ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಕುಸ್ತಿ ಸಂಸ್ಥೆಯಿಂದ ಬಜರಂಗ್‌ ಪೂನಿಯಾ ತಾತ್ಕಾಲಿಕ ಅಮಾನತು

Published 9 ಮೇ 2024, 13:40 IST
Last Updated 9 ಮೇ 2024, 13:40 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವ ಕುಸ್ತಿ ಆಡಳಿತ ನೋಡಿಕೊಳ್ಳುವ ಯುನೈಟೆಡ್‌ ವರ್ಲ್ಡ್‌ ರೆಸ್ಲಿಂಗ್‌ (ಯುಡಬ್ಲ್ಯುಡಬ್ಲ್ಯು), ದೇಶದ ಯಶಸ್ವಿ ಪೈಲ್ವಾನರಲ್ಲಿ ಒಬ್ಬರಾದ ಬಜರಂಗ್ ಪೂನಿಯಾ ಅವರನ್ನು ವರ್ಷಾಂತ್ಯದವರೆಗೆ ಅಮಾನತು ಮಾಡಿದೆ. ಉದ್ದೀಪನ ಮದ್ದು ಪರೀಕ್ಷೆಗೆ ಒಳಪಡಲು ನಿರಾಕರಿಸಿದ ಕಾರಣ ‘ನಾಡಾ’ ಅವರನ್ನು ಕಳೆದ ತಿಂಗಳು ತಾತ್ಕಾಲಿಕವಾಗಿ ಅಮಾತನು ಮಾಡಿತ್ತು.

ಆದರೆ ಅಚ್ಚರಿಯ ನಿರ್ಧಾರ ಎಂಬಂತೆ ‘ನಾಡಾ’  (ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ತಡೆ ಏಜನ್ಸಿ) ಆದೇಶದ ಮಾಹಿತಿಯಿದ್ದರೂ ಭಾರತ ಕ್ರೀಡಾ ಪ್ರಾಧಿಕಾರವು, ಅವರಿಗೆ ವಿದೇಶದಲ್ಲಿ ತರಬೇತಿಗೆ ₹ 9 ಲಕ್ಷ ಮಂಜೂರು ಮಾಡಿದೆ.

ವಾಸ್ತವ್ಯದ (ವೇರಬೌಟ್ಸ್‌) ಮಾಹಿತಿ ನೀಡಲು ವಿಫಲರಾಗಿದ್ದಕ್ಕೆ ಪೂನಿಯಾ ಅವರಿಗೆ ಏಪ್ರಿಲ್ 18ರಂದು ‘ನಾಡಾ’ ಅವರಿಗೆ ನೋಟಿಸ್‌ ನೀಡಿತ್ತು. ಏ. 23ರಂದು ಅವರ ಮೇಲೆ ತಾತ್ಕಾಲಿಕ ನಿಷೇಧ ಹೇರಿತ್ತು.

ಆದರೆ ಪರೀಕ್ಷೆಗೆ ಸ್ಯಾಂಪಲ್ ನೀಡಲು ತಾವೆಂದೂ ನಿರಾಕರಿಸಿಲ್ಲ. ತಮ್ಮ ಮಾದರಿ ಪಡೆದುಕೊಳ್ಳಲು ಬಂದ ಸಂದರ್ಭದಲ್ಲಿ ತರಲಾಗಿದ್ದ ಕಿಟ್‌ಗಳ ಅವಧಿ (ಎಕ್ಸ್‌ಪೈರಿ ಡೇಟ್‌) ಮುಗಿದ ಕಾರಣ ಈ ಬಗ್ಗೆ ಡೋಪ್ ಕಂಟ್ರೋಲ್ ಅಧಿಕಾರಿಯನ್ನು ಪ್ರಶ್ನಿಸಿದ್ದೆ ಎಂದು ಬಜರಂಗ್‌ ಈ ಹಿಂದೆಯೇ ಹೇಳಿದ್ದರು.

‘ತಮ್ಮ ಅಮಾನತಿನ ಬಗ್ಗೆ ಯುಡಬ್ಲ್ಯುಡಬ್ಲ್ಯುನಿಂದ ಯಾವುದೇ ಸಂದೇಶ ತಮಗೆ ಬಂದಿಲ್ಲ’ ಎಂದು ಬಜರಂಗ್‌ ಪೂನಿಯಾ ಹೇಳಿದ್ದಾರೆ. ಆದರೆ ಯುಡಬ್ಲ್ಯುಡಬ್ಲ್ಯು ಆಂತರಿಕ ಪಟ್ಟಿಯನ್ನು ಅಪ್ಡೇಟ್ ಮಾಡಿದ್ದು, ಇದರಲ್ಲಿ ಬಜರಂಗ್ ಅವರನ್ನು ಅಮಾನತು ಮಾಡಿರುವುದನ್ನು ಸ್ಪಷ್ಟವಾಗಿ ತಿಳಿಸಿದೆ. ಬಜರಂಗ್ ಅವರ ಪ್ರೊಫೈಲ್‌ನಲ್ಲಿ, ಡಿಸೆಂಬರ್ 31ರವರೆಗೆ ಅಮಾನತು ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಈ ನಡುವೆ ಅಚ್ಚರಿಯೆಂಬಂತೆ, ಏಪ್ರಿಲ್ 25ರಂದು ನಡೆದ ಮಿಷನ್ ಒಲಿಂಪಿಕ್ ಸೆಲ್‌ (ಎಂಒಸಿ) ಸಭೆಯು ಬಜರಂಗ್ ಅವರಿಗೆ ರಷ್ಯಾದ ದಾಗೆಸ್ತಾನದಲ್ಲಿ ತರಬೇತಿ ವೆಚ್ಚವಾಗಿ 8,82,000 ಜೊತೆಗೆ ವಿಮಾನ ಪ್ರಯಾಣದ ವೆಚ್ಚ ನೀಡುವಂತೆ ಕೋರಿದ ಪ್ರಸ್ತಾವಕ್ಕೆ ಸಮ್ಮತಿ ನೀಡಿರುವುದಾಗಿ ತಿಳಿಸಿತು.

35 ದಿನಗಳ ತರಬೇತಿ ಏ. 24ರಂದು ಆರಂಭವಾಗಬೇಕಿತ್ತು. ಆದರೆ ತಮ್ಮ ವಾಸ್ತವ್ಯದ ಮಾಹಿತಿ ನೀಡಲು ವಿಫಲರಾಗಿದ್ದ ಅವರು ಪ್ರಯಾಣವನ್ನು ಮೇ 28ಕ್ಕೆ ಮುಂದೂಡಿದ್ದರು.

ಈ ಬಗ್ಗೆ ಭಾರತ ಕ್ರೀಡಾ ಪ್ರಾಧಿಕಾರದ ಮಹಾ ನಿರ್ದೇಶಕ ಸಂದೀಪ್ ಪ್ರಧಾನ್ ಅವರಾಗಲಿ, ‘ಟಾಪ್ಸ್‌’ ಯೋಜನೆಯ ಜಂಟಿ ಸಿಇಒ ಕರ್ನಲ್ ರಾಕೇಶ್ದ್ ಯಾದವ್ ಅವರಾಗಲಿ ವಿವರ ಕೋರಿ ಸುದ್ದಿಸಂಸ್ಥೆ ಮಾಡಿದ ಕರೆ ಮತ್ತು ಹಾಕಿದ ಸಂದೇಶಕ್ಕೆ ಪ್ರತಿಕ್ರಿಯಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT