ಹಾಂಗ್ಝೌ: ಭಾರತದ ಬ್ಯಾಡ್ಮಿಂಟನ್ ಆಟಗಾರ ಎಚ್.ಎಸ್. ಪ್ರಣಯ್ ಏಷ್ಯನ್ ಕ್ರೀಡಾಕೂಟದಲ್ಲಿ ಗೆಲುವಿನ ಓಟ ಮುಂದುವರಿಸಿದ್ದಾರೆ. ಪುರುಷರ ಸಿಂಗಲ್ಸ್ನಲ್ಲಿ ಮಲೇಷ್ಯಾದ ಲೀ ಝಿ ಜಿಯಾ ಅವರನ್ನು ಗುರುವಾರ ಮಣಿಸಿ, ಸೆಮಿಫೈನಲ್ಗೆ ಲಗ್ಗೆ ಹಾಕುವ ಮೂಲಕ ಪದಕ ಖಚಿತ ಪಡಿಸಿಕೊಂಡಿದ್ದಾರೆ. ಆದರೆ, ಮಹಿಳೆಯರ ಸಿಂಗಲ್ಸ್ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಪಿ.ವಿ. ಸಿಂಧು ನಿರಾಸೆ ಅನುಭವಿಸಿದ್ದಾರೆ.

ಏಷ್ಯನ್ ಕ್ರೀಡಾಕೂಟದಲ್ಲಿ 41 ವರ್ಷಗಳ ಬಳಿಕ ಪುರುಷರ ಸಿಂಗಲ್ಸ್ನಲ್ಲಿ ಭಾರತಕ್ಕೆ ಪದಕ ಖಚಿತವಾಗಿದೆ. 1982ರಲ್ಲಿ (ನವದೆಹಲಿ) ನಡೆದ ಕೂಟದಲ್ಲಿ ಭಾರತ ಕೊನೆಯದಾಗಿ ಈ ವಿಭಾಗದಲ್ಲಿ ಪದಕ ಗೆದ್ದಿತ್ತು. ಅಂದು ಸೈಯದ್ ಮೋದಿ ಕಂಚು ಗೆದ್ದಿದ್ದರು.

ಬೆನ್ನುನೋವನ್ನು ಲೆಕ್ಕಿಸದೆ ದಿಟ್ಟ ಪ್ರದರ್ಶನ ತೋರಿದ ಭಾರತದ ಆಟಗಾರ, ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎದುರಾಳಿ ಆಟಗಾರನನ್ನು 21-16, 21-23, 22-20 ರಿಂದ ಹಿಮ್ಮೆಟ್ಟಿಸಿದರು. ತಂಡ ವಿಭಾಗದಲ್ಲಿ ಭಾರತದ ಪುರುಷರು ಭಾನುವಾರ ಬೆಳ್ಳಿ ಗೆದ್ದಿರುವುದರಿಂದ ಬ್ಮಾಡ್ಮಿಂಟನ್ನಲ್ಲಿ ಮತ್ತೊಂದು ಪದಕ ಪ್ರಣಯ್ ಮೂಲಕ ದೊರೆಯಲಿದೆ.

ಈಚೆಗೆ ವಿಶ್ವ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕ ಗೆದ್ದಿದ್ದ ಪ್ರಣಯ್, ಬೆನ್ನುನೋವಿನ ಕಾರಣದಿಂದ ಇಲ್ಲಿ ತಂಡ ವಿಭಾಗದ ಸ್ಪರ್ಧೆಯಿಂದ ಹೊರಗುಳಿದಿದ್ದರು. ಫೈನಲ್ನಲ್ಲಿ ಭಾರತ 2–3ರಿಂದ ಚೀನಾ ವಿರುದ್ಧ ಪರಾಭವಗೊಂಡಿತ್ತು.

