ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Sinquefield Cup | ‘ಡ್ರಾ’ ಪಂದ್ಯಗಳಲ್ಲಿ ಗುಕೇಶ್‌, ಪ್ರಜ್ಞಾನಂದ

ಸಿಂಕ್ವೆಫೀಲ್ಡ್‌ ಕಪ್‌ ಚೆಸ್‌ ಟೂರ್ನಿ
Published 20 ಆಗಸ್ಟ್ 2024, 15:09 IST
Last Updated 20 ಆಗಸ್ಟ್ 2024, 15:09 IST
ಅಕ್ಷರ ಗಾತ್ರ

ಸೇಂಟ್ ಲೂಯಿ (ಅಮೆರಿಕ): ಭಾರತದ ಗ್ರ್ಯಾಂಡ್‌ಮಾಸ್ಟರ್‌ ಡಿ.ಗುಕೇಶ್‌ ಅವರು ಸಿಂಕ್ವೆಫೀಲ್ಡ್‌ ಕಪ್‌ ಚೆಸ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ಹಾಲಿ ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಅವರೊಡನೆ ‘ಡ್ರಾ’ ಮಾಡಿಕೊಂಡರು.

ಇವರಿಬ್ಬರು ಈ ವರ್ಷಾಂತ್ಯದಲ್ಲಿ ವಿಶ್ವ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಎದುರಾಗಲಿದ್ದು, ಸೋಮವಾರ ನಡೆದ ಈ ಹಣಾಹಣಿ ಕುತೂಹಲ ಕೆರಳಿಸಿತು. ಕಳೆದ ಏಪ್ರಿಲ್‌ನಲ್ಲಿ ಕೆನಡಾದಲ್ಲಿ ನಡೆದಿದ್ದ ಕ್ಯಾಂಡಿಡೇಟ್ಸ್‌ ಟೂರ್ನಿ ಗೆಲ್ಲುವ ಮೂಲಕ ಗುಕೇಶ್‌ ಅವರು ವಿಶ್ವ ಚಾಂಪಿಯನ್‌ಗೆ ಚಾಲೆಂಜರ್‌ ಆಗುವ ಅರ್ಹತೆ ಸಂಪಾದಿಸಿದರು.

ಹತ್ತು ಆಟಗಾರರು ಪಾಲ್ಗೊಂಡಿರುವ ಈ ಟೂರ್ನಿ ರೌಂಡ್ ರಾಬಿನ್‌ ಮಾದರಿಯಲ್ಲಿ ನಡೆಯುತ್ತಿದ್ದು, ಕ್ಲಾಸಿಕಲ್ ಆಟ ಮಾತ್ರ ಇರುತ್ತದೆ. ಟೂರ್ನಿಯು ₹2.93 ಕೋಟಿ ಬಹುಮಾನ ಮೊತ್ತ ಹೊಂದಿದ್ದು, ಆಗಸ್ಟ್‌ 29ರವರೆಗೆ ನಡೆಯಲಿದೆ.

ಈ ಟೂರ್ನಿ ಗ್ರ್ಯಾಂಡ್‌ ಚೆಸ್‌ ಟೂರ್‌ ಸರಣಿಯ ಐದನೇ ಹಾಗೂ ಕೊನೆಯದಾಗಿದೆ.

ಬಿಳಿ ಕಾಯಿಗಳಲ್ಲಿ ಆಡಿದ ಗುಕೇಶ್‌ ಎದುರು ಸಿದ್ಧಮಾದರಿಯಲ್ಲೇ ಲಿರೆನ್‌ ಆಡಿದರು. ಲಿರೆನ್‌ ಕೊನೆಯಲ್ಲಿ ಬಿಷಪ್ ಮತ್ತು ರೂಕ್‌ ಬಿಟ್ಟುಕೊಟ್ಟರು. ಆದರೆ ಅದರಿಂದ ಹೆಚ್ಚಿನ ಪ್ರಯೋಜನವಾಗಲಿಲ್ಲ. ‘ಪರ್‌ಪೆಚ್ಯುವಲ್ ಚೆಕ್‌’ ಮೂಲಕ ಪಂದ್ಯ ಮುಗಿಸಲು ಚೀನಾದ ಆಟಗಾರ ಒಲವು ತೋರಿದ್ದರಿಂದ ಪಂದ್ಯ ಡ್ರಾ ಆಯಿತು. ಮುಂದಿನ ಸುತ್ತಿನಲ್ಲಿ ಗುಕೇಶ್‌, ಫಿಡೆಯನ್ನು ಪ್ರತಿನಿಧಿಸುತ್ತಿರುವ ರಷ್ಯಾದ ಆಟಗಾರ ಇಯಾನ್‌ ನಿಪೊಮ್‌ನಿಷಿ ಅವರನ್ನು ಎದುರಿಸಲಿದ್ದಾರೆ.

