ಪ್ರೊ ಕಬಡ್ಡಿ ಲೀಗ್ ಏಳನೇ ಆವೃತ್ತಿಯು ಅಂತಿಮ ಘಟ್ಟಕ್ಕೆ ಕಾಲಿಟ್ಟಿದೆ. ಈ ಬಾರಿ ಯಾವ ತಂಡಗಳಿಗೆ ‘ಪ್ಲೇ ಆಫ್ ಟಿಕೆಟ್’ ಸಿಗಬಹುದು ಎಂಬ ಪ್ರಶ್ನೆಗೆ ಈಗಾಗಲೇ ಉತ್ತರವೂ ದೊರೆತಾಗಿದೆ.

ಲೀಗ್ನಲ್ಲಿ ‘ಹ್ಯಾಟ್ರಿಕ್’ ಪ್ರಶಸ್ತಿ ಜಯಿಸಿ ದಾಖಲೆ ಬರೆದಿದ್ದ ಪಟ್ನಾ ಪೈರೇಟ್ಸ್, ಚೊಚ್ಚಲ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ಜೈಪುರ ಪಿಂಕ್ ಪ್ಯಾಂಥರ್ಸ್, ತೆಲುಗು ಟೈಟನ್ಸ್ ಸೇರಿದಂತೆ ಆರು ತಂಡಗಳು ಲೀಗ್ ಹಂತದಲ್ಲೇ ಹೋರಾಟ ಮುಗಿಸಿವೆ. ಹೀಗಾಗಿ ‘ಡುಬ್ಕಿ ಕಿಂಗ್’ ಪ್ರದೀಪ್ ನರ್ವಾಲ್, ‘ಬಾಹುಬಲಿ’ ಸಿದ್ದಾರ್ಥ್ ದೇಸಾಯಿ ಮತ್ತು ದೀಪಕ್ ನಿವಾಸ್ ಹೂಡಾ ಅವರ ಆಟದ ಸೊಬಗು ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ಇಲ್ಲದಂತಾಗಿದೆ.

ಲೀಗ್ ಹಂತದಲ್ಲಿ ಕಬಡ್ಡಿ ಪ್ರಿಯರನ್ನು ಸಂಭ್ರಮದ ಹೊಳೆಯಲ್ಲಿ ಮಿಂದೇಳುವಂತೆ ಮಾಡಿದ್ದ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್, ಬೆಂಗಾಲ್ ವಾರಿಯರ್ಸ್, ದಬಂಗ್ ಡೆಲ್ಲಿ, ಹರಿಯಾಣ ಸ್ಟೀಲರ್ಸ್, ಯು ಮುಂಬಾ ಮತ್ತು ಯು.ಪಿ.ಯೋಧಾ ತಂಡಗಳು ‘ಪ್ಲೇ ಆಫ್’ಗೆ ಅರ್ಹತೆ ಗಿಟ್ಟಿಸಿವೆ.

ಈ ತಂಡಗಳ ಪೈಕಿ ಯಾರು ಈ ಬಾರಿ ಪ್ರಶಸ್ತಿಯ ಒಡೆಯರಾಗಲಿದ್ದಾರೆ ಎಂಬ ಕೌತುಕ ಈಗ ಅಭಿಮಾನಿಗಳ ಮನದಲ್ಲಿ ಮನೆಮಾಡಿದೆ. ಜೊತೆಗೆ ಸೋಲು–ಗೆಲುವಿನ ಲೆಕ್ಕಾಚಾರವೂ ಜೋರಾಗಿದೆ.

1. ಬೆಂಗಾಲ್ ವಾರಿಯರ್ಸ್

ಮಣಿಂದರ್ ಸಿಂಗ್ ಮುಂದಾಳತ್ವದ ಬೆಂಗಾಲ್ ವಾರಿಯರ್ಸ್ ತಂಡ ಪ್ರಶಸ್ತಿಯ ರೇಸ್ನಲ್ಲಿ ಮುಂಚೂಣಿಯಲ್ಲಿದೆ. ಕನ್ನಡಿಗ ಬಿ.ಸಿ.ರಮೇಶ್ ಅವರ ಮಾರ್ಗದರ್ಶನದಲ್ಲಿ ತರಬೇತುಗೊಂಡಿರುವ ತಂಡವು, ಲೀಗ್ ಹಂತದಲ್ಲಿ ಅಮೋಘ ಸಾಮರ್ಥ್ಯ ತೋರಿತ್ತು. ಹೀಗಾಗಿ ಮಣಿಂದರ್ ಬಳಗದಲ್ಲಿ ಚೊಚ್ಚಲ ಪ್ರಶಸ್ತಿಯ ಕನಸು ಚಿಗುರೊಡೆದಿದೆ.

ಆರಂಭದ 13 ಪಂದ್ಯಗಳಲ್ಲಿ ಏಳು ಬೀಳುಗಳನ್ನು ಕಂಡಿದ್ದ ಈ ತಂಡವು ದ್ವಿತೀಯಾರ್ಧದಲ್ಲಿ ‘ಮ್ಯಾಜಿಕ್’ ಮಾಡಿತ್ತು. ಸತತ ಏಳು ಪಂದ್ಯಗಳನ್ನು ಗೆದ್ದು ‘ಪ್ಲೇ ಆಫ್’ ಟಿಕೆಟ್ ಖಾತ್ರಿಪಡಿಸಿಕೊಂಡಿತ್ತು.

ನಾಯಕ ಮಣಿಂದರ್, ಈ ತಂಡದ ಬೆನ್ನೆಲುಬು. ಅವರು, ಮಿಂಚಿನ ವೇಗದ ದಾಳಿಗಳ ಮೂಲಕ ಎದುರಾಳಿಗಳ ರಕ್ಷಣಾ ಕೋಟೆಯನ್ನು ಧ್ವಂಸಗೊಳಿಸಬಲ್ಲ ಚತುರ. ಈ ಬಾರಿಯ ಲೀಗ್ನಲ್ಲಿ ಅತೀ ಹೆಚ್ಚು ರೇಡಿಂಗ್ (205) ಪಾಯಿಂಟ್ಸ್ ಗಳಿಸಿದವರ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದಿರುವುದು ಇದಕ್ಕೆ ಸಾಕ್ಷಿ.

ಇರಾನ್ನ ಆಲ್ರೌಂಡರ್ ನಬಿಬಕ್ಷ್, ಕನ್ನಡಿಗರಾದ ಸುಕೇಶ್ ಹೆಗ್ಡೆ ಮತ್ತು ಪ್ರಪಂಜನ್ ಅವರೂ ಉತ್ತಮ ಲಯದಲ್ಲಿರುವುದು ತಂಡಕ್ಕೆ ವರವಾಗಿ ಪರಿಣಮಿಸಿದೆ.

ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ ಎರಡರೊಳಗೆ ಸ್ಥಾನ ಪಡೆದು ನೇರವಾಗಿ ಸೆಮಿಫೈನಲ್ ಪ್ರವೇಶಿಸಿರುವ ಬೆಂಗಾಲ್, ಪ್ರಶಸ್ತಿಗಾಗಿ ಇನ್ನೆರಡು ಮೆಟ್ಟಿಲುಗಳನ್ನು ಮಾತ್ರ ಏರಬೇಕು. ಈ ಹಾದಿ ‘ಹೂವಿನ ಹಾಸಿಗೆ’ಯಾಗಬೇಕಾದರೆ ರಕ್ಷಣಾ ವಿಭಾಗದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಆಡುವುದು ಅವಶ್ಯ.

2. ದಬಂಗ್ ಡೆಲ್ಲಿ

ಈ ಸಲದ ಲೀಗ್ನಲ್ಲಿ ದಬಂಗ್ ಡೆಲ್ಲಿ ತಂಡವು ‘ಪ್ಲೇ ಆಫ್’ ಪ್ರವೇಶಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಅದಕ್ಕೆ ಕಾರಣ ಹಿಂದಿನ ಆವೃತ್ತಿಗಳಲ್ಲಿ ತಂಡದಿಂದ ಮೂಡಿಬಂದಿದ್ದ ಕಳಪೆ ಆಟ. ಈ ಬಾರಿ ದಬಂಗ್ ಫ್ರಾಂಚೈಸ್, ತಂಡಕ್ಕೆ ಹೊಸ ಮೆರಗು ನೀಡಿತ್ತು. ಹರಾಜಿನಲ್ಲಿ ಆಟಗಾರರನ್ನು ಖರೀದಿಸುವಾಗ ಜಾಣ್ಮೆ ತೋರಿತ್ತು. ಆಡಿದ ಮೊದಲ ಮೂರು ಪಂದ್ಯಗಳಲ್ಲಿ ಗೆದ್ದಾಗಲೇ ತಂಡದ ಗುರಿ ಸ್ಪಷ್ಟವಾಗಿತ್ತು. ಜೋಗಿಂದರ್ ನರ್ವಾಲ್ ಬಳಗವು ನಾಲ್ಕನೇ ಪಂದ್ಯದಲ್ಲಿ ಮುಗ್ಗರಿಸಿದರೂ ವಿಚಲಿತಗೊಳ್ಳದೆ, ಮತ್ತೆ ಗೆಲುವನ್ನು ಅಪ್ಪಿಕೊಳ್ಳುತ್ತಾ ಮುಂದಡಿ ಇಟ್ಟಿದ್ದು ನಿಜಕ್ಕೂ ಅಚ್ಚರಿ. ಹಿಂದಿನ ಯಾವ ಆವೃತ್ತಿಯಲ್ಲೂ ತಂಡ ಈ ರೀತಿ ಪುಟಿದೆದ್ದಿರಲಿಲ್ಲ.

ಆಟಗಾರರ ನಡುವಣ ಹೊಂದಾಣಿಕೆ ಮತ್ತು ಒಗ್ಗಟ್ಟು, ತಂಡದ ಯಶಸ್ಸಿನ ಮಂತ್ರ. ಮುಂದಿನ ಎರಡು ಪಂದ್ಯಗಳಲ್ಲೂ ಇದೇ ಮಂತ್ರವನ್ನು ಪಠಿಸುತ್ತಾ ಹೆಜ್ಜೆ ಹಾಕಿದರೆ ಚೊಚ್ಚಲ ಕಿರೀಟವು ತಂಡದ ಮುಡಿಗೇರುವುದು ನಿಶ್ಚಿತ.

3. ಬೆಂಗಳೂರು ಬುಲ್ಸ್

ಹಿಂದಿನ ಆವೃತ್ತಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದು ಉದ್ಯಾನನಗರಿಯ ಅಭಿಮಾನಿಗಳ ಮನ ಗೆದ್ದಿದ್ದ ಬೆಂಗಳೂರು ಬುಲ್ಸ್, ಈ ಬಾರಿ ಪ್ರಯಾಸದಿಂದ ‘ಪ್ಲೇ ಆಫ್’ ಪ್ರವೇಶಿಸಿದೆ. ಆಡಿದ ಎರಡನೇ ಪಂದ್ಯದಲ್ಲೇ ಸೋತಿದ್ದ ಬುಲ್ಸ್ ನಂತರ ‘ಗುಟುರು’ಹಾಕುತ್ತಾ ಯಶಸ್ಸಿನತ್ತ ದಾಂಗುಡಿ ಇಟ್ಟಿತ್ತು. ಮೂರು, ನಾಲ್ಕು ಮತ್ತು ಐದನೇ ಪಂದ್ಯಗಳಲ್ಲಿ ಜಯಿಸಿ ‘ಹ್ಯಾಟ್ರಿಕ್’ ಪೂರೈಸಿದ ಬೆನ್ನಲ್ಲೇ ರೋಹಿತ್ ಕುಮಾರ್ ಬಳಗಕ್ಕೆ ದಿಢೀರನೆ ಎರಡು ಸೋಲುಗಳು ಎದುರಾಗಿದ್ದವು. ಇದರಿಂದ ಮೈಕೊಡವಿ ನಿಂತ ಬಳಿಕ ಮತ್ತೆರಡು ಪಂದ್ಯಗಳಲ್ಲಿ ತಂಡ ನಿರಾಸೆ ಕಂಡಿತ್ತು. ಹೀಗಿದ್ದರೂ ಛಲಬಿಡದೆ ಹೋರಾಡಿದ ಬುಲ್ಸ್ ಅಂತೂ ಇಂತೂ ಅಗ್ರ ಆರರೊಳಗೆ ಸ್ಥಾನ ಪಡೆದೇಬಿಟ್ಟಿತು.

ಈಗ ತಂಡದ ಎದುರಿಗಿರುವುದು ಮುಳ್ಳಿನ ಹಾದಿ. ಪ್ರಶಸ್ತಿ ಉಳಿಸಿಕೊಳ್ಳಬೇಕಾದರೆ ರೋಹಿತ್ ಪಡೆ ಮೂರು ಪಂದ್ಯಗಳನ್ನು ಗೆಲ್ಲಬೇಕು. ಅಸಾಧ್ಯವಾಗಿರುವ ಈ ಗುರಿಯನ್ನು ಸಾಧಿಸಬೇಕಾದರೆ ತಂಡದಿಂದ ಸಂಘಟಿತ ಸಾಮರ್ಥ್ಯ ಮೂಡಿಬರಲೇಬೇಕು.

ಲೀಗ್ ಹಂತದಲ್ಲಿ ಬೆಂಗಳೂರಿನ ತಂಡ ಪವನ್ ಕುಮಾರ್ ಶೆರಾವತ್ ಅವರನ್ನೇ ಹೆಚ್ಚಾಗಿ ನೆಚ್ಚಿಕೊಂಡಿತ್ತು. ಕೆಲ ಪಂದ್ಯಗಳಲ್ಲಿ ಪವನ್ ಏಕಾಂಗಿಯಾಗಿ ಹೋರಾಡಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದೂ ಇದೆ. ರಕ್ಷಣಾ ವಿಭಾಗದಲ್ಲಿ ತಂಡ ಎದುರಾಳಿಗಳಿಗೆ ಸಡ್ಡು ಹೊಡೆಯುವಷ್ಟು ಶಕ್ತವಾಗಿದೆ. ಸಮಸ್ಯೆ ಇರುವುದು ರೇಡಿಂಗ್ನಲ್ಲಿ. ಈ ವಿಭಾಗದಲ್ಲಿ ಪವನ್ಗೆ ಇತರರಿಂದಲೂ ಬೆಂಬಲ ಸಿಗಬೇಕಿದೆ.

4.ಹರಿಯಾಣ ಸ್ಟೀಲರ್ಸ್

ಕರ್ನಾಟಕದ ಜಿಂದಾಲ್ ಸ್ಟೀಲ್ ವರ್ಕ್ಸ್ (ಜೆಎಸ್ಡಬ್ಲ್ಯು) ಮಾಲೀಕತ್ವದ ಹರಿಯಾಣ ಸ್ಟೀಲರ್ಸ್ ತಂಡ ಅಚ್ಚರಿಯ ರೀತಿಯಲ್ಲಿ ‘ಪ್ಲೇ ಆಫ್’ಗೆ ರಹದಾರಿ ಪಡೆದಿದೆ. ಲೀಗ್ನಲ್ಲಿ ಶುಭಾರಂಭ ಮಾಡಿದ ಬೆನ್ನಲ್ಲೇ ‘ಹ್ಯಾಟ್ರಿಕ್’ ಸೋಲು ಕಂಡಾಗ ತಂಡಕ್ಕೆ ಈ ಸಲವೂ ಟ್ರೋಫಿ ಕೈಗೆಟುಕುವುದಿಲ್ಲ ಎಂದು ಹಲವರು ಷರಾ ಬರೆದುಬಿಟ್ಟಿದ್ದರು.

ಆದರೆ ಧರ್ಮರಾಜ ಚೇರಲಾತನ್ ಬಳಗ ಪವಾಡ ಮಾಡಿತು. 18 ಪಂದ್ಯಗಳ ಪೈಕಿ 12ರಲ್ಲಿ ಗೆದ್ದು ಎಲ್ಲರ ನಿರೀಕ್ಷೆಯನ್ನೂ ಬುಡಮೇಲು ಮಾಡಿಬಿಟ್ಟಿತು.

ಆಟಗಾರನಾಗಿ ಅಪಾರ ಅನುಭವ ಗಳಿಸಿದ್ದ ರಾಕೇಶ್ ಕುಮಾರ್, ಕೋಚ್ ಜವಾಬ್ದಾರಿಯನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದರು. ಸೋಲಿನಿಂದ ಕಂಗಾಲಾಗಿದ್ದ ಸಂದರ್ಭದಲ್ಲಿ ಆತ್ಮವಿಶ್ವಾಸದ ನುಡಿಗಳನ್ನಾಡಿದ್ದು, ಆ ಮೂಲಕ ಆಟಗಾರರಲ್ಲಿ ಹೊಸ ಹುರುಪು ಮೂಡಿಸಿದ್ದು ತಂಡವು ಯಶಸ್ಸಿನ ಶಿಖರದತ್ತ ದಾಪುಗಾಲಿಡಲು ಸಹಕಾರಿಯಾಗಿತ್ತು.

