ಗೊಲ್ಗೊಥಾ ಗುಡ್ಡದ ಮೇಲೆ ಯೇಸು ಕ್ರಿಸ್ತನನ್ನು ಶಿಲುಬೆಗೆ ಏರಿಸಿದ್ದು ಯಾವ ಸ್ಥಳದಲ್ಲಿ ಎಂಬ ಗೊಂದಲ ಮೂಡಿದ್ದು ಏಕೆ? ನಿಜಕ್ಕೂ ಪವಿತ್ರ ಸಮಾಧಿ ಇರುವ ಸ್ಥಳವಾದರೂ ಯಾವುದು?

2000 ವರ್ಷಗಳ ಹಿಂದೆ ಯೇಸುಕ್ರಿಸ್ತನು ಜೀವಿಸಿದ್ದಾಗ ಇಸ್ರೇಲ್ ದೇಶವನ್ನು ರೋಮನ್ನರು ಆಳುತ್ತಿದ್ದರು. ಇಸ್ರೇಲಿನ ಜನ (ಯಹೂದ್ಯರು) ರೋಮ್ ಸರ್ಕಾರಕ್ಕೆ ತಲೆಗಂದಾಯ ಕೊಡುತ್ತಿದ್ದರು. ಅವರ ಧರ್ಮಗುರುಗಳು, ಶಾಸ್ತ್ರಿಗಳು, ಫರಿಸಾಯರೆಂಬ ಶ್ರೀಮಂತ ಮತ್ತು ವಿದ್ಯಾವಂತ ವರ್ಗದವರು ಬಡವರನ್ನು ಬಹಳವಾಗಿ ಪೀಡಿಸುತ್ತಿದ್ದರು. ಅವರ ಮೇಲೆ ನೇಮಕವಾದ ಪಿಲಾತನೆಂಬ ರೋಮನ್ ಆಡಳಿತಗಾರನನ್ನು ಆ ಶ್ರೀಮಂತರು ಒಲಿಸಿಕೊಂಡು ಯಾರೂ ತಮ್ಮ ವಿರುದ್ಧ ತಿರುಗಿ ಬೀಳದಂತೆ ನೋಡಿಕೊಳ್ಳುತ್ತಿದ್ದರು.

ರೋಮನ್ನರು ಅವರಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ಕೊಟ್ಟಿದ್ದರು. ತಮ್ಮ ಜನರ ನ್ಯಾಯವನ್ನು ತೀರ್ಮಾನಿಸುವ ಅಧಿಕಾರವನ್ನೂ ಕೊಟ್ಟಿದ್ದರು. ಆದರೆ, ಮರಣದಂಡನೆಯನ್ನು ಕೊಡುವ ಅಧಿಕಾರ ಮಾತ್ರ ಅವರಿಗೆ ಇರಲಿಲ್ಲ. ಮಹಾಸಭೆ ಅಥವಾ ‘ಸನ್ಹೆದ್ರಿಯನ್ ಸಭೆ’ ಎಂಬ ಕೋರ್ಟು ಅವರ ನ್ಯಾಯವನ್ನು ತೀರ್ಮಾನಿಸುತ್ತಿತ್ತು. ಅದರಲ್ಲಿ ಶ್ರೀಮಂತರು, ಶಾಸ್ತ್ರ ಪಂಡಿತರು, ವಿದ್ಯಾವಂತರಾದ 70 ಜನ ಸದಸ್ಯರಿರುತ್ತಿದ್ದರು. ಮಹಾಯಾಜಕನು ಅದರ ಅಧ್ಯಕ್ಷನಾಗಿರುತ್ತಿದ್ದ. ಮಿಶ್ನಾ ಎಂಬ ಕಾನೂನಿನ ಚೌಕಟ್ಟು ಕೂಡ ಇತ್ತು. ಮಹಾಯಾಜಕನು ತನಗೆ ಬೇಕಾದವರನ್ನು ಸದಸ್ಯರನ್ನಾಗಿ ಮಾಡಿ ತನ್ನ ಮಾತನ್ನು ಮೀರದಂತೆ ನೋಡಿಕೊಳ್ಳುತ್ತಿದ್ದ.

