ಉತ್ತಮ ವಿದ್ಯಾಭ್ಯಾಸ ಪಡೆದು ಉನ್ನತ ಹುದ್ದೆ ನಿರ್ವಹಿಸುವ ಜತೆಗೆ ಸಾಮಾಜಿಕವಾಗಿ ತೊಡಗಿಸಿಕೊಳ್ಳಲು ಬಯಸುವವರು ವಿರಳ. ಇಂತಹವರ ಸಾಲಿನಲ್ಲಿ ನಿಲ್ಲುತ್ತಾರೆ ವೈದ್ಯೆ ಡಾ.ದೀಕ್ಷಾ. ದಾವಣಗೆರೆಯ ಸಂತೇಬೆನ್ನೂರಿನಲ್ಲಿ ಗ್ರಾಮೀಣ ಸೇವೆ ಪೂರ್ಣಗೊಳಿಸಿರುವ ದೀಕ್ಷಾ ಇದೀಗ ರಕ್ಷಣಾ ಇಲಾಖೆಗೆ ವೈದ್ಯೆಯಾಗಿ ನೇಮಕಗೊಂಡಿದ್ದಾರೆ.

ರಕ್ಷಣಾ ಇಲಾಖೆ ಪ್ರತಿವರ್ಷ ದೇಶದ ವಿವಿಧ ಭಾಗಗಳಿಂದ ಒಟ್ಟು 150 ವೈದ್ಯರನ್ನು ನೇಮಕ ಮಾಡಿಕೊಳ್ಳುತ್ತದೆ. ಇದರಲ್ಲಿ 15 ಸ್ಥಾನಗಳನ್ನು ಯುವತಿಯರಿಗೆ ಮೀಸಲಿರಿಸುತ್ತದೆ. ಈ ಪೈಕಿ ದೀಕ್ಷಾ ದಾವಣಗೆರೆಯಿಂದ ಆಯ್ಕೆಯಾಗಿದ್ದು, ತೆಲಂಗಾಣದ ಗೋಲ್ಕೊಂಡ ಕಮಾಂಡೊ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಶಾಲೆಯಲ್ಲೇ ಕ್ರಿಯೇಟಿವ್ ಬಾಲೆ

ಶಾಲಾ–ಕಾಲೇಜು ಹಂತದಲ್ಲೇ ದೀಕ್ಷಾಗೆ ಕ್ರೀಡೆ, ಎನ್ಸಿಸಿ, ಭರತನಾಟ್ಯದಲ್ಲಿ ಅಪಾರ ಆಸಕ್ತಿ ಇತ್ತು. ಶಾಲೆಯಲ್ಲಿ ಓದುತ್ತಿರುವಾಗಲೇ ಎನ್ಸಿಸಿಯ ಏಳಕ್ಕೂ ಹೆಚ್ಚು ತರಬೇತಿ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. ‘ಎ’ ದರ್ಜೆ (ಕಾರ್ಪೊರಲ್ ರ್ಯಾಂಕ್) ಪಡೆದಿದ್ದಾರೆ. ಎನ್ಸಿಸಿಯಿಂದ 2008ರಲ್ಲಿ ನವದೆಹಲಿಯಲ್ಲಿ ಆಯೋಜಿಸಿದ್ದ ‘ಯುವ ಹಬ್ಬ’ದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಡೊಳ್ಳುಕುಣಿತ, ಪಟದ ಕುಣಿತ ಪ್ರದರ್ಶಿಸಿದ್ದರು. ಅದೇ ವರ್ಷ ಬೆಂಗಳೂರಿನಲ್ಲಿ ನಡೆದ ಗಣರಾಜ್ಯೋತ್ಸವ ಪೂರ್ವಶಿಬಿರದಲ್ಲಿ ಭಾಗವಹಿಸಿದ್ದರು.

ಅಂತರಶಾಲಾ–ಕಾಲೇಜು, ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟದಲ್ಲಿ ನಡೆದ 200 ಮೀಟರ್ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಿ 52 ಚಿನ್ನ, 16 ಬೆಳ್ಳಿ, 7 ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ. ಭರತನಾಟ್ಯದ ಜೂನಿಯರ್ ಗ್ರೇಡ್ನಲ್ಲಿ ಮೊದಲ ದರ್ಜೆಯಲ್ಲಿ ಉತ್ತೀರ್ಣರಾಗಿರುವ ಇವರು, ವಿವಿಧ ಶಾಲೆ–ಕಾಲೇಜು, ಹೊರರಾಜ್ಯಗಳಲ್ಲಿ 25ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿ 9 ಚಿನ್ನ, 6 ಬೆಳ್ಳಿ, 2 ಕಂಚಿನ ಪದಕಗಳಿಗೆ ಕೊರಳೊಡ್ಡಿದ್ದಾರೆ.

ಜಾಗೃತಿಗಾಗಿ ಬೀದಿ ನಾಟಕ

‘ನನಗೆ ಸಂಶೋಧನೆಯಲ್ಲಿ ಹೆಚ್ಚು ಆಸಕ್ತಿ’ ಎನ್ನುವ ದೀಕ್ಷಾ, ಎಂಬಿಬಿಎಸ್ ಓದುವಾಗಲೇ ಹಲವು ರಾಜ್ಯಮಟ್ಟದ ಸಂಶೋಧನಾ ಶಿಬಿರಗಳಲ್ಲಿ ಭಾಗವಹಿಸಿದ್ದರು. ಕನ್ನಡ ರಾಜ್ಯೋತ್ಸವ, ವಿಶ್ವ ಮಧುಮೇಹ ದಿನಾಚರಣೆ, ವಿಶ್ವ ಆರೋಗ್ಯ ದಿನದಂತಹ ವಿಶೇಷ ದಿನಗಳಲ್ಲಿ ಸ್ವಯಂ ಸೇವಾ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ್ದಾರೆ.

ಕಾಲಾಂತರದಲ್ಲಿ ಬೀದಿನಾಟಕಗಳ ಮಹತ್ವ ಅರಿತು ಆ ಪ್ರಯೋಗದಲ್ಲೂ ಯಶಸ್ಸು ಕಂಡರು. ಸ್ನೇಹಿತರೊಂದಿಗೆ ಸೇರಿ ಬೀದಿನಾಟಕ ತಂಡ ಕಟ್ಟಿದರು. ನಾಟಕಗಳ ಮೂಲಕ ‘ಬಿಸಿಲಿನಲ್ಲಿ ದುಡಿಯುವ ಕಾರ್ಮಿಕರಿಗಾಗಿ ‘ಬೀಟ್ ದ ಹೀಟ್’, ವೈದ್ಯಕೀಯ ಕ್ಷೇತ್ರದ ಮಹತ್ವ ಸಾರುವ ‘ವೈದ್ಯ ವೈವಿಧ್ಯ’, ತಂಬಾಕು ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಲು ‘ನೋ ಟೊಬ್ಯಾಕೊ’, ಹೆಣ್ಣು ಶಿಶುಗಳ ರಕ್ಷಣೆ ಕುರಿತಾಗಿ ‘ಸೇವ್ ಗರ್ಲ್ ಚೈಲ್ಡ್’ ಮುಂತಾದ ಬೀದಿನಾಟಕಗಳನ್ನು ಪ್ರದರ್ಶಿಸಿದ್ದರು. ಗ್ರಾಮೀಣ ಪ್ರದೇಶಗಳ ಜನರ ಆರೋಗ್ಯ ಸೇವೆಗಾಗಿ ಸ್ವಗ್ರಾಮ ಕರೂರು, ಸಂತೇಬೆನ್ನೂರು, ಕೆರೆಬಿಳಚಿ, ಚೆನ್ನಗಿರಿ, ಕುಕ್ಕವಾಡಗಳಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಿದ್ದರು.

ಕಿರುಚಿತ್ರ ನಿರ್ಮಾಣದಲ್ಲೂ ಸೈ

ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕಿರುಚಿತ್ರಗಳ ನಿರ್ಮಾಣದಲ್ಲೂ ದೀಕ್ಷಾ ಸೈ ಎನಿಸಿಕೊಂಡಿದ್ದಾರೆ. ಅವರ ‘ಲಜಾರಿಯಸ್ ಸಿಂಡ್ರೋಮ್’ ಕಿರುಚಿತ್ರ ಹೆಸರುವಾಸಿಯಾಗಿದ್ದು, 2015ರಲ್ಲಿ ನಾಗಪುರದಲ್ಲಿ ನಡೆದ ‘ಕಿರು ವೈದ್ಯಕೀಯ ಚಿತ್ರ ಸ್ಪರ್ಧೆ’ಯಲ್ಲಿ ಉತ್ತಮ ವೈದ್ಯಕೀಯ ಕಿರುಚಿತ್ರ ಪ್ರಶಸ್ತಿ (ಪ್ರಥಮ ಬಹುಮಾನ), ಶಿವಮೊಗ್ಗದಲ್ಲಿ ಅಂಬೆಗಾಲು ಸಂಸ್ಥೆ ನಡೆಸಿದ ಕಿರುಚಿತ್ರಗಳ ಸ್ಪರ್ಧೆಯಲ್ಲಿ ‘ತೀರ್ಪುಗಾರರ ವಿಶೇಷ ಪುರಸ್ಕಾರ’ ಪಡೆದುಕೊಂಡಿದೆ.

‘ಶಾಲೆಗೆ ರಜೆ ಇದ್ದಿದ್ದರಿಂದ ಊರಿಗೆ ಹೋಗಿದ್ದೆವು. ಎಲ್ಲ ಸೇರಿ ಆಟವಾಡುತ್ತಿದ್ದಾಗ ಎಡವಿಬಿದ್ದೆ. ಆಗ ತುಂಬಾ ಹೊತ್ತು ಪ್ರಜ್ಞೆಯೇ ಇರಲಿಲ್ಲ. ಎಚ್ಚರವಾದಾಗ ತುಂಬಾ ಗಾಬರಿಯಾಗಿದ್ದೆ. ಆ ಘಟನೆಯಿಂದ ‘ಮನುಷ್ಯನಿಗೆ ಏಕೆ ಹೀಗಾಗುತ್ತೆ’ ಎಂಬ ಪ್ರಶ್ನೆ ನನ್ನನ್ನು ಕೊರೆಯಲಾರಂಭಿಸಿತು. ಅಂದಿನಿಂದ ಮನುಷ್ಯನ ದೇಹದ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ಆಸಕ್ತಿ ಹೆಚ್ಚಾಯಿತು. ಇಂಥ ಆಸಕ್ತಿಯಿಂದಲೇ ವೈದ್ಯಕೀಯ ಕ್ಷೇತ್ರ ಪ್ರವೇಶಕ್ಕೆ ನಿರ್ಧಾರ ಮಾಡಿದೆ. ಶಾಲಾ–ಕಾಲೇಜುಗಳಲ್ಲಿ ಪಾಠದ ಜತೆಗೆ ಇತರೆ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಅಪ್ಪ–ಅಮ್ಮ ಎಂದೂ ಅಡ್ಡಿಪಡಿಸಲಿಲ್ಲ. ಕಲಿಯಬೇಕೆನಿಸಿದ್ದನ್ನು ಕಲಿಯುತ್ತಾ, ಮಾಡಬೇಕು ಅನಿಸದ್ದನ್ನೆಲ್ಲಾ ಮಾಡುತ್ತಾ ಬಂದೆ. ಎಲ್ಲದಕ್ಕಿಂತ ಸಂತೋಷ ಕೊಟ್ಟಿದ್ದು ಕಿರುಚಿತ್ರ ನಿರ್ಮಾಣದಲ್ಲಿ. ಇದರಲ್ಲಿ ನಾನು ಮತ್ತು ನನ್ನ ಸ್ನೇಹಿತರೇ ಅಭಿನಯಿಸಿದ್ದೇವೆ’ ಎನ್ನುತ್ತಾ ಡಾಕ್ಟರ್ ಆದ ಬಗೆಯನ್ನು ವಿವರಿಸಿದರು ಡಾ.ದೀಕ್ಷಾ.

‘ಅಲೋಪಥಿ, ಹೋಮಿಯೋಪಥಿ, ಆಯುರ್ವೇದ... ಹೀಗೆ ನಾನಾ ವೈದ್ಯಕೀಯ ಪದ್ಧತಿಗಳನ್ನು ಜನರು ಅನುಸರಿಸುತ್ತಾರೆ. ಇದರಲ್ಲಿ ಯಾವುದೂ ಹೆಚ್ಚು ಕಡಿಮೆ ಎನ್ನುವಂತಿಲ್ಲ. ರೋಗಿಗೆ ವೈದ್ಯರ ಮೇಲೆ ವಿಶ್ವಾಸ ಬೇಕು ಅಷ್ಟೇ. ಆ ಮೂಲಕವೇ ಶೇ 50 ಕಾಯಿಲೆ ಕಡಿಮೆಯಾಗುತ್ತದೆ. ವೈದ್ಯರ ಸೂಚನೆಯ ಪ್ರಕಾರವೇ ಔಷಧ ತೆಗೆದುಕೊಳ್ಳುವುದು ಸರಿಯಾದ ವಿಧಾನ’ ಎಂದು ಸಲಹೆ ನೀಡುತ್ತಾರೆ ಅವರು.

ಲಜಾರಿಯಸ್ ಸಿಂಡ್ರೋಮ್ ಕಿರುಚಿತ್ರದ ಕುರಿತು

ಅಮ್ಮನ ಅತಿಯಾದ ಕಾಳಜಿಯನ್ನು ಇಷ್ಟಪಡದ ಮಗಳು ಒಂದುದಿನ ಮದ್ಯಸೇವಿಸಿ ನೃತ್ಯ ಮಾಡುವಾಗ ಮೇಜಿನ ಮೇಲಿಂದ ಬಿದ್ದು ತಲೆಗೆ ಪೆಟ್ಟು ಮಾಡಿಕೊಳ್ಳುತ್ತಾಳೆ. ಸ್ನೇಹಿತರು ಆಕೆಯನ್ನು ಆಸ್ಪತ್ರೆಗೆ ದಾಖಲಿಸುತ್ತಾರೆ. ಕೋಮಾ ಸ್ಥಿತಿ ತಲುಪುವ ಆಕೆಗೆ ಎಷ್ಟೇ ವೈದ್ಯೋಪಚಾರ ಮಾಡಿದರೂ ಪ್ರಯೋಜನವಾಗದೆ, ಶವಾಗಾರಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಆಕೆಗೆ ಜೀವ ಬರುತ್ತದೆ. ಮನೆಗೆ ಬಂದ ನಂತರ ಅಮ್ಮನೊಂದಿಗೆ ಅನ್ಯೋನ್ಯವಾಗಿ ಜೀವನ ನಡೆಸುತ್ತಾಳೆ. ತಾಯಿ ಪಾತ್ರದಲ್ಲಿ ದೀಕ್ಷಾ, ಇತರೆ ಪಾತ್ರಗಳಲ್ಲಿ ಅವರ ಸ್ನೇಹಿತರು ಅಭಿನಯಿಸಿದ್ದಾರೆ.

‘ಕೋಮಾ ಸ್ಥಿತಿ ತಲುಪಿರುವವರಿಗೆ ಸಿಆರ್ಪಿ (ಕಾರ್ಡಿಯೊ ಪಲ್ಮನರಿ ರಿಸಸಿಟೇಷನ್) ಚಿಕಿತ್ಸೆ ನೀಡಲಾಗುತ್ತದೆ. ಕೆಲವರು ಬೇಗ ಗುಣಮುಖರಾದರೆ ಮತ್ತೆ ಕೆಲವರು ತಡವಾಗಿ ಗುಣಮುಖರಾಗುತ್ತಾರೆ. ಆದರೆ ರೋಗಿಯ ಸಂಬಂಧಿಗಳು ಭರವಸೆ ಕಳೆದುಕೊಳ್ಳಬಾರದು ಎಂಬುದು ಸಾಕ್ಷ್ಯಚಿತ್ರದ ಆಶಯ. ಹಾಗೆಯೇ ತಾಯಿ–ಮಗಳ ಬಾಂಧವ್ಯವನ್ನೂ ತೋರಿಸಲಾಗಿದೆ’ ಎನ್ನುತ್ತಾರೆ ಡಾ.ದೀಕ್ಷಾ.

ಪುಟ್ಟ ಗ್ರಾಮದಿಂದ ಕಮಾಂಡೊ ಆಸ್ಪತ್ರೆವರೆಗೆ..

ಡಾ.ದೀಕ್ಷಾ ರಾಣೇಬೆನ್ನೂರು ತಾಲ್ಲೂಕಿನ ಕರೂರು ಗ್ರಾಮದವರು. ಸದ್ಯ ದಾವಣಗೆರೆಯಲ್ಲಿ ವಾಸವಾಗಿದ್ದಾರೆ. ತಂದೆ ಚಂದ್ರಕಾಂತ್ ಬಿ.ಎಂ. ಸಿವಿಲ್ ಎಂಜಿನಿಯರ್. ತಾಯಿ ಸುಜಾತಾ ಟಿ.ಕೆ. ಶಿಕ್ಷಕಿ. ದಾವಣಗೆರೆಯ ತರಳಬಾಳು ಅನುಭವ ಮಂಟಪದಲ್ಲಿ ಪ್ರೌಢಶಾಲೆ, ಮಂಗಳೂರಿನ ಎಕ್ಸ್ಪರ್ಟ್ ಪಿಯು ವಿಜ್ಞಾನ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ. ಪಿಯುನಲ್ಲಿ ಶೇಕಡ 93ರಷ್ಟು ಅಂಕ ಹಾಗೂ ಸಿಇಟಿಯಲ್ಲಿ 596ನೇ ರ್ಯಾಂಕ್ ಪಡೆಯುವ ಮೂಲಕ ದಾವಣಗೆರೆಯ ಜಗದ್ಗುರು ಜಯದೇವ ಮುರುಘರಾಜೇಂದ್ರ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ಗೆ ಪ್ರವೇಶ ಪಡೆದು ಮೊದಲ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸದ್ಯ ತೆಲಂಗಾಣದ ಗೋಲ್ಕೊಂಡ ಕಮಾಂಡೊ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.