ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ನಾಟಕಗಳನ್ನು ರಚಿಸಿ ಆಡುವ ಕಾಲಘಟ್ಟದಲ್ಲಿ ಬೇಂದ್ರೆಯವರು ವರ್ತಮಾನೋತ್ತರ ನಾಟಕಗಳನ್ನು ರಚಿಸಿದ್ದು ವಿಶೇಷ. ‘ತಿರುಕರ ಪಿಡುಗು’ ನಾಟಕದ ರಚನಾ ಕಾಲ 1924. ‘ಉದ್ಧಾರ’ ನಾಟಕ ರಚನೆಯಾದುದು 1946ರಲ್ಲಿ. ವೃತ್ತಿರಂಗಭೂಮಿಯ ಪಠ್ಯ ಮತ್ತು ಪ್ರಯೋಗ ಪರಂಪರೆಯನ್ನು ಮುರಿದು ಚೆಲ್ಲಿ ಪ್ರಯೋಗಶೀಲ ರಂಗಪಠ್ಯವನ್ನು ಬೇಂದ್ರೆಯವರು ರಚಿಸಿದ್ದಾರೆ. ಅವರ ಚಿಂತನಾ ಶಕ್ತಿಯನ್ನು, ಸೃಜನಶೀಲ ಮನೋಧೋರಣೆಯನ್ನು ಉತ್ತುಂಗದಲ್ಲಿಟ್ಟು ನೋಡಬೇಕಾಗುತ್ತದೆ. ಭಾರತ ಭೌತಿಕವಾಗಿ ಬದಲಾಗಿದೆ. ಆದರೆ ಅಂತರಂಗದಿಂದ ಬದಲಾಗಿಲ್ಲ. ಅದಿನ್ನೂ ಪುರಾಣ ಮತವಾಗಿದೆಯೆಂಬುದನ್ನು ಇವೆರಡು ನಾಟಕಗಳು ಹೇಳುತ್ತವೆ. ಈ ಕೃತಿಗಳನ್ನು ಸಂಪಾದನೆ ಮಾಡಿ ಓದುಗರ ಕೈಗೆ ದೊರೆಯುವಂತೆ ಮಾಡಿದವರು ವಾಮನ ಬೇಂದ್ರೆಯವರು.

‘ತಿರುಕರ ಪಿಡುಗು’ ಏಕಾಂಕ ನಾಟಕ. ಅಂದಿನ ಕಾಂಗ್ರೆಸ್ ತನ್ನ ಚಟುವಟಿಕೆಗಳಿಗಾಗಿ ನಿಧಿ ಸಂಗ್ರಹಿಸುತ್ತಿತ್ತು (ಹಾಗೆಯೇ ಬಗೆಬಗೆಯ ತಿರುಕತ್ವಗಳಿದ್ದವು). ಈ ಘಟನೆ ಬೇಂದ್ರೆಯವರಿಗೆ ನಾಟಕ ರಚಿಸಲು ಪ್ರೇರಣೆಯಾಯಿತು. ಅಸಂಗತ ರೂಪದಲ್ಲಿ ಮನುಷ್ಯನ ಮನದ ವ್ಯಾಪಾರಗಳನ್ನು ಶೋಧಿಸುವ ಯತ್ನವನ್ನು ಬೇಂದ್ರೆಯವರು ಈ ನಾಟಕದಲ್ಲಿ ಮಾಡಿದರು. ಸಿರಿವಂತರು ಹೃದಯ ವೈಶಾಲ್ಯ ಬೆಳೆಸಿಕೊಳ್ಳಬೇಕು. ತಿರುಕುತನ ಕಳೆದು, ಅದರಲ್ಲಿ ತೊಡಗಿದವರ ಕೈಗೊಂದು ಉದ್ಯೋಗ ದೊರಕಬೇಕು. ಇದು ನಾಟಕದ ಆಶಯ. 1924ರಲ್ಲಿ ಬಿ.ಎಂ.ಶ್ರೀ ಅವರ ಎದುರು ಬೇಂದ್ರೆ ಈ ನಾಟಕವನ್ನು ಓದಿದ್ದರು. ಅಂದಿನ ಈ ನಾಟಕ ಪಠ್ಯದ ಅಭಿವಾಚನ ಪರಿಣಾಮಕಾರಿಯಾಗಿತ್ತು ಎಂದು ವಾಮನ ಬೇಂದ್ರೆ ವಿವರಿಸಿದ್ದಾರೆ.

ಇದೊಂದು ವೈಚಾರಿಕ ನಾಟಕ. ಇದರ ಆಶಯವು ನಿರಂತರ ಕಾಡುವಂಥದ್ದು. ತಿರುಕತನದ ಹಿನ್ನೆಲೆ, ಸ್ವರೂಪ ಬಹುವಿಧ. ಧರ್ಮ, ದೇವರು, ದೇಶಾಭಿಮಾನ, ಬಡತನ ಹೆಸರಿನ ಹಿನ್ನೆಲೆಯ ಅನಾಥ ಪ್ರಜ್ಞೆ-ತಿರುಕತ್ವಕ್ಕೆ ಎಳೆಸುತ್ತದೆ. ಬಹುದೊಡ್ಡ ಪ್ರಮಾಣದಲ್ಲಿ ದೇವರು, ಧರ್ಮ, ದೇಶವೆಂಬ ಪದಗಳು ಚಾಲ್ತಿಯಲ್ಲಿರುವ ಇಂದಿನ ಕಾಲದ ಮನೋಧೋರಣೆ ಸಹ ಈ ನಾಟಕದಲ್ಲಿ ಬಿಂಬಿತಗೊಂಡಿದೆ. ರಾಮ ಜನ್ಮಭೂಮಿಯಲ್ಲಿ ಮಂದಿರ ಕಟ್ಟಲು ಚಂದಾ ಎತ್ತುವ ಪ್ರಸಂಗಗಳು ನಮ್ಮ ನಡುವೆಯೇ ಇದೆಯಲ್ಲ?

ಎರಡು ಗಂಟೆ ಅವಧಿಯ ನಾಟಕದ ಕಥೆಯಲ್ಲಿರುವುದು ಬೆಳಗ್ಗೆ 7ರಿಂದ 10.30ರ ನಡುವಿನ ಸನ್ನಿವೇಶ. ಇಲ್ಲಿ ನಾಯಕ ನಿತ್ಯ ಬದುಕಿನಲ್ಲಿ ವೇಳಾಪಟ್ಟಿ ಪ್ರಕಾರ ನಡೆದುಕೊಳ್ಳುವವನು. ಆದರೆ ಬೆಳ್ಳಂಬೆಳಗಿನಿಂದ ಬುಡಬುಡಿಕೆ, ಜಂಗಮ, ಆಚಾರ್ಯ, ಬ್ರಾಹ್ಮಣ, ವಿಧವೆ, ದಾಸ, ವಾರದ ಹುಡುಗ, ದೇಶ ಸೇವಕ - ಹೀಗೆ ಬೇಡಲು ಬಂದವರು ಅವನ ವೇಳಾಪಟ್ಟಿಗೆ ಅಡಚಣೆ ಉಂಟುಮಾಡುತ್ತಾರೆ. ಈ ತಿರುಕತನಕ್ಕೆ ರೊಚ್ಚಿಗೆದ್ದ ನಾಯಕ 'ಭಿಕ್ಷುಕೋತ್ಪಾದನೆ ಸಂಘ ಸ್ಥಾಪನೆ' ಘೋಷಿಸುತ್ತಾನೆ.

‘ದಯವೇ ಧರ್ಮದ ಮೂಲವಯ್ಯಾ’, ‘ದಯೆ ಇರಲಿ ಸಕಲ ಜೀವ ಜಾತಿಗಳಲ್ಲಿ’ ಎಂಬ ಧರ್ಮಬೋಧನೆಯಿಂದ ದೇಶದಲ್ಲಿ ಬಡತನ ಬೆಳೆದಿದೆಯೇ ಹೊರತು ಬೇರೆ ಏನು ಲಾಭವಾಗಿಲ್ಲ. ದಾನದಿಂದ ಜನಾಂಗ ಬಡವಾಗುತ್ತದೆ ಮತ್ತು ದುಡಿತದಿಂದ ಈ ದೇಶ ಸಮೃದ್ಧವಾಗುತ್ತದೆ ಎಂಬುದು ಈ ನಾಟಕಕಾರರ ದರ್ಶನ’ ಎಂದು ವಾಮನ ಹೇಳಿದ್ದಾರೆ.

ಶರಣರು ಕಾಯಕ (ದುಡಿಮೆ) ಮತ್ತು ದಾಸೋಹಕ್ಕೆ ಮಹತ್ವ ನೀಡಿದವರು. ಈ ವಚನಗಳ ಸಾಲನ್ನೇ ಉದ್ಧರಿಸಿ ಈ ಧೋರಣೆಯ ಹಿಂದಿರುವ ಮಾನವ ಪ್ರೀತಿ, ಕರುಣೆ ಮತ್ತು ಹಸಿವಿನ ನರಳುವಿಕೆಯನ್ನು ವಾಮನರು ಮರೆತಂತೆ ತೋರುತ್ತದೆ. ವರ್ತಮಾನದಲ್ಲಿ ಹಸಿವಿನಿಂದ ಸಾಯುವವರ ಸಂಖ್ಯೆಯೂ ದೊಡ್ಡದಿದೆ. ಹೀಗಿದ್ದಾಗ ದಯೆಯಿಂದ ಬಡತನ ಬೆಳೆದಿದೆ ಎಂಬ ವಾಮನರ ವಿಚಾರವನ್ನು ಒಪ್ಪಲು ಸಾಧ್ಯವಿಲ್ಲ. ಹಸಿದವನಿಗೆ ಅನ್ನ ನೀಡುವುದು ಮಾನವ ಧರ್ಮದ ಮೂಲ ಬೀಜಮಂತ್ರವಾಗಿದೆ. ದಯೆ, ದಾನಾದಿಗಳು ಮತ್ತು ಮಾನವ ಪ್ರೀತಿಯು ಎಲ್ಲ ಧರ್ಮಗಳಲ್ಲಿವೆ.

ಈ ನಾಟಕದಲ್ಲಿ ಬೇಂದ್ರೆಯವರ ಆಡುನುಡಿ ರಂಗಪಠ್ಯವನ್ನು ಹೆಚ್ಚು ಸಿರಿವಂತಗೊಳಿಸಿದೆ. ‘ನಿದ್ಯಾಗಿಂದೆದ್ದರ ನದ್ಯಾಗ ಮುಳುಗಿ ಎದ್ದಾಂಗ ಅಂತ ತಿಳಕೊಂಡೀರೇನು?', ‘ನೀ ಮರಾಠೀ ಹಾಡು, ಕನ್ನಡ ಹಾಡು, ಯಾವ ಭಾಷಾ ಆದ್ರೇನು? ತಿರಕೊಂಬೋದು ಸುಳ್ಳೇನು? ಸಾಗು ಮುಂದಕ. ಇನ್ನು ಮ್ಯಾಲೆ ‘ತಿರಕರಾರೂ ಇಲ್ಲಿ ಬರಬಾರದು' ಅಂತ ಬೋರ್ಡ್ ಹಚ್ಚಸಾವ ಇದ್ದೇನ.' ಈ ಬಗೆಯ ಭಾಷೆಯ ಸೊಗಡು ನಾಟಕದುದ್ದಕ್ಕೂ ಇದೆ. ಕೈ ಒಡ್ಡುವ ವಿವಿಧರಂಗೀ ವ್ಯಕ್ತಿತ್ವಗಳನ್ನು ಅಣಕವಾಡಿ ನಾಟಕ ವಿಡಂಬನೆಯಾಗಿ ಅರಳುತ್ತದೆ.

‘ಉದ್ಧಾರ’ ನಾಟಕವು 1995ರ ತನಕ ಮೂರು ಆವೃತ್ತಿಗಳನ್ನು ಕಂಡಿದೆ. ನಾಟಕ ಆರು ಪ್ರವೇಶಗಳನ್ನು ಹೊಂದಿದೆ. ಬೇಂದ್ರೆಯವರು ‘ಉದ್ಧಾರ’ ಎಂಬೀ ಏಕಾಂಕ ದೃಶ್ಯವು ‘ಸಾಮಾಜಿಕ ಸಮಸ್ಯೆಯ ಅವಿದ್ಧ ಪ್ರಯೋಗ’ ಎಂದು ಕರೆದಿದ್ದಾರೆ.

ಇದು ಸ್ವಾತಂತ್ರಪೂರ್ವದಲ್ಲಿ ಬರೆದ ನಾಟಕ. ಹಿಂದೂ ಪರಿಕಲ್ಪಿತ ವ್ಯವಸ್ಥೆ ನೈತಿಕ ಅಧಃಪತನಕ್ಕೀಡಾದುದನ್ನು ನಾಟಕ ಹೇಳುತ್ತದೆ. ಇಂದಿನ ದಲಿತ ಪರಿಭಾಷೆಯ ತಳಸಮುದಾಯಗಳ ಸಮಸ್ಯೆಗಳು, ಮಂದಿರ ಪ್ರವೇಶ ಮತ್ತು ನಿರ್ಮಾಣವು ಇಲ್ಲಿನ ಕೇಂದ್ರವಾಗಿದೆ. ಮೂರ್ತಿ ಭಗ್ನಗೊಳಿಸುವ ಖೂಳರು ಯಾವುದೇ ಜಾತಿ, ಕೋಮಿನಲ್ಲಿರಬಹುದು ಎಂಬುದನ್ನು ನಾಟಕ ಧ್ವನಿಸುತ್ತದೆ.

ಹಾಗೇ ನೋಡಿದರೆ ಇಲ್ಲಿ ಮುಖ್ಯ ಪಾತ್ರಗಳೆಂಬುವು ಇಲ್ಲ. ಆದರೆ ಪಾತ್ರಗಳ ಹಲವು ಧಾರೆಗಳಿವೆ. ಸಿದ್ಧಪ್ಪನಂಥವರು ಪರಂಪರೆಯ ಹಿಂದಿರುವವರು. ಅರಬಣ್ಣ, ದುರುಗಪ್ಪರು ಅಸ್ಪೃಶ್ಯ ಮುಂದಾಳುಗಳು, ಕೋದಂಡರಾಯ ನ್ಯಾಯವಾದಿ ಮತ್ತು ಸುಧಾರಕ ಮನೋಧೋರಣೆಯವರು. ಅಸ್ಪೃಶ್ಯರಿಗೆ ನ್ಯಾಯ ಕೊಡಿಸಲು ಹಾತೊರೆಯುವ ಕಳಕಳಿಯ ವ್ಯಕ್ತಿ. ವಿಘ್ನೇಶ್ವರ ಭಟ್ಟರು ಪುರಾಣವಾದಿ ಸಂಪ್ರದಾಯವಾದಿ, ಅಷ್ಟೇ ಅಲ್ಲ ರಾಯರ ಮನೆ ಪುರೋಹಿತ. ಸ್ಪರ್ಶಾನಂದರು ಒಬ್ಬ ಅಸ್ಪೃಶ್ಯರ ಉದ್ಧಾರಕ. ವೀರಭದ್ರಪ್ಪನವರು ವ್ಯಾಪಾರಿ - ಹೀಗೆ ಗ್ರಾಮವ್ಯವಸ್ಥೆಯ ಇನ್ನಿತರ ಪಾತ್ರಗಳು ನಾಟಕದ ಆಶಯವನ್ನು ಗಟ್ಟಿಗೊಳಿಸಿವೆ.

ಅಸ್ಪೃಶ್ಯರು ಸಹಕಾರ ಸಂಘ ಸ್ಥಾಪಿಸಿಕೊಂಡಿರುತ್ತಾರೆ. ಅವರಿಗೆ ದೇಗುಲಕ್ಕೆಂದು ಜಾಗ ಬೇಕಿರುತ್ತದೆ. ಸ್ಥಳವೊಂದು ಅಖೈರುಗೊಂಡು ಮನವಿ ಮಾಡಿದರೆ ಸರ್ಕಾರ ಯೋಜನೆಯನ್ನು ತಿರಸ್ಕರಿಸುತ್ತದೆ. ಏತನ್ಮಧ್ಯೆ ಭೈರವೇಶ್ವರ ಮೂರ್ತಿಯನ್ನು ಧ್ವಂಸಗೊಳಿಸಿದ ಬಾತಮಿ ಎಲ್ಲೆಡೆ ಕಾಳ್ಗಿಚ್ಚಿನಂತೆ ಹರಡುತ್ತದೆ. ಸಮಾಜದ ಹಿರಿಯರು ನಿಷ್ಕ್ರಿಯರು. ಆದರೆ ಕ್ರಿಯಾಶೀಲರಾದ ಕೋದಂಡರಾಯರು ಅಸ್ಪೃಶ್ಯರಿಗೆ ಭೈರವೇಶ್ವರ ಗುಡಿಯನ್ನು ನೀಡಲು ಮುಂದಾಗುತ್ತಾರೆ. ಆದರೆ ಸಂಪ್ರದಾಯವಾದಿಗಳಾದ ರುದ್ರಯ್ಯ, ವಿಘ್ನೇಶ್ವರ ಭಟ್ಟ, ಅಹೋಬಲಾಚಾರ್ಯರು ರಾಯರ ನಿಲುವಿಗೆ ವಿರೋಧ ವ್ಯಕ್ತಪಡಿಸುತ್ತಾರೆ.

ಅಸ್ಪೃಶ್ಯರು ಕೂಡ ಕೋದಂಡರಾಯರ ದಾರಿಗೆ ಅಡ್ಡವಾಗುವರು. ಆದರೆ ರಾಯರು ಸುಧಾರಣಾವಾದಿಗಳು. ಅವರು ಮುನ್ನುಗ್ಗುವರು. ದೇಗುಲ ಪ್ರವೇಶವನ್ನು ಠರಾಯಿಸಿಯೆ ಮುಂದೆ ಹೆಜ್ಜೆಯಿಡುವರು. ಆದರೆ ದುರಂತವೊಂದು ಘಟಿಸಿಬಿಡುತ್ತದೆ. ಜನ ಸಮುದಾಯದ ಕಾಲ್ತುಳಿತಕ್ಕೆ ರುದ್ರಯ್ಯ, ವಿಘ್ನೇಶ್ವರ ಭಟ್ಟ ಅಸುನೀಗುತ್ತಾರೆ. ಅವರು ಅಸ್ಪೃಶ್ಯರನ್ನು ವಿರೋಧಿಸುತ್ತಿದ್ದರು. ಗರ್ಭಗುಡಿ ಹೊಸ್ತಿಲಲ್ಲೇ ಕೊನೆಯುಸಿರೆಳೆಯುವರು. ವಿಚಿತ್ರವೆಂದರೆ ಹಾವು ಕಚ್ಚಿ ದುರಗಪ್ಪನೂ ಸಾಯುವನು. ಹೀಗೆ ನಾಟಕವು ಹಲವು ತಿರುವುಗಳನ್ನು ಪಡೆದು ದುರಂತದಲ್ಲಿ ಕೊನೆಗೊಳ್ಳುತ್ತದೆ.

ಪಂಚಮರ ಅಸ್ಪೃಶ್ಯ ವಿಷಯವನ್ನು ಇಟ್ಟುಕೊಂಡು ಬೇಂದ್ರೆಯವರು ನಾಟಕ ರಚಿಸಲು ಗಾಂಧೀಜಿಯವರ ದಲಿತೋದ್ಧಾರ ಚಿಂತನೆ ಪ್ರೇರಣೆಯೇ? ನಾಟಕದಲ್ಲಿ ಅಸ್ಪೃಶ್ಯತೆ ನಿರ್ಮೂಲನೆ ಮತ್ತು ಉದ್ಧಾರಗಳ ಚರ್ಚೆ, ಜಿಜ್ಞಾಸೆಯಿದೆ. ಇಂಥ ಅನಿಷ್ಟ ಆಚರಣೆಯ ವಿರೋಧದ ಸಮಸ್ಯೆ ‘ಉದ್ಧಾರ’ ನಾಟಕದ ಅಭಿವ್ಯಕ್ತಿಯಾಗಿದೆ.

1945ರಲ್ಲಿದ್ದ ಈ ಸಮಸ್ಯೆ ಇಂದು 21ನೆಯ ಶತಮಾನದಲ್ಲಿಯೂ ಬದಲಾಗಿಲ್ಲ! ಆದಕಾರಣ ಬೇಂದ್ರೆ ಅವರ ನಾಟಕ ‘ಉದ್ಧಾರ’ದ ಸಂಕೀರ್ಣ ವಸ್ತುವು ಸಾರ್ವಕಾಲಿಕವಾದುದು ಎಂದೆನಿಸುತ್ತದೆ. ಉದಾಹಣೆಗೆ...

ರಾಯರು-(ಏರುತ್ತಿರುವ ದನಿಯಲ್ಲಿ) ಏನ್ ರುದ್ರಯ್ಯನವರ, ಪಾಡಿನ ಹದ ಮೀರಿ ಎಲ್ಲಾ ಹಣ್ಣು ಆಗಿಬಿದ ಹಣ್ಣು! ಇಲ್ಲಿ ನೋಡ್ರಿ: ‘ಬೆಳಗಾಂವಿ ಜಿಲ್ಲೆಯ ಎಷ್ಟೋ ಹಳ್ಳಿಗಳಲ್ಲಿ ದೇವಾಲಯಗಳೊಳಗಿನ ಮೂರ್ತಿಗಳನ್ನು ಭಂಗಗೊಳಿಸಿದ್ದಾರೆ. ಯಾವ ಖೂಳರು ಈ ಕೆಲಸ ಮಾಡಿರುವರೋ ಇನ್ನೂ ತಿಳಿದಿಲ್ಲ’ (ಹಂಗಿಸುವ ದನಿಯಲ್ಲಿ) ಭಟ್ಟರ, ಎಚ್ಚರ ಅದನೋ, ಏನು ತೂಕಡಿಸಲಿಕ್ಕೆ ಹತ್ತೀರೋ? ದೇವರ ಶಿರಚ್ಛೇದ ಆಗಿದೆಯಂತೆ! ಶಿರಚ್ಛೇದ! ಒಡೆದವರು ಖೂಳರೋ, ಒಡೆದರೂ ಎಚ್ಚರವಿಲ್ಲದ ನಾವು ಮೂರ್ಖರೋ, ನನಗಿದು ತಿಳಿಯದ್ಹಾಂಗಾಗೇದ. ಹೊಟ್ಟಿಗೆ ಹಾಕಲಾರದವರು ಮಕ್ಕಳನ್ನು ಹಡೆಯೋದೂ, ದೇವರ್ನ ಕಾಯಲಾರದವರು ಗುಡಿಗುಂಡಾರ ಕಟ್ಟಿಸೋದೂ ಎರಡೂ ಅಷ್ಟೇ ಅವಿವೇಕ.- ಎಂಥ ಬೀಜದ ನುಡಿಗಟ್ಟು!

ರಾಯರು-(ಮರುಕದಿಂದ) ಭಟ್ರ, ಏನು ಬುನಾದಿಯೋ, ಏನು ಅನಾದಿಯೋ, ಈ ಗತಿಗೆಟ್ಟ ದೇವರ್ನ ಕಾಯೋ ಹಾದಿ ಯಾವುದೂ ಅಂತೀನಿ! ದೇವರ ಹೆಸರಿನ್ಯಾಗ ಕೊಬ್ಬಿದ ಭಟ್ಟರು, ಆಚಾರ್ಯರು, ಜಂಗಮರು, ತಮ್ಮ ಎದೀ ಕೊಟ್ಟಿ ಕಟ್ಟೀ ದೇವರ ಮೂರ್ತಿಗಳನ್ನು ಕಾಪಾಡೋದು ಕರ್ತವ್ಯವಲ್ಲ...? (ಉದ್ಧಾರ ನಾಟಕ-ಪುಟ, 18-19)

ಲೇಖಕರ ನುಡಿಯಲ್ಲಿ ಬೇಂದ್ರೆಯವರು ನಾಟಕಕ್ಕೆ ಒಂದು ಗಂಭೀರ ಪ್ರವೇಶಿಕೆ ನೀಡಿದ್ದಾರೆ. ‘ಸಮಾಜದ ಚಿತ್ರವನ್ನು ರಂಜನೆಗಾಗಿ ಇಡುವುದೊಂದು ರೀತಿಯಾದರೆ, ಸಮಾಜದೊಳಗಿನ ತೊಡಕುಗಳನ್ನು ಬೋಧಕ್ಕಾಗಿಯೂ ಪ್ರಚೋದನಕ್ಕಾಗಿಯೂ ಇಡುವುದೊಂದು ರೀತಿ’. ಬೇಂದ್ರೆಯವರ ಇನ್ನೊಂದು ಮಾತೂ ಇಷ್ಟವಾಯಿತು. ಅದು: ‘ನಾಟಕಗಳಲ್ಲಿ ಪಕ್ಷಕಟ್ಟಿ ಹೋರಾಡುವುದಕ್ಕಿಂತ ಪ್ರೇಕ್ಷಕರ ಅಂತಃಕರಣ-ವಿವೇಕಗಳು ಜಾಗೃತವಾಗುವಂತೆ ಪಕ್ಷ-ಪ್ರತಿಪಕ್ಷಗಳನ್ನು ಚಿತ್ರಿಸುವುದೊಳಿತು...’ ಎಂಬುದು. ರಂಗಪ್ರಯೋಗದ ಸಾರ್ಥಕತೆ ಇಲ್ಲಿಯೇ ಜನ್ಮತಾಳುವುದು.

ರಂಗಭಾಷೆ ಬಲು ಗಟ್ಟಿ ಮತ್ತು ಆಡು ಸೊಗಡಿನದ್ದು, ಪಾತ್ರದನ್ವಯ ಅದು ಸ್ವಭಾವ ಪಡೆದು ಹರಳುಗಟ್ಟಿದೆ. ‘ಹೇಳಿ ಕೇಳಿ ಹೊಲೇರು, ಕೊಲೆಗೂ ಹೇಸದವರು. ಧರ್ಮಕ್ಕ ಆಸಿಮಿಸಿ ಮಾಡತೇವ್ರೆ? ಇನ್ನಮ್ಯಾಗ ನೀವ ಗಟ್ಟಿ ಅದೀರೋ ಇಲ್ಲೋ ನೋಡಿಕೊಳ್ರಿ..' -ದುರುಗಪ್ಪನ ನುಡಿ. ಹಾಗೆಯೇ ಹಾರುವ, ಲಿಂಗವಂತ, ಭಟ್ಟ, ಸ್ವಾಮಿಗಳ ಇನ್ನಿತರ ಸವರ್ಣಿಯರ ಭಾನಗಡಿಗಳನ್ನು ಅವರು ನಿಷ್ಠುರವಾಗಿ ಲೇವಡಿ ಮಾಡಿದ್ದಾರೆ. ಹಯವದನ - '(ಅಣಕಿಸುವ ದನಿಯಲ್ಲಿ) ಹಿಂಗಾದರ ಈಗ ನರಳಿದ್ದರ ಮುಂದ ನರಳಬೇಕು. ಗೋಪಿಚಂದನದ ಭುಜಾ ಭಸ್ಮಕ್ಕ ತಿಕ್ಕಬೇಕು; ಹೊಲೆಯರ ಪಾದಧೂಳಿ ನೆಕ್ಕಬೇಕು. ಆಗಲಿ ಕುಲಕೋಟಿ ಉದ್ದಾರ!” ಹೀಗೆ ಆಡುವ ಮಾತುಗಳು ನಾಟಕದ ಗಾಢ ಮೌಲಿಕ ಆಶಯಗಳ ಸಾಮರ್ಥ್ಯವನ್ನು ಅಭಿವ್ಯಕ್ತಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.