ಆಲ್ ಇಂಗ್ಲೆಂಡ್ ಮಾಜಿ ಚಾಂಪಿಯನ್ ಆಗಿರುವ ಲೀ ಝಿ ಜಿಯಾ ಅವರು ಪ್ರಣಯ್ಗೆ ಉತ್ತಮ ಪೈಪೋಟಿ ನೀಡಿದರು. ಮೊದಲ ಗೇಮ್ನಲ್ಲಿ 5–11 ರಿಂದ ಹಿನ್ನಡೆಯಲ್ಲಿದ್ದಾಗ ಪುಟಿದ್ದೆದ್ದ ಭಾರತದ ಆಟಗಾರ ನಿಖರ ಆಟದ ಮೂಲಕ ಮುನ್ನಡೆ ಪಡೆದರು. ಆದರೆ, ನಂತರದಲ್ಲಿ ಪಾರಮ್ಯ ಸಾಧಿಸಿದ ಮಲೇಷ್ಯಾ ಆಟಗಾರ ಗೇಮ್ ಸಮಬಲಗೊಳಿಸಿದರು. ನಿರ್ಣಾಯಕ ಗೇಮ್ನಲ್ಲಿ 16–16 ಪಾಯಿಂಟ್ ಗಳಿಸಿದ್ದಾಗ ಪ್ರಣಯ್ ಬೆನ್ನುನ ನೋವು ತಡೆಯಲಾಗದೆ ವೈದ್ಯಕೀಯ ನೆರವು ಪಡೆದರು. ಛಲಬಿಡದೆ ಆಟ ಮುಂದುವರಿಸಿದ ಅವರು ನಾಲ್ಕರ ಘಟ್ಟಕ್ಕೆ ಸ್ಥಾನ ಖಚಿತ ಪಡಿಸಿಕೊಂಡರು.

78 ನಿಮಿಷಗಳ ಮ್ಯಾರಥಾನ್ನಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಪ್ರಣಯ್ ಅಂಗಣದಲ್ಲೇ ಮಲಗಿ ನಿಟ್ಟುಸಿರುಬಿಟ್ಟರು. ನಂತರ ಶರ್ಟ್ ಕಳಚಿ ಸಂಭ್ರಮಿಸಿ, ಮುಖ್ಯ ಕೋಚ್ ಪುಲ್ಲೇಲ ಗೋಪಿಚಂದ್ ಅವರನ್ನು ಬಿಗಿದಪ್ಪಿಕೊಂಡರು.

‘ಈ ಪಂದ್ಯ ನಿಜವಾಗಿಯೂ ಕಠಿಣವಾಗಿತ್ತು. ಲೀ ಯಾವಾಗಲೂ ಪ್ರಬಲ ಎದುರಾಳಿ ಎಂದು ನಾನು ಭಾವಿಸುತ್ತೇನೆ. ನಾನು ದೈಹಿಕವಾಗಿ ಶೇ 80ರಷ್ಟು ಮಾತ್ರ ಸದೃಢನಾಗಿದ್ದೆ. ನನ್ನಲ್ಲಿನ ಹೋರಾಟ ಮನೋಭಾವಕ್ಕೆ ಫಲ ಸಿಕ್ಕಿದೆ’ ಎಂದು ಪ್ರಣಯ್ ಪ್ರತಿಕ್ರಿಯಿಸಿದರು.

ಸಿಂಧು ಹೋರಾಟ ಅಂತ್ಯ:

ಇದಕ್ಕೂ ಮೊದಲು ನಡೆದ ಮಹಿಳೆಯರ ಸಿಂಗಲ್ಸ್ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಹೋರಾಟ ಅಂತ್ಯಗೊಳಿಸಿದರು. ಈ ಮೂಲಕ ಒಂಬತ್ತು ವರ್ಷಗಳಲ್ಲಿ ಮೊದಲ ಬಾರಿಗೆ ಪ್ರಮುಖ ಕೂಟದಿಂದ ಬರಿಗೈಯಲ್ಲಿ ತವರಿಗೆ ಬರಬೇಕಿದೆ.

ಸಿಂಧು 16-21, 12-21 ರಿಂದ ಚೀನಾದ ಹೀ ಬಿಂಗ್ಜಿಯಾವೊ ಅವರಿಗೆ ಮಣಿದರು. ಮೊದಲ ಗೇಮ್ನ ಆರಂಭದಲ್ಲಿ ಸಮಬಲದ ಪೈಪೋಟಿ ನಡೆಸಿದ ಸಿಂಧು, ನಂತರ ಹಿಡಿತ ಕಳೆದುಕೊಂಡರು. ಎದುರಾಳಿ ಆಟಗಾರ್ತಿ ನಿಖರ ಪ್ಲೇಸ್ಮೆಂಟ್ ಮತ್ತು ಸ್ಮ್ಯಾಷ್ಗಳ ಮೂಲಕ ಮುನ್ನಡೆ ಸಾಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.