ಕಳೆದ ವಾರ ಸೇಂಟ್‌ ಲೂಯಿ ರ‍್ಯಾಪಿಡ್‌ ಮತ್ತು ಬ್ಲಿಟ್ಜ್‌ ಟೂರ್ನಿಯಲ್ಲಿ ನಿರಾಶೆ ಅನುಭವಿಸಿದ್ದ ಭಾರತದ ಇನ್ನೊಬ್ಬ ತಾರೆ ಆರ್‌.ಪ್ರಜ್ಞಾನಂದ ಅವರು ಈ ಟೂರ್ನಿಯ ಮೊದಲ ಸುತ್ತಿನಲ್ಲೇ ಸುಧಾರಿತ ಪ್ರದರ್ಶನ ನೀಡಿ ಉಜ್ಬೇಕಿಸ್ತಾನದ ನಾಡಿರ್ಬೆಕ್‌ ಅಬ್ದುಸತ್ತಾರೋವ್ ಜೊತೆ ‘ಡ್ರಾ’ ಮಾಡಿಕೊಂಡರು. ಮಧ್ಯಮಹಂತದ ಆರಂಭದಲ್ಲಿ ಇಬ್ಬರೂ ಕ್ವೀನ್‌ಗಳನ್ನು ಕಳೆದುಕೊಂಡರು. ಪಂದ್ಯ 36 ನಡೆಗಳನ್ನು ಕಂಡಿತು. ಪ್ರಜ್ಞಾನಂದ ಎರಡನೇ ಸುತ್ತಿನಲ್ಲಿ ಫ್ರಾನ್ಸ್‌ನ ಮ್ಯಾಕ್ಸಿಂ ವೇಷಿಯರ್‌ ಲಗ್ರಾವ್ ಅವರನ್ನು ಎದುರಿಸುವರು.

ಕಳೆದ ವಾರ ಸೇಂಟ್‌ ಲೂಯಿ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದ ಇರಾನ್‌ ಮೂಲದ ಫ್ರಾನ್ಸ್ ಆಟಗಾರ ಅಲಿರೇಜಾ ಫೀರೋಜ್‌ ಯಶಸ್ಸಿನ ಓಟ ಮುಂದುವರಿಸಿ, ಅಮೆರಿಕದ ಫ್ಯಾಬಿಯಾನೊ ಕರುವಾನ ಅವರನ್ನು ಮಣಿಸಿದರು. ದಿನದ ಐದು ಪಂದ್ಯಗಳಲ್ಲಿ ಇದೊಂದೇ ಪಂದ್ಯ ನಿರ್ಣಾಯಕ ಫಲಿತಾಂಶ ಕಂಡಿತು.

ಈ ಹಿಂದಿನ ನಾಲ್ಕು ಟೂರ್ನಿಗಳಲ್ಲಿ ತೋರಿದ ಉತ್ತಮ ಸಾಧನೆಯಿಂದ ಅಲಿರೇಝಾ ಗ್ರ್ಯಾಂಡ್‌ ಚೆಸ್‌ ಟೂರ್‌ ಕಿರೀಟ ಧರಿಸುವ ಫೆವರೀಟ್ ಆಗಿದ್ದಾರೆ. ಕಳೆದ ಬಾರಿ ಕರುವಾನಾ ಈ ಕಿರೀಟ ಧರಿಸಿದ್ದರು.

ಈ ಟೂರ್ನಿಯ ಒಟ್ಟು 9 ಸುತ್ತುಗಳನ್ನು ಹೊಂದಿದೆ.

ಮೊದಲ ಸುತ್ತಿನ ಇತರ ಪಂದ್ಯಗಳಲ್ಲಿ ಅಮೆರಿಕದ ವೆಸ್ಲಿ ಸೊ, ನೆದರ್ಲೆಂಡ್ಸ್‌ನ ಅನೀಶ್‌ ಗಿರಿ ಜೊತೆ ಡ್ರಾ ಮಾಡಿಕೊಂಡರೆ, ನಿಪೊಮ್‌ನಿಷಿ, ವೇಷಿಯರ್‌ ಲಗ್ರಾವ್‌ ಜೊತೆ ಡ್ರಾ ಮಾಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT