ಒಂದು ಭಾಷಿಕ ಸಮುದಾಯದ ಏಳ್ಗೆಯು ಅದು ಸೃಷ್ಟಿಸುವ ಜ್ಞಾನದ ಜೊತೆ ಹೇಗೆ ಸಜೀವ ಸಂಬಂಧ ಹೊಂದಿರುತ್ತದೆ ಎನ್ನುವುದಕ್ಕೆ ಆಧುನಿಕಪೂರ್ವ ಕನ್ನಡ ನಾಡು ಹಾಗೂ ಆಧುನಿಕ ಕರ್ನಾಟಕವು ರೂಪುಗೊಂಡ ಕಥೆಯೇ ಸಾಕ್ಷಿ. ಕನ್ನಡದ ಬದುಕನ್ನು ಕಟ್ಟುವ ಹಲವು ಬಗೆಗಳಲ್ಲಿ ಕರ್ನಾಟಕದ ಕುರಿತು ಜ್ಞಾನ ಸೃಷ್ಟಿಸುವ ಯೋಜನೆಯೂ ಗಮನೀಯವೆಂದು ವಿಶದೀಕರಿಸುತ್ತ, ಕನ್ನಡದ ವಿವಿಧ ಸಂಸ್ಥೆಗಳು ಕನ್ನಡ ನಾಡನ್ನು ಐತಿಹಾಸಿಕವಾಗಿ ಹೇಗೆ ಜ್ಞಾನದ ಮೂಲಕ ಪರಿಭಾವಿಸಿದವು ಎನ್ನುವುದನ್ನು ನಿರೂಪಿಸುವುದು ಇಲ್ಲಿಯ ಉದ್ದೇಶ.

‘ಕರ್ನಾಡು’ ಎಂಬ ಭಾಷಾ ವಲಯದ ಹಲವು ಕನ್ನಡಂಗಳ ಮೂಲಕ ಕನ್ನಡ ನಾಡನ್ನು ‘ಕವಿರಾಜ ಮಾರ್ಗ’ಕಾರ ಪರಿಕಲ್ಪಿಸಿದ್ದು ಮಹಾಕಾವ್ಯ, ಪುರಾಣ, ಗದ್ಯಕಥೆ ಮುಂತಾದ ಜ್ಞಾನ ಪ್ರಕಾರಗಳ ಹಿನ್ನೆಲೆಯಿಂದ. ಇತಿಹಾಸಕಾರ ಷ.ಶೆಟ್ಟರ್ ಅವರು ಗುರುತಿಸುವಂತೆ, ಎರಡು ಸಾವಿರ ವರ್ಷಗಳ ಹಿಂದೆ ನಮ್ಮ ಅಕ್ಷರ ಸಂಸ್ಕೃತಿ ಪ್ರಾರಂಭವಾದಾಗಿನಿಂದ ಇಂದಿನವರೆಗೂ ನಾವು ಅಕ್ಷರಗಳನ್ನು ಹಂಚಿಕೊಳ್ಳುತ್ತಲೇ ನಮ್ಮ ಸಮಾಜವನ್ನು ಕಟ್ಟಿ, ವಿಸ್ತರಿಸುತ್ತಲಿರುವೆವು. ಕನ್ನಡ ನಾಡಿನ ಮೊತ್ತಮೊದಲ ಬರಹಭಾಷೆ ಪ್ರಾಕೃತ, ಲಿಪಿ ಬ್ರಾಹ್ಮಿ; ಕನ್ನಡದ ಲಿಪಿ ರೂಪುಗೊಂಡದ್ದು ಕ್ರಿ.ಶ. ನಾಲ್ಕನೆಯ ಶತಮಾನದಲ್ಲಿ. ಇದು ಸ್ಥೂಲವಾಗಿ, ಆಧುನಿಕಪೂರ್ವ ಕನ್ನಡ ನಾಡಿನ ಬಹುರೂಪಿ ಆಯಾಮಗಳಲ್ಲಿ ಕನ್ನಡ ಭಾಷೆ, ಲಿಪಿ ಹಾಗೂ ಬರಹಗಳು ಜ್ಞಾನ ಸೃಷ್ಟಿಸುವ ಸಲಕರಣೆಗಳಾಗಿ ಈ ನಾಡನ್ನು ರೂಪಿಸಿವೆ ಎನ್ನುವುದರ ತುಣುಕು.

ಈ ದಿಸೆಯಲ್ಲಿ ಆಧುನಿಕ ಕರ್ನಾಟಕದ ರಚನೆಯ ಬಗ್ಗೆ ಅಷ್ಟೊಂದು ಮಹತ್ವದ ಅಧ್ಯಯನಗಳು ನಡೆದಿಲ್ಲವಾದರೂ ಒಂದು ಮಾತಂತೂ ಸ್ಪಷ್ಟ: ಆಧುನಿಕ ಕನ್ನಡ ನಾಡು-ನುಡಿ ರೂಪುಗೊಳ್ಳುವಲ್ಲಿ ಜ್ಞಾನ ಸೃಷ್ಟಿಯ ಹಲವಾರು ಯೋಜನೆಗಳು, ಆಚರಣೆಗಳು ಮಹತ್ವದ ಪಾತ್ರ ವಹಿಸಿವೆ. ವರ್ಲ್ಡ್ ಹ್ಯೂಮ್ಯಾನಿಟೀಸ್ ವರದಿಯ ಭಾಗವಾಗಿ ಕರ್ನಾಟಕವನ್ನು ಕುರಿತು ಬರೆಯುತ್ತ ಪೃಥ್ವಿ ದತ್ತ ಚಂದ್ರ ಶೋಭಿ ಅವರು, 19ನೆಯ ಶತಮಾನದ ಮಧ್ಯಭಾಗದಿಂದ ಕನ್ನಡದಲ್ಲಿ ಜ್ಞಾನಸೃಷ್ಟಿ ಹಾಗೂ ಜ್ಞಾನ ಪ್ರಸರಣದ ಕೆಲಸವು ಭಾಷಾಧಾರಿತ ಕರ್ನಾಟಕ ರಾಜ್ಯವನ್ನು ಕಟ್ಟುವ ಬೌದ್ಧಿಕ ಹಾಗೂ ಸಾಂಸ್ಕೃತಿಕ ಯೋಜನೆಯ ಭಾಗವಾಗಿದೆ ಎಂದಿದ್ದಾರೆ. ಅವರ ಪ್ರಕಾರ, ವಸಾಹತು ಕಾಲಘಟ್ಟದಲ್ಲಿ ಕನ್ನಡ ಭಾಷಾ ವಲಯವು ಮೈಸೂರು ಹಾಗೂ ಹೈದರಾಬಾದ್ನ ರಾಜಮನೆತನಗಳ, ಬ್ರಿಟಿಷರ ಮದ್ರಾಸ್ ಹಾಗೂ ಬಾಂಬೆ ಪ್ರೆಸಿಡೆನ್ಸಿಗಳ ಆಡಳಿತಾತ್ಮಕ ಘಟಕಗಳಲ್ಲಿ ಹಂಚಿಹೋಗಿತ್ತು. ಇವೆಲ್ಲವನ್ನೂ ಒಂದು ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಒಟ್ಟುಗೂಡಿಸುವ ಪ್ರಯತ್ನವು ಕೇವಲ ರಾಜಕೀಯ ಯೋಜನೆ ಆಗಿರಲಿಲ್ಲ. ಅದರ ಜೊತೆಗೆ ಮುಖ್ಯವಾಗಿ ಬಹು ಉದ್ದೇಶವುಳ್ಳ ಬೌದ್ಧಿಕ ಯೋಜನೆಯೂ ಆಗಿತ್ತು. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಎರಡು ಉದ್ದೇಶಗಳೆಂದರೆ: ಒಂದು, ಕನ್ನಡ ನಾಡು-ನುಡಿ, ಸಂಸ್ಕೃತಿ ಕುರಿತು ಐತಿಹಾಸಿಕ, ಸಾಹಿತ್ಯಿಕ, ಸಾಂಸ್ಕೃತಿಕ, ರಾಜಕೀಯ ಹಾಗೂ ಸಾಮಾಜಿಕ ಜ್ಞಾನವನ್ನು ಸೃಷ್ಟಿಸುವುದು. ಇದನ್ನು ಸ್ವ-ಜ್ಞಾನ (ಸೆಲ್ಫ್ ನಾಲೆಜ್) ಎಂದು ಕರೆಯಬಹುದು. ಎರಡನೆಯದು, ಕನ್ನಡಿಗರಿಗಾಗಿ ಹೊರ ಜಗತ್ತಿನ ಜೊತೆ ಸಮಾಲೋಚನೆ ನಡೆಸಲು ಅನುಕೂಲವಾಗುವಂತೆ ಜಗತ್ತಿನ ಜ್ಞಾನವನ್ನು ಕನ್ನಡದಲ್ಲಿ ಸೃಷ್ಟಿಸುವುದು. ಈ ಯೋಜನೆಗಳು ಕನ್ನಡವನ್ನು ಜ್ಞಾನದ ಹಾಗೂ ರಾಜಕೀಯ ಭಾಷೆಯನ್ನಾಗಿ 20ನೆಯ ಶತಮಾನದ ದ್ವಿತೀಯಾರ್ಧದಲ್ಲಿ ರೂಪಿಸಿರುವುದನ್ನು ಕಾಣುತ್ತೇವೆ.

ಜ್ಞಾನ ಎಂದರೆ ಕೇವಲ ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಉತ್ಪಾದಿಸಿದ ಪ್ರತಿಪಾದನಾತ್ಮಕ ತಿಳಿವಳಿಕೆ (ಪ್ರಾಪಸಿಷನಲ್ ನಾಲೆಜ್) ಅಷ್ಟೇ ಅಲ್ಲ, ರೂಪಕಗಳ ಮೂಲಕ ಸೃಜನಶೀಲ ಅಭಿವ್ಯಕ್ತಿಯನ್ನು ಮೂಡಿಸುವ ಈ ಜಗದ ಅರಿವೂ ಜ್ಞಾನವೇ ಆಗಿದೆ. ಹಾಗಾಗಿ ಕರ್ನಾಟಕವನ್ನು ಕಟ್ಟಿದ ಕನ್ನಡದ ಜ್ಞಾನ ಸಂಶೋಧನೆಯ ಪ್ರಕಾರದ ಜೊತೆಗೆ, ಇನ್ನಿತರ ಕಲಾತ್ಮಕ ರೂಪಗಳಲ್ಲೂ ಅದು ವ್ಯಕ್ತವಾಗಿದೆ. ಆಧುನಿಕ ಸಾಹಿತ್ಯದ ಪ್ರಕಾರಗಳಾದ ಭಾವಗೀತೆ, ಸಣ್ಣ ಕಥೆ, ಕಾದಂಬರಿ, ನಾಟಕ ಮುಂತಾದ ಸೃಜನಶೀಲ ಬರವಣಿಗೆ ಹಾಗೂ ಅನುವಾದಗಳಿಂದ ಹಿಡಿದು ವಿವಿಧ ರೀತಿಯ ಪ್ರದರ್ಶನ ಕಲೆ, ಸಿನಿಮಾ, ಇತ್ತೀಚಿನ ವಿದ್ಯುನ್ಮಾನ ನವಮಾಧ್ಯಮಗಳಂತಹ ಪ್ರಕಾರಗಳ ಮೂಲಕವೂ ಕರ್ನಾಟಕತ್ವದ ಜ್ಞಾನ ಅಭಿವ್ಯಕ್ತಗೊಂಡಿದೆ. ಇದಕ್ಕೆ ಪೂರಕವಾಗಿ ಆಧುನಿಕತೆಯ ಮಜಲುಗಳಾದ ಶಿಕ್ಷಣ, ಸಾಕ್ಷರತೆ, ಮುದ್ರಣ, ಪತ್ರಿಕೆ, ತಾಂತ್ರಿಕ ಕ್ರಾಂತಿ, ಪ್ರಕಾಶನ ಸಂಸ್ಥೆ, ಬೌದ್ಧಿಕ ಹರಟೆ, ಸಾಹಿತ್ಯಿಕ ಚಳವಳಿ ಇತ್ಯಾದಿಗಳು ವೇದಿಕೆಗಳನ್ನು ಒದಗಿಸಿ ಕನ್ನಡತ್ವವನ್ನು ಪೋಷಿಸಿವೆ.

ವಸಾಹತು ಕಾಲಘಟ್ಟದಲ್ಲಿ ಕ್ರಿಶ್ಚಿಯನ್ ಮಿಶನರಿಗಳಾದ ಹರ್ಮನ್ ಮೋಗ್ಲಿಂಗ್, ವೈಗಲ್, ಕಿಟೆಲ್, ಫ್ಲೀಟ್ ಮುಂತಾದವರು ಕೈಗೊಂಡ ಕನ್ನಡದ ಗ್ರಂಥ ಸಂಪಾದನೆ, ತಾಡವೋಲೆಗಳ ರಕ್ಷಣೆ, ಹಸ್ತಪ್ರತಿಗಳ ಸಂಗ್ರಹ, ಅನುವಾದ, ಮುದ್ರಣ ವಿನ್ಯಾಸ ಇತ್ಯಾದಿ ಆಧುನಿಕ ಕನ್ನಡದ ಜ್ಞಾನಸೃಷ್ಟಿಯ ಆರಂಭದ ಕೆಲಸವೆನ್ನಬಹುದು. ಅವರ ಕೆಲಸದ ಹಿಂದಿನ ರಾಜಕಾರಣ ಏನೇ ಇರಬಹುದು, ಆದರೆ ಅವರ ಶ್ರಮ ಕನ್ನಡ ಜ್ಞಾನ ಸೃಷ್ಟಿಯ ಆಧುನಿಕ ಪರಂಪರೆಯ ಭಾಗವಾಗಿದೆ.

20ನೆಯ ಶತಮಾನದ ಮೊದಲಾರ್ಧದಲ್ಲಿ ಹಲವು ಬರಹಗಾರರ ಆಯ್ಕೆ ಪ್ರಜ್ಞಾಪೂರ್ವಕವಾಗಿ ಕನ್ನಡವಾಗಿತ್ತು. ಆಗ ಕೆಲವು ಲೇಖಕರ ಮಾತೃಭಾಷೆ ಬೇರೆಯಾಗಿದ್ದರೂ ಇನ್ನು ಕೆಲವು ಲೇಖಕರು ಇಂಗ್ಲಿಷ್ನಲ್ಲಿ ಬರವಣಿಗೆ ಮುಂದುವರಿಸಬಹುದಾಗಿದ್ದರೂ ಕನ್ನಡವನ್ನು ತಮ್ಮ ಅಭಿವ್ಯಕ್ತಿಯ ಮಾರ್ಗವಾಗಿ ಆಯ್ದುಕೊಂಡರು. ಈ ಆಯ್ಕೆಯ ಹಿಂದೆ ಅವರ ವೈಯಕ್ತಿಕ ಸದಾಶಯದ ಜೊತೆ ಕಾಲದ ಒತ್ತಡವೂ ಇದ್ದಿರಬೇಕು.

ಹೀಗೆ ಆಧುನಿಕ ಕನ್ನಡ ಸಾಹಿತ್ಯದ ವಿವಿಧ ವೃತ್ತಗಳಾದ ನವೋದಯ, ಪ್ರಗತಿಶೀಲ, ನವ್ಯ, ದಲಿತ-ಬಂಡಾಯ, ಮಹಿಳಾ ಬರವಣಿಗೆ, ಸಂಶೋಧನೆಗಳು ಕನ್ನಡದ ಬದುಕು ಮತ್ತು ಬುದ್ಧಿ ಬೆಳೆದುಬಂದ ಅವಸ್ಥೆಗಳನ್ನು ಪ್ರತಿಬಿಂಬಿಸುತ್ತವೆ. ಹಾಗೆಯೇ ಅನುವಾದದ ಕಾರ್ಯಯೋಜನೆಯೂ ಕನ್ನಡದ ಜ್ಞಾನಸೃಷ್ಟಿಯಲ್ಲಿ ಸಾಕಷ್ಟು ಸಕ್ರಿಯವಾಗಿ ಭಾಗವಹಿಸಿದೆ. ಇನ್ನು ಜನಸಾಮಾನ್ಯರ ವಿಶ್ವವಿದ್ಯಾಲಯಗಳಾದ ನಿಯತಕಾಲಿಕಗಳು, ದಿನಪತ್ರಿಕೆಗಳೂ ಈ ಬೃಹತ್ ಯೋಜನೆಯ ಭಾಗಗಳಾಗಿ ಕನ್ನಡದ ಮನಸ್ಸುಗಳನ್ನು ರೂಪಿಸಿವೆ. ಕನ್ನಡಪರ ಚಳವಳಿಗಳೂ ಜ್ಞಾನ ಪ್ರಕ್ರಿಯೆ ಜೊತೆ ತಳುಕು ಹಾಕಿಕೊಂಡಿರುವುದು ಕಂಡುಬರುತ್ತದೆ.

ತದನಂತರ ಹಲವು ಆಧುನಿಕ ಸಂಸ್ಥೆಗಳು ಕನ್ನಡ ನಾಡನ್ನು ಜ್ಞಾನ ಸೃಷ್ಟಿಯ ಯೋಜನೆಯ ಮೂಲಕವೇ ಪರಿಭಾವಿಸಿದ ಇತಿಹಾಸ ನಮ್ಮ ಕಣ್ಮುಂದೆ ಇದೆ. ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯ, ಕಳೆದ ಶತಮಾನದ ಆರಂಭದಲ್ಲಿ ಸ್ಥಾಪನೆಯಾದ ನಾಗರಿಕ ಸಂಸ್ಥೆಗಳಾದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಹಳೇ ಮೈಸೂರು ನಾಡಿನ ಕನ್ನಡ ಸಾಹಿತ್ಯ ಪರಿಷತ್ತು, ಬಾಂಬೆ ಸರ್ಕಾರ