ಕವಚ (ಬಾಡಿ) ಅಳವಡಿಸುವ ಕೆಲಸಕ್ಕಾಗಿ ತಮ್ಮ ಅಂಗಡಿಯ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಲಾರಿಯನ್ನು ಸರಸರನೇ ಏರಿದ ಶಾರದಾ ಅಷ್ಟೇ ವೇಗದಲ್ಲಿ ವೆಲ್ಡಿಂಗ್ ಕೆಲಸ ಮುಗಿಸಿದರು. ಲಾರಿಯ ಹಿಂಭಾಗಕ್ಕೆ ಬಂದು ಕಟ್ಟಿಗೆಯ ಹಲಗೆಗಳನ್ನು ಮಟ್ಟಸವಾಗಿ ಜೋಡಿಸಿ ಅದಕ್ಕೊಂದು ರೂಪಕೊಟ್ಟರು. ಬಳಿಕ ಕ್ಯಾಬಿನ್ ಭಾಗಕ್ಕೆ ಬಂದು ದುರಸ್ತಿ ಕೆಲಸ ಮುಗಿಸಿದರು.

ಜೊತೆಗಿದ್ದ ಪುರುಷ ಕೆಲಸಗಾರರು ‘ಶಾರದಕ್ಕ, ಶಾರದಮ್ಮ’ ಎನ್ನುತ್ತ ಅವರ ಕೆಲಸಕ್ಕೆ ನೆರವಾಗುತ್ತಿದ್ದರು. ತಮ್ಮ ಪಾಲಿನ ಕೆಲಸ ಪೂರ್ಣಗೊಳಿಸಿ ಮತ್ತೊಂದು ಲಾರಿಯ ದುರಸ್ತಿಗೆ ಮುಂದಾದರು. ಪಾದರಸದ ವೇಗದಲ್ಲಿ ಕವಚ ಕಟ್ಟುವ ಶಾರದಾ ಅವರ ಕಾಯಕ ನಿಷ್ಠೆಯನ್ನು ಸುತ್ತಲಿನ ಪುರುಷ ಕೆಲಸಗಾರರು ನಿಬ್ಬೆರಗಾಗಿ ನೋಡುತ್ತಿದ್ದರು.

ಕೊಪ್ಪಳದ ಬನ್ನಿಕಟ್ಟಿ ಸಮೀಪದಲ್ಲಿರುವ ಶಾರದಾ ಅವರ ಅಂಗಡಿಯ ಸಾಲಿನಲ್ಲಿಯೇ ಲಾರಿಗಳಿಗೆ ಕವಚ ಅಳವಡಿಸುವ ಎರಡ್ಮೂರು ಅಂಗಡಿಗಳಿವೆ. ಅಲ್ಲಿ ಕೆಲಸ ಮಾಡುವವರೆಲ್ಲರೂ ಪುರುಷರೇ. ದೈಹಿಕವಾಗಿ ಬಹಳ ಶ್ರಮ ಬೇಕಾಗುವ, ದಿನಗಟ್ಟಲೆ ಬಿಸಿಲು, ದೂಳಿನಲ್ಲಿ ಕೆಲಸ ಮಾಡುವ ಪುರುಷರಷ್ಟೇ ಸಮರ್ಥವಾಗಿ ಶಾರದಾ ಕಾಯಕ ನಿರ್ವಹಣೆ ಮಾಡುತ್ತಾರೆ.

ಹೀಗಾಗಿ ಛಲಗಾತಿ, ಸಾಧಕಿ, ದಿಟ್ಟ ಮಹಿಳೆ ಎಂದು ಅನೇಕರು ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಹೀಗೆ ಮೆಚ್ಚುಗೆ ವ್ಯಕ್ತಪಡಿಸುವ ಮಾತುಗಳನ್ನು ಕೇಳಿ ಶಾರದಾ ಅವರ ಮುಖದ ಮೇಲೆ ಆ ಕ್ಷಣಕ್ಕೆ ನಗು ಅರಳುತ್ತದೆಯಾದರೂ ನಗುವಿನ ಹಿಂದಿರುವ ನೋವುಗಳು ಮಾತ್ರ ಸದಾ ಅವರನ್ನು ಕಾಡುತ್ತಲೇ ಇವೆ.

ವಿಶ್ವಕರ್ಮ ಸಮುದಾಯದಲ್ಲಿ ಜನಿಸಿದ ಅವರ ಪೂರ್ಣ ಹೆಸರು ಶಾರದಾ ಬಡಿಗೇರ. ಗದಗ ಸ್ವಂತ ಊರು. ಕಟ್ಟಿಗೆಯಲ್ಲಿ ಕಲಾಕೃತಿಗಳನ್ನು, ಗೃಹಬಳಕೆಯ ವಸ್ತು ತಯಾರಿಸುವ ತಂದೆ ಈಶಪ್ಪ ಬಡಿಗೇರ ಅವರ ಕೆಲಸವನ್ನು ಬಾಲ್ಯದಿಂದಲೇ ನೋಡಿಕೊಂಡಿದ್ದರಿಂದ ಈ ಕೆಲಸದ ಬಗ್ಗೆ ತಿಳಿದಿತ್ತು. ಆದರೆ, ಕೆಲಸ ಮಾಡುವ ಸಂದರ್ಭ ಬಂದಿರಲಿಲ್ಲ. ಹಲವು ವರ್ಷಗಳ ಹಿಂದೆ ಕುಕನೂರು ತಾಲ್ಲೂಕಿನ ಮನ್ನಾಪುರ ಗ್ರಾಮದ ದೇವೇಂದ್ರಪ್ಪ ಅವರನ್ನು ಮದುವೆ ಮಾಡಿಕೊಂಡು ಕೊಪ್ಪಳದ ಭಾಗ್ಯನಗರದಲ್ಲಿ ವಾಸವಾಗಿದ್ದರು.

ಪತಿ ದೇವೇಂದ್ರಪ್ಪ ಮೊದಲಿನಿಂದಲೂ ಲಾರಿಗೆ ಕವಚ ಕಟ್ಟುವ ಕೆಲಸ ಮಾಡಿಕೊಂಡಿದ್ದರು. ಅಯ್ಯಪ್ಪ ಸ್ವಾಮಿಯ ಪರಮಭಕ್ತರಾಗಿದ್ದರಿಂದ ಪ್ರತಿವರ್ಷ 15 ದಿನ ಶಬರಿಮಲೆ ಯಾತ್ರೆಗೆ ಹೋಗುತ್ತಿದ್ದರು. ಹೀಗೆ ಯಾತ್ರೆ ಮಾಡಿದಾಗ ಗಂಡನ ಕೆಲಸದ ಉಸ್ತುವಾರಿ ನೋಡಿಕೊಳ್ಳುವ ಜವಾಬ್ದಾರಿ ಶಾರದಾ ಅವರ ಹೆಗಲ ಮೇಲೆ ಬೀಳುತ್ತಿತ್ತು. ಆಗ ತಮ್ಮ ಅಂಗಡಿಯ ಕೆಲಸಗಾರರು ಮಾಡುತ್ತಿದ್ದ ಕೆಲಸವನ್ನು ದೂರದಿಂದಲೇ ಗಮನಿಸಿ ಅಷ್ಟಿಷ್ಟು ನೆರವಾಗುತ್ತಿದ್ದರು.

ವೆಲ್ಡಿಂಗ್ ಮಾಡುವ, ಲಾರಿಯ ಹಿಂಭಾಗದಲ್ಲಿ ಜಂತಿ ಹೊಂದಿಸುವ ಕೆಲಸಗಳನ್ನು ಮಾಡುತ್ತಿದ್ದವರನ್ನು ತದೇಕಚಿತ್ತದಿಂದ ನೋಡುತ್ತಿದ್ದರು. 2009ರಲ್ಲಿ ಪತಿ ದೇವೇಂದ್ರಪ್ಪ ಮೃತಪಟ್ಟಾಗ ಮುಂದಿನ ಬದುಕು ಏನು ಎನ್ನುವ ಪ್ರಶ್ನೆ ಅವರನ್ನು ಕಾಡಿತ್ತು. ಆಗ ಏಳು ವರ್ಷದವಳಿದ್ದ ಮಗಳು ವಿಜಯಲಕ್ಷ್ಮಿ, ನಾಲ್ಕು ವರ್ಷದ ಮಗ ನಾಗರಾಜ ಅವರ ಭವಿಷ್ಯ ರೂಪಿಸುವುದು ಹೇಗೆ ಎನ್ನುವ ಆತಂಕವಿತ್ತು.

ಪತಿ ಮೃತಪಟ್ಟ ಕೆಲವು ದಿನಗಳಲ್ಲಿ ಶಾರದಾ ಅವರ ತಂದೆ, ‘ಮಕ್ಕಳಿನ್ನೂ ಚಿಕ್ಕವರಿದ್ದಾರೆ, ತವರಿಗೆ ಹೋಗಿಬಿಡೋಣ’ ಎಂದು ಬಲವಂತ ಮಾಡಿದ್ದರು. ಆದರೆ, ಛಲಗಾತಿ ಶಾರದಾ ಮಾತ್ರ ಗಂಡನ ಮನೆ ಬಿಟ್ಟು ಕದಲಲಿಲ್ಲ. ವರ್ಷಕ್ಕೊಮ್ಮೆ ತಮ್ಮ ಅಂಗಡಿಯಲ್ಲಿ ಅಲ್ಪ ಸ್ವಲ್ಪ ನೋಡಿಕೊಂಡಿದ್ದ ಲಾರಿಗೆ ಕವಚ ಅಳವಡಿಸುವ ಕಾಯಕವನ್ನೇ ತಮ್ಮ ಬದುಕಿಗೆ ಆಸರೆ ಮಾಡಿಕೊಂಡರು. ಛಲ, ಧೈರ್ಯ, ಆತ್ಮವಿಶ್ವಾಸವೇ ಬಂಡವಾಳವಾಯಿತು. ಜೊತೆಗಾರರು ‘ನಿಮ್ಮ ಜೊತೆ ನಾವಿದ್ದೇವೆ’ ಎಂದರೆ, ಮೈದುನ ದ್ಯಾಮಣ್ಣ ಬಡಿಗೇರ ಅತ್ತಿಗೆಯ ಸಾಹಸಕ್ಕೆ ಕೈ ಜೋಡಿಸಿದರು.

ಒಂದೂವರೆ ದಶಕದ ಹಿಂದೆ ಬಳ್ಳಾರಿ ಹಾಗೂ ಹೊಸಪೇಟೆ ಭಾಗದಲ್ಲಿ ಗಣಿಗಾರಿಕೆ ಉತ್ತುಂಗದಲ್ಲಿದ್ದ ಕಾಲ. ಹೀಗಾಗಿ ನೆರೆಯ ಕೊಪ್ಪಳ ಜಿಲ್ಲೆಯಲ್ಲಿಯೂ ಗಣಿ ಸರಕು ತುಂಬಿಕೊಂಡು ನಿತ್ಯ ಸಾವಿರಾರು ಲಾರಿಗಳು ಓಡಾಡುವ ಸದ್ದು ಜೋರಾಗಿತ್ತು. ರಾಜ್ಯದ ಭತ್ತದ ಕಣಜ ಎನಿಸಿಕೊಂಡಿದ್ದ ಕೊಪ್ಪಳ ಜಿಲ್ಲೆಯಲ್ಲಿ ಹೊಸ ಲಾರಿಗಳ ಖರೀದಿ ಭರಾಟೆಯಿತ್ತು. ಹೀಗಾಗಿ ಜಿಲ್ಲೆಯ ಎಲ್ಲ ಲಾರಿ ದುರಸ್ತಿ ಕೆಲಸಗಾರರಿಗೆ ಹಗಲಿರುಳು ಕೆಲಸ. ಎಷ್ಟೇ ಕೆಲಸ ಮಾಡಿದರೂ ಸಮಯ ಸಾಲುತ್ತಿರಲಿಲ್ಲ. ಅಂಗಡಿಗಳ ಮುಂದೆ ಲಾರಿಗಳ ಸಾಲು.

ಹೀಗಾಗಿ ಶಾರದಾ ಅವರಿಗೆ ಪತಿ ಮೃತಪಟ್ಟ ಬಳಿಕ ಹೆಚ್ಚು ದಿನ ಮನೆಯಲ್ಲಿ ಉಳಿದುಕೊಳ್ಳಲು ಸಾಧ್ಯವಾಗಲಿಲ್ಲ. ಒಂದು ಲಾರಿಯ ಸಂಪೂರ್ಣ ಕವಚ ಕಟ್ಟಲು ಕನಿಷ್ಠ ಎರಡೂವರೆ ತಿಂಗಳು ಬೇಕಾಗುತ್ತದೆ. ಅಂಗಡಿ ಮುಂದೆ ಸರತಿಯಲ್ಲಿ ನಿಂತಿದ್ದ ಹತ್ತಾರು ಲಾರಿಗಳಿಗೆ ಕವಚ ಕಟ್ಟಿದರು. ಆರಂಭದಲ್ಲಿ ಒಂದಷ್ಟು ಕೆಲಸ ಮಾತ್ರ ಗೊತ್ತಿದ್ದ ಅವರಿಗೆ ಕೆಲವೇ ವರ್ಷಗಳಲ್ಲಿ ಸಂಪೂರ್ಣವಾಗಿ ಒಂದು ಲಾರಿಯನ್ನು ತಾವೇ ನಿರ್ವಹಣೆ ಮಾಡಿ ಚೆಂದದ ರೂಪಕೊಡುವ ಸಾಮರ್ಥ್ಯ ಕರಗತ ಆಯಿತು.

ನಿತ್ಯ ಇದೇ ಕೆಲಸ ಮಾಡುತ್ತ ಹಿಂದಿನ 15 ವರ್ಷಗಳಲ್ಲಿ 150ಕ್ಕೂ ಹೆಚ್ಚು ಲಾರಿಗಳಿಗೆ ಕವಚ ಕಟ್ಟಿದ್ದಾರೆ. ತಂತ್ರಜ್ಞಾನ ಹೊಸತನಕ್ಕೆ ಹೊರಳಿದ್ದರಿಂದ ಲಾರಿಗಳ ಮಾಲೀಕರು ಈಗ ಕಟ್ಟಿಗೆಗಿಂತ ಸ್ಟೀಲ್ನ ಕವಚ ಅಳವಡಿಸುತ್ತಿದ್ದಾರೆ. ಬೇಡಿಕೆಗೆ ತಕ್ಕಂತೆ ಶಾರದಾ ಕೆಲಸ ಕಲಿತುಕೊಂಡಿದ್ದಾರೆ. ಅವರ ಬಳಿ ಹಲವು ಪುರುಷ ಕೆಲಸಗಾರರು ಬಂದಿದ್ದಾರೆ. ಅವರಿಗೆಲ್ಲ ಕೆಲಸ ಕಲಿಸಿದ್ದಾರೆ.

ಶಾರದಾ ತಮ್ಮ ಬದುಕು ರೂಪಿಸಿಕೊಳ್ಳುವ ಜೊತೆಗೆ ಮಕ್ಕಳ ಪಾಲಿಗೆ ನೆಚ್ಚಿನ ಅಮ್ಮ ಎನಿಸಿಕೊಂಡಿದ್ದಾರೆ. ಮಗಳ ಬದುಕನ್ನು ಸುಂದರವಾಗಿ ಕಟ್ಟಿ ಮದುವೆ ಮಾಡಿಕೊಟ್ಟಿದ್ದಾರೆ. ಮಗ ಐಟಿಐ ಪೂರ್ಣಗೊಳಿಸಿದ್ದು ಅಮ್ಮನ ಕೆಲಸಕ್ಕೆ ನೆರವಾಗುತ್ತಿದ್ದಾನೆ.

ಹೀಗೆ ಗೃಹಿಣಿಯಾಗಿ, ಸಾಹಸಿಯಾಗಿ, ಉದ್ಯಮಿಯಾಗಿ ಈಗಲೂ ನಿತ್ಯ ಕವಚ ಅಳವಡಿಸುವ ಶಾರದಾ ಅವರ ಬದುಕು ಅನೇಕ ಹೆಣ್ಣುಮಕ್ಕಳ ಪಾಲಿಗೆ ಸಾಹಸದ, ಪ್ರೇರಣೆಯ ಕಥನ.

ಬದುಕಿನ ದೊಡ್ಡ ಹಾದಿ ಸಾಗಿ ಬಂದ ಅವರನ್ನು ಈ ಬಗ್ಗೆ ಕೇಳಿದಾಗ, ‘ಈಗಿನ ಸಮಾಜದಲ್ಲಿ ತಮ್ಮ ಮನೆಯ ಹೆಣ್ಣುಮಕ್ಕಳು ಸಾಹಸದ ಕೆಲಸ ಮಾಡಿದರೆ ಛಲಗಾತಿ, ಧೈರ್ಯವಂತೆ ಎನ್ನುತ್ತಾರೆ. ಇದೇ ಕೆಲಸ ಬೇರೆ ಹೆಣ್ಣುಮಕ್ಕಳು ಮಾಡಿದರೆ ಗಂಡುಬೀರಿ ಎನ್ನುವ ಪಟ್ಟ ಕೊಡುತ್ತಾರೆ. ಅನೇಕ ನೋವುಗಳನ್ನು ಉಂಡಿದ್ದೇನೆ. ಯಾರ ಮಾತಿಗೂ ಮಣೆ ಹಾಕದೇ ನನ್ನ ಮಕ್ಕಳ ಬದುಕಿಗಾಗಿ ಎಲ್ಲವನ್ನೂ ಸಹಿಸಿಕೊಂಡು ಕೆಲಸ ಮಾಡಿದ್ದೇನೆ. ಹಿಂದೆ ನನ್ನನ್ನು ಜರೆದವರೇ ಈಗ ಬೆನ್ನು ತಟ್ಟಿದ್ದಾರೆ. ಇದಕ್ಕಿಂತ ದೊಡ್ಡ ಖುಷಿ ಮತ್ತೇನೂ ಇಲ್ಲ’ ಎನ್ನುತ್ತಿದ್ದಾಗ ಅವರ ದನಿ ಗದ್ಗದಿತವಾಗಿತ್ತು. ಕಣ್ಣಿನಿಂದ ಅವರಿಗೆ ಅರಿವಿಲ್ಲದಂತೆ ಆನಂದಭಾಷ್ಪ ಸುರಿಯುತ್ತಿತ್ತು.

ಇನ್ನಷ್ಟು ಲೇಖನಗಳನ್ನು ಇಲ್ಲಿ ಓದಿ... ಪ್ರಜಾವಾಣಿ ಸಾಧಕಿಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.