ಸುಮಾರು 40 ವರ್ಷಗಳ ಹಿಂದಿನ ಮಾತು. ಆಗಿನ ಹಳ್ಳಿಗಳಲ್ಲೆಲ್ಲ ವಿವಿಧ ಕಟ್ಟೆಗಳಿರುತ್ತಿದ್ದವು. ಒಂದೊಂದು ಕಟ್ಟೆಗೂ ಒಂದೊಂದು ಹೆಸರು. ಊರ ಕಟ್ಟೆ, ಪಂಚಾಯಿತಿ ಕಟ್ಟೆ, ಗುಡಿ ಕಟ್ಟೆ, ಅರಳಿ ಕಟ್ಟೆ, ಆಲದ ಕಟ್ಟೆ, ಪೋಣಿ ಕಟ್ಟೆ, ಬಾವಿ ಕಟ್ಟೆ, ದೊಡ್ಡ ಕಟ್ಟೆ... ಇತ್ಯಾದಿ. ಈಗ ಅವು ಯಾವವೂ ಇಲ್ಲ. ಈಗ ಉಳಿದಿರುವುದು ಮಾರುಕಟ್ಟೆ ಮಾತ್ರ.

ಅಂದಿನ ಹಳ್ಳಿಯ ಕಟ್ಟೆಗಳು ಕೇವಲ ಕಲ್ಲುಮಣ್ಣಿನ ಕಟ್ಟೆಗಳಾಗಿರಲಿಲ್ಲ. ಪ್ರತಿದಿನ ಒಂದೊಂದು ಸಮಯಕ್ಕೆ ಅವು ಜೀವ ತಳೆಯುತ್ತಿದ್ದವು. ಆಯಾ ಸಮಯಕ್ಕೆ ಜನ ಅಲ್ಲಿ ಬಂದು ಸೇರುತ್ತಿದ್ದರು. ಎರಡ್ಮೂರು ತಾಸು ಏನೇನೋ ವಿಚಾರಗಳು ಅಲ್ಲಿ ಹರಿದಾಡುತ್ತಿದ್ದವು. ಊರ ಸುದ್ದಿ, ನೆರೆಯೂರುಗಳ ಸುದ್ದಿ, ನಾಡು-ದೇಶಗಳ ಸುದ್ದಿ ಅಲ್ಲಿ ವಿನಿಮಯಗೊಳುತ್ತಿದ್ದವು. ಹರಟೆ-ನಗೆ-ಕೇಕೆಗಳಿಂದ ಕಟ್ಟೆಗಳು ಕಳೆಗಟ್ಟುತ್ತಿದ್ದವು. ಕಟ್ಟೆಗಳೆಂದರೆ ಆಯಾ ಊರಿನ ಕಲೆ-ಸಂಸ್ಕೃತಿಯ ತಾಣಗಳಾಗಿದ್ದವು.

ಊರಿಗೊಂದೋ ಎರಡೋ ಶಾಲೆಗಳಿರುತ್ತಿದ್ದವು. ಅವು ಕೇವಲ ಮಕ್ಕಳಿಗಾಗಿ. ಈ ಕಟ್ಟೆಗಳೋ ಹಲವಾರು. ಅಲ್ಲಿ ಮಕ್ಕಳಿಂದ ಮುದುಕರವರೆಗೆ ಎಲ್ಲರಿಗೂ ಮುಕ್ತ ಪ್ರವೇಶ ಇರುತ್ತಿತ್ತು. ಅವೂ ಒಂದು ಬಗೆಯ ಶಾಲೆಗಳೇ! ಅಂದರೆ, ಅವು ಎಲ್ಲರ ಶಾಲೆಗಳು. ಏನೆಲ್ಲ ಚರ್ಚಿಸಬಹುದಾದ ವಿಶ್ವವಿದ್ಯಾಲಯಗಳು. ಅಲ್ಲಿ ಇರುವವರೆಲ್ಲ ವಿದ್ಯಾರ್ಥಿಗಳೂ ಹೌದು. ಹಾಗೇ ಶಿಕ್ಷಕರೂ ಕೂಡ. ಒಬ್ಬೊಬ್ಬರದೂ ಒಂದೊಂದು ನಿಟ್ಟಿನಲ್ಲಿ, ಅನನ್ಯವಾದ ಅನುಭವದ ಜ್ಞಾನ. ಒಬ್ಬೊಬ್ಬರದೂ ಒಂದೊಂದು ಒಗ್ಗರಣೆ. ಒಂದೊಂದು ಘಮ. ಅವು ಸಿಲೆಬಸ್ ಇಲ್ಲದ ಅನಿಯಂತ್ರಿತ ಶಾಲೆಗಳು.

ಹಳ್ಳಿ ಕಟ್ಟೆಗಳು ಎಂದರೆ ಹಳ್ಳಿಗಳಲ್ಲಿನ ಮಾತಿನ ಮಂಟಪಗಳು. ಒಂದೇ ಹಳ್ಳಿಯಲ್ಲಿನ ಹಲವು ವಿಧಾನಸಭೆಗಳು.. ಹಲವು ಸಂಸತ್ತುಗಳು. ಅವುಗಳನ್ನು ನಿಯಂತ್ರಿಸಲು ಸಭಾಧ್ಯಕ್ಷರಾಗಲಿ, ಬೇರೆ ಇನ್ಯಾರೂ ಇರುತ್ತಿರಲಿಲ್ಲ. ಆದರೂ ಅವು, ನಮ್ಮ ಇಂದಿನ ಶಾಸನಸಭೆ ಹಾಗು ಸಂಸತ್ ಸಭೆಗಳಿಗಿಂತಲೂ ಚೆನ್ನಾಗಿ-ವ್ಯವಸ್ಥಿತವಾಗಿ ನಡೆಯುತ್ತಿದ್ದವು.

ಆಗ ಇಂದಿನ ಹಾಗೆ ದಿನಪತ್ರಿಕೆಗಳು ಬರುತ್ತಿರಲಿಲ್ಲ. ಟಿವಿಯ ಠೀವಿಯೂ ಇರಲಿಲ್ಲ. ಊರಿಗೆ ಒಂದೋ-ಎರಡೋ ರೇಡಿಯೊಗಳು ಮಾತ್ರ ಇರುತ್ತಿದ್ದವು. ರೇಡಿಯೊ ಕೇಳಿದವನು ಮಾತ್ರ ದೇಶ ವಿದೇಶಗಳ ಸಮಾಚಾರವನ್ನು ಈ ಕಟ್ಟೆಗಳಿಗೆ ತಲುಪಿಸುತ್ತಿದ್ದ. ಅವನ ಕಣ್ಣಲ್ಲಿ ತಾನೇ ಈ ಜಗತ್ತನ್ನು ಬಲ್ಲವ ಎಂಬ ಮಿಂಚು ಢಾಳಾಗಿ ಕಾಣುತ್ತಿತ್ತು.

ಈಗ ಮೊಬೈಲ್ ಎಂಬ ಮಾಂತ್ರಿಕ ಏನೆಲ್ಲ ಮಾಡುತ್ತಿದ್ದಾನೆ ಎಂಬುದು ಎಲ್ಲರಿಗೂ ಗೊತ್ತು. ಕೆಲವರನ್ನು ಧಾರಾವಾಹಿಗಳು ಕಟ್ಟಿ ಹಾಕಿವೆ. ಈಗ ಯಾರೂ ಕಟ್ಟೆಗೆ ಬರುತ್ತಿಲ್ಲ. ಹೀಗಾಗಿ ಕಟ್ಟೆಗಳೆಲ್ಲ ಅನಾಥವಾಗಿವೆ. ಕೆಲವು ಕಟ್ಟೆಗಳು ಹೀಗೇ ಅನಾಥವಾಗಿ ನಾವೇಕೆ ಇರುಬೇಕು ಎಂದು ಕಾಲಗರ್ಭದಲ್ಲಿ ಮರೆಯಾಗಿಬಿಟ್ಟಿವೆ.

ಆಗ ನಮ್ಮ ಮನೆಯ ಮುಂದೆ ಒಂದು ಕಟ್ಟೆ ಇತ್ತು. ಅದು ಆ ಊರಿನ ದೊಡ್ಡಕಟ್ಟೆ. ಹೀಗಾಗಿ ಅದನ್ನು ಎಲ್ಲರೂ ದೊಡ್ಡಕಟ್ಟೆ ಎಂದು ಕರೆಯುತ್ತಿದ್ದರು. ಅದು ಒಂದು ಕಟ್ಟೆ ಎಂದು ಹೇಳಲಾಗುವುದಿಲ್ಲ. ಅದು ಹಲವು ಕಟ್ಟೆಗಳ ಒಂದು ಸಂಕೀರ್ಣ. ಅಲ್ಲೊಂದು ದೊಡ್ಡ ಬಾಗಿಲ ಮನೆ ಇತ್ತು. ಅದರ ಇಕ್ಕೆಲಗಳಲ್ಲಿ ಆಯತಾಕಾರದ ಎರಡು ದೊಡ್ಡಕಟ್ಟೆಗಳಿದ್ದವು. ಅದರ ಎದರುಗಡೆ ಇನ್ನೊಂದು ಮನೆ. ಅದರ ಪಕ್ಕದಲ್ಲಿ ಒಂದು ಉದ್ದನೆಯ ಕಟ್ಟೆ ಇತ್ತು. ಸಂಜೆಯಾಗುತ್ತಿದ್ದಂತೆ ಜನ ಅಲ್ಲಿ ಬಂದು ಸೇರುತ್ತಿದ್ದರು, ಹಕ್ಕಿಗಳು ಗೂಡು ಸೇರವಂತೆ. ಎರಡೂ ದೊಡ್ಡಕಟ್ಟೆಗಳ ಮೇಲೆ ಹತ್ತಾರು ಜನ ಹಿರಿಯರು, ಅಂದರೆ 60 ವರ್ಷ ದಾಟಿದವರು ಕುಳಿತುಕೊಳ್ಳುತ್ತಿದ್ದರು. ಆ ಎಲ್ಲ ಹಿರಿಯರಿಗೂ ತಮ್ಮದೇ ಆದ ನಿಗದಿತ ಸ್ಥಳಗಳು ಇರುತ್ತಿದ್ದವು. ಅಲ್ಲಿ ಅವರು ತಮ್ಮ ಇಚ್ಛಾನುಸಾರ ಸುಖಾಸನದಲ್ಲಿ ಪವಡಿಸುತ್ತಿದ್ದರು. ಯಾವುದೋ ದಿನ ಅವರು ಬರದಿದ್ದರೆ ಅವರ ಸ್ಥಳ ಖಾಲಿ ಇರುತ್ತಿತ್ತೇ ಹೊರತು, ಮತ್ಯಾರು ಆ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಿರಲಿಲ್ಲ. ಅದೊಂದು ಅಘೋಷಿತ ನಿಯಮ. ಎಲ್ಲರೂ ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು.

ಎದುರಿನ ಉದ್ದನೆಯ ಕಟ್ಟೆ ಹುಡುಗರದ್ದು ಹಾಗೂ ಯುವಕರದ್ದು. ಅಲ್ಲಿ ಯಾರು ಎಲ್ಲಿ ಬೇಕಾದರೂ ಕುಳಿತುಕೊಳ್ಳಬಹುದಿತ್ತು.

ಆ ಕಟ್ಟೆಯಿಂದಾಗಿ ಆ ಮನೆಗೆ ದೊಡ್ಡಕಟ್ಟೆ ಮನೆ ಎಂದು ಗುರುತಿಸಲಾಗುತ್ತಿತ್ತು. ಈಗ ಆ ಕಟ್ಟೆ ಇಲ್ಲ. ಅದರೂ, ಈಗ ಆ ಮನೆಯವರಿಗೆ ಜನರು ದೊಡ್ಡಕಟ್ಟೆಯವರು ಎಂದೇ ಕರೆಯುತ್ತಾರೆ. ಇದೇನೂ ಕಟ್ಟುಕಥೆಯಲ್ಲ. ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ಈಗಲೂ ಆ ಮನೆ, ಮನೆಯವರು ಇದ್ದಾರೆ. ಆಗ ಬಬಲೇಶ್ವರ ಒಂದು ಸಣ್ಣ ಊರಾಗಿತ್ತು. ಈಗ ಅದು ತಾಲ್ಲೂಕು ಕೇಂದ್ರ ವಾಗಿದೆ. ಅಲ್ಲಿನ ಬಹಳಷ್ಟು ಕಟ್ಟೆಗಳು ಹಾಗೂ ಕಟ್ಟೆಗಳ ಸಂಕೀರ್ಣಗಳು ಮರೆಯಾಗಿವೆ. ಅವುಗಳು ಇಲ್ಲದಿದ್ದರೇನಂತೆ, ಬಹಳಷ್ಟು ಕಾಂಕ್ರೀಟು ಕಟ್ಟಡಗಳ ವಾಣಿಜ್ಯ ಸಂಕೀರ್ಣಗಳು ತಲೆಎತ್ತಿ ನಿಂತಿವೆ. ಅಲ್ಲಿ ಹಿಂದಿನ ಕಟ್ಟೆಗಳಿಲ್ಲಿ ಇರುತ್ತಿದ್ದ ಸಂಬಂಧ-ಮಾಧುರ್ಯ ಮಾಯವಾಗಿದೆ.

ದೊಡ್ಡಕಟ್ಟೆ ಎಂದಾಗ, ಅಲ್ಲಿ ನಿತ್ಯವೂ ಕುಳಿತುಕೊಳ್ಳುವ, ದೊಡ್ಡಕಟ್ಟಿ ಸಿದ್ರಾಮಪ್ಪ, ಹೊಸಮನೆ ರೇವಣೆಪ್ಪ ಹಾಗೂ ಮುತ್ತಪ್ಪ, ಸಾಲಿಕೇರಿ ರಾಮಪ್ಪ, ಸದಪ್ಪಗೋಳ ಗುರುಪಾದಗೌಡ, ಪೋಲಿಸಗೋಳ ಶಿವಪ್ಪ, ರೇವಣಸಿದ್ದಪ್ಪಗೋಳ ಮರಲಿಂಗಪ್ಪ, ಯಾದವಾಡ ಶಂಕ್ರೆಪ್ಪ ಮುಂತಾದವರ ಚಿತ್ರ ಕಣ್ಣ ಮುಂದೆ ಬಂದೇ ಬರುತ್ತದೆ. ಅವರ ಮಾತಿನ ಶೈಲಿ, ಅದರಲ್ಲಿರುವ ಮಾಟಗಾರಿಕೆ-ಮಾಂತ್ರಿಕತೆ ನಮ್ಮನ್ನೆಲ್ಲ ಆ ದಿನಗಳಿಗೆ ಕರೆದೊಯ್ಯುತ್ತದೆ.

ಈಗ ದೊಡ್ಡಕಟ್ಟೆ ಇಲ್ಲವಾದರೂ, ಪಕ್ಕದ ಕಟ್ಟೆಗಳು ಇವೆ. ಅಲ್ಲಿಯೂ ಯಾವಾಗಲೋ, ಯಾರ್ಯಾರೋ ಕುಳಿತು ಎದ್ದು ಹೋಗುತ್ತಾರೆ. ಅವರ್ಯಾರೂ ದೊಡ್ಡಕಟ್ಟೆಯ ಪರಂಪರೆಯ ವಾರಸುದಾರರು ಎನಿಸುವುದಿಲ್ಲ. ಸಮೀಪದ ಕಟ್ಟೆ ಸಂಬಂಧ ಕಳಚಿ, ನಮ್ಮ ಜನ ದೂರದ ದೂರದರ್ಶನದ ಹೊಳಹುಗಳಲ್ಲಿ ಕಳೆದುಹೋಗಿದ್ದಾರೆ. ಈಗ ಅದರ ಸೆಳವೇ ಅಂತಹುದು. ಯಾರನ್ನು ಬೇಕಾದರೂ ಅದು ದೋಚಬಲ್ಲದು. ಹಾಗೆಯೇ ನಮ್ಮ ಕಟ್ಟೆ ಸಂಸ್ಕೃತಿಯನ್ನೂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.