ಸವಾಲುಗಳ ಮೆಟ್ಟಿನಿಂತ ದಿಟ್ಟೆ ಫೋಗಟ್
ಪ್ಯಾರಿಸ್ (ಪಿಟಿಐ): ಯಶಸ್ಸಿನ ಹಾದಿಯಲ್ಲಿ ವಿನೇಶಾ ಅವರು ಎದುರಿಸಿದ ಸವಾಲುಗಳು, ಮೆಟ್ಟಿನಿಂತ ಒತ್ತಡಗಳು ಹಲವು. ಅಖಾಡದಲ್ಲೂ, ಅದರಾಚೆಗೂ ಅವರ ಹೋರಾಟ ನಡೆದೇ ಇತ್ತು. ಹೋದ ವರ್ಷ ಬಹುತೇಕ ಅವಧಿಯಲ್ಲಿ ವಿನೇಶಾ ಅವರಿಗೆ ಅಭ್ಯಾಸ ನಡೆಸಲು ಸಾಧ್ಯವಾಗಿರಲಿಲ್ಲ. ಭಾರತ ಕುಸ್ತಿ ಫೆಡರೇಷನ್‌ನ ಆಗಿನ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಗಳು ಕೇಳಿಬಂದಾಗ ಅವರ ವಿರುದ್ಧ ದೆಹಲಿಯ ಜಂತರ್‌ಮಂತರ್‌ನಲ್ಲಿ ನಡೆದ ಧರಣಿಯಲ್ಲಿ ವಿನೇಶಾ ಮುಂಚೂಣಿಯಲ್ಲಿದ್ದರು. ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಜೊತೆ ಹೋರಾಟದ ನೇತೃತ್ವ ವಹಿಸಿದ್ದರು. ಪೊಲೀಸರು ಅವರನ್ನು ಅಲ್ಲಿಂದ ಬಲವಂತವಾಗಿ ತೆರವುಗೊಳಿಸಲು ಮುಂದಾದರು. ಈ ಮಧ್ಯೆ ವಿನೇಶಾ ತೇಜೊವಧೆಗೂ ಪ್ರಯತ್ನಗಳೂ ನಡೆದವು. ಇದರ ನಂತರ ಅವರು ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಐದು ವರ್ಷಗಳಿಂದ ಹರಿಯಾಣದ ಈ ಕುಸ್ತಿಪಟು 53 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು. ಒಲಿಂಪಿಕ್ಸ್‌ನಲ್ಲೂ ಇದೇ ವಿಭಾಗದಲ್ಲಿ ಕಣಕ್ಕಿಳಿಯಲು ಬಯಸಿದ್ದರು. ಆದರೆ ಆ ತೂಕ ವಿಭಾಗದಲ್ಲಿ ಅಂತಿಮ್ ಪಂಘಲ್ ಪ್ಯಾರಿಸ್ ಕ್ರೀಡೆಗಳಿಗೆ ಕೋಟಾ ಗಿಟ್ಟಿಸಿದ ಮೇಲೆ ಅವರಿಗೆ 50 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಬೇಕಾದ ಸವಾಲು ಎದುರಾಯಿತು. ಅದನ್ನೂ ಸಾಧಿಸಿ ಒಲಿಂಪಿಕ್ಸ್‌ಗೆ ಸಜ್ಜಾದರು. ಈ ಕ್ರೀಡೆಗಳಿಗೆ ಮೊದಲು, ಜುಲೈ ಆರಂಭದಲ್ಲಿ ಅವರು ಸ್ಪ್ಯಾನಿಶ್ ಗ್ರ್ಯಾನ್‌ಪ್ರಿ ಕುಸ್ತಿಯಲ್ಲಿ ಸ್ವರ್ಣ ಗೆದ್ದಿದ್ದರು. ಈ ಗೆಲುವು ಅವರಿಗೆ ಅಗತ್ಯವಿದ್ದ ಸಿದ್ಧತೆಗೆ ನೆರವಾಯಿತು.