ಮನುಷ್ಯ ಜೀವಿತದ ಎಲ್ಲ ಅವಸ್ಥಾಂತರಗಳಲ್ಲಿ ಹಾಸುಹೊಕ್ಕಾಗಿರುವ ಬೊಂಬೆ ಪ್ರದರ್ಶನ ಇವತ್ತು ಅಳಿವಿನಂಚಿನಲ್ಲಿರುವ ಕಲಾಪ್ರಕಾರವಾಗಿದೆ. ಈ ಕಲಾಪ್ರಕಾರದ ಹಿಂದಿರುವ ಸಮಾಜೋಸಾಂಸ್ಕೃತಿಕ ಕಾಳಜಿಗಳನ್ನು ಜನಸಮುದಾಯದ ಮುನ್ನೆಲೆಗೆ ತರುವ ಪ್ರಯತ್ನವನ್ನು ಭಾರತೀಯ ವಿದ್ಯಾಭವನ ಮಾಡುತ್ತಿದ್ದು, ಇನ್ಫೊಸಿಸ್ ಫೌಂಡೇಷನ್ ಸಹಯೋಗದೊಂದಿಗೆ ಏಳು ದಿನಗಳ ಬೊಂಬೆ ಹಬ್ಬವನ್ನು ಮಾರ್ಚ್ 12ರಿಂದ 18ರವರೆಗೆ ಹಮ್ಮಿಕೊಂಡಿದೆ...

‘ಬೊಂಬೆಯಾಟವಯ್ಯಾ ಈ ಬ್ರಹ್ಮಾಂಡವೆ ಆ ದೇವನಾಡುವಾ...’ ಎಂದು ಎಲ್ಲರ ಬಾಯಲ್ಲಿ ಹಾಡಿಕೊಂಡಿರುವ ದಾಸರ ಪದ್ಯವಿದೆ. ದಾಸರು ಇಲ್ಲಿ ಬೊಂಬೆ, ಬೊಂಬೆಯಾಟ ಎರಡು ಶಬ್ದಗಳನ್ನು ಬಳಸುತ್ತ ಅವುಗಳನ್ನು ನಮ್ಮೆಲ್ಲ ಲೌಕಿಕ ಬದುಕಿಗೆ ವಿಸ್ತರಿಸಿಕೊಂಡಿದ್ದಾರೆ. ಅದೆಲ್ಲ ದೇವನಿಗೆ ಲೀಲೆ. ‘ಬೊಂಬೆ’ ಎನ್ನುವುದು ಹೆಚ್ಚು ವಿಸ್ತಾರದಿಂದ ಮಕ್ಕಳು ಆಡುವ ಆಟಿಕೆಗಳಿಂದ ಹಿಡಿದು ನಾನಾ ಬಗೆಯ ಆಚರಣೆಗಳಲ್ಲಿ ದೊಡ್ಡವರು ಬಳಸುವ ಆಕೃತಿಗಳವರೆಗೆ ಸಮಾವೇಶಗೊಳ್ಳುತ್ತದೆ. ಅದೇ ಬೊಂಬೆಯಾಟ ಎನ್ನುವುದು ಬಹಳಷ್ಟು ಸಲ ತೊಗಲು ಬೊಂಬೆಯಾಟ, ರಂಗದಲ್ಲಿ ವಿಭಿನ್ನ ಪಾತ್ರಗಳ ರೂಪದಲ್ಲಿ ತಂದುಕೊಳ್ಳುವ ಆಕೃತಿಗಳನ್ನು ಕುರಿತಾಗಿ ಅನ್ವಯಿಸಿಕೊಳ್ಳಬಹುದಾದುದು. ಮಕ್ಕಳೂ ಬೊಂಬೆಗಳನ್ನು ಇರಿಸಿಕೊಂಡು ನಾನಾ ಬಗೆಯಲ್ಲಿ ಆಡುವುದು ಸರ್ವೇಸಾಮಾನ್ಯ. ಒಂದಿಷ್ಟು ಹೊತ್ತು ಉತ್ಸಾಹದಿಂದ ಆಟವಾಡಿ, ನಂತರ ಎಲ್ಲ ಬಿಸುಡಿ ಹೋಗಿಬಿಡುತ್ತಾರೆ. ಮನುಷ್ಯನ ಬದುಕಿನ ಸಾರವೂ ಇದೇ. ದೇವನ ಲೀಲೆಯೂ ಇದೇ ಎಂದು ದಾಸರು ಹೇಳಿದಂತಿದೆ. ಬೊಂಬೆ ಜಗತ್ತಿನಾದ್ಯಂತ ಎಲ್ಲ ಸಂಸ್ಕೃತಿಗಳಲ್ಲೂ ಒಂದಲ್ಲ ಒಂದು ಬಗೆಯಲ್ಲಿ ಕಾಣಬರುವುದೇ. ಆದಿ ಮಾನವರಿಂದ ಇಂದಿನ ನಮ್ಮಗಳವರೆಗೆ ಈ ಬೊಂಬೆಯ ಪಯಣ ಬಲು ವಿಸ್ತಾರವಾದುದು. ಆದಿಮಾನವರ ಆಚರಣೆಯಲ್ಲಿ ಕಾಣಿಸಿಕೊಳ್ಳುವ ತೀರ ಗಂಭೀರವಾದ, ಅನೇಕ ಸಲ ಅಕರಾಳ ವಿಕರಾಳ ಅಂದರೂ ಆದೀತು - ಅಂಥದ್ದರಿಂದ ಹಿಡಿದು, ಇಂದು ಆಡಂಬರವಾಗಿಯೋ ಒಳ್ಳೆಯ ಕಲಾತ್ಮಕ ಹವ್ಯಾಸವಾಗಿಯೋ, ಶ್ರೀಮಂತರ ಶೋಕಿಯಾಗಿಯೋ ಶೋಕೇಸಿನಲ್ಲಿ ತರಹೇವಾರಿಯಾಗಿ ಕುಳಿತು, ನಿಂತು, ನಾನಾ ಭಂಗಿಯಲ್ಲಿ ವಾಲಿಕೊಂಡು ಕಾಣುವ ಬೊಂಬೆಗಳವರೆಗೆ ಈ ಪಯಣ ನಮ್ಮ ನಡುವೆ ಸದ್ದಿಲ್ಲದಂತೆ ಸಾಗಿಬಂದುಬಿಟ್ಟಿದೆ.

ಮನುಷ್ಯನಿಗೆ ತಾನಿದ್ದರಷ್ಟೇ ಆಗದು, ತನ್ನ ಹಾಗೆ ಪ್ರತಿರೂಪವಾಗಿ ಈ ಜಗತ್ತು ಮತ್ತೆ ಮತ್ತೆ ಅವತರಿಸುತ್ತಿರಬೇಕು!

ನಮ್ಮೂರು ನವಲಗುಂದದಲ್ಲಿ ‘ಚಂಗಳಿಕೆವ್ವ’ ಎಂಬೊಂದು ಆಚರಣೆ ಶ್ರಾವಣಮಾಸದಲ್ಲಿ ವಿಜೃಂಭಣೆಯಿಂದ ಹೆಂಗಳೆಯರ ನಡುವೆ ನಡೆಯುತ್ತಿತ್ತು. ಈಗ ಸಾಕಷ್ಟು ಮಸುಕಾಗಿಹೋಗಿದೆ. ಶಿರಿಯಾಳ ಚಂಗಳೆ ಶಿವಭಕ್ತರಾಗಿ ನಮ್ಮೆಲ್ಲರಿಗೆ ಗೊತ್ತು. ಈ ಆಚರಣೆಯಲ್ಲಿ ವಿಚಿತ್ರವೆಂಬಂತೆ ಜನ ಚೆಂಗಳೆಯನ್ನು ಮಾತ್ರ ಉಳಿಸಿಕೊಂಡುಬಿಟ್ಟಿದ್ದಾರೆ. ‘ಏನ್ ಚೆಂಗಳಿಕೆವ್ವ ಆಗ್ಯಾಳ ನೋಡವಾ’ ಎಂದು ಚೆಂದದ ಹುಡುಗಿಯನ್ನೋ ಹೆಣ್ಣುಮಗಳನ್ನೋ ಹಾಡಿಹೊಗಳುವುದಕ್ಕೆ ಬಳಕೆಯಾಗುತ್ತಿರುವ ಈ ಚೆಂಗಳಿಕೆ, ಬಲು ಚೆಲುವಿನ ಹೆಣ್ಣುಮಗಳು. ಅವಳು ತಾಯಿಯಾಗಿ ಪುಟಾಣಿ ಚಿಲ್ಲಾಳನನ್ನು ತೊಡೆಯ ಮೇಲಿರಿಸಿಕೊಂಡು ಮತ್ತಷ್ಟು ಆಪ್ತಳು. ಅವಳು ಶಿವನ ಬೇಡಿಕೆಗಾಗಿ ತನ್ನ ಒಡಲಕುಡಿಯಾದ ಚಿಲ್ಲಾಳನನ್ನೇ ಅಡುಗೆ ಮಾಡಿಕೊಡುವ ಕತೆಯೇ ಈ ಅಚರಣೆಯಲ್ಲಿ, ಬಲು ವಿಶಿಷ್ಟ ಧಾಟಿಯಲ್ಲಿ ಕೇಳುತ್ತದೆ. ಚೆಂಗಳೆಯನ್ನು ಬಲು ಚೆಂದದಿಂದ, ಒಳ್ಳೇ ಭರ್ಜರಿ ಬೆಲೆಯ ಸೀರೆಯನ್ನು ಉಡಿಸಿ ಸಿಂಗಾರವಾಗಿ ಕೂರಿಸುವುದಿದೆ. ಅದೊಂದು ಸೊಗಸಿನ ಪ್ರದರ್ಶನಾಲಯವು ಪ್ರತಿ ಸೋಮವಾರ ನಮ್ಮೂರಿನಲ್ಲಿ ತೆರೆದುಕೊಳ್ಳುತ್ತದೆ. ಅವಳ ತೊಡೆಯ ಮೇಲೆ ಚಿಲ್ಲಾಳ ಪುಟ್ಟ ಮಗುವಾಗಿ ಎಲ್ಲರನ್ನೂ ಆಕರ್ಷಿಸುವವನಾಗಿದ್ದಾನೆ.

ನನಗೆ ಪರಿಚಯದ ಒಂದು ಮನೆಯಲ್ಲಿ ಮನೆಯ ಯಜಮಾನಿ, ವೃದ್ಧೆ ಈ ಚಿಲ್ಲಾಳ ಬೊಂಬೆಯನ್ನು ತನ್ನ ಕರುಳ ಕುಡಿಯ ಹಾಗೇ ಹಚ್ಚಿಕೊಂಡಿದ್ದಳು. ಅವಳು ತೀರಿಕೊಂಡಾಗ ಮನೆಯವರು ಅವಳ ಪಕ್ಕದಲ್ಲಿ ಆ ಬೊಂಬೆಯನ್ನು ಇರಿಸಿ ಫೋಟೊ ತೆಗೆಸಿ ತೃಪ್ತಿಪಟ್ಟುಕೊಂಡರು. ಬೊಂಬೆಗಳ ಒಡನಾಟ ಹೇಗೆಲ್ಲ ಈ ಮನುಷ್ಯನೊಡನೆ ಇರಬಲ್ಲುದು ಎನ್ನುವುದಕ್ಕೆ ಇದೊಂದು ಸುಮ್ಮನೆ ಉದಾಹರಣೆ.

ಬೊಂಬೆ ಎಂದರೆ ಸಾಮಾನ್ಯವಾಗಿ ಮಕ್ಕಳು ಆಡಿಕೊಳ್ಳುವ ಪುಟ್ಟ ಆಕೃತಿಗಳೇ ಎಂದು ತಟಕ್ಕನೆ ನಾವು ಮನದಲ್ಲಿ ತಂದುಕೊಂಡುಬಿಡುತ್ತೇವೆ. ಶಬ್ದಕೋಶಗಳು ತಟಕ್ಕನೆ ಹೇಳುವ ಅರ್ಥವೂ ಇದೇ. ಇಂಗ್ಲಿಷಿನ Doll ಎನ್ನುವ ಶಬ್ದವೂ ಇದನ್ನೇ ಹೇಳುತ್ತದೆ. ಮನುಷ್ಯನ ಕಿರಿದಾದ ಪ್ರತಿರೂಪ ಎನ್ನುವುದನ್ನೂ ತಟಕ್ಕನೆಯೇ ಸೇರಿಸುವುದಿದೆ. ಆದರೆ ನಮ್ಮ ವ್ಯವಹಾರಗಳಲ್ಲಿ ನಾವು ಬೊಂಬೆಯನ್ನು ಹೀಗೆ ನಿಗದಿತ ಒಂದೇ ಅರ್ಥದಲ್ಲಿ ಬಳಸುತ್ತಿಲ್ಲ. ಅದು ಕೇವಲ ಮಾನವ ಪ್ರತಿರೂಪವೇ ಆಗಬೇಕಿಲ್ಲ. ಪ್ರಾಣಿ ಪಕ್ಷಿ ಎಲ್ಲವೂ ಒಳಗೊಂಡಾವು.

‘ಟೆಡ್ಡಿ ಬೇರ್’ ಅಮೆರಿಕದ ಮಾರುಕಟ್ಟೆಯಲ್ಲಿ ಕಾಲಿಟ್ಟುದು ಇಂದು ವಿಶ್ವದಾದ್ಯಂತ ಪರಿಚಿತವಾಗಿಬಿಟ್ಟಿದೆ. ಅಮೆರಿಕದ ಪ್ರೆಸಿಡೆಂಟ್ ಥಿಯೋಡೋರ್ ರೂಸ್‌ವೆಲ್ಟ್ ಬದುಕಿನಲ್ಲಿ ಬೇಟೆಯಾಡಲು ಹೋಗಿದ್ದ. ಅವನಿಗಾಗಿ ಒಂದು ಪುಟ್ಟ ಕರಡಿಯನ್ನು ಮರಕ್ಕೆ ಕಟ್ಟಿಹಾಕಿ ಶೂಟ್ ಮಾಡಲು ಅಣಿಗೊಳಿಸಿದುದನ್ನು ನೋಡಿ, ಅದರ ವೇದನೆಯನ್ನು ನೋಡಲಾರದೆ ‘ಕೂಡಲೇ ಅದನ್ನು ಮುಗಿಸಿಬಿಡಿ’ ಎಂದು ಹೇಳಿಬಿಟ್ಟಿದ್ದ. ಅದು ಕ್ಲಿಫ್‍ಬೋರ್ಡ್ ಬೆರ್ರಿಮನ್ ಎನ್ನುವ ವ್ಯಂಗ್ಯಚಿತ್ರಕಾರನಿಂದ ಎಲ್ಲೆಡೆ ಬೆಳಗಾಗುವದರಲ್ಲೆ ಸುದ್ದಿ ಮಾಡಿಬಿಟ್ಟಿತು.

ಇದೇ ಸ್ಫೂರ್ತಿಯಾಗಿ ಆ ಸತ್ತುಹೋದ ಕರಡಿ ಟೆಡ್ಡಿ ಬೇರ್ ಆಗಿ ಇಂದಿಗೂ ಪ್ರಪಂಚದಾದ್ಯಂತ ಉಳಿದುಕೊಂಡೇ ಬಂದಿದೆ. ಅಮೆರಿಕದಲ್ಲೂ, ಜರ್ಮನಿಯಲ್ಲೂ ಏಕಕಾಲಕ್ಕೆ ಬೊಂಬೆಯಾಗಿ ಮಾರುಕಟ್ಟೆಗೆ ಕಾಲಿಟ್ಟ ಟೆಡ್ಡಿ ಬೇರ್ ಇಂದು ಪುಟಾಣಿಗಳ ಆಟಕ್ಕೆ ಎಷ್ಟು ಒದಗಿದೆಯೋ, ಅಷ್ಟೇ ಬಲು ದೊಡ್ಡ ದೊಡ್ಡ ಆಕೃತಿ ತಳೆದು ಮನುಷ್ಯರ ಪಕ್ಕಕ್ಕೆ ಅಕ್ಕರೆಯ ಸಂಗಾತಿ ಆಗಿಬಿಟ್ಟಿದೆ. ಬೊಂಬೆ ಪುಟ್ಟದೆ, ಹಾಗಿದ್ದರೆ? ಮನುಷ್ಯ ಹೇಗೆಲ್ಲ, ಏನೇನೆಲ್ಲ ಭಾವಿಸಿಕೊಳ್ಳುತ್ತಾನೋ ಹಾಗೆಲ್ಲ ಈ ಬೊಂಬೆ ಅವತರಿಸುತ್ತ ಬಂದಿದೆ.

ಬೊಂಬೆ ಮಣ್ಣಿನಲ್ಲೂ ಅರಳೀತು, ಕಟ್ಟಿಗೆಯಲ್ಲೂ ರೂಪು ತಳೆದೀತು, ಹುಲ್ಲು ಕಸಕಡ್ಡಿಗಳಲ್ಲೂ ಆಕಾರ ಪಡೆದುಕೊಂಡೀತು, ತ್ವಚೆಯಲ್ಲೂ ಆಕೃತಿಗೊಂಡೀತು. ವೈವಿಧ್ಯಮಯ ವರ್ಣಗಾರಿಕೆಯಲ್ಲಿ ಅಂದಗೊಂಡೀತು, ವೇಷಭೂಷಣಗಳನ್ನು ಕೇಳುವುದೇ ಬೇಡ. ಅದು ಮನುಷ್ಯನಲ್ಲಿನ ಎಷ್ಟೆಲ್ಲ ಭಾವ ಲೋಕವಿದೆಯೊ ಅದನ್ನೆಲ್ಲ ಅಭಿವ್ಯಕ್ತಿಸಲೂ ತೊಡಗೀತು. ಹೌದೇ ಹೌದು. ಸಿಟ್ಟಿಗೆದ್ದೀತು, ಅತ್ತೀತು, ಕೀಲಿಕೊಟ್ಟೊಡನೆ ಗೋಣು ಹಾಕಿ ಕುಣಿದಾಡೀತು, ಪಕಪಕನೆ ನಕ್ಕೀತು, ಏನು ಮಾಡೀತು. ಏನು ಇಲ್ಲದೆ ಮೌನವನ್ನೇ ತಾಳೀತು!

ಮೈಸೂರು ದಸರೆಯಲ್ಲಿ ಮನೆಮನೆಯಲ್ಲಿ ಹಬ್ಬವೇ ಆಗಿ ಈ ಬೊಂಬೆಯ ದೊಡ್ಡ ಲೋಕವೇ ಇಳಿದುಬಿಡುತ್ತದೆ. ಇಲ್ಲಿ ರಾಜರಾಣಿಯಿಂದ ಹಿಡಿದು ಎಷ್ಟೊಂದು ಬಗೆಯ ರೂಪ ವೈವಿಧ್ಯಗಳು. ಮನುಷ್ಯನ ಪ್ರಪಂಚವೇ ಮಿನಿ ಮನೆಯಾಗಿ, ಊರಾಗಿ ಕಂಡೀತು. ಇದನ್ನೆಲ್ಲ ಒಳ್ಳೇ ಉತ್ಸಾಹದಿಂದ ಮಾಡುವವರು ದೊಡ್ಡವರೇ. ಪರಂಪರೆಯಿಂದ, ತಾತ ಮುತ್ತಾತನ ಕಾಲದಿಂದ ಈ ಬೊಂಬೆಗಳನ್ನು ಜತನದಿಂದ ಪೆಟ್ಟಿಗೆ
ಯಲ್ಲಿ ಕಾಯ್ದಿಟ್ಟುಕೊಂಡು ಬಂದಿರುವ ಅವಿನಾಭಾವ ಉಂಟು ಮಾರಾಯರೇ.

ಎರಡು ಮೂರು ಇಂಚುಗಳ ಬಲು ವಿವರಗಳನ್ನೊಳಗೊಂಡ ದೇಶವಿದೇಶದವರನ್ನೆಲ್ಲ ಸೆಳೆದಿರುವ ಪಶ್ಚಿಮಬಂಗಾಳದ ಕೃಷ್ಣಾನಗರದ ಮಣ್ಣಿನ ಬೊಂಬೆಗಳು, ಬಣ್ಣದಿಂದಲೇ ಸೆಳೆಯುವ ವಾರಾಣಾಸಿಯ ಕಟ್ಟಿಗೆಯ ಬೊಂಬೆಗಳು, ಆಂಧ್ರದ ಕೊಂಡಪಲ್ಲಿಯ ಸೊಗಸಿನ ಕಟ್ಟಿಗೆ ಬೊಂಬೆಗಳು, ಕರ್ನಾಟಕದ ಬೊಂಬೆಗಳ ನಗರವೆಂದೇ ಹೆಸರಾದ ಚನ್ನಪಟ್ಟಣದ ಕಟ್ಟಿಗೆಯ ಬಲು ಹಗುರದ ನಾನಾ ಬಗೆಯ ಬೊಂಬೆಗಳು, ಕಿನ್ನಾಳದ ವಿಜಯನಗರದ ಕಾಲದವರೆಗೂ ಇತಿಹಾಸ ಹೇಳುವ ಕಟ್ಟಿಗೆಯ ಬೊಂಬೆಗಳು ಹೀಗೆ ಭಾರತದ ಬೊಂಬೆಗಳ ಲೋಕ ಸಾಕಷ್ಟು ಕಾಣಿಸುತ್ತದೆ. ಅದು ತಕ್ಕುದಾದ ಪೋಷಣೆಯಿಲ್ಲದೆ ಬಳಲಿದೆ ಕೂಡ.

ಯಮನೂರ ಜಾತ್ರೆಯಲ್ಲಿ ಕಾಣಿಸುತ್ತಿದ್ದ ಕಿಟ್ಟದ ಗೊಂಬೆ ಈಗ ಮರೆಯಾಗುತ್ತ ಬಂದಿದೆ. ಸಗಣಿ, ಹರಿದ ಅರಿವೆಗಳಿಂದಲೇ ತಯಾರಾಗುತ್ತಿದ್ದ ಈ ಬೊಂಬೆಗಳು ಇನ್ನೊಂದು ಲೋಕಕ್ಕೆ ಕರೆದೊಯ್ಯುತ್ತಿದ್ದವು. ಮೈಸೂರು ಕಡೆಯ ಕಟ್ಟಿಗೆಯ ಕಪ್ಪು ಕಪ್ಪು ಬೊಂಬೆಗಳು ನಮ್ಮ ಒಂದು ತಲೆಮಾರಿನ ಜನಕ್ಕೆ ಚಿರಪರಿಚಿತವಾಗಿದ್ದವು. ಧರ್ಮಸ್ಥಳದ ಹತ್ತಿರ ವರ್ಷದುದ್ದಕ್ಕೂ ಯಾವುಯಾವುದೊ ಹರಕೆಗಳಿಗಾಗಿ ಮಣ್ಣಿನ ಬೊಂಬೆಗಳನ್ನು ಮಾಡುವುದಿದೆ.

ರಂಗವೇರಿ ತಮ್ಮದೇ ವೈಶಿಷ್ಟ್ಯದಿಂದ ಜನಸಾಗರವನ್ನು ಸೆಳೆದ, ಇಂದಿನ ಅನಿಮೇಷನ್ ಲೋಕದ ಮೊದಲ ಹೆಜ್ಜೆಯಾದ ತೊಗಲುಬೊಂಬೆಯಾಟದ ಬೊಂಬೆಗಳ ಲೋಕವೇ ಇನ್ನೊಂದು. ಕಟ್ಟಿಗೆಯ ಬೊಂಬೆಗಳನ್ನು ಕೂಡ ಸೂತ್ರದ ಬೊಂಬೆಯಾಗಿ ಆಡುವುದು ನಮ್ಮ ನಡುವಿದೆ. ಇಲ್ಲೆಲ್ಲ ರಾಮಾಯಣ ಮಹಾಭಾರತದ ಮಹಾ ಮಹಾ ನಾಯಕರ ರೂಪತಳೆದು ಬೊಂಬೆಗಳು ಅವತರಿಸಬೇಕು.

ಬೊಂಬೆಯಲೋಕ ಎಂದಿಗೂ ಮುಗಿಯುವುದಲ್ಲ. ಇಂದು ಬಲು ನಾಜೂಕು ಬಾರ್ಬಿ ಬೊಂಬೆಯವರೆಗೆ ಈ ಬೊಂಬೆಯ ಪಯಣ ಸಾಗಿ ಬಂದು ದೊಡ್ಡ ಇತಿಹಾಸವನ್ನೇ ಸೃಷ್ಟಿಸಿದೆ. ಇವುಗಳ ಅಧ್ಯಯನ, ಬೆರಗಿನ ಅವಲೋಕದನಲ್ಲೇ ಮುಳಗಿರುವ ಅನೇಕರು ನಮ್ಮ ನಡುವಿದ್ದಾರೆ. ಇರಲೇಬೇಕು. ಇದೂ ಗಂಭೀರ ಅಧ್ಯಯನದ ರಂಗವೇ ಈಗ, ನಿಸ್ಸಂಶಯ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.