ಮಹಾಯಾಜಕ ಮತ್ತು ಆತನ ತಂಡದ ಅನ್ಯಾಯಗಳನ್ನು, ದುಷ್ಕೃತ್ಯಗಳನ್ನು ಖಂಡಿಸಿದ ಕಾರಣ ಯೇಸುಕ್ರಿಸ್ತನನ್ನು ಗೊಲ್ಗೊಥಾ ಗುಡ್ಡದ ಮೇಲೆ ಶಿಲುಬೆಗೆ ಹಾಕಿ, ಕೊಲ್ಲುವಂತೆ ನೋಡಿಕೊಳ್ಳಲಾಯಿತು. ಮಹಾಸಭೆಯ ಸದಸ್ಯರಾಗಿದ್ದ ಅರಿಮತ್ತಾಯದ ಯೊಸೇಫನಿಗೂ ನಿಕೋದೇಮನಿಗೂ ಇದು ಸರಿ ಅನಿಸಲಿಲ್ಲ. ಯೊಸೇಫನು, ಪಿಲಾತನ ಬಳಿಗೆ ಹೋಗಿ ಯೇಸುಕ್ರಿಸ್ತನ ದೇಹವನ್ನು ಪಡೆಯಲು ಒಪ್ಪಿಗೆ ಪಡೆದ. ರೋಮ್ ಸೈನಿಕರು ಹಾಗೂ ಅಲ್ಲಿಯೇ ಅಳುತ್ತಾ ನಿಂತಿದ್ದ ಸ್ತ್ರೀಯರ ನೆರವಿನಿಂದ ಯೊಸೇಫ ಹಾಗೂ ನಿಕೋದೇಮ, ಯೇಸುವಿನ ದೇಹವನ್ನು ಶಿಲುಬೆಯಿಂದ ಇಳಿಸಿ ದೇಹಕ್ಕೆ ಸುಗಂಧ ದ್ರವ್ಯವನ್ನು ಲೇಪಿಸಿ ನಾರುಮಡಿಯಲ್ಲಿ ಸುತ್ತಿದರು. ಗೊಲ್ಗೊಥಾ ಗುಡ್ಡದ ಕೆಳಗೆ ಇದ್ದ ತನ್ನ ತೋಟದಲ್ಲಿ ಯೊಸೇಫ ತನಗಾಗಿ ತೋಡಿಸಿಕೊಂಡಿದ್ದ ಸಮಾಧಿಯಲ್ಲಿ ಯೇಸುವಿನ ದೇಹವನ್ನು ಇಟ್ಟು, ಒಂದು ಗೋಲಾಕಾರದ ಬಂಡೆಯನ್ನು ಮುಚ್ಚಿ ರಾಜಮುದ್ರೆಯನ್ನು ಹಾಕಿಸಿದ. ಕಾಯಲು ಸಿಪಾಯಿಗಳನ್ನೂ ನೇಮಿಸಿದ. ಮುಂದೆ, ಮೂರನೆಯ ದಿನ ಯೇಸುಕ್ರಿಸ್ತನು ತನ್ನ ಶಿಷ್ಯರಿಗೆ ಕಾಣಿಸಿಕೊಂಡು 40 ದಿನಗಳವರೆಗೂ ಉಪದೇಶ ಮಾಡಿದ ಎಂಬುದು ಪ್ರತೀತಿ.

ಕ್ರಿ.ಶ. 70ರಲ್ಲಿ ಯಹೂದ್ಯರು ರೋಮನ್ನರ ವಿರುದ್ಧ ದಂಗೆ ಎದ್ದರು. ರೋಮನ್ ಸೈನ್ಯಾಧಿಕಾರಿ ಟೈಟಸ್ ಮತ್ತು ಅವನ ಸೈನಿಕರು ಯಹೂದ್ಯರನ್ನು ಸೋಲಿಸಿ ಜೆರೂಸಲೇಮಿನ ಬಹುಭಾಗವನ್ನು ನಾಶ ಮಾಡಿದರು. ಮತ್ತು ಹೆರೂದನು ಕಟ್ಟಿಸಿದ ಸುಂದರವಾದ ದೇವಾಲಯವನ್ನೂ ಕೆಡವಿದರು. ಯಹೂದ್ಯರು ಜೆರೂಸಲೇಮ್ ಬಿಟ್ಟು ಬೇರೆ ಬೇರೆ ಕಡೆ ಓಡಿ ಹೋದರು. ಸುಮಾರು 55-60 ವರ್ಷಗಳ ನಂತರ ನಿಧಾನವಾಗಿ ಜನ ಜೆರೂಸಲೇಮಿಗೆ ಬರತೊಡಗಿದರು. ಊರು
ಬಿಟ್ಟು ಹೋದಾಗ ಬಾಲಕರಾಗಿದ್ದವರು ವಾಪಸ್ ಬಂದಾಗ ಮುದುಕರಾಗಿದ್ದರು. ಹಾಳುಬಿದ್ದ ಜೆರೂಸಲೇಮಿನಲ್ಲಿ ತಾವು ಸಣ್ಣವರಿದ್ದಾಗ ಯಾವ ಭಾಗದಲ್ಲಿ ಏನಿತ್ತೆಂಬುವುದನ್ನು ಮರೆತಿದ್ದರು. ಆದ್ದರಿಂದ ಯೇಸುಕ್ರಿಸ್ತನ ಸಮಾಧಿಯಾಗಲೀ ಆತನನ್ನು ಶಿಲುಬೆಗೆ ಹಾಕಿದ ಗೊಲ್ಗೊಥಾ ಗುಡ್ಡವಾಗಲೀ ಅವರ ನೆನಪಿನಲ್ಲಿ ಉಳಿದಿರಲಿಲ್ಲ.

ಯೇಸುಕ್ರಿಸ್ತನ ಮರಣದೊಂದಿಗೆ ಪ್ರಾರಂಭವಾದ ಕ್ರೈಸ್ತರ ಮೇಲಿನ ಹಿಂಸೆ ಸುಮಾರು 300 ವರ್ಷಗಳವರೆಗೆ ತಡೆಯಿಲ್ಲದೆ ಸಾಗಿತ್ತು. ಸಾವಿರಾರು ಜನ ನಾನಾ ಹಿಂಸೆಯಿಂದ ಕೊಲ್ಲಲ್ಪಟ್ಟರು. ಕ್ರಿ.ಶ. 305ರಲ್ಲಿ ಕಾನ್ಸ್ಟಂಟೈನ್ನು ಚಕ್ರವರ್ತಿ ಆಗುವವರೆಗೂ ಹಿಂಸೆ ನಡೆಯುತ್ತಲೇ ಇತ್ತು. ಕಾನ್ಸ್ಟಂಟೈನ್ನು ಕ್ರೈಸ್ತ ಧರ್ಮ ಸ್ವೀಕಾರಮಾಡಿ ಕ್ರೈಸ್ತರಿಗೆ ಭದ್ರತೆ ಒದಗಿಸಿದ. ಶಿಲುಬೆಯನ್ನು ತನ್ನ ಸೈನ್ಯದ ಲಾಂಛನವನ್ನಾಗಿ ಮಾಡಿಕೊಂಡ ಕಾನ್ಸ್ಟಂಟೈನ್ನು ಕ್ರಿ.ಶ. 312ರಲ್ಲಿ ಯುದ್ಧಕ್ಕೆ ಹೊರಟ. ಹೋದಲ್ಲೆಲ್ಲ ಜಯ ಪಡೆದ ಆತ ಕೆಲವೇ ದಿನಗಳಲ್ಲಿ ಇಡೀ ಯುರೋಪ್ ಮತ್ತು ಪಶ್ಚಿಮ ಏಷ್ಯಾದ ಸಾಮ್ರಾಟನಾದ.

ಕಾನ್ಸ್ಟಂಟೈನ್ನು ತನ್ನ ತಾಯಿ ರಾಣಿ ಹೆಲೆನಾಳನ್ನು ಯೇಸುಕ್ರಿಸ್ತನ ಸಮಾಧಿಯನ್ನು ಶೋಧಿಸಲೆಂದು ಜೆರೂಸಲೇಮಿಗೆ ಕಳುಹಿಸಿಕೊಟ್ಟ. ಅಲ್ಲಿ ಆಕೆ ಸೀಜರಿಯದ ಬಿಷಪ್ ಈಸೆಬಿಯಸ್ ಮತ್ತು ಜೆರೂಸಲೇಮಿನ ಬಿಷಪ್ ಮಕರಿಯಸ್ ಇವರ ಸಹಾಯದಿಂದ ಹೆರೂದನ ಅರಮನೆಯ ಗೋಡೆಯ ಹಿಂದೆ ಇದ್ದ ಒಂದು ದಿಣ್ಣೆಯನ್ನು ಸ್ವಚ್ಛಗೊಳಿಸಿದಾಗ ಅಲ್ಲಿ ಅವರಿಗೆ ಮೂರು ಶಿಲುಬೆಗಳು ಮತ್ತು ಒಂದು ಸಮಾಧಿ ಕಾಣಿಸಿತು. ಅವರು ಅದನ್ನೇ ಗೊಲ್ಗೊಥಾ ಗುಡ್ಡ, ಆ ಸಮಾಧಿ ಯೇಸುಕ್ರಿಸ್ತನ ಸಮಾಧಿಯೆಂದು ತಿಳಿದರು. ಈ ಸಂಗತಿಯನ್ನು ಹೆಲೆನಾ ರಾಣಿಯು ರೋಮ್ ಪಟ್ಟಣಕ್ಕೂ ಮತ್ತು ಎಲ್ಲಾ ಕ್ಯಾಥೋಲಿಕ್ ಕ್ರೈಸ್ತರಿಗೂ ತಿಳಿಸಿದಳು. ಕಾನ್ಸ್ಟಂಟೈನ್ ಚಕ್ರವರ್ತಿಯು ಆ ಸ್ಥಳವನ್ನೆಲ್ಲ ವಶಕ್ಕೆ ಪಡೆದು ಅಲ್ಲೊಂದು ಭವ್ಯವಾದ ಕಟ್ಟಡವನ್ನು ನಿರ್ಮಾಣ ಮಾಡಿದ. ಮತ್ತು ಆ ಸಮಾಧಿಯ ಮೇಲೆ ಸುಂದರವಾದ ಚರ್ಚನ್ನು ಕಟ್ಟಿಸಿ ಕ್ರಿ.ಶ.350ರಲ್ಲಿ ಆ ಚರ್ಚ್ಗೆ ಹೋಲಿ ಸಫಲ್ಕರ್ (ಪವಿತ್ರ ಸಮಾಧಿ) ಎಂದು ನಾಮಕರಣ ಮಾಡಿದ.

ಕ್ರಿ.ಶ. 614ರಲ್ಲಿ ಎರಡನೇ ಖೋಸರೋಸ್ನು ಆ ಕಟ್ಟಡವನ್ನು ಕೆಡವಿ ಸುಟ್ಟುಬಿಟ್ಟ. ಕೆಲವೇ ದಿನಗಳಲ್ಲಿ ಜನರ ದೇಣಿಗೆಯೊಂದಿಗೆ ಅದನ್ನು ತಿರುಗಿ ಕಟ್ಟಲಾಯಿತು. ಕ್ರಿ.ಶ. 1010ರಲ್ಲಿ ಹುಚ್ಚು ಖಲೀಫಾ ಹಕೀಮನೆಂಬವನು ಆ ಕಟ್ಟಡವನ್ನು ನಾಶಮಾಡಿದ. 38 ವರ್ಷಗಳಲ್ಲಿ ಅದನ್ನು ಮತ್ತೆ ತಿರುಗಿ ಕಟ್ಟಲಾಯಿತು. ಮುಂದೆ 1099ರಲ್ಲಿ ಕ್ರೂಸೆಡರ್ಗಳು ಜೆರೂಸಲೇಮನ್ನು ಪ್ರವೇಶಿಸಿ ಆ ಕಟ್ಟಡವನ್ನು ವಶಕ್ಕೆ ಪಡೆದರು. ಮತ್ತು ಅದನ್ನು ವಿಸ್ತರಿಸಿ ಸುಂದರಗೊಳಿಸಿದರು. ಕ್ರಿ.ಶ.1808ರ ಸೆಪ್ಟೆಂಬರ್ ತಿಂಗಳಿನಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಅದು ಭಸ್ಮವಾಯಿತು.

30 ಲಕ್ಷ ಡಾಲರ್ ವಂತಿಗೆಯೊಂದಿಗೆ ಎರಡು ವರ್ಷದಲ್ಲಿಯೇ ಮತ್ತೊಂದು ಚರ್ಚನ್ನು ಕಟ್ಟಲಾಯಿತು. ಅದು ಮೊದಲಿನಷ್ಟು ಸುಂದರವಾಗಿ ಭದ್ರವಾಗಿ ಇರದಿದ್ದರೂ ಕ್ರೈಸ್ತರ ಹೆಮ್ಮೆಯ ಗುರುತಾಗಿ ಇಂದಿನವರೆಗೂ ಉಳಿದಿದೆ. ಇದು ಎರಡಂತಸ್ತಿನ ಕಟ್ಟಡವಾಗಿದ್ದು ಕ್ರಿಸ್ತನನ್ನು ಶಿಲುಬೆಗೆ ಹಾಕಿದ ಸ್ಥಳವನ್ನೂ ಸಮಾಧಿಯನ್ನೂ ಒಳಗೊಂಡಿದೆ. ಇಲ್ಲಿ ಕ್ಯಾಥೋಲಿಕರು, ಗ್ರೀಕ್ ಆರ್ಥೊಡಕ್ಸರು, ಜಾರ್ಜಿಯನ್ನರು, ಅರೆಮಿಯರು ಹೀಗೆ ಪ್ರತಿಯೊಂದು ಗುಂಪಿನವರು ಬೇರೆ ಬೇರೆಯಾಗಿ ಆರಾಧನೆ ಮಾಡಲು ಪ್ರತ್ಯೇಕ ಚರ್ಚ್ಗಳಿವೆ. ವಿಶೇಷ ದಿನಗಳಲ್ಲಿ ಹೋಲಿ ಸಫಲ್ಕರ್ ಚರ್ಚ್ನಲ್ಲಿ ಆರಾಧನೆ ಮಾಡಲು ಪ್ರತಿಯೊಂದು ಪಂಗಡದವರಿಗೆ ಸಮಯವನ್ನು ನಿರ್ಧರಿಸಲಾಗುತ್ತದೆ. ಸ್ವಲ್ಪ ದೂರದಲ್ಲಿ ಒಂದು ಎತ್ತರವಾದ ಸ್ಥಳದಲ್ಲಿ ಸಮಾಧಿಯಿಂದ 15 ಅಡಿ ಎತ್ತರದಲ್ಲಿ ಟ್ರೂ ಕ್ರಾಸ್ ಇದೆ. ಏಳೆಂಟು ದಶಲಕ್ಷ ಡಾಲರ್ ಬೆಲೆಯ ವಜ್ರವೈಢೂರ್ಯಗಳನ್ನು ಈ ಶಿಲುಬೆಗೆ ಕೂಡಿಸಲಾಗಿದೆ. ಪಕ್ಕದಲ್ಲೇ ಒಂದು ಸೀಳಿದ ಬಂಡೆಯಿದೆ. ಯೇಸುಕ್ರಿಸ್ತನು ಪ್ರಾಣ ಬಿಟ್ಟಾಗ ಸೀಳಿದ ಬಂಡೆಯೆಂದು ಹೇಳುತ್ತಾರೆ.

ಕ್ರೈಸ್ತರಿಗೆ ಇಷ್ಟು ಪವಿತ್ರವಾದ ಸ್ಥಳ ವಿಶ್ವದಲ್ಲಿ ಮತ್ತೊಂದಿಲ್ಲ. ಈ ಸ್ಥಳವೇ ಗೊಲ್ಗೊಥಾ. ಆ ಸಮಾಧಿಯಲ್ಲಿಯೇ ಯೇಸುಕ್ರಿಸ್ತನ ದೇಹವನ್ನು ಇಡಲಾಗಿತ್ತೆಂದೂ ಅದರಿಂದ ಅದು ಪವಿತ್ರ ಸ್ಥಳವೆಂದೂ ಹೇಳಲಾಗುತ್ತದೆ. ಆದರೆ, ಈ ಸ್ಥಳ ಹೆರೂದನ ಅರಮನೆಯ ಗೋಡೆಯೊಳಗೆ ಇರಬಹುದಲ್ಲವೇ ಎಂದು ಅನೇಕರು ಸಂಶಯ ವ್ಯಕ್ತಪಡಿಸುತ್ತಾರೆ. ಅಂದರೆ ಇದು ನಿಜವಾದ ಗೊಲ್ಗೊಥಾ ಅಲ್ಲ, ಇದು ನಿಜವಾದ ಸಮಾಧಿಯಲ್ಲವೆಂದೇ ಅವರ ಭಾವನೆಯಾಗಿದೆ.

ಜೆರೂಸಲೇಮಿನ ಉತ್ತರಕ್ಕೆ ದಮಸ್ಕದ ಹೆಬ್ಬಾಗಿಲಿನಿಂದ ಸುಮಾರು 700 ಅಡಿಗಳಷ್ಟು ಅಂತರದಲ್ಲಿ ಹಳೆ ಕೋಟೆಯ ಹೊರಗೆ ಒಬ್ಬನು ಕಲ್ಲನ್ನು ಎಸೆಯುವಷ್ಟು ದೂರದಲ್ಲಿ, ಸುತ್ತಮುತ್ತಲಿನ ಪ್ರದೇಶಕ್ಕಿಂತ 40-50 ಅಡಿಗಳಷ್ಟು ಎತ್ತರದ ಒಂದು ಗುಡ್ಡವಿದೆ. ಪಟ್ಟಣದ ಎಲ್ಲಾ ಕಡೆಯಿಂದಲೂ ಇದನ್ನು ನೋಡಬಹುದು. ಪಟ್ಟಣದ ಕಡೆ ಮುಖ ಮಾಡಿರುವ ಇದರ ಭಾಗವು ತಲೆಬುರುಡೆಯಂತೆ ಕಾಣುತ್ತದೆ. ಈ ಸ್ಥಳ ಸುಮಾರು ಮೂರು ಎಕರೆಯಷ್ಟು ವಿಸ್ತಾರವಾಗಿದೆ.

ಒಟ್ಟೋಥೆನಿಯಸ್ ಎಂಬುವವನು ಈ ಗುಡ್ಡವನ್ನು ಕೂಲಂಕಷವಾಗಿ ಪರೀಕ್ಷಿಸಿ ಇದೇ ನಿಜವಾದ ಗೊಲ್ಗೊಥಾ ಎಂದು ಪ್ರತಿಪಾದಿಸಿದ. ಆದರೆ, ಅವನ ಹೇಳಿಕೆಯನ್ನು ಯಾರೂ ಅಷ್ಟಾಗಿ ಗಮನಿಸಲಿಲ್ಲ. ಕ್ಯಾಥೋಲಿಕರು ಅದು ಸುಳ್ಳು ಎಂದರು.

ಕ್ರಿ.ಶ. 1885ರಲ್ಲಿ ಜನರಲ್ ಚಾರ್ಲಸ್ ಜಿ. ಗೋರ್ಡನ್ ಎಂಬ ಪ್ರಸಿದ್ಧ ಕ್ರೈಸ್ತ ಸೈನ್ಯಾಧಿಕಾರಿಯೊಬ್ಬರು ಜೆರೂಸಲೇಮಿನ ಉತ್ತರದ ಗೋಡೆಯ ಹೊರಗೆ ತಿರುಗಾಡಲು ಹೋಗಿದ್ದರು. ಅವರು ನೈಸರ್ಗಿಕವಾಗಿ ತಲೆಬುರುಡೆಯಂತೆ ನಿರ್ಮಿತವಾದ ಗೊಲ್ಗೊಥಾದ ಭಾಗವನ್ನು ಪರೀಕ್ಷಿಸಿ, ಕ್ರಿಸ್ತನನ್ನು ಶಿಲುಬೆಗೆ ಹಾಕಿದ ನಿಜವಾದ ಗೊಲ್ಗೊಥಾ ಅದೇ ಎಂದು ಖಾತ್ರಿ ಮಾಡಿಕೊಂಡು ತಮ್ಮ ಹೋಟೆಲಿನ ಕೋಣೆಗೆ ಬಂದು ತಮ್ಮ ಸಹೋದರರಿಗೂ ಸ್ನೇಹಿತರಿಗೂ ಪತ್ರ ಬರೆದರು. ಅವರು ಅದನ್ನು ನಂಬಿದರು. ಆದರೆ, ಕ್ಯಾಥೋಲಿಕರು ನಂಬಲಿಲ್ಲ.

ಮೂರು ವರ್ಷಗಳ ನಂತರ ಗೋರ್ಡನ್ ಆಫ್ರಿಕಾದ ಕಾರ್ಟೋಮಿನಲ್ಲಿ ಹುತಾತ್ಮರಾದರು. ಕೆಲವು ಸಮಯದ ನಂತರ ಗುಡ್ಡದ ಪಶ್ಚಿಮ ಭಾಗವನ್ನು ಕೊಂಡುಕೊಂಡು ಅಗೆದು ನೋಡಿದಾಗ ಹಳೆಯದಾದ ತೋಟದ ಅವಶೇಷಗಳು ಸಿಕ್ಕವು.ಅದರಲ್ಲಿ ಸಮಾಧಿ ಮತ್ತು ಅದರ ಪಕ್ಕದಲ್ಲಿ ಉರುಳಿರುವ ಗೋಲಾಕಾರದ ಬಂಡೆಯನ್ನು ಅದರ ಮೇಲೆ ಹಾಕಿದ್ದ ಮುದ್ರೆಯನ್ನೂ ಕಂಡುಕೊಂಡರು. ಮುಂದೆ ಅಗೆದು ನೋಡಿದಾಗ ಹಿಂದಿನ ಕ್ರೈಸ್ತರ ಸಮಾಧಿಗಳು ದೊರಕಿದವು. ಆ ಸ್ಥಳವನ್ನು ಗೋರ್ಡನ್ನ ಗೊಲ್ಗೊಥಾ ಎಂದು ಕರೆದರು.

ಇಂಗ್ಲೆಂಡಿನ ಪ್ರೊಟೆಸ್ಟಂಟ್ ಕ್ರೈಸ್ತರ ಗುಂಪೊಂದು ಆ ಸ್ಥಳವನ್ನೆಲ್ಲ ಕೊಂಡುಕೊಂಡು ಆ ಸ್ಥಳಕ್ಕೆಲ್ಲ ಬೇಲಿಯನ್ನು ಹಾಕಿತು. ಅಲ್ಲಿ ಯಾವ ಕಟ್ಟಡವನ್ನೂ ನಿರ್ಮಿಸದೆ ನೈಸರ್ಗಿಕವಾಗಿ ಹೇಗಿದೆಯೋ ಹಾಗೆಯೇ ಕಾಯ್ದುಕೊಂಡು ಬರಲಾಗಿದೆ. ಅಲ್ಲಿ ಯಾವ ಆರಾಧನೆಗಳು ನಡೆಯುವುದಿಲ್ಲ. ಪ್ರೋಟೆಸ್ಟಂಟರು ಅದೇ ನಿಜವಾದ ಗೊಲ್ಗೊಥಾ ಎಂದು ದೃಢವಾಗಿ ನಂಬಿದ್ದಾರೆ. ಪ್ರತಿ ಈಸ್ಟರ್ ದಿನದಂದು ಅಲ್ಲಿ ಪ್ರಾರ್ಥನೆ, ಆರಾಧನೆ ನಡೆಸಲಾಗುತ್ತದೆ. ಈ ಆರಾಧನೆಯಲ್ಲಿ ಭಾಗವಹಿಸಲಿಕ್ಕೆಂದೇ ಬೇರೆ ದೇಶಗಳಿಂದ ಲಕ್ಷಾಂತರ ಪ್ರೊಟೆಸ್ಟಂಟ್ ಕ್ರೈಸ್ತರು ಬರುತ್ತಾರೆ. ಆದರೆ, ಕ್ಯಾಥೋಲಿಕ್ ಕ್ರೈಸ್ತರು ರಾಣಿ ಹೆಲೆನಾ ಕಂಡುಹಿಡಿದಿದ್ದೇ ನಿಜವಾದ ಗೊಲ್ಗೊಥಾ ಎಂದು ಪ್ರತಿಪಾದಿಸುತ್ತಾರೆ.

ಈಗ ಈ ಎರಡು ಸಮಾಧಿಗಳಲ್ಲಿ ಯೇಸುಕ್ರಿಸ್ತನ ನಿಜವಾದ ಸಮಾಧಿ ಯಾವುದೆಂದು ಸಂಶೋಧಕರು, ಇತಿಹಾಸಕಾರರು ಒಮ್ಮತದಿಂದ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.