ವಿಕಾಸ್ ಖಂಡೋಲ, ವಿನಯ್, ಕನ್ನಡಿಗ ಪ್ರಶಾಂತ್ ಕುಮಾರ್ ರೈ ಅವರ ಮಿಂಚಿನ ರೇಡಿಂಗ್ಗಳು, ಸುನಿಲ್, ರವಿಕುಮಾರ್ ಹಾಗೂ ನಾಯಕ ಧರ್ಮರಾಜ್ ಅವರ ಚಾಕಚಕ್ಯತೆಯ ಟ್ಯಾಕ್ಲಿಂಗ್ಗಳೂ ತಂಡಕ್ಕೆ ವರವಾಗಿದ್ದವು. ಪ್ಲೇ ಆಫ್ನಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಆಡಬೇಕಾದ ಸವಾಲು ಇವರ ಎದುರಿಗಿದೆ. ಈ ಸವಾಲನ್ನು ಮೀರಿ ನಿಂತರಷ್ಟೇ ಪ್ರಶಸ್ತಿಯ ಕನಸು ಸಾಕಾರಗೊಳ್ಳಬಹುದು.

5. ಯು ಮುಂಬಾ

ಮೊದಲ ಮೂರು ಆವೃತ್ತಿಗಳಲ್ಲಿ ಮೋಡಿ ಮಾಡಿದ್ದ ಮುಂಬಾ ತಂಡ ಬಳಿಕ ಅದೇಕೊ ಮಂಕಾಗಿ ಹೋಗಿತ್ತು. ಪ್ರೊ ಕಬಡ್ಡಿಯಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಗೆದ್ದ (75) ದಾಖಲೆ ಹೊಂದಿರುವ ಈ ತಂಡವು ಈಗ ಮತ್ತೆ ಅರಳಿದೆ. ಈ ಸಲ ‘ಪ್ಲೇ ಆಫ್’ ಪ್ರವೇಶಿಸಿ ಎರಡನೇ ಪ್ರಶಸ್ತಿಯ ಕನಸಿಗೆ ಬಲ ತುಂಬಿಕೊಂಡಿದೆ. ರಕ್ಷಣಾ ವಿಭಾಗವನ್ನೇ ಹೆಚ್ಚು ನೆಚ್ಚಿಕೊಂಡಿರುವ ಫಜಲ್ ಅತ್ರಾಚಲಿ ಪಡೆಯು ರೇಡಿಂಗ್ನಲ್ಲೂ ಮೋಡಿ ಮಾಡಬೇಕು. ಹಾಗಾದಾಗ ಮಾತ್ರ ಚಾಂಪಿಯನ್ ಪಟ್ಟದ ಆಸೆ ಕೈಗೂಡಬಹುದು.

6.ಯು.ಪಿ.ಯೋಧಾ

2017ರಲ್ಲಿ ಪ್ರೊ ಕಬಡ್ಡಿಗೆ ಅಡಿ ಇಟ್ಟ ಯೋಧಾ ತಂಡ ಆಡಿದ ಮೂರು ಆವೃತ್ತಿಗಳಲ್ಲೂ ‘ಪ್ಲೇ ಆಫ್’ ಪ್ರವೇಶಿಸಿದ ಸಾಧನೆ ಮಾಡಿದೆ. ಈ ಬಾರಿಯ ಲೀಗ್ನ ಮೊದಲಾರ್ಧದಲ್ಲಿ ಮಂಕಾಗಿದ್ದ ತಂಡವು ದ್ವಿತೀಯಾರ್ಧದಲ್ಲಿ ಗೆಲುವುಗಳ ಗೋಪುರ ಕಟ್ಟಿ ಅಗ್ರ ಆರರೊಳಗೆ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿತ್ತು.

ಶ್ರೀಕಾಂತ್ ಜಾಧವ್ ಅವರನ್ನು ಬಿಟ್ಟರೆ ಉಳಿದ ಯಾರೂ ನಿರೀಕ್ಷೆಗೆ ಅನುಗುಣವಾಗಿ ಆಡಿಲ್ಲ. ರೇಡರ್ಗಳಾದ ರಿಷಾಂಕ್ ದೇವಾಡಿಗ, ಸುರೇಂದರ್ ಗಿಲ್ ಮತ್ತು ಮೋನು ಗೋಯತ್ ಮಿಂಚಬೇಕು. ರಕ್ಷಣಾ ವಿಭಾಗದ ಆಟಗಾರರೂ ಜವಾಬ್ದಾರಿ ಅರಿತು ಆಡಬೇಕು. ಇಲ್ಲದಿದ್ದರೆ ಈ ಸಲವೂ ತಂಡ ಬರಿಗೈಲಿ ಅಭಿಯಾನ ಮುಗಿಸಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.