ಮನೆಯಂಗಳಕ್ಕೆ ಗೆಜ್ಜೆನಾದದೊಂದಿಗೆ ‘ರಾಧಾಕೃಷ್ಣ’ರ ಪ್ರವೇಶವಾಗಿತ್ತು. ಹೊರಾಂಗಣದಲ್ಲಿ ಹೆಜ್ಜೆ ಹಾಕುತ್ತಿದ್ದ ಯಕ್ಷಗಾನ ಕಲಾವಿದರು ಚಾವಡಿಗೆ ಅಡಿ ಇಟ್ಟಿದ್ದರು. ಅವರಿಗೊಂದು ಸ್ವಸ್ತಿಕದ ಸ್ವಾಗತ. ಮೃದುವಾದ ಮದ್ದಳೆಯ ತಾಳ, ಮನೆಯ ಗೋಡೆಗಳಿಗೆ ಅಪ್ಪಳಿಸಿ ಪ್ರತಿಧ್ವನಿಸುತ್ತಿದ್ದ ಭಾಗವತರ ಪದ್ಯ, ಕಲಾವಿದರ ಹೆಜ್ಜೆ, ಅಭಿನಯ, ಶುಭ್ರ ಸಂಭಾಷಣೆ... 15 ನಿಮಿಷ ಮನೆಯ ಚಾವಡಿಯೇ ಯಕ್ಷಗಾನದ ವೇದಿಕೆಯಾಗಿತ್ತು. ಇಂತಹ ದೃಶ್ಯ ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಮನೆಗಳಲ್ಲಿ ಮಳೆಗಾಲದಲ್ಲಿ ಕಂಡುಬರುವುದು ಸಾಮಾನ್ಯ. ‘ಚಿಕ್ಕಮೇಳ’ ಎಂದೂ ಕರೆಯಲ್ಪಡುವ ಈ ‘ರಾಧಾಕೃಷ್ಣ’ ಮೇಳ ಇದೀಗ ತೆಂಕಣದಿಂದ ಮೂಡಣದತ್ತ ಹೆಜ್ಜೆ ಇಟ್ಟಿರುವುದು ಈಗಿನ ವಿಶೇಷ.

ಪತ್ತನಾಜೆ ಅಥವಾ ಹತ್ತನಾವಧಿ–ಇದು ಯಕ್ಷಗಾನ ಮೇಳಗಳ ಹಂಗಾಮಿನ ತಿರುಗಾಟ ಕೊನೆಗೊಳ್ಳುವ ದಿನ. ಸಾಮಾನ್ಯವಾಗಿ ಮೇ 24–25ರಂದು ಬರುವ ಈ ದಿನದಿಂದ ದೀಪಾವಳಿಯವರೆಗೆ ಎಂದರೆ ಸುಮಾರು ಆರು ತಿಂಗಳು ಬಯಲಲ್ಲಿ ಯಕ್ಷಗಾನದ ಹಬ್ಬಕ್ಕೆ ವಿರಾಮ. ಬಯಲಲ್ಲಿ ಗೆಜ್ಜೆ, ಮೃದಂಗ, ಚೆಂಡೆಯ ನಾದವಿಲ್ಲ. ಬದಲಾಗಿ ಆ ಅವಧಿಯಲ್ಲಿ ಮನೆಯ ಚಾವಡಿಯೇ ಯಕ್ಷಗಾನಕ್ಕೆ ವೇದಿಕೆ. ‘ಈ ಚಿಕ್ಕಮೇಳ ಆರಂಭವಾಗಿದ್ದು ಯಕ್ಷಗಾನದ ತವರು ಎಂದು ಕರೆಸಿಕೊಳ್ಳುವ ಕುಂಬಳೆ ಸೀಮೆಯಲ್ಲಿ’ ಎಂದು ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ಚಿಕ್ಕಮೇಳದ ಸಂಚಾಲಕ ಸುರೇಂದ್ರ ಪೈ ಹೇಳುತ್ತಾರೆ.

‘ಹಿಂದೆ ಚೌತಿ, ನವರಾತ್ರಿ, ಅಷ್ಟಮಿಯಲ್ಲಷ್ಟೇ ಹವ್ಯಾಸಿ ಕಲಾವಿದರು ಮನೆ ಮನೆಗೆ ಹೋಗಿ ಈ ರೀತಿ ಪ್ರದರ್ಶನ ನೀಡುತ್ತಿದ್ದರು. ಇದು ಜೀವನೋಪಾಯಕ್ಕೆ ಆಗಿತ್ತು. ಕ್ರಮೇಣ ಇದು ಚಿಕ್ಕಮೇಳವಾಗಿ ಪರಿವರ್ತನೆಗೊಂಡಿತು. ಬಯಲಾಟಗಳಿಲ್ಲದ ಸಂದರ್ಭದಲ್ಲಿ ಚಿಕ್ಕಮೇಳ ಆರ್ಥಿಕವಾಗಿಯೂ ಕಲಾವಿದರಿಗೆ ನೆರವಾಯಿತು. ವೃತ್ತಿಪರ ಕಲಾವಿದರ ಮಳೆಗಾಲದ ಸಂಪಾದನೆಯ ಮೂಲವೂ ಇದಾಗಿತ್ತು. ಭಾಗವತರು, ಮೃದಂಗ, ಶ್ರುತಿ, ಪುರುಷ–ಸ್ತ್ರೀ ವೇಷಧಾರಿಗಳು–ಹೀಗೆ ಐವರು ಕಲಾವಿದರು; ಇದು ಚಿಕ್ಕಮೇಳದ ಸ್ವರೂಪ. ಪೌರಾಣಿಕ ಪ್ರಸಂಗಗಳ ಆಯ್ದಭಾಗ ಇಲ್ಲಿ ಪ್ರದರ್ಶಿಸಲ್ಪಡುತ್ತವೆ. ರಾಧಾಕೃಷ್ಣ ಸಂವಾದ, ಶ್ರೀನಿವಾಸ ಕಲ್ಯಾಣ, ಸುಧನ್ವ-ಪ್ರಭಾವತಿ ಸಂವಾದ ಹೀಗೆ ಹೆಚ್ಚೆಂದರೆ ನಾಲ್ಕೈದು ಪದ್ಯಗಳಲ್ಲಿ ಮುಗಿಸುವಂತಹದ್ದು. ಕೆಲವೆಡೆ ಮನೆಯವರ ಇಚ್ಛೆಯ ಅನುಸಾರ ಪ್ರಸಂಗಗಳನ್ನು ಆಯ್ದುಕೊಳ್ಳುವುದೂ ಇದೆ. ಚಿಕ್ಕಮೇಳಗಳು ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಪ್ರದರ್ಶನ ನೀಡುವ ದಿನ ಬೆಳಗ್ಗೆ ಅಥವಾ ಕೆಲ ದಿನಗಳ ಮುನ್ನ ಒಂದು ಪ್ರದೇಶದ ಸುಮಾರು 20–22 ಮನೆಗಳಿಗೆ ಕರಪತ್ರಗಳನ್ನು ಹಂಚಿ ‘ಚಿಕ್ಕಮೇಳ’ ಬರುವ ಸಮಯದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಕೆಲವರು ಹರಕೆಯ ರೂಪದಲ್ಲೂ ಚಿಕ್ಕಮೇಳ ನಡೆಸುತ್ತಾರೆ’ ಎಂದರು 35 ವರ್ಷಗಳಿಂದ ಚಿಕ್ಕಮೇಳ ನಡೆಸುತ್ತಿರುವ ಸುರೇಂದ್ರ ಪೈ.

‘ಯಕ್ಷಗಾನವೇ ಆರಾಧನಾ ಕಲೆ. ಅಂತೆಯೇ ದೇವಸ್ಥಾನಗಳಿಂದ ಹೊರಡುವ ಚಿಕ್ಕಮೇಳಗಳಿಗೆ ಜನರು ಮನೆಯಲ್ಲಿ ನೀಡುವ ಅಕ್ಕಿ, ತೆಂಗಿನಕಾಯಿ, ಎಳ್ಳೆಣ್ಣೆ ಮುಂತಾದ ವಸ್ತುಗಳು ನೇರವಾಗಿ ದೇವಸ್ಥಾನಕ್ಕೆ ಸಮರ್ಪಣೆ ಆಗುತ್ತವೆ. ಚಿಕ್ಕಮೇಳ ಕೇವಲ ಆಟವಲ್ಲ. ಅದೊಂದು ಮಾಧ್ಯಮವೂ ಹೌದು. ದೇವಸ್ಥಾನದ ಪ್ರಚಾರ, ಸಂದೇಶವೂ ಇದರ ಮೂಲಕ ಆಗುತ್ತದೆ. ಯಕ್ಷಗಾನವನ್ನೇ ನಂಬಿಕೊಂಡು ಬದುಕು ಸಾಗಿಸುವ ಕಲಾವಿದರಿಗೆ ಮಳೆಗಾಲದಲ್ಲಿ ಇದೊಂದು ಉತ್ಪತ್ತಿಯ ದಾರಿ. ದಿನವೂ ಅವರಿಗೆ ವೇತನ ನೀಡಲಾಗುತ್ತದೆ. ಪೌರಾಣಿಕ ಪ್ರಸಂಗಗಳಲ್ಲಿನ ನೀತಿಪಾಠ ಮನೆಯವರ ಪರಿವರ್ತನೆಗೆ ಕಾರಣವಾಗಿದ್ದೂ ಇದೆ. ಚಿಕ್ಕಮೇಳ ನೋಡಿ ಯಕ್ಷಗಾನದತ್ತ ಆಕರ್ಷಿತರಾಗಿ ಕಲಾವಿದರಾಗಿ ಬೆಳೆದವರೂ ಇದ್ದಾರೆ’ ಎನ್ನುತ್ತಾರೆ ಸುರೇಂದ್ರ ಪೈ.

ಘಟ್ಟ ಏರಿ ಬಂದ ಚಿಕ್ಕಮೇಳ

ಕರಾವಳಿಯ ಪ್ರಮುಖ ಮೇಳಗಳು ಬೆಂಗಳೂರು, ಮುಂಬೈನಲ್ಲಿ ಯಕ್ಷಗಾನ ಬಯಲಾಟ ನಡೆಸಿವೆ. ಈಗಲೂ ಅಲ್ಲೆಲ್ಲಾ ಯಕ್ಷಗಾನ ಪ್ರದರ್ಶನಗಳಾಗುತ್ತಿವೆ. ಆದರೆ ಚಿಕ್ಕಮೇಳಗಳು ಘಟ್ಟ ಹತ್ತಿಬರುವುದು ಅಪರೂಪ. ಕಳೆದ ವರ್ಷ ಕಾರ್ಕಳದ ವಿಷ್ಣುಮೂರ್ತಿ ಚಿಕ್ಕಮೇಳ ಬೆಂಗಳೂರಿಗೆ ಹೆಜ್ಜೆ ಇಟ್ಟು ಹಲವು ಮನೆಗಳಲ್ಲಿ ಪ್ರದರ್ಶನ ನೀಡಿತ್ತು. ಈ ಅನುಭವ ಹಂಚಿಕೊಳ್ಳುವ ತಂಡದ ಭಾಗವತರಾದ ಮೋಹನ್ ಕಲಂಬಾಡಿ, ‘ನಾನು ತಲಕಳ ಹಾಗೂ ನಾಳ ಮೇಳದ ಭಾಗವತ. ಮಳೆಗಾಲದಲ್ಲಿ ನನ್ನದೇ ಯಜಮಾನಿಕೆಯ ಚಿಕ್ಕಮೇಳ ನಡೆಸುತ್ತಿದ್ದೇನೆ. ಇಲ್ಲಿ ಚಿಕ್ಕಮೇಳ ಮಾಡುತ್ತಿದ್ದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ವಾಸವಿರುವ ವ್ಯಕ್ತಿಯೊಬ್ಬರು ಇದನ್ನು ವೀಕ್ಷಿಸಿದರು. ಅವರ ಆಹ್ವಾನದ ಮೇರೆ ಬೆಂಗಳೂರಿಗೆ ತಂಡ ಕರೆದುಕೊಂಡು ಬಂದಿದ್ದೆ. ಯಲಹಂಕ ಕನ್ನಡ ಭವನದಲ್ಲಿ ಒಂದೂವರೆ ಗಂಟೆ ಪ್ರದರ್ಶನ ನೀಡಿದೆವು. ಬೆಂಗಳೂರಿನಲ್ಲಿ ದಿನಕ್ಕೆ ಗರಿಷ್ಠ ನಾಲ್ಕೈದು ಮನೆಯಲ್ಲಿ ಪ್ರದರ್ಶನ ನೀಡಲಷ್ಟೇ ಸಾಧ್ಯ. ಇಲ್ಲಿ ರಾತ್ರಿ ಹೆಚ್ಚು ಅವಧಿ ಮನೆಯಲ್ಲಿ ಪ್ರದರ್ಶನ ನೀಡಲು ಆಗುವುದಿಲ್ಲ. ಚಿಕ್ಕಮೇಳದಲ್ಲಿ ಸಾಮಾನ್ಯವಾಗಿ ಚೆಂಡೆಯ ಬಳಕೆ ಇಲ್ಲ. ಏಕೆಂದರೆ ಅದು ರಣವಾದ್ಯ. ಆದರೆ ಆಹ್ವಾನಿಸುವ ಕೆಲವರು ಚೆಂಡೆಯ ಏರು ಪದ್ಯವಿರಲಿ ಎನ್ನುತ್ತಾರೆ. ಅಂತಹ ಸಂದರ್ಭದಲ್ಲಷ್ಟೇ ನಾವು ಅದನ್ನು ಬಳಸುತ್ತೇವೆ. ಈ ವರ್ಷವೂ ಬೆಂಗಳೂರಿಗೆ ತಂಡ ಕರೆದುಕೊಂಡು ಬರಲಿದ್ದೇನೆ. ಈ ಮಳೆಗಾಲದ ಅವಧಿಯಲ್ಲಿ ಘಟ್ಟ ಏರಿ ಬರುವುದೂ ಸವಾಲಿನ ವಿಷಯವಾಗಿದೆ’ ಎಂದರು.

ಕಲಾವಿದರು ಪಕ್ವವಾಗುತ್ತಾರೆ: ‘ಶ್ರೀಕೃಷ್ಣ ಪಾರಿಜಾತ’, ‘ಕೃಷ್ಣ ರಾಧಾ ವಿಲಾಸ’, ‘ಕೃಷ್ಣ ರುಕ್ಮಿಣಿ ಸಂವಾದ’, ‘ದೇವವ್ರತ ಸತ್ಯವತೀ’ ಹೀಗೆ ಸ್ತ್ರೀ–ಪುರುಷ ವೇಷಕ್ಕೆ ಹೊಂದಿಕೊಂಡ 10–15 ನಿಮಿಷದ ಅವಧಿಗೆ ಪ್ರದರ್ಶನ ನೀಡುವ ಕಲಾ ಪ್ರಕಾರವಿದು. ಯಕ್ಷಗಾನದ ಪ್ರಮುಖ ಕಲಾವಿದರು ಮಳೆಗಾಲದ ತಂಡಗಳಲ್ಲಿ ಆಹ್ವಾನ ಪಡೆದುಕೊಂಡು ವಿವಿಧೆಡೆ ಒಳಾಂಗಣಗಳಲ್ಲಿ, ದೂರದೂರುಗಳಲ್ಲಿ ನಡೆಯುವ ಯಕ್ಷಗಾನ ಪ್ರದರ್ಶನಗಳಲ್ಲಿ ಸಕ್ರಿಯರಾಗಿರುತ್ತಾರೆ. ಆದರೆ ನಿತ್ಯ ವೇಷ ಮಾಡುವವರು ಅಥವಾ ಜೊತೆ ವೇಷ ಮಾಡುವ ಕಲಾವಿದರು ಹೆಚ್ಚು ಪ್ರಚಾರದಲ್ಲಿ ಇರುವುದಿಲ್ಲ. ಹೀಗಾಗಿ ಮಳೆಗಾಲದ ಅವಧಿಯಲ್ಲಿ ಏನು ಮಾಡುವುದು ಎನ್ನುವ ಚಿಂತೆಗೆ ಇವರು ಜಾರುತ್ತಾರೆ. ಇಂತಹ ಕಲಾವಿದರು ಚಿಕ್ಕಮೇಳದ ಭಾಗವಾಗುತ್ತಾರೆ. ಚಿಕ್ಕಮೇಳದಲ್ಲಿ ತಿರುಗುತ್ತಾ ಇವರ ಭಾಷೆ, ಮಾತು ಶುದ್ಧಿಯಾಗುತ್ತದೆ. ಹೆಜ್ಜೆ, ಅಭಿನಯ ಪಕ್ವವಾಗುತ್ತದೆ’ ಎನ್ನುತ್ತಾರೆ ಮೋಹನ್ ಕಲಂಬಾಡಿ.

ತೆಂಕುತಿಟ್ಟು ಎಂದು ಕರೆಸಿಕೊಳ್ಳುವ ಕರಾವಳಿಯ ದಕ್ಷಿಣ ಭಾಗದಲ್ಲಿರುವ ಯಕ್ಷಗಾನ ಕಲಾವಿದರ ಚಿಕ್ಕಮೇಳ ಎಂಬ ಪರಿಕಲ್ಪನೆಯು ಉಡುಪಿಯ ಉತ್ತರಕ್ಕೆ ಪ್ರಚಲಿತದಲ್ಲಿರುವ ಬಡಗು ತಿಟ್ಟಿನಲ್ಲಿಯೂ ಈಗೀಗ ಕಾಣಿಸಿಕೊಳ್ಳಲಾರಂಭಿಸಿದೆ. ತೆಂಕಿನ ಚಿಕ್ಕಮೇಳವು ರಾಜಧಾನಿಗೂ ಹೆಜ್ಜೆ ಇಟ್ಟಿದ್ದರೆ, ಅತ್ತ ಬಡಗಿನ ಚಿಕ್ಕಮೇಳಗಳು ಶಿರಸಿಯತ್ತ ಹೆಜ್ಜೆ ಇಟ್ಟಿವೆ. ಕುಂದಾಪುರದ ಬೀಜಮಕ್ಕಿಯ ಶ್ರೀಮಹಾಗಣಪತಿ ಕಲಾ ತಂಡವು ಶಿರಸಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕಳೆದ ವರ್ಷ ಚಿಕ್ಕಮೇಳ ಕಟ್ಟಿಕೊಂಡು ಹೋಗಿ ಪ್ರದರ್ಶನ ನೀಡಿತ್ತು. ಈ ವರ್ಷವೂ ಈ ತಂಡ ಮತ್ತೆ ಘಟ್ಟ ಏರಲು ಯೋಜನೆ ರೂಪಿಸಿದೆ.

‘ಚಿಕ್ಕಮೇಳ’ಗಳಿಗೂ ನಿಯಮ

ಚಿಕ್ಕಮೇಳಗಳು ಹೆಚ್ಚಾಗುತ್ತಿದ್ದು ಇದಕ್ಕೊಂದು ಒಕ್ಕೂಟ ರಚನೆಯಾಗಿದೆ. ಮಂಗಳೂರಿನ ತೆಂಕುತಿಟ್ಟು ಚಿಕ್ಕಮೇಳಗಳ ಒಕ್ಕೂಟ ‘ಚಿಕ್ಕಮೇಳ’ಗಳಿಗೆ ನಿಯಮಗಳನ್ನು ರೂಪಿಸಿದೆ. ‘ಯಕ್ಷಗಾನದ ಸಂಪ್ರದಾಯಕ್ಕೆ ಚ್ಯುತಿ ಬರಬಾರದು ಹಾಗೂ ಅದರ ಗೌರವಕ್ಕೆ ಅಪಖ್ಯಾತಿ ಬರಬಾರದು ಎಂದು ನಿಯಮಗಳನ್ನು ರೂಪಿಸಿದ್ದೇವೆ. ಒಕ್ಕೂಟದಲ್ಲಿ 50 ಚಿಕ್ಕಮೇಳಗಳು ನೋಂದಣಿಯಾಗಿವೆ. ಶಿಸ್ತು, ಭಕ್ತಿಯೊಂದಿಗೆ ಮನೆಯ ಪ್ರವೇಶ ಮಾಡಬೇಕು, ಚೌಕಿಯಿಂದ ಹೊರಟ ಬಳಿಕ ಮದ್ಯಪಾನ, ತಂಬಾಕು ಸೇವನೆ ಮಾಡಬಾರದು, ಇಂತಿಷ್ಟೇ ಹಣ ನೀಡಿ ಎಂದು ಒತ್ತಾಯಿಸಬಾರದು. ಜೀವನೋಪಾಯಕ್ಕೆ ಎಂದು ಆರಂಭವಾದ ಚಿಕ್ಕಮೇಳ ದಂಧೆಯಾಗಬಾರದು ಎನ್ನುವ ಉದ್ದೇಶ ನಮ್ಮದು’ ಎನ್ನುತ್ತಾರೆ ಒಕ್ಕೂಟದ ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ.

ಮನೆಯೊಳಗೆ ಗೆಜ್ಜೆ ಮೃದಂಗದ ಶಬ್ದದಿಂದ ಒಳ್ಳೆಯದಾಗುತ್ತದೆ ದುಷ್ಟಶಕ್ತಿಗಳು ಬರುವುದಿಲ್ಲ ಎನ್ನುವ ನಂಬಿಕೆಯೂ ಹಲವರಿಗೆ ಇದೆ. ಮನೆ ಮನೆಯಲ್ಲಿ ₹200 ರಿಂದ ₹300ರವರೆಗೆ ನೀಡುತ್ತಾರೆ. ಕೆಲವರು ಹೆಚ್ಚು ಹಣವನ್ನೂ ನೀಡುತ್ತಾರೆ. ಇಷ್ಟೇ ಕೊಡಿ ಎಂದು ನಾವು ಎಂದೂ ಕೇಳುವುದಿಲ್ಲ
-ರಾಘವೇಂದ್ರ ಗಾಣಿಗ, ಶ್ರೀಮಹಾಗಣಪತಿ ಕಲಾ ತಂಡ

‘ಚಿಕ್ಕಮೇಳ’ಗಳಿಗೂ ನಿಯಮ

ಚಿಕ್ಕಮೇಳಗಳು ಹೆಚ್ಚಾಗುತ್ತಿದ್ದು ಇದಕ್ಕೊಂದು ಒಕ್ಕೂಟ ರಚನೆಯಾಗಿದೆ. ಮಂಗಳೂರಿನ ತೆಂಕುತಿಟ್ಟು ಚಿಕ್ಕಮೇಳಗಳ ಒಕ್ಕೂಟ ‘ಚಿಕ್ಕಮೇಳ’ಗಳಿಗೆ ನಿಯಮಗಳನ್ನು ರೂಪಿಸಿದೆ. ‘ಯಕ್ಷಗಾನದ ಸಂಪ್ರದಾಯಕ್ಕೆ ಚ್ಯುತಿ ಬರಬಾರದು ಹಾಗೂ ಅದರ ಗೌರವಕ್ಕೆ ಅಪಖ್ಯಾತಿ ಬರಬಾರದು ಎಂದು ನಿಯಮಗಳನ್ನು ರೂಪಿಸಿದ್ದೇವೆ. ಒಕ್ಕೂಟದಲ್ಲಿ 50 ಚಿಕ್ಕಮೇಳಗಳು ನೋಂದಣಿಯಾಗಿವೆ. ಶಿಸ್ತು ಭಕ್ತಿಯೊಂದಿಗೆ ಮನೆಯ ಪ್ರವೇಶ ಮಾಡಬೇಕು ಚೌಕಿಯಿಂದ ಹೊರಟ ಬಳಿಕ ಮದ್ಯಪಾನ ತಂಬಾಕು ಸೇವನೆ ಮಾಡಬಾರದು ಇಂತಿಷ್ಟೇ ಹಣ ನೀಡಿ ಎಂದು ಒತ್ತಾಯಿಸಬಾರದು. ಜೀವನೋಪಾಯಕ್ಕೆ ಎಂದು ಆರಂಭವಾದ ಚಿಕ್ಕಮೇಳ ದಂಧೆಯಾಗಬಾರದು ಎನ್ನುವ ಉದ್ದೇಶ ನಮ್ಮದು’ ಎನ್ನುತ್ತಾರೆ ಒಕ್ಕೂಟದ ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.