ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನನ್ನೊಳಗಿನ ಹೋರಾಟ ಮತ್ತು ಕುಸ್ತಿ ಯಾವಾಗಲೂ ಇದ್ದೇ ಇರುತ್ತದೆ: ವಿನೇಶ್

Published 17 ಆಗಸ್ಟ್ 2024, 3:19 IST
Last Updated 17 ಆಗಸ್ಟ್ 2024, 3:19 IST
ಅಕ್ಷರ ಗಾತ್ರ

ನವದೆಹಲಿ: ‘ಈಗ ಹೇಳಬೇಕಾಗಿರುವುದೆಲ್ಲವೂ ಇಷ್ಟೇ. ನಾವು ಸೋತು ಕೈಚೆಲ್ಲಲಿಲ್ಲ. ನಮ್ಮ ಪ್ರಯತ್ನಗಳು ನಿಲ್ಲಲಿಲ್ಲ ಮತ್ತು ನಾವು ಶರಣಾಗಲೂ ಇಲ್ಲ. ಆದರೆ ಸಮಯ ಸ್ತಬ್ಧವಾಯಿತು ಹಾಗೂ ಕಾಲ ಸರಿಯಿರಲಿಲ್ಲ. ಅದು ನನ್ನ ಹಣೆಬರಹ’-

ಒಲಿಂಪಿಯನ್ ಕುಸ್ತಿಪಟು ವಿನೇಶ್ ಫೋಗಟ್ ಅವರು ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಭಾವನಾತ್ಮಕ ಪೋಸ್ಟ್‌ ಇದು.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಕುಸ್ತಿಯ 50 ಕೆ.ಜಿ ವಿಭಾಗದ ಫೈನಲ್‌ ತಲುಪಿದ್ದ ವಿನೇಶ್ ಅವರು ದೇಹತೂಕದಲ್ಲಿ 100 ಗ್ರಾಂ ಹೆಚ್ಚಾದ ಕಾರಣಕ್ಕೆ ಅನರ್ಹಗೊಂಡಿದ್ದರು. ಆಗಲೇ ಅವರು ತಮ್ಮ ಕ್ರೀಡಾಜೀವನಕ್ಕೆ ವಿದಾಯ ಹೇಳಿದ್ದರು. ಸೆಮಿಫೈನಲ್‌ ಜಯಿಸುವವರೆಗೂ ತೂಕ ನಿಯಮಬದ್ಧವಾಗಿದ್ದ ಕಾರಣಕ್ಕೆ ಬೆಳ್ಳಿ ಪದಕವನ್ನು ನೀಡಲು ಕ್ರೀಡಾ ಮಧ್ಯಸ್ಥಿಕೆ ನ್ಯಾಯಮಂಡಳಿಗೆ (ಸಿಎಎಸ್‌) ಮೇಲ್ಮನವಿ ಸಲ್ಲಿಸಿದ್ದರು. ಆದರೆ  ಅವರ ಮನವಿಯನ್ನು ತಿರಸ್ಕರಿಸಿದ ಸಿಎಎಸ್‌ ಬುಧವಾರ ತೀರ್ಪು ಪ್ರಕಟಿಸಿತ್ತು.  ಇದರ ನಂತರ ಅವರೀಗ ತಮ್ಮ ಮನದಾಳದ ಮಾತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. 

‘ಯಾವ ಗುರಿಗಾಗಿ ಶ್ರಮಿಸಿದ್ದೇವೋ ಅದು ಪೂರ್ಣವಾಗಲಿಲ್ಲ ಎಂಬ ಭಾವ ನನ್ನ ತಂಡಕ್ಕೆ, ದೇಶವಾಸಿಗಳಿಗೆ  ಮತ್ತು ನನ್ನ ಕುಟುಂಬದವರಿಗೆ ಇದೆ. ಆ ಕೊರಗು ಯಾವಾಗಲೂ ಇರುತ್ತದೆ. ಮುಂದೆ ಎಲ್ಲವೂ ಒಂದೇ ರೀತಿ ಇರುವುದಿಲ್ಲ. ವಿಭಿನ್ನ ಸನ್ನಿವೇಶಗಳಲ್ಲಿ ನಾನು 2032ರವರೆಗೆ ಆಡಬಹುದು. ಏಕೆಂದರೆ ನನ್ನೊಳಗಿನ ಹೋರಾಟ ಮತ್ತು ಕುಸ್ತಿ ಯಾವಾಗಲೂ ಇದ್ದೇ ಇರುತ್ತದೆ. ಭವಿಷ್ಯ ನನಗಾಗಿ ಏನನ್ನೂ ಯೋಜಿಸಿದೆ ಎಂದು ಊಹಿಸಲು ಸಾಧ್ಯವಿಲ್ಲ. ಈ ಪಯಣದಲ್ಲಿ ಮುಂದಿನದ್ದು ಏನಿದೆ ಎಂದೂ ಗೊತ್ತಿಲ್ಲ. ಆದರೆ ಒಂದಂತೂ ಖಚಿತ. ನಾನು ನಂಬಿರುವ  ಸಂಗತಿಗಳಿಗಾಗಿ ಹೋರಾಟ ನಿಲ್ಲಿಸುವುದಿಲ್ಲ’  ಎಂದು ಬರೆದಿದ್ದಾರೆ.

ತಮಗೆ ಮಾರ್ಗದರ್ಶನ ನೀಡಿದ ಬೆಲ್ಜಿಯನ್ ಕೋಚ್‌ ಅಕೋಸ್‌  ಕುರಿತು ಬರೆದಿರುವ ವಿನೇಶ್, ‘ಅವರ ಬಗ್ಗೆ ನಾನೇನು ಬರೆದರೂ ಅದು ಕಡಿಮೆಯೇ. ಮಹಿಳೆಯರ ಕುಸ್ತಿ ಲೋಕದಲ್ಲಿ ನಾನು ಕಂಡ ಉತ್ತಮ ಕೋಚ್‌ ಅವರು. ಒಳ್ಳೆಯ ವ್ಯಕ್ತಿ. ಸಂಯಮ, ಸಹನೆ ಮತ್ತು ವಿಶ್ವಾಸದಿಂದ ಯಾವುದೇ ಪರಿಸ್ಥಿತಿ ನಿಭಾಯಿಸುತ್ತಿದ್ದರು. ಅವರ ನಿಘಂಟಿನಲ್ಲಿ ಅಸಾಧ್ಯ ಎನ್ನುವ ಪದವೇ ಇಲ್ಲ. ಮ್ಯಾಟ್‌ನಲ್ಲಿ ಅಥವಾ ಹೊರಗೆ ಯಾವುದೇ ಕಠಿಣ ಪರಿಸ್ಥಿತಿ ಎದುರಾದಾಗ ಅವರು ಪರ್ಯಾಯ ಯೋಜನೆಯೊಡನೆ ಸಜ್ಜಾಗಿರುತ್ತಾರೆ. ನನ್ನ ಸಾಮರ್ಥ್ಯದ ಮೇಲೆ ನನಗೆ ಸಂದೇಹ ಬಂದ ಸಂದರ್ಭಗಳಿವೆ. ನನ್ನನ್ನು ಹೇಗೆ ಮರಳಿ ದಾರಿಗೆ ತರಬೇಕು ಎಂದು ತಿಳಿದಿದ್ದರು. ನನ್ನ ಯಶಸ್ಸಿಗೆ ಅಕೋಸ್‌ ಎಂದೂ ಶ್ರೇಯಸ್ಸು ತೆಗೆದುಕೊಂಡವರಲ್ಲ. ಆದರೆ ಅವರಿಗೆ ಸಲ್ಲಬೇಕಾದ ಮಾನ್ಯತೆ ನೀಡಲು ಬಯಸಿದ್ದೆ‘ ಎಂದೂ ಉಲ್ಲೇಖಿಸಿದ್ದಾರೆ.

ತಂಡದ ವೈದ್ಯ ಡಾ. ದಿನ್‌ಷಾ ಪಾರ್ದಿವಾಲಾ ಅವರ ಕುರಿತೂ ಮೆಚ್ಚುಗೆಯ ಮಾತುಗಳನ್ನಾಡಿ ದ್ದಾರೆ. ಭಾರತ ತಂಡದ ನೆರವಿಗೆ 13 ವೈದ್ಯಕೀಯ ಸಿಬ್ಬಂದಿಯ ಮುಖ್ಯಸ್ಥರಾಗಿ ಪಾರ್ದಿವಾಲಾ ಕಾರ್ಯನಿರ್ವಹಿಸಿದ್ದರು. 

‘ನನಗೆ ಹಾಗೂ ಭಾರತದ ಇನ್ನೂ ಹಲವಾರು ಅಥ್ಲೀಟ್‌ಗಳಿಗೆ ಅವರು ಬರೀ ವೈದ್ಯರಲ್ಲ. ದೇವತಾ ಸ್ವರೂಪಿಯಾಗಿದ್ದರು. ಆ ದೇವರೇ ಅವರನ್ನು ನಮಗಾಗಿ ಕಳಿಸಿರಬೇಕು. ಗಾಯದ ಸಮಸ್ಯೆಗಳಿಂದಾಗಿ ನನ್ನ ಆತ್ಮವಿಶ್ವಾಸ ಕುಸಿದ ಸಂದರ್ಭದಲ್ಲಿ ಧೈರ್ಯ ತುಂಬಿದರು. ನನ್ನ ಮೇಲೆ ಅವರಿಗೆ ಅಪಾರ ಭರವಸೆ ಇತ್ತು. ನನ್ನ ಕಾಲುಗಳ ಮೇಲೆ ನಿಲ್ಲುವಂತೆ ಮಾಡಿದರು. ಮೊಣಕಾಲು ಮತ್ತು ಮೊಣಕೈ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ. ಭಾರತದ ಕ್ರೀಡೆಯ ಬಗ್ಗೆ ಅವರ ಸಮರ್ಪಣಾ ಭಾವ, ಪ್ರಾಮಾಣಿಕತೆ ಮತ್ತು ಮಮತೆಯ ಗುಣಗಳ ಬಗ್ಗೆ ಯಾರೂ ಸಂದೇಹ ಪಡಲಾರರು. ದೇವರೂ ಸಹ. ಅವರು ಮತ್ತು ಅವರ ತಂಡದ ನೆರವಿಗೆ ಆಭಾರಿಯಾಗಿರುವೆ’ ಎಂದು ಉಲ್ಲೇಖಿಸಿದ್ಧಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT