಲ್ಲಿ 93.07 ಮೀ.) ಮೀರಿನಿಲ್ಲಲು ಆಗಲಿಲ್ಲ.

ಗುರುವಾರ ಎರಡನೇ ಸ್ಥಾನಕ್ಕೆ ದೊರೆತ ಏಳು ಪಾಯಿಂಟ್ಸ್‌ ಒಳಗೊಂಡಂತೆ ಚೋಪ್ರಾ ಡೈಮಂಡ್‌ ಲೀಗ್‌ ಪಟ್ಟಿಯಲ್ಲಿ ಈಗ ವೇಬರ್ ಜೊತೆ ತಲಾ 15 ಪಾಯಿಂಟ್‌ಗಳೊಡನೆ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ. ಪೀಟರ್ಸನ್ 21 ಪಾಯಿಂಟ್ಸ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. 16 ಪಾಯಿಂಟ್ಸ್ ಕಲೆಹಾಕಿರುವ ಝೆಕ್‌ ರಿಪಬ್ಲಿಕ್‌ನ ಜೇಕಬ್‌ ವಾಡ್ಲೇಚ್‌ ಎರಡನೇ ಸ್ಥಾನದಲ್ಲಿದ್ದಾರೆ. ವಾಡ್ಲೇಚ್‌ ಇಲ್ಲಿ 82.03 ಥ್ರೊದೊಡನೆ ಏಳನೇ ಸ್ಥಾನಕ್ಕೆ ಸರಿದಿದ್ದರು.

ಒಲಿಂಪಿಕ್ಸ್‌ನಲ್ಲಿ 92.97 ಮೀ. ಥ್ರೊದೊಡನೆ ದಾಖಲೆ ಸ್ಥಾಪಿಸಿ ಚಿನ್ನ ಗೆದ್ದಿದ್ದ ಪಾಕಿಸ್ತಾನದ ಅರ್ಷದ್‌ ನದೀಮ್ ಇಲ್ಲಿ ಭಾಗವಹಿಸಿರಲಿಲ್ಲ.

ಚೋಪ್ರಾ 2022 ಮತ್ತು 2023ರ ಲುಸಾನ್‌ ಲೆಗ್‌ನಲ್ಲಿ ಜಯಶಾಲಿಯಾಗಿದ್ದರು. 2023ರಲ್ಲಿ ಅವರು ಡೈಮಂಡ್‌ ಲೀಗ್‌ ಸರಣಿಯಲ್ಲಿ ರನ್ನರ್ ಅಪ್ ಆಗಿದ್ದರು. ಈ ವರ್ಷದ ಡೈಮಂಡ್ ಲೀಗ್‌ ಫೈನಲ್ ಸೆ. 14ರಂದು ಬ್ರಸೆಲ್ಸ್‌ನಲ್ಲಿ ನಡೆಯಲಿದೆ. ಅದಕ್ಕಿಂತ ಮುನ್ನ ಜ್ಯೂರಿಕ್‌ನಲ್ಲಿ ಡೈಮಂಡ್‌ ಲೀಗ್‌ ಕೂಡ ನಡೆಯಲಿದ್ದು, ಅಲ್ಲಿನ ಸ್ಪರ್ಧಾಪಟ್ಟಿಯಲ್ಲಿ ಪುರುಷರ ಜಾವೆಲಿನ್ ಥ್ರೊ ಕೂಡ ಇದೆ.

ಈ ವರ್ಷ ಇದುವರೆಗಿನ ಮೂರು ಡೈಮಂಡ್‌ ಲೀಗ್‌ ಕೂಟಗಳಲ್ಲಿ ನೀರಜ್‌ ಒಮ್ಮೆಯೂ ಅಗ್ರಸ್ಥಾನ ಪಡೆದಿಲ್ಲ.

ಕಳೆದ ವರ್ಷ ಬುಡಾಪೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ನಂತರ ಅವರು ತೊಡೆಯ ಸ್ನಾಯು ನೋವಿನಿಂದ ಬಳಲುತ್ತಿದ್ದಾರೆ. ಆ ಕೂಟದಲ್ಲಿ ಅವರು ಚಿನ್ನ ಗೆದ್ದಿದ್ದರು.

ನೀರಜ್ ಚೋಪ್ರಾ

ನೀರಜ್ ಚೋಪ್ರಾ

(ರಾಯಿಟರ್ಸ್ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT