ಸಂತ ವ್ಯಾಲಂಟೈನ್ಸ್ ನೆನಪಿನಲ್ಲಿ ಆಚರಿಸುವ ‘ಪ್ರೇಮಿಗಳ ದಿನ’ ಜಾಗತೀಕರಣದ ನಂತರ ಕೊಳ್ಳುಬಾಕ ಸಂಸ್ಕೃತಿಯನ್ನು ಪ್ರಚಾರಪಡಿಸುವ ದಿನವಾಗಿ ಬದಲಾಯಿತು. ಅದೇನೇ ಆಗಿರಲಿ, ಪ್ರೀತಿಸುವವರಿಗೆ ಪ್ರೀತಿಸುವ ಅನುಭೂತಿಯೊಡನೆ ಒಂದಷ್ಟು ಅಭಿವ್ಯಕ್ತಿಯನ್ನೂ ಪಡಿಸಲು ಈ ದಿನ (ಫೆಬ್ರುವರಿ 14) ಬಳಸಿಕೊಂಡರೆ ‘ವ್ಯಾಲಂಟೈನ್’ ನಿಜದ ನಗೆ ನಕ್ಕಾನು...

ನೂರಾರು ಜನರ ನಡುವೆ, ಆ ಜೋಡಿ ಕಂಗಳಿಗಾಗಿ ಹುಡುಕಾಟ ಇದ್ದೇ ಇರುತ್ತದೆ. ಕಂಗಳಲ್ಲಿ ಕಣ್ಣು ನೆಟ್ಟರೆ ಲೋಕವೇ ಆ ನೋಟದಲ್ಲಿ ಬಂಧಿಸಿಟ್ಟಂತೆ. ಕುಡಿನೋಟ, ಮುಗುಳಾಗಿ ಅರಳಲು ಅದೆಷ್ಟು ನೋಟಗಳ ಅದಲಿಬದಲಿಯಾಗಬೇಕೋ..? ಕಣ್ಣಲ್ಲಿ ಕಣ್ಣಿಡಲು, ಬೆರಳುಗಳ ಬೆಸೆಯಲು, ಸಂಗಾತಿಯ ಭುಜದ ಮೇಲೆ ತಲೆಯಾನಿ ಕೂರಲು.. ದೇಹದೊಳಗೆ ಅದೆಷ್ಟೆಲ್ಲ ಹಾರ್ಮೋನುಗಳು ಏಚುಪೇಚು ಬೀಳ್ತಾವೋ.

ಮನಸಿನಲ್ಲಂತೂ ತಣ್ಣನೆಯ ಸರೋವರದೊಳಗೆ ಕಲ್ಲೆಸೆದಂತೆ. ಅಲೆಗಳು ಮನವೆಂಬ ಕೇಂದ್ರದಿಂದ ಆರಂಭಿಸಿ, ಅಡಿಯಿಂದ ಮುಡಿಯುವರೆಗೂ ನಸುಕಂಪನ ಆವರಿಸುತ್ತದೆ. ಅದ್ಯಾಕೋ ಇಡೀ ವಿಶ್ವ ನಮಗಾಗಿಯೇ ಬೆಳಗನ್ನು ಸೃಷ್ಟಿಸಿದೆ. ಇಳಿ ಸಂಜೆಗಳಲ್ಲಿ ಕೈ ಹಿಡಿದು ಸಾಗಲೆಂದೇ ಸೂರ್ಯಾಸ್ತನಾಗುವುದು, ಚುಮುಚುಮು ಚಳಿಯಲ್ಲಿ ಬೈಟೂ ಟೀ ಕುಡಿಯದೇ ಇರುವ ಟೀಯನ್ನೇ ಬೈಟು ಮಾಡಿಕೊಂಡು ಕುಡಿಯುವುದು ಮತ್ತು ಅದಕ್ಕಾಗಿಯೇ ಚಳಿಗಾಲ ಬರುವುದು. ಗಾಢ ಕತ್ತಲೆಯಲ್ಲಿ ದೇವರ ಪ್ರಭಾವಳಿಯಂತೆ ಮುಖದ ತುಂಬೆಲ್ಲ ಮೊಬೈಲ್ ಫೋನಿನ ತಿಳಿನೀಲಿ ಬೆಳಕಿದ್ದರೆ, ಕಣ್ಣಂಚಿನಲ್ಲಿ ಸಂಗಾತಿಯ ಸಂದೇಶದ್ದೇ ಮಿಂಚು.

ಸಂದೇಶಗಳ ರವಾನೆಯಾಗುತ್ತಿರುವಾಗಲೂ ಮುಗಿಯದ ನಿರೀಕ್ಷೆಯೊಂದು ಸದಾ ಇದ್ದೇ ಇರುತ್ತದೆ. ಸ್ಕ್ರೀನ್ ಮಿನುಗಿದಾಗಲೆಲ್ಲ ತುಟಿಯಂಚಿನೊಳು ನಗುವೊಂದು ಲಾಸ್ಯವಾಡುತ್ತದೆ. ಈ ಎಮೊಜಿಗಳ ಹಾವಳಿ ಹೆಚ್ಚಾದಾಗಿನಿಂದ ಮುತ್ತಿಡುವುದೂ ಕಷ್ಟದ ಕೆಲಸವೇನಲ್ಲ, ಕಣ್ಣಲ್ಲೇ ಮುತ್ತಿಡಬಹುದು.ಒಂದು ಸಾಂಗತ್ಯಕ್ಕೆ, ಸಖ್ಯಕ್ಕೆ ಹಾತೊರೆಯುವವರ ಲೋಕವೇ ಹಾಗೆ. ಕನಸು, ಕನವರಿಕೆಗಳೆಲ್ಲ ವ್ಯಕ್ತಿಕೇಂದ್ರೀಕೃತವಾಗಿರುತ್ತವೆ. ಸಂಬಂಧವಿರದಿದ್ದರೂ ಅವರ ಹೆಸರನ್ನು ಸಂಭಾಷಣೆಯಲ್ಲಿ ತುರುವುದು, ನುಸುಳುವಂತೆ ಮಾಡುವ ಕಲೆ ಕಲೀತಾರೆ. ನಿದ್ದೆಯೆಂಬುದು ಹೊನ್ನಕಣಗಳಂತೆ ಕೆಲ ಕ್ಷಣಗಳಲ್ಲಿ ಮುಗಿಸಿಬಿಡುವುದೂ ಹೀಗೆ ಬೆಸೆದಿರಲು ಬಯಸುವುದರಿಂದ.

ಪ್ರತಿ ಉಸಿರಿನಲ್ಲೂ ನೆನಪನ್ನೇ ಪುಪ್ಪಸಗಳಲ್ಲಿ ತುಂಬಿಕೊಂಡು, ಒಂಟಿತನವನ್ನು ನಿಶ್ವಾಸದೊಂದಿಗೆ ಹೊರಬಿಡುವಂತೆ ಬದುಕುವ ಕಲೆಯನ್ನೂ ಪ್ರೀತಿ ಹೇಳಿಕೊಡುತ್ತದೆ. ಪ್ರೀತಿಯೆಂಬುದು ಒಬ್ಬರನ್ನು ಬಯಸುವುದಲ್ಲ, ಪಡೆಯುವುದಲ್ಲ, ಸ್ವಾಮ್ಯತ್ವ ಸಾಧಿಸಲು ಹವಣಿಸುವುದೂ ಅಲ್ಲ. ಪ್ರೀತಿಯೆಂದರೆ ಅರೆಬಿರಿದ ಪಾರಿಜಾತ, ಅರಳುವ ಮುನ್ನ ನಲುಗದಂತೆ ಮುಚ್ಚಟೆಯಿಂದ ಕಾಪಿಡಬೇಕಾದ ಭಾವ ಅದು.ಜೀವನದ ಪ್ರತಿ ಕ್ಷಣದಲ್ಲೂ, ವಿಶೇಷವಾಗಿ ಹತಾಶರಾದಾಗಲೆಲ್ಲ ಬೆರಳ ತುದಿ, ಅವರ ಫೋನ್ ನಂಬರ್ ಒತ್ತಿರಬೇಕು. ಮಾತು ಮುಗಿದಾದ ಮೇಲೆ ತುಟಿಯ ಮೇಲೆ ‘ಜಾನೆ ಕ್ಯೂಂ.. ದಿಲ್ ಕೆಹತಾ ಹೈ.. ತೂ ಹೈ ತೊ ಐ ವಿಲ್ ಬಿ ಆಲ್ರೈಟ್’ ಹಾಡು ಗುನುಗುವಂತಾಗಬೇಕು.

ಮುನಿಸಿನಿಂದ ಫೋನು ಇಕ್ಕರಿಸಿದರೂ, ಕುಕ್ಕಿದರೂ.. ಆಗಾಗ ಸ್ಕ್ರೀನ್ ಮೇಲೆ ಅವರ ನಂಬರ್ ಮೂಡಿದೆಯೇ ಎಂದು ಪರಿಶೀಲಿಸುವುದು, ಹಳೆಯ ಮೆಸೇಜುಗಳನ್ನು ಓದುತ್ತ, ಆಗಾಗ ಹನಿಗಣ್ಣಾಗುತ್ತ, ಹಳೆಯ ಜೋಕಿಗೆ ನಗುತ್ತ, ಕಳೆದ ಕ್ಷಣಗಳಲ್ಲಿ ಮತ್ತೆ ಏಕಾಂತವನ್ನು ಪಡೆಯುವುದು.ಪ್ರೀತಿಯೆಂಬುದು, ಇಬ್ಬರು ಕೂಡಿ, ಎಲ್ಲವನ್ನೂ ಕಳೆದುಕೊಂಡು ಒಂದೇ ಎನ್ನುವ ತಾದಾತ್ಮ್ಯ ಬೆಳೆಸಿಕೊಳ್ಳುವುದು ಬರಿಯ ಕಾಯಕ್ಕೆ ಸಂಬಂಧಿಸಿದ್ದಲ್ಲ. ಖುಷಿಯಾದಾಗ ಹಂಚಿಕೊಳ್ಳಲು ಮೊದಲು ನೆನಪಾಗುವ, ದುಃಖವಾದಾಗ ನೀನಿದ್ದರೆ.. ಎಂದೆನಿಸುವ ಎಲ್ಲ ಬಾಂಧವ್ಯಗಳೂ ಪ್ರೀತಿಯಿಂದಲೇ ಬೆಸೆಯಲಾಗಿವೆ. ಪರಿಚಯ, ಸ್ನೇಹವಾಗಿ, ಸ್ನೇಹ, ಪ್ರೀತಿಗೆ ತಿರುಗಿ, ಮದುವೆಯಲ್ಲಿ ಕೊನೆಗೊಂಡಿತು ಎಂದ್ಹೇಳುವುದೇ ತಪ್ಪು, ಮದುವೆಯಿಂದ ಮರು ಆರಂಭವಾಗುತ್ತದೆ. ಅದೊಂದು ಪ್ರೇಮಯಾನ.

ಪ್ರೀತಿ, ಮಮತೆ, ಅಸೂಯೆ, ಅಸಹನೆ, ಅಸಮಾಧಾನ, ಅವಲಂಬನೆ, ಸಂಯಮ, ಔದಾರ್ಯ ಎಲ್ಲವನ್ನೂ ಹೇಳಿಕೊಡುವ ಹಂಚಿಕೊಳ್ಳಲು ತಿಳಿಸುವ ಈ ಬಾಂಧವ್ಯಕ್ಕೆ ಒಂದು ದಿನ ಇದೆ ಅಂತ ಗೊತ್ತಾಗಿದ್ದೇ ಜಾಗತೀಕರಣದ ನಂತರ. ಅಲ್ಲಿಯವರೆಗೂ ಅನುದಿನವೂ ನಮ್ಮದೇ ಎಂದು ಸಂಭ್ರಮಿಸುತ್ತಿದ್ದವರು, ಇದ್ದಕ್ಕಿದ್ದಂತೆ ಆರ್ಚಿಸ್ ಮಳಿಗೆಗಳನ್ನು ಆವರಿಸಿಕೊಂಡರು. ಕಾರ್ಡು, ಚಾಕಲೇಟು, ಟೆಡ್ಡಿಬೇರ್ಗಳ ವಿನಿಮಯ ಸಾಕಷ್ಟಾಯಿತು. ಇಂತಿಪ್ಪ ಕೊಳ್ಳುಬಾಕ ಸಂಸ್ಕೃತಿ ಕೆಂಗುಲಾಬಿಯಿಂದ ವಜ್ರದಾಭರಣದವರೆಗೂ ಉಡುಗೊರೆಯಾಗಿ ಬದಲಾಗಿವೆ.

ಬಾಂಧವ್ಯ ಅಮೂಲ್ಯವಾದುದು. ಆದರೆ ಮುನಿಸಿಗೊಂದು, ನಗುವಿಗೊಂದು, ಸಾಂಗತ್ಯಕ್ಕೆ ಒಂದು ಹೀಗೆ ಹತ್ತುಹಲವು ಕಾರಣಗಳನ್ನಿರಿಸಿ, ಕೊಡುಗೆ ಕೊಡುವುದು ಮೊದಲಾದಾಗಲೇ ಪ್ರೀತಿ, ಆತ್ಮಸಂಗಾತದ ಹಂತದಿಂದ ಹೊರ ಆವರಣಕ್ಕೆ ಬಂತು.‘ನಾನು ಬಡವಿ, ಆತ ಬಡವ ಒಲವೇ ನಮ್ಮ ಬದುಕು’ ಹಾಡು ಪಾಡಾಗುವ ಮೊದಲೇ ಎಲ್ಲವೂ ಹಿಂದೆಮುಂದೆಯಾಗತೊಡಗಿತು. ಅಮೂಲ್ಯವಾದುದಕ್ಕೆ ಮೌಲ್ಯ ಕಟ್ಟತೊಡಗಿದರೆ ವಾದ ವಿವಾದಗಳು ಇಲ್ಲದೇ ಇರುತ್ತವೆಯೇ?

ನಮ್ಮ ಹಿರಿಯರ ಮದುವೆ ವಾರ್ಷಿಕೋತ್ಸವದ 50ರ ಸಂಭ್ರಮದಲ್ಲಿ ಸಡಗರದಿಂದ ಓಡಾಡುವ ನಾವು, ನಮ್ಮ 20ನೇ ವರ್ಷ, ಹತ್ತನೇ ವರ್ಷ, ಅಂತಾಗಲೇ ಎಣಿಕೆ ಹಾಕುತ್ತಿರುತ್ತೇವೆ. ನಮ್ಮ ಮುಂದಿನವರಂತೂ ಪ್ರತಿವರ್ಷವೂ ಕೊಡುಗೆಯೊಂದಿಗೆ ನೀಡುವವರೂ, ಪಡೆಯುವವರೂ ಬದಲಾಗುತ್ತಿದ್ದಾರೆ. ಸಂಭ್ರಮಾಚರಣೆ ಹೆಚ್ಚಿದಷ್ಟೂ ಬಾಂಧವ್ಯಗಳಲ್ಲಿ ಬಿರುಕು ಹೆಚ್ಚುತ್ತಿದೆಯೇ?

ಅನುದಿನದ ಅನುಬಂಧ ಒಂದು ದಿನಕ್ಕೆ ತಂದು ನಿಲ್ಲಿಸಿದ್ದೇ ತಪ್ಪಾಯಿತೇ? ಇಡೀ ವರ್ಷದ ಗುನ್ಹಾಗಳನ್ನೆಲ್ಲ ಮಾಫ್ ಮಾಡು ಅಂತ ವರ್ಷಕ್ಕೆ ಒಂದು ಕೊಡುಗೆ ನೀಡಿದರೆ ಪಿಸುಮಾತನಾಡುತ್ತ, ಮಿಡಿಯುತ್ತಿದ್ದ ಹೃದಯದ ಬಿರುಕುಗಳಿಗೆಲ್ಲ ತೇಪೆ ಹಾಕಲಾದೀತೆ?

ಒಂದೇ ಒಂದು ಕ್ಷಣ ಜೊತೆಗಿರಲು ಹಾತೊರೆಯುತ್ತಿದ್ದವರು, ಜೀವನಪೂರ್ತಿ ಜೊತೆಗಿದ್ದಾಗ ಮತ್ತದೇ ಒಂದು ಕ್ಷಣಕ್ಕೆ ಕಣ್ಬಾಯಿ ಬಿಡುವಂತಾಗುತ್ತದೆ. ಒಂದಷ್ಟು ಬಿಡುವು ಮಾಡಿಕೊಂಡು, ಮತ್ತೊಮ್ಮೆ ಮನದನ್ನೆಯ, ಸಂಗಾತಿಯ ಕಂಗಳಲ್ಲಿ ಕಳೆದುಹೋಗಲು, ಒಂದಷ್ಟು ಚಂದದ ನೆನಪುಗಳನ್ನು ಕೂಡಿಡಲು, ಮತ್ತದೇ ಸಂಜೆ, ಅದೇ ಏಕಾಂತ ಅಂತ ಹಾಡುಗುನುಗಲು ಇಂಥ ಸಂದರ್ಭಗಳನ್ನು ಕೂಡಿಡಲೇಬೇಕು.

ಒಂದು ದಿನ ಬಂದಿದೆ. ಎಲ್ಲವನ್ನೂ ಬದಿಗಿರಿಸಿ ಒಂದಷ್ಟು ಸಮಯ ಬಿಡುವು ಮಾಡಿಕೊಳ್ಳಿ. ಪ್ರೀತಿ ಹಂಚಿದ ಸೇಂಟ್ ವ್ಯಾಲಂಟೈನ್ ಹೆಸರಿನಲ್ಲಿ ನೀವೂ ಒಂದಿನಿತು ಪ್ರೀತಿ ಹಂಚಿ. ಪ್ರೀತಿಸುವವರಿಗೆಲ್ಲ ಶುಭಕೋರಿ. ಪ್ರೀತಿಯ ಕೆಂಬಣ್ಣೆ ಎದೆಯಲ್ಲಿ ಹಸಿಹಸಿರು ನೆನಪುಗಳುಳಿಸಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.