ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂಕ್ವೆಫೀಲ್ಡ್‌ ಕಪ್‌ ಚೆಸ್‌: ಪ್ರಜ್ಞಾನಂದ ವಿರುದ್ಧ ಸೋಲಿನಿಂದ ಪಾರಾದ ಗುಕೇಶ್‌

ಭಾರತದ ಆಟಗಾರರ ನಡುವೆ ಪಂದ್ಯ ‘ಡ್ರಾ’
Published 22 ಆಗಸ್ಟ್ 2024, 13:47 IST
Last Updated 22 ಆಗಸ್ಟ್ 2024, 13:47 IST
ಅಕ್ಷರ ಗಾತ್ರ

ಸೇಂಟ್‌ ಲೂಯಿಸ್‌ (ಅಮೆರಿಕ): ವಿಶ್ವ ಚಾಂಪಿಯನ್‌ಷಿಪ್‌ ಚಾಲೆಂಜರ್ ಡಿ.ಗುಕೆಶ್ ಅವರು ಸಿಂಕ್ವೆಫೀಲ್ಡ್‌ ಕಪ್‌ ಚೆಸ್‌ ಟೂರ್ನಿಯ ಮೂರನೇ ಸುತ್ತಿನಲ್ಲಿ ಸ್ವದೇಶದ ಗ್ರ್ಯಾಂಡ್‌ಮಾಸ್ಟರ್‌ ಆರ್‌.ಪ್ರಜ್ಞಾನಂದ ಎದುರು ಸೋಲಿನ ಭೀತಿಯಿಂದ ಪಾರಾಗಿ ಕೊನೆಗೂ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿ ಆದರು.

ಈ ಟೂರ್ನಿ ಗ್ರ್ಯಾಂಡ್‌ ಚೆಸ್‌ ಟೂರ್‌ನ ಐದನೇ ಹಾಗೂ ಅಂತಿಮ ಲೆಗ್‌ ಆಗಿದೆ. ಫ್ರಾನ್ಸ್‌ನ ಇಬ್ಬರು ಆಟಗಾರರ ನಡುವಣ ಇನ್ನೊಂದು ಪಂದ್ಯದಲ್ಲಿ, ಅಲಿರೇಜಾ ಫಿರೋಜ್ ಅವರು ಮ್ಯಾಕ್ಸಿಂ ವೇಷಿಯರ್ ಲಗ್ರಾವ್‌ ಜೊತೆ ತೀರಾ ಹಿನ್ನಡೆಯ ಸ್ಥಿತಿಯಿಂದ ಬಚಾವಾದರು. ಅಂತಿಮವಾಗಿ ನಡೆಗಳ ಪುನರಾವರ್ತನೆಯ ಮೂಲಕ ಈ ಪಂದ್ಯ ‘ಡ್ರಾ’ ಆಯಿತು. ಅಲಿರೇಜಾ, ಸದ್ಯ ಗ್ರ್ಯಾಂಡ್‌ಚೆಸ್‌ ಟೂರ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಉಜ್ಬೇಕಿಸ್ತಾನದ ನಾಡಿರ್ಬೆಕ್ ಅಬ್ದುಸತ್ತಾರೋವ್‌ ಅವರು ಹೋರಾಟ ತೋರಿದರೂ, ಪ್ರಮಾದ ಎಸಗಿದ ಕಾರಣ ಎದುರಾಳಿ ಫ್ಯಾಬಿಯಾನೊ ಕರುವಾನ ಅವರ ಎದುರು ಸೋಲಬೇಕಾಯಿತು. ಇದು ಅಮೆರಿಕದ ಆಟಗಾರನಿಗೆ ಈ ಟೂರ್ನಿಯಲ್ಲಿ ಮೊದಲ ಜಯ.

ನಿರ್ಣಾಯಕ ಫಲಿತಾಂಶ ಕಂಡ ಇನ್ನೊಂದು ಪಂದ್ಯದಲ್ಲಿ ರಷ್ಯಾದ ಇಯಾನ್ ನಿಪೊಮ್‌ನಿಷಿ ಅವರು ನೆದರ್ಲೆಂಡ್ಸ್‌ನ ಅನಿಶ್‌ ಗಿರಿ ಅವರನ್ನು ಸೋಲಿಸಿದರು. ನಿಪೊಮ್‌ನಿಷಿ ಅವರ ಅಸಾಂಪ್ರದಾಯಿಕ ಓಪನಿಂಗ್‌ಗೆ ತಕ್ಕುದಾದ ನಡೆಗಳನ್ನು ಇರಿಸುವಲ್ಲಿ ಡಚ್‌ ಆಟಗಾರ ಎಡವಿದರು.

ವಿಶ್ವ ಚಾಂಪಿಯನ್‌, ಚೀನಾದ ಡಿಂಗ್ ಲಿರೆನ್‌ ಅವರು ಅಮೆರಿಕದ ವೆಸ್ಲಿ ಸೊ ವಿರುದ್ಧ ಗೆಲುವಿನ ಅವಕಾಶಗಳನ್ನು ಸೃಷ್ಟಿಸಿಕೊಂಡರೂ, ಅಂತಿಮ ಗಳಿಗೆಯಲ್ಲಿ ಎಡವಿದ್ದರಿಂದ ‘ಡ್ರಾ’ಕ್ಕೆ ತೃಪ್ತಿಪಡಬೇಕಾಯಿತು.

10 ಆಟಗಾರರು ಭಾಗವಹಿಸುತ್ತಿರುವ ಈ ರೌಂಡ್‌ ರಾಬಿನ್ ಟೂರ್ನಿಯಲ್ಲಿ ಇನ್ನೂ ಆರು ಸುತ್ತಿನ ಪಂದ್ಯಗಳು ಬಾಕಿವುಳಿದಿವೆ. ಅಲಿರೇಜಾ ಫಿರೋಜ್ ಮತ್ತು ನಿಪೊಮ್‌ನಿಷಿ ಅವರು 3 ಸುತ್ತುಗಳಿಂದ 2 ಪಾಯಿಂಟ್ಸ್‌ ಕಲೆಹಾಕಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ಪ್ರಜ್ಞಾನಂದ, ಗುಕೇಶ್‌, ವೇಷಿಯರ್ ಲಗ್ರಾವ್‌, ಕರುವಾನ, ವೆಸ್ಲಿ ಸೊ ಮತ್ತು ಡಿಂಗ್ ಲಿರೆನ್ ತಲಾ ಒಂದೂವರೆ ಪಾಯಿಂಟ್ಸ್‌ ಸಂಗ್ರಹಿಸಿದ್ದಾರೆ. ಅಬ್ದುಸತ್ತಾರೋವ್ ಮತ್ತು ಅನಿಶ್ ಗಿರಿ ತಲಾ ಒಂದು ಪಾಯಿಂಟ್ಸ್ ಗಳಿಸಿದ್ದಾರೆ.‌

ಕಪ್ಪು ಕಾಯಿಗಳಲ್ಲಿ ಆಡಿದ ಗುಕೇಶ್‌ ಬೇಗಬೇಗ ನಡೆಗಳನ್ನು ಇಟ್ಟರು. ತಮ್ಮ ಸರದಿಯ ನಾಲ್ಕು ನಿಮಿಷಗಳಲ್ಲಿ 18 ನಡೆಗಳನ್ನು ಇರಿಸಿದ್ದರು. ಇನ್ನೊಂದೆಡೆ ಪ್ರಜ್ಞಾನಂದ ಎಚ್ಚರಿಕೆಯ ಆಟಕ್ಕೆ ಒತ್ತು ನೀಡಿದರು.

ಪಂದ್ಯ ಒಂದು ಹಂತಕ್ಕೆ ಬಂದು, ರೂಕ್‌–ಪಾನ್ಸ್‌ ಎಂಡ್‌ಗೇಮ್‌ನತ್ತ ಸಾಗಿತ್ತು. ಸಾಮಾನ್ಯವಾಗಿ ಇಂಥ ಸಂದರ್ಭದಲ್ಲಿ ಆಟಗಾರರು ಕರಾರುವಾಕ್ ಆಗಿ ಆಡಿದರೆ ‘ಡ್ರಾ’ ಆಗುವ ಸಾಧ್ಯತೆಯೇ ಬಹಳ. ಆದರೆ ಈ ಹಂತದಲ್ಲಿ ಗುಕೇಶ್ ಮಾಡಿದ ತಪ್ಪು ದುಬಾರಿಯಾಗುವ ಸಾಧ್ಯತೆಯಿತ್ತು. ಆದರೆ ಅವರಿಗೇ ಅಚ್ಚರಿಯಾಗುವಂತೆ ಪ್ರಜ್ಞಾನಂದ ಅದನ್ನು ಸರಿಯಾಗಿ ಗಮನಿಸಲಿಲ್ಲ. ಗೆಲುವಾಗಿ ಪರಿವರ್ತಿಸುವ ಹಾದಿಯಲ್ಲಿ ಸಾಗದ ಕಾರಣ ಗುಕೇಶ್‌ ನಿಟ್ಟುಸಿರಿಟ್ಟರು. 2022ರಿಂದೀಚೆ ಕ್ಲಾಸಿಕಲ್‌ ಮಾದರಿಯಲ್ಲಿ ಗುಕೇಶ್ ಅವರು ಪ್ರಜ್ಞಾನಂದ ಎದುರು ಸೋತಿಲ್ಲ. ಇಲ್ಲೂ ಅವಕಾಶ ಇತ್ತಾದರೂ, ಅದರಲ್ಲಿ ಪ್ರಜ್ಞಾನಂದ ಎಡವಿದರು.

ಗುಕೇಶ್‌ ನಾಲ್ಕನೇ ಸುತ್ತಿನಲ್ಲಿ ಅಲಿರೇಜಾ ಅವರನ್ನು ಎದುರಿಸುವರು. ಪ್ರಜ್ಞಾನಂದ ಇನ್ನೊಂದೆಡೆ ಅನಿಶ್‌ ಗಿರಿ ಅವರನ್ನು ಎದುರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT