ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ನಲ್ಲಿ ಪ್ರಯಾಣಿಸಿದ ಹಿರಿಯರೊಬ್ಬರು ಟಿಕೆಟ್ ದರದಲ್ಲಿ ಬಾಕಿ ಉಳಿಸಿಕೊಂಡಿದ್ದ ₹1 ಅನ್ನು ನೀಡುವ ಮೂಲಕ ಪ್ರಾಮಾಣಿಕತೆ ಮತ್ತು ಸ್ವಾಭಿಮಾನ ಮೆರೆದಿದ್ದಾರೆ.

ಈ ಪ್ರಸಂಗವನ್ನು ಬಸ್ ನಿರ್ವಾಹಕ ನಾಗರಾಜ್ ಬಾಸರ್ಕೋಡ್ ಮನಸ್ಸಿಗೆ ಮುಟ್ಟುವಂತೆ ವಿವರಿಸಿದ್ದಾರೆ.

ಧರ್ಮಸ್ಥಳದಿಂದ ಹುಬ್ಬಳ್ಳಿಗೆ ತೆರಳುವ ಮಾರ್ಗದಲ್ಲಿ ಯಲ್ಲಾಪುರದಲ್ಲಿ ಬಸ್ ಹತ್ತಿದ್ದ ಹಿರಿಯ ನಾಗರಿಕರೊಬ್ಬರು, ಕಿರವತ್ತಿಗೆ ಟಿಕೆಟ್ ಪಡೆದುಕೊಂಡಿದ್ದರು. ಬಸ್ ಟಿಕೆಟ್ ದರ ₹21 ಇದ್ದು, ₹20 ನೋಟು ನೀಡಿದ್ದ ಅವರು, ಮತ್ತೆ ಬಾಕಿ ಉಳಿಸಿಕೊಂಡಿದ್ದ ₹1 ಅನ್ನು ಹುಡುಕಾಡಿ ನಿರ್ವಾಹಕನಿಗೆ ನೀಡಿದ್ದಾರೆ.

ನಿರ್ವಾಹಕ ನಾಗರಾಜ್ ಅವರು ₹1 ಬೇಡವೆಂದು ನಿರಾಕರಿಸಿದರಾದರೂ, ಅಜ್ಜ ಮಾತ್ರ ಒಪ್ಪದೇ ಬಾಕಿ ಮೊತ್ತವನ್ನು ನೀಡಿ, ಸ್ವಾಭಿಮಾನ ಮೆರೆದಿದ್ದಾರೆ.

₹1 ಆಗಿದ್ದರೂ, ಅದರ ಋಣವನ್ನು ಇಟ್ಟುಕೊಳ್ಳದೆ ಪ್ರಾಮಾಣಿಕವಾಗಿ ತನ್ನ ಸ್ವಾಭಿಮಾನ ಪ್ರದರ್ಶಿಸಿದ ಅಜ್ಜನ ಕುರಿತು ಬಸ್ ನಿರ್ವಾಹಕ ನಾಗರಾಜ್, ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.

ಪ್ರಾಮಾಣಿಕತೆ ಎನ್ನುವುದೇ ಇಲ್ಲವಾಗುತ್ತಿರುವ ಇಂದಿನ ದಿನಗಳಲ್ಲಿ, ಈ ರೀತಿಯಾಗಿ ₹1 ಕೂಡ ಬಾಕಿ ಉಳಿಸಿಕೊಳ್ಳದೇ ಇರುವ ಅಜ್ಜನ ಬಗ್ಗೆ ಬರೆದ ಪೋಸ್ಟ್ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ನಾಗರಾಜ್ ಅವರ ಫೇಸ್ಬುಕ್ ಪೋಸ್ಟ್ನ ಯಥಾವತ್ ಪ್ರತಿ ಇಲ್ಲಿದೆ.

ಒಂದ್ರೂಪಾಯಿ.
ಇವತ್ತು ಧರ್ಮಸ್ಥಳದಿಂದ ಹುಬ್ಬಳ್ಳಿಗೆ ಬರುತ್ತಿದ್ದೆವು. ಬಸ್ಸು ಯಲ್ಲಾಪುರಕ್ಕೆ ಬಂದು ನಿಂತಾಗ ನಾಲ್ಕಾರು ಪ್ರಯಾಣಿಕರು ಬಸ್ಸು ಹತ್ತಿ ಕುಳಿತರು. ಯಥಾ ರೀತಿ ನಾನು ಎಂಟ್ರಿ ಹಾಕಿಸಿಕೊಂಡು ರೈಟ್ ಹೇಳಲಾಗಿ ಬಸ್ಸು ಮುಂದೆ ಸಾಗಿತು. ಹತ್ತಿದ ಪ್ರಯಾಣಿಕರಿಗೆ ಟಿಕೆಟ್ ನೀಡುತ್ತ ಬರುತ್ತಿರುವಾಗ , ನನ್ನ ಸೀಟಿನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ತುಂಬು ವಯಸ್ಸಿನ ಅಜ್ಜನೊಬ್ಬ ತನ್ನ ಹಿರಿಯ ನಾಗರಿಕರ ಗುರುತಿನ ಚೀಟಿ ತೋರಿಸಿ ಕಿರವತ್ತಿಗೆ ಟಿಕೆಟು ಕೇಳಿದ. ಅಜ್ಜನಿಗೆ ಟಿಕೆಟ್ ಕೊಟ್ಟು ಇಪ್ಪತ್ತೊಂದು ರೂಪಾಯಿ ಕೊಡಲು ಹೇಳಿದೆ. ಇಪ್ಪತ್ತು ರೂಪಾಯಿ ನನ್ನ ಕೈಗಿತ್ತ ಅಜ್ಜ ಇನ್ನೊಂದು ರೂಪಾಯಿ ಕೊಡುವುದಾಗಿ ಸನ್ನೆ ಮಾಡಿದ. ನಾನು ಟಿಕೆಟ್ ನೀಡುತ್ತ ಮುಂದೆ ಸಾಗಿದೆ.

ಕೆಲಸ ಮುಗಿದು ಸೀಟಿಗೆಬಂದು ಕುಳಿತು ಮಷಿನ್ ಎಂಟ್ರಿ ಮಾಡಿ ಹೊರಗೆ ನೋಡುತ್ತ ಕುಳಿತಿದ್ದೆ. ಅಚಾನಕ್ಕಾಗಿ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಅಜ್ಜನ ಮೇಲೆ ಗಮನ ಹೋಯಿತು. ತುಂಬ ವಿಚಲಿತನಾದಂತಿದ್ದ ಆತ, ಗಡಿಬಿಡಿಯಾಗಿ ಏನನ್ನೋ ಹುಡುಕುತ್ತಿದ್ದ. ತನ್ನ ಜೇಬು, ಎಲೆ ಸಂಚಿ, ಜೊತೆಗೆ ತಂದ ಕೈಚೀಲ ಹೀಗೆ ಎಲ್ಲ ಕಡೆ ತಡಕಾಡುತ್ತ ಅಮೂಲ್ಯ ವಸ್ತುವೊಂದನ್ನು ಕಳೆದುಕೊಂಡವನಂತೆ ಚಡಪಡಿಸುತ್ತಿದ್ದ. ನನಗೆ ತಡೆಯಲಾಗದೆ , " ಅಜ್ಜಾರ ರೊಕ್ಕಾ ರೂಪಾಯಿ, ಏನರ ವಸ್ತು ಕಳಕೊಂಡಿರೇನು ? ಇಷ್ಟ್ಯಾಕ ಗಾಬರಿಯಾಗೀರಿ ? " ಅಂತ ಕೇಳಿದೆ.

"ಇಲ್ರಿ ನಿಮಗ ಒಂದ್ರುಪಾಯಿ ಕೊಡೂದಿತ್ತಲ್ಲ, ಅದನ್ನ ಹುಡಕಾಕತ್ತೀನಿ ಎಲ್ಲೆಲ್ಲೀ ಸಿಗನವಲ್ತು " ಅಂತಂದು ಹುಡುಕುವಿಕೆಯಲ್ಲಿ ಮುಳುಗಿದ. ನನಗೆ ನಗಬೇಕೋ ಅಳಬೇಕೋ ತಿಳಿಯದಂತಾಗಿ " ಅಲ್ಲ ಅಜ್ಜಾರ, ಬರೀ ಒಂದ್ರೂಪಾಯಿನ್ನ ಈ ನಮೂನಿ ಗಾಬರಿ ಆಗಿ ಹುಡುಕಾಕತ್ತಿರೆಲಾ. ಸಿಗದಿದ್ರ ಇರಲಿ ಬಿಡ್ರಿ ಯಾಕಷ್ಟು ಒದ್ದಾಡ್ತಿರಿ"ಅಂದೆ.

ಅದಕ್ಕವನು " ಸಾಹೇಬರ, ನಿಮ್ಮ ಸರ್ಕಾರದವರು ಆಗಲೇ ನನಗ ರುಪಾಯಿದಾಗ ನಾಕಾಣೆ ಭಾಗ ಸವಲತ್ತು ಮಾಡಿ ಕೊಟ್ಟಾರ, ಅಂಥಾದರಾಗ ನಿಮಗ ಕೊಡೂ ರೊಕ್ಕದಾಗನೂ ನಾನು ಉಳಿಸಿಕೊಂಡರ ಅದು ಸುಲಿಗಿ ಆದಂಗ ಆಗ್ತದ ರೀ" ಅಂತಂದ.
ನನಗೀಗ ನಿಜಕ್ಕೂ ನಗೆ ಬಂತು. "ಅಲ್ಲ ಅಜ್ಜ, ಸುಲಿಗಿ ಆಗಾಕ ನೀವೇನು ನನಗ ಸಾವಿರಾರು ರೂಪಾಯಿ ಟೊಪಗಿ ಹಾಕಾಕತ್ತಿರೆನು. ಒಂದೇ ಒಂದು ರೂಪಾಯಿ. ಅದೂ ನಿಮಗ ಸಿಗಲಾರದ್ದಕ್ಕ ಉಳಸಿಕೊಂಡೀರಿ." ನಕ್ಕು ನುಡಿದೆ.

"ವಿಷಯ ಒಂದು ರೂಪಾಯಿ, ಸಾವಿರ ರೂಪಾಯಿದಲ್ಲರಿ. ನ್ಯಾಯದ ವಿಷಯ ಐತಿ ಇದು. ಈ ರೊಕ್ಕಾ ನಂದೂ ಅಲ್ಲ ನಿಮ್ಮದೂ ಅಲ್ಲ , ನಿಮ್ಮ ಡಿಪಾರ್ಮೆಂಟಿಂದು. ನೀವು ಹೋಗಿ ಕಟ್ಟಬೇಕಂದ್ರ ಕೈಯಿಂದ ಕಟ್ಟಬೇಕು , ಇದು ಅನ್ಯಾಯ ಅಲ್ಲನ್ರಿ?" ನನಗೇ ಮರು ಪ್ರಶ್ನೆ ಎಸೆದು ನನ್ನನ್ನು ಕಕ್ಕಾವಿಕ್ಕಿ ಆಗಿಸಿದ."ಆತು ನಿಮಗ ಕೊಡsಬೇಕು ಅಂತನಿಸಿದರ ಆ ಒಂದು ರೂಪಾಯಿ ಹೋಗ್ಲಿ, ಯಾವುವು ಇದ್ದವು ಕೊಡ್ರಿ, ನಾನ ಒಂದ್ರೂಪಾಯಿ ಮುರಕೊಂಡು ಚಿಲ್ಲರ ಕೊಡ್ತೀನಿ" ಅಂದೆ.

"ಇಲ್ಲರಿ ಸಾಹೇಬ್ರ,, ಬ್ಯಾರೇ ರೊಕ್ಕಾ ಇಲ್ಲ ನನ್ನ ಹಂತೇಕ. ಒಂದೀಸು ಗುಳಿಗಿ ತಗೊಂಡು ಉಳದ ಚಿಲ್ಲರದಾಗ ಮೊಮ್ಮಕ್ಕಳಿಗೆ ಚಾಕಲೇಟ್ ತಗೊಂಡು ಬರೊಬ್ಬರಿ ಇಪ್ಪತ್ತೊಂದು ರೂಪಾಯಿ ಇಟಗೊಂಡು ಬಸ್ ಹತ್ತಿದ್ಯಾ" ಅಂತ ಅನ್ನುವುದರೊಳಗೆ ಅವನ ಕೈ ಕಂಪಿಸತೊಡಗಿದ್ದವು, ನನಗೆ ದಿಗಿಲಾಯಿತು.

"ಹೋಗ್ಲಿ ಬಿಡ್ರಿ ಅಜ್ಜಾರ, ಮತ್ತೊಮ್ಮೆ ಬಂದಾಗ ಈ ಒಂದ್ರೂಪಾಯಿನೂ ಸೇರಿಸಿ ಕೊಟ್ಟು ನಿರಾಳ ಆಗೂವಂತ್ರಿ " ಅಂತ ಸಮಾಧಾನಿಸಲು ಯತ್ನಿಸಿದೆ."ಇಲ್ರಿ , ಇದs ನನ್ನ ಕೊನೆಯ ಪ್ರಯಾಣ, ಮತ್ತೊಮ್ಮೆ ನಾ ಸಿಗೂದಿಲ್ಲ! " ಅಂತ ಅಜ್ಜ ಉಸುರಿದನಷ್ಟೆ . ಕಣ್ಣಂಚಲಿ ಚುಳ್ಳನೆ ನೀರು ಜಿನುಗಿತು, ನನಗರಿವಿಲ್ಲದೆ ಗಂಟಲು ಬಿಗಿದಂತಾಯಿತು.

ನನ್ನನ್ನು ನಾನೇ ಸಂಭಾಳಿಸದವನಾದೆ. ಕ್ಷಣಗಳ ನಂತರ ಸಾವರಿಸಿಕೊಂಡು "ಛೇ! ಹಂಗ್ಯಾಕ ಅಂತೀರಿ ಬಿಡ್ರಿ ಅಜ್ಜ. ಇನ್ನೂ ಇಪ್ಪತ್ತು ವರ್ಷ ನನ್ನ ಬಸ್ಸಿನ್ಯಾಗನ ಓಡಾಡ್ತೀರಿ ನೋಡ್ರೆಲಾ" ಅಂತ ನನ್ನನ್ನೇ ರಮಿಸಿಕೊಳ್ಳುತ್ತಿದ್ದೇನೇನೋ ಎನಿಸುವಂತೆ ಹೇಳಿದೆ. ಮರು ಮಾತಾಡದ ಅಜ್ಜಿ ಕಡು ವಿಷಾದದ ನಗೆಯೊಂದನ್ನು ಚೆಲ್ಲಿದ. ಆ ನಗೆ ನನ್ನನ್ನು ಮತ್ತೂ ಕಂಗಾಲಾಗಿಸಿತು.

ಅವನ ತಡಕಾಟ ನಡೆದೇ ಇತ್ತು.ಈ ಹೊತ್ತಿಗೆ ಅವನೊಳಗಿನ ಆತಂಕ, ಚಡಪಡಿಕೆಗಳ ಬಿರುಗಾಳಿ ನನ್ನೊಳಗೂ ಹೊಕ್ಕಂತಾಗಿ, ಅವನಿಗಿಂತ ಹೆಚ್ಚು ತತ್ತರಿಸುತ್ತಿದ್ದೇನೆ ಎನಿಸತೊಡಗಿತು. ಅಜ್ಜನನ್ನು ಕನ್ವಿನ್ಸ್ ಮಾಡುವುದಿರಲಿ ಸ್ವತಃ ನನಗೆ ನಾನೇ ತಹಬಂದಿಗೆ ಬರದವನಂತಾಗಿ ತರಗೆಲೆಯಾಗ ಹತ್ತಿದೆ.

ಕೆಲ ಸಮಯ ಕಳೆಯಿತು,ಅದೊಂದು ಘಳಿಗೆ ತನ್ನ ಎಲಿ ಸಂಚಿಯೊಳಗಿನ ಮೂಲೆಯಲ್ಲಿ ಬೆರಳಿಗೆ ಏನೋ ತಾಗಿದಂತಾಗಿ ಗಕ್ಕನೆ ನಿಂತ. ಮುಖದ ಗೆರೆಗಳು ರೊಯ್ಯನೇ ನಕಾಶೆ ಬದಲಿಸಿದವು. ಗ್ರಹಣ ಕಳೆದ ಸೂರ್ಯ ಗಗನದೆದೆಯಲ್ಲಿ ಹೊಳೆದಂತೆ ಅಜ್ಜನ ಮುಖ ಫಳಫಳನೆ ಹೊಳೆಯಲಾರಂಭಿಸಿತು.

ಕೈ ಹೊರಗೆಳೆದುಕೊಂಡವನೇ" ತುಗೋರಿ ಸಾಹೇಬ್ರ " ಅಂತಂದು ಸಿಕ್ಕ ಆ ಒಂದ್ರೂಪಾಯಿಯನ್ನು ನನ್ನ ಕೈಗಿತ್ತವನೇ ಋಣಮುಕ್ತನಾದವನಂತೆ ಸಂಭ್ರಮಿಸುತ್ತ ಕೈಮುಗಿದ. ಈ ಭಾರವನ್ನು ಭರಿಸಲಾಗದ ನಾನು ಅವನ ಪಾದಗಳಿಗೆ ಸಾಷ್ಟಾಂಗ ಬೀಳಬೇಕಿನಿಸಿತಾದರೂ ಸಾಧ್ಯವಾಗದೆ ಕೈಮುಗಿದು ನಿಂತೆ.

ಅಜ್ಜನ ಮುಖದಲ್ಲಿ ಹಾಲುಗಲ್ಲದ ಕೂಸು ನಗುತ್ತಿತ್ತು. ಹಿಂದೆಯೇ ದೇವರ ಮುಗುಳುನಗೆ ನನಗಷ್ಟೇ ಎಂಬಂತೆ ತಾಗಿ ಎದೆಯ ನೇವರಿಸಿತು.
ಬೇನಾಳಿಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.