ಅಮೆರಿಕ ಆಸ್ಟ್ರೇಲಿಯಾ: ಹೆಚ್ಚಿದ ನಾರೀಶಕ್ತಿ
ಡೆನ್ವರ್ (ಎಪಿ): ಒಲಿಂಪಿಕ್ಸ್‌ಗೆ ತೆರಳುತ್ತಿರುವ ಪ್ರಬಲ ಅಮೆರಿಕ ತಂಡದಲ್ಲಿ ಸತತ ನಾಲ್ಕನೇ ಬಾರಿಯೂ ಮಹಿಳಾ ಕ್ರೀಡಾಪಟುಗಳ ಸಂಖ್ಯೆಯೇ ಹೆಚ್ಚು ಇದೆ. ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಸಮಿತಿ ಬುಧವಾರ ಪ್ಯಾರಿಸ್ ಕೂಟಕ್ಕೆ ಪ್ರಕಟಿಸಿದ 592 ಮಂದಿಯ ತಂಡದಲ್ಲಿ314 ಮಂದಿ ಮಹಿಳಾ ಸ್ಪರ್ಧಿಗಳಿದ್ದಾರೆ. 278 ಮಂದಿ ಪುರುಷರು. ಅಮೆರಿಕ ಪಾಳೆಯದಲ್ಲಿ 66 ಒಲಿಂಪಿಕ್ ಚಾಂಪಿಯನ್ನರಿದ್ದಾರೆ. ಇವರೆಲ್ಲ ಒಟ್ಟು 110 ಚಿನ್ನದ ಪದಕಗಳ ಬೇಟೆಯಾಡಿದ್ದಾರೆ. ಮೂರರಿಂದ ಐದು ಒಲಿಂಪಿಕ್ಸ್‌ಗಳಲ್ಲಿ ಪಾಲ್ಗೊಂಡಿದ್ದಾರೆ. ಈ ಬಾರಿಯೂ ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಅಮೆರಿಕವೇ ಫೆವರೀಟ್ ಆಗಿದೆ. ಅತ್ಯಧಿಕ: ಇದೇ ಮೊದಲ ಬಾರಿ ಒಲಿಂಪಿಕ್ಸ್‌ಗೆ ತೆರಳಿರುವ ಆಸ್ಟ್ರೇಲಿಯಾ ತಂಡದಲ್ಲಿ ಮಹಿಳೆಯರ ಸಂಖ್ಯೆ ಅತ್ಯಧಿಕವಾಗಿದೆ. 460 ಕ್ರೀಡಾಪಟುಗಳಲ್ಲಿ 256 ಮಂದಿ (ಶೇ 56.6) ಮಹಿಳೆಯರಿದ್ದಾರೆ. ತಂಡದಲ್ಲಿರುವ ಕ್ರೀಡಾಪಟುಗಳ ಪೈಕಿ 231 ಮಂದಿಗೆ ಇದು ಮೊದಲ ಒಲಿಂಪಿಕ್ಸ್ ಆಗಿದೆ.