ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲ್ಯಾಬ್‌ನಲ್ಲಿ ಸಿದ್ಧವಾದ ರಕ್ತಕೋಶಗಳು!

Published : 4 ಸೆಪ್ಟೆಂಬರ್ 2024, 0:20 IST
Last Updated : 4 ಸೆಪ್ಟೆಂಬರ್ 2024, 0:20 IST
ಫಾಲೋ ಮಾಡಿ
Comments

ನಾವು ಬದುಕಿರಲು ಅತ್ಯವಶ್ಯಕವಾದ ಉಸಿರಾಟ, ರಕ್ತಪರಿಚಲನೆ, ಜೀರ್ಣಕ್ರಿಯೆ, ಹೃದಯಬಡಿತ, ರಕ್ತ ಉತ್ಪಾದನೆ, ಮಾಂಸಖಂಡಗಳ ಬೆಳವಣಿಗೆ ಮುಂತಾದ ಯಾವುದೇ ಭೌತಿಕ ಕ್ರಿಯೆಗಳಾದರೂ ನಮ್ಮ ಮನಸ್ಸು ಅಥವಾ ಬುದ್ಧಿಯನ್ನು ಕೇಳಿ ನಡೆಯುತ್ತವೆಯೇ? ಇಲ್ಲ. ಇನ್ನು, ರಕ್ತ ಉತ್ಪಾದನೆ ಎಂದಾಗ ಯಾವುದೇ ಆರೋಗ್ಯವಂತನ ದೇಹದಲ್ಲಿ ಅವನ ಅರಿವಿಗೇ ಬಾರದಂತೆ ರಕ್ತಉತ್ಪತ್ತಿಯ ಕ್ರಿಯೆ ಸುಲಭವಾಗಿ ಜರುಗುತ್ತಿರುತ್ತದೆ. ಇದು ಪ್ರಕೃತಿ ಎಲ್ಲ ಜೀವಸಂಕುಲಗಳಿಗೂ ನೀಡಿರುವ ಶಕ್ತಿ ಹಾಗೂ ವರದಾನ. ಆದರೆ ದುರದೃಷ್ಟವಶಾತ್ ಕೆಲವರು ಲ್ಯುಕೇಮಿಯಾ, ಬ್ಲಡ್ ಕ್ಯಾನ್ಸರ್, ಅಸ್ಥಿಮಜ್ಜೆ ವೈಫಲ್ಯಗಳಂತಹ ಆರೋಗ್ಯದ ಸಮಸ್ಯೆಗಳಿಗೆ ತುತ್ತದಾಗ ಅವರ ದೇಹ ತನಗೆ ಅವಶ್ಯವಿರುವ ರಕ್ತವನ್ನು ಉತ್ಪಾದಿಸಿಕೊಳ್ಳಲು ಶಕ್ತವಾಗಿರುವುದಿಲ್ಲ. ಆಗ ಅವರದೇ ರಕ್ತದ ಗುಂಪಿನವರು ತಮ್ಮ ರಕ್ತವನ್ನು ರೋಗಿಗೆ ದಾನ ಮಾಡಬೇಕಾಗುತ್ತದೆ. ಆದರೆ ಇದಕ್ಕೆ ಮತ್ತೊಬ್ಬ ಆರೋಗ್ಯವಂತನಾದ ವ್ಯಕ್ತಿಗಾಗಿ ಹುಡುಕಾಟ ನಡೆಸಿ, ದಾನಿಯು ಒಪ್ಪಿದರೆ, ಅವರ ರಕ್ತಪರೀಕ್ಷೆ ಮಾಡಿ, ಕೊನೆಗೆ ರಕ್ತವನ್ನು ಪಡೆಯಬೇಕು. ‘ಬ್ಲಡ್ ಬ್ಯಾಂಕ್’ಗಳು ಬಂದಿರುವುದರಿಂದ ಸ್ವಲ್ಪ ಮಟ್ಟಿಗೆ ಈ ತೊಂದರೆ ಕಡಿಮೆಯಾಗಿರಬಹುದೆನ್ನಿ. 

ಮಕ್ಕಳಿಗೆ ಸರಿಹೊಂದುವಂತಹ ದಾನಿಗಳು ಸಿಗುವುದು ಕಷ್ಟಸಾಧ್ಯವಾದ್ದರಿಂದ ಮಕ್ಕಳಲ್ಲಿ ಈ ರಕ್ತ ಸಂಬಂಧಿ ತೊಂದರೆ ಕಾಣಿಸಿಕೊಂಡರೆ ಚಿಕಿತ್ಸಾಮಾರ್ಗಗಳು ಕಷ್ಟ. ಹಾಗೇನಾದ್ರೂ ತದ್ವಿರುದ್ದವಾದ ಕೋಶಗಳನ್ನು ಸೇರಿಸಿಬಿಟ್ಟರಂತೂ ಅದು ರೋಗಿಯ ಸ್ವಂತ ಕೋಶಗಳನ್ನೇ ಹೊಡೆದುರುಳಿಸಿ, ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತವೆ; ರೋಗಿಗಳು ಕೆಲವೊಮ್ಮೆ ಮರಣಿಸುವ ಸಾಧ್ಯತೆಗಳೂ ಇವೆ. ಹಾಗಾಗಿ ರೋಗಿನಿರ್ದಿಷ್ಟ ರಕ್ತಕೋಶಗಳನ್ನು ತಯಾರಿಸಿದಾಗ ಇಂತಹ ತೊಡಕುಗಳನ್ನು ಸುಲಭವಾಗಿ ಪರಿಹರಿಸಬಹುದು. ದಾನಿಗಳ ಹುಡುಕಾಟ ನಡೆಸಬೇಕಿಲ್ಲ. ಮಾತ್ರವಲ್ಲ, ಈ ರೀತಿಯ ‘ಜೀನೋಮ್ ಎಡಿಟಿಂಗ್’ ರೋಗಿಯ ಮೂಲಸಮಸ್ಯೆಗಳನ್ನು ಸರಿಪಡಿಸಲು ಅನುಕೂಲಿಯಾಗುತ್ತದೆ. ಹಾಗಾದರೆ ಇತರೆ ಔಷಧಗಳಂತೆ ರಕ್ತಕೋಶಗಳನ್ನೂ ಪ್ರಯೋಗಾಲಯಗಳಲ್ಲಿ ತಯಾರಿಸಬಹುದಾಗಿದ್ದರೆ ಹೇಗಿರುತ್ತಿತ್ತು?

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿರುವ ‘ಮುರ್ಡಾಕ್ ಚಿಲ್ಡ್ರನ್ ರಿಸರ್ಚ್ ಇನ್ಸಿಟ್ಯೂಟ್‌’ನ (ಎಂಸಿಆರ್‌ಐ) ಸಂಶೋಧಕರು ಮನುಷ್ಯನ ರಕ್ತವನ್ನೇ ಹೋಲುವ ರಕ್ತಕೋಶಗಳನ್ನು ಪ್ರಯೋಗಾಲಯದಲ್ಲಿ ತಯಾರಿಸಿದ್ದಾರಂತೆ. ಹಾಗೆಂದು ‘ಎಂಸಿಆರ್‌ಐ’ನ ಸಂಶೋಧಕರು ‘ನೇಚರ್ ಬಯೋಟೆಕ್ನಾಲಜಿ’ ಪತ್ರಿಕೆಯಲ್ಲಿ ವರದಿ ಮಾಡಿದ್ದಾರೆ. ಈ ಸಂಶೋಧನೆಯು ಲುಕೇಮಿಯಾ ಮತ್ತು ಅಸ್ಥಿಮಜ್ಜೆ ವೈಫಲ್ಯಗಳಂತಹ ದೌರ್ಬಲ್ಯವಿರುವ ಮಕ್ಕಳಿಗೆ ಅತಿ ಶೀಘ್ರದಲ್ಲಿ, ಆಯಾ ಮಕ್ಕಳ ದೇಹಕ್ಕೆ ಸೂಕ್ತವಾದಂತಹುದೇ ಚಿಕಿತ್ಸೆಯನ್ನು ಒದಗಿಸಲು ಅನುಕೂಲವಾಗುತ್ತದೆಯಂತೆ.

ಈ ಪ್ರಯೋಗದಲ್ಲಿ ಸಂಶೋಧಕರು ‘ಸ್ಟೆಮ್ ಸೆಲ್ಗ’ಳನ್ನು ಬಳಸಿಕೊಂಡಿದ್ದಾರೆ. ನಮ್ಮ ಚರ್ಮ, ರಕ್ತನಾಳಗಳು, ಮಿದುಳು, ಅಸ್ಥಿಮಜ್ಜೆ ಇಂತಹ ಭಾಗಗಳಲ್ಲಿ ಕಂಡುಬರುವ, ಇತರೆ ವಿಭಿನ್ನ ಕೋಶಗಳನ್ನು ತಯಾರಿಸಬಲ್ಲ, ಹಾಗೂ ತನ್ಮೂಲಕ ದೇಹದ ದುರಸ್ತಿ ಕಾರ್ಯವನ್ನು ಮಾಡಬಲ್ಲ ಸಾಮರ್ಥ್ಯವಿರುವ ವಿಶೇಷ ಬಗೆಯ ಕೋಶಗಳೇ ಸ್ಟೆಮ್‌ ಸೆಲ್‌ಗಳು. ರೋಗಿಯ ಸ್ಟೆಮ್ ಸೆಲ್‌ಗಳನ್ನು ತೆಗೆದುಕೊಂಡು ಅದನ್ನೇ ಹೋಲುವ ರಕ್ತಕೋಶಗಳನ್ನು ತಯಾರಿಸಿ ಅಸ್ಥಿಮಜ್ಜೆಯ ಕಸಿಯಲ್ಲಿ ಬಳಸಬಹುದಂತೆ. ಆಗ ರೋಗಿಯ ದೇಹದಲ್ಲಿ ಆರೋಗ್ಯವಂತ ರಕ್ತಕಣಗಳ ಸೃಷ್ಟಿ ಸುಲಭವಾಗುತ್ತದೆ ಎನ್ನುತ್ತಾರೆ, ಪ್ರೊಫೆಸರ್ ಎಲಿಜಬೆತ್ ಮತ್ತು ತಂಡದವರು.

ಆದರೆ, ಇದೇನೂ ಸುಲಭದ ಕೆಲಸವಲ್ಲ. ರೋಗಿಯ ದೇಹದಿಂದ ಕೋಶಗಳನ್ನು ತೆಗೆದುಕೊಂಡು, ಕಸಿ ಮಾಡಲು ಸೂಕ್ತವಾದ ರಕ್ತಕೋಶಗಳನ್ನು ತಯಾರಿಸಿ ದೇಹದೊಳಗೆ ತೂರಿಸುವುದು ರೋಗಿಯ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ಮುಖ್ಯವಾಗಿ ಹೀಗೆ ತಯಾರಾಗುವ ರಕ್ತಕೋಶಗಳ ಪ್ರಮಾಣ ಮತ್ತು ಶುದ್ಧತೆಯಲ್ಲಿ ಬಹಳ ಎಚ್ಚರಿದಿಂದಿರಬೇಕು. ಅಂತೂ ಎಲೆಜಬೆತ್ ಮತ್ತು ತಂಡದವರು ಕಸಿ ಮಾಡಲು ಯೋಗ್ಯವಾದ, ಮನುಷ್ಯನ ಭ್ರೂಣದಲ್ಲಿ ಸ್ವಾಭಾವಿಕವಾಗಿರುವ ರಕ್ತಕಣಗಳನ್ನೇ ಹೋಲುವ ರಕ್ತಕೋಶಗಳನ್ನು ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಈ ರಕ್ತಕೋಶಗಳನ್ನು ಪರೀಕ್ಷಿಸಲು ಸಂಶೋಧಕರು ರೋಗನಿರೋಧಕ ಶಕ್ತಿಯಿಲ್ಲದ, ದುರ್ಬಲವಾಗಿರುವ ಇಲಿಗಳ ದೇಹಕ್ಕೆ ಚುಚ್ಚಿದ್ದಾರೆ. ವೇಗವಾಗಿ ರಕ್ತಕೋಶಗಳು ಅಸ್ಥಿಮಜ್ಜೆಗಳಾಗಿ ಕಾರ್ಯಪ್ರವೃತ್ತಿಯಾಗಿದ್ದನ್ನು ಗಮನಿಸಿದ್ದಾರೆ. ಜೊತೆಗೆ ಅದರ ಕಾರ್ಯವನ್ನು ಆರೋಗ್ಯವಂತ ರಕ್ತಕೋಶಗಳ ಕಾರ್ಯದೊಂದಿಗೆ ಹೋಲಿಸಿ ನೋಡಿದ್ದಾರೆ. ಅವು ಯಶಸ್ವಿಯಾಗಿ ಅಸ್ಥಿಮಜ್ಜೆಯಂತೆಯೇ ಕಾರ್ಯನಿರತವಾದದ್ದನ್ನು ಖಚಿತಪಡಿಸಿಕೊಂಡಿದ್ದಾರೆ. ದಾನಿಗಳಿಂದ ಪಡೆದ ರಕ್ತವನ್ನು ಶೇಖರಿಸುವ ರೀತಿಯಲ್ಲಿಯೇ ಹೀಗೆ ಪ್ರಯೋಗಾಲಯದಲ್ಲಿ ತಯಾರಿಸಿದ ಕೋಶಗಳನ್ನೂ ಶೇಖರಿಸಿಟ್ಟು, ಬೇಕಾದಾಗ ಬಳಸಿಕೊಳ್ಳಬಹುದಂತೆ.

ರಕ್ತಕ್ಕೆ ಸಂಬಂಧಿಸಿದ ಇತರ ರೋಗಗಳನ್ನೂ ಗುಣಪಡಿಸುವುದಕ್ಕೆ ಈ ರಕ್ತಕೋಶಗಳ ತಯಾರಿಕೆ ನೆರವಾಗಬಲ್ಲದು ಎನ್ನುವುದು ಸಂಶೋಧಕರ ವಿಶ್ವಾಸ. ನಮ್ಮ ದೇಹದೊಳಗೆ ಆಮ್ಲಜನಕವನ್ನು ಪೂರೈಸಲು ಕೆಂಪುರಕ್ತಕಣಗಳು ಹಾಗೂ ರಕ್ಷಣಾ ವ್ಯವಸ್ಥೆಗೆ ಬಿಳಿರಕ್ತಕಣಗಳು ಬೇಕು. ಗಾಯಗಳಿಂದ ರಕ್ತಸ್ರಾವವಾಗದಂತೆ ಅದನ್ನು ಹೆಪ್ಪುಗಟ್ಟಿಸಲು ‘ಕಿರುತಟ್ಟೆಗಳು’ (ಪ್ಲೇಟ್‌ಲೆಟ್ಸ್) ಬೇಕು. ಇಂತಹ ವಿಭಿನ್ನ ಕೋಶಗಳು ಹೇಗೆ ರಚನೆಗೊಡು ಕಾರ್ಯನಿರ್ವಹಿಸುತ್ತವೆ ಎನ್ನುವುದು ಪತ್ತೆಯಾದರೆ ಪರಿಹಾರ ಸುಲಭ ಎನ್ನುತ್ತಾರೆ, ಎಲೆಜಬೆತ್. ಅಂತೂ ಈ ಗಂಭೀರವಾದ ರಕ್ತಸಂಬಂಧಿ ರೋಗಗಳ ಚಿಕಿತ್ಸೆಗಾಗಿ ಬೇಕಾದ ರಕ್ತಕ್ಕಾಗಿ ದಾನಿಗಳನ್ನು ಹುಡುಕಾಡಬೇಕಾದ ಅನಿವಾರ್ಯತೆಯನ್ನು ತಗ್ಗಿಸುವ ಸಂಶೋಧನೆಯೊಂದು ಚುರುಕಾಗಿ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT