ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paris Paralympics | ಬೆಳ್ಳಿ ಗೆದ್ದ ಭಾರತದ ಶಾಟ್‌ಪುಟ್ ಪಟು ಸಚಿನ್ ಖಿಲಾರಿ

Published : 4 ಸೆಪ್ಟೆಂಬರ್ 2024, 10:15 IST
Last Updated : 4 ಸೆಪ್ಟೆಂಬರ್ 2024, 10:15 IST
ಫಾಲೋ ಮಾಡಿ
Comments

ಪ್ಯಾರಿಸ್‌: ವಿಶ್ವ ಚಾಂಪಿಯನ್ ಸಚಿನ್ ಸರ್ಜೆರಾವ್ ಖಿಲಾರಿ ಅವರು ಪ್ಯಾರಾಲಿಂಪಿಕ್ಸ್‌ ಪುರುಷರ ಷಾಟ್‌ಪಟ್‌ನಲ್ಲಿ (ಎಫ್‌46) ಬುಧವಾರ ಏಷ್ಯನ್ ದಾಖಲೆಯೊಡನೆ ಬೆಳ್ಳಿ ಪದಕ ಗೆದ್ದರು. ಪ್ಯಾರಾಲಿಂಪಿಕ್ಸ್ ಟ್ರ್ಯಾಕ್‌ ಅಂಡ್‌ ಫೀಲ್ಡ್‌ನಲ್ಲಿ ಭಾರತ ಅಭೂತಪೂರ್ವ ಸಾಧನೆ ದಾಖಲಿಸಿತು.

‌ಸಚಿನ್ ಖಿಲಾರಿ ಗಳಿಸಿದ ಬೆಳ್ಳಿ ಪ್ಯಾರಿಸ್‌ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ 11ನೇ ಪದಕ ಎನಿಸಿತು. ಮೂರು ವರ್ಷಗಳ ಹಿಂದೆ ಟೋಕಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಅಥ್ಲೆಟಿಕ್ಸ್‌ನಲ್ಲಿ ಎಂಟು ಪದಕಗಳು ಬಂದಿದ್ದವು. ಈ ಕೂಟದಲ್ಲಿ ಒಟ್ಟಾರೆ ಪದಕಗಳ ಸಂಖ್ಯೆ 21ಕ್ಕೆ ಹೆಚ್ಚಿತು. ಇದರಲ್ಲಿ ಮೂರು ಚಿನ್ನಗಳಿವೆ.

ಸಚಿನ್ ಅವರು ಎರಡನೇ ಪ್ರಯತ್ನದಲ್ಲಿ 16.32 ಮೀ.ಗಳ ಶ್ರೇಷ್ಠ ಥ್ರೊ ದಾಖಲಿಸಿದರು. ಆ ಮೂಲಕ ಮೇ ತಿಂಗಳಲ್ಲಿ ಜಪಾನ್‌ನಲ್ಲಿ ನಡೆದಿದ್ದ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ತಾವೇ ಸ್ಥಾಪಿಸಿದ್ದ 16.30 ಮೀ.ಗಳ ದಾಖಲೆಯನ್ನು ಸುಧಾರಿಸಿದರು.

ಆದರೆ ಅವರ ಈ ವೈಯಕ್ತಿಕ ಶ್ರೇಷ್ಠ ಸಾಧನೆಯು ಚಿನ್ನ ಗೆಲ್ಲಲು ಸಾಕಾಲಗಲಿಲ್ಲ. ಕೆನಡಾದ ಗ್ರೆಗ್‌ ಸ್ಟಿವರ್ಟ್‌ ಅವರು 16.38 ಮೀ. ದೂರಕ್ಕೆ ಎಸೆದು ಚಿನ್ನ ಗೆದ್ದರು. ಕ್ರೊವೇಷ್ಯಾದ ಲುಕಾ ಬಕೊವಿಕ್‌ 16.27 ಮೀ. ಥ್ರೊದೊಡನೆ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಕೋಬೆಯಲ್ಲಿ (ಜಪಾನ್‌) ನಡೆದ ವಿಶ್ವ ಪ್ಯಾರಾ ಕೂಟದಲ್ಲಿ ಸಚಿನ್ ಖಿಲಾರಿ ಅವರು ಸ್ಟಿವರ್ಟ್‌ ಅವರನ್ನು ಹಿಂದೆಹಾಕಿ ಅಗ್ರಸ್ಥಾನ ಪಡದಿದ್ದರು. ಆದರೆ ಸ್ಟೇಡ್‌ ಡಿ ಫ್ರಾನ್ಸ್‌ನಲ್ಲಿ ಬುಧವಾರ ಫಲಿತಾಂಶ ವಿರುದ್ಧವಾಗಿತ್ತು..

ಎಫ್‌46 ಕ್ಲಾಸಿಫಿಕೇಷನ್‌ನಲ್ಲಿ ಅಥ್ಲೀಟುಗಳು ತೋಳಿಗೆ ಸಂಬಂಧಿಸಿದ (ಸ್ನಾಯು ದೌರ್ಬಲ್ಯ, ಚಲನೆಯಲ್ಲಿ ತೊಂದರೆ) ತೊಂದರೆಗಳನ್ನು ಹೊಂದಿರುತ್ತಾರೆ. ಅವರು ನಿಂತುಕೊಂಡು ಸ್ಪರ್ಧಿಸುತ್ತಾರೆ.

‘ನಾನು ಚಿನ್ನದ ಪದಕದ ಆಸೆ ಹೊಂದಿದ್ದೆ. ಅದು ಈಡೇರಲಿಲ್ಲ. ನನ್ನ ಎಸೆತ ವೈಯಕ್ತಿಕ ಶ್ರೇಷ್ಠವಾಗಿರಬಹುದು. ಆದರೆ ತೃಪ್ತನಾಗಿಲ್ಲ. ನಾನೂ ಇನ್ನೂ ಉತ್ತಮವಾಗಿ ಎಸೆಯಬೇಕಾಗಿತ್ತು. ಇದು ನನ್ನ ದಿನವಾಗಿರಲಿಲ್ಲ’ ಎಂದು ಖಿಲಾರಿ ಬೆಳ್ಳಿ ಗೆದ್ದ ನಂತರ ಪ್ರತಿಕ್ರಿಯಿಸಿದರು.

ಎರಡನೇ ಸುತ್ತಿನ ಕೊನೆಯವರೆಗೆ ಖಿಲಾರಿ ಲೀಡ್‌ನಲ್ಲಿದ್ದರು. ಆದರೆ ಮೂರನೇ ಸುತ್ತಿನ ಥ್ರೊನಲ್ಲಿ ಸ್ಟಿವರ್ಟ್‌ 16.34 ಮೀ. ಥ್ರೊ ದಾಖಲಿಸಿದರಲ್ಲದೇ, ಐದನೇ ಯತ್ನದಲ್ಲಿ16.38 ಮೀ. ದೂರಕ್ಕೆಸೆದು ಚಿನ್ನ ಖಚಿತಪಡಿಸಿಕೊಂಡರು.

ಫೈನಲ್‌ ಸುತ್ತಿನಲ್ಲಿದ್ದ ಭಾರತದ ಮೊಹಮ್ಮದ್ ಯಾಸಿರ್ (14.21 ಮೀ.) ಮತ್ತು ರೋಹಿತ್ ಕುಮಾರ್ (14.10 ಮೀ.) ಕ್ರಮವಾಗಿ ಎಂಟು ಮತ್ತು ಒಂಬತ್ತನೇ ಸ್ಥಾನ ಗಳಿಸಿದರು.

ವಿಶ್ವದಾಖಲೆ (16.80 ಮೀ.) ವೀರ, ಅಮೆರಿಕದ ಜೊಶುವಾ ಸಿನ್ನಾಮೊ ಇಲ್ಲಿ 15.66 ಮೀ. ಥ್ರೊದೊಡನೆ ನಾಲ್ಕನೇ ಸ್ಥಾನಕ್ಕೆ ಸರಿದರು.

ಕಳೆದ ವರ್ಷ ಹಾಂಗ್‌ಝೌ ಪ್ಯಾರಾ ಏಷ್ಯನ್ ಕ್ರೀಡೆಗಳಲ್ಲಿ ಚಿನ್ನ ಗೆದ್ದಿದ್ದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರ ಖಿಲಾರಿ ಅವರ ಎಡಗೈ ಊನಗೊಂಡಿದೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕರಗನಿ ಗ್ರಾಮದ ಅವರು ವಿದ್ಯಾರ್ಥಿಯಾಗಿದ್ದಾಗ ಅಪಘಾತಕ್ಕೆ ಒಳಗಾಗಿದ್ದರು. ಇದರಿಂದ ಚರ್ಮ ಕೊಳೆತು ಸಮಸ್ಯೆ ಎದುರಿಸಿದರು. ಹಲವು ಶಸ್ತ್ರಚಿಕಿತ್ಸೆಗಳ ಹೊರತಾಗಿಯೂ ಅವರ ತೋಳು ಮೊದಲಿನಂತೆ ಆಗಲಿಲ್ಲ.

ಸಣ್ಣ ವಯಸ್ಸಿನಲ್ಲೇ ತಾಯಿಯನ್ನೂ ಅವರು ಕಳೆದುಕೊಂಡಿದ್ದರು. ಆದರೆ ಈ ಎಲ್ಲ ಬೇಗುದಿಗಳ ನಡುವೆ ಅವರು ವಿದ್ಯಾರ್ಥಿ ದೆಸೆಯಲ್ಲೇ ಜಾವೆಲಿನ್‌ ಥ್ರೊದಲ್ಲಿ ಆಸಕ್ತಿ ಬೆಳೆಸಿಕೊಂಡರು. ಆದರೆ ಭುಜದ ನೋವಿನ ಕಾರಣ ಅವರು ಶಾಟ್‌ಪಟ್‌ನಲ್ಲಿ ತೊಡಗಿಕೊಂಡರು. 2015ರಲ್ಲಿ ಪ್ಯಾರಾ ಸ್ಪೋರ್ಟ್ಸ್‌ನಲ್ಲಿ ಭಾಗವಹಿಸತೊಡಗಿದರು. ಕೌಶಲ ಸುಧಾರಿಸಲು ಕೋಚ್‌ ಸತ್ಯನಾರಾಯಣ ಅವರು ನೆರವಾದರು.

ಅಥ್ಲೆಟಿಕ್ಸ್‌ನಲ್ಲಿ ಮತ್ತೆ ನಾಲ್ಕು ಪದಕ

ಮಂಗಳವಾರ ತಡರಾತ್ರಿ ಭಾರತ ಅಥ್ಲೆಟಿಕ್ಸ್‌ನಲ್ಲಿ ಎರಡು ಬೆಳ್ಳಿ, ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡಿತ್ತು.

ಪುರುಷರ ಟಿ63 ಹೈಜಂಪ್‌ನಲ್ಲಿ ಶರದ್‌ ಕುಮಾರ್‌ 1.88 ಮೀ. ಜಿಗಿದು ಬೆಳ್ಳಿ ಪದಕ ಗೆದ್ದುಕೊಂಡರು. ಇದೇ ವಿಭಾಗದಲ್ಲಿ ಮರಿಯಪ್ಪನ್ ತಂಗವೇಲು 1.85 ಮೀ. ಜಿಗಿದು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಕಣದಲ್ಲಿದ್ದ ಭಾರತದ ಮೂರನೇ ಸ್ಪರ್ಧಿ ರಿಂಕು (61.58 ಮೀ.) ಐದನೇ ಸ್ಥಾನಕ್ಕೆ ಸರಿದರು.

ಅಮೆರಿಕದ ಕ್ರೀಡಾತಾರೆ ಎಜ್ರಾ ಫ್ರೆಚ್‌ 1.94 ಮೀ. ಎತ್ತರಕ್ಕೆ ಜಿಗಿದು ಚಿನ್ನವನ್ನು ಗೆದ್ದುಕೊಂಡರು. ಎಜ್ರಾ ಈ ಕೂಟದಲ್ಲಿ ಎರಡನೇ ಚಿನ್ನ ಗೆದ್ದಿದ್ದು ವಿಶೇಷ. ಅವರು 100 ಮೀ. ಓಟದಲ್ಲೂ ಫೊಟೊಫಿನಿಷ್‌ ಅಂತರದಲ್ಲಿ (0.02 ಸೆ.) ಡೆನ್ಮಾರ್ಕ್‌ನ ಡೇನಿಯಲ್ ವ್ಯಾಗ್ನರ್ ಅವರನ್ನು ಹಿಂದೆಹಾಕಿ ಚಿನ್ನ ಗೆದ್ದಿದ್ದರು.

ಪುರುಷರ ಎಫ್‌ 46 ಜಾವೆಲಿನ್ ಥ್ರೊ ಫೈನಲ್‌ನಲ್ಲಿ ಅಜೀತ್‌ ಸಿಂಗ್ 65.62 ಮೀ. ದೂರಕ್ಕೆಸೆದು ಬೆಳ್ಳಿ ಗೆದ್ದರೆ, ಈಟಿಯನ್ನು 64.96 ಮೀ. ದೂರಕ್ಕೆ ಥ್ರೊ ಮಾಡಿದ ಸುಂದರ್‌ ಸಿಂಗ್ ಗುರ್ಜರ್ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಸಚಿನ್ ಸರ್ಜೆರಾವ್ ಖಿಲಾರಿ

ಸಚಿನ್ ಸರ್ಜೆರಾವ್ ಖಿಲಾರಿ

(ರಾಯಿಟರ್ಸ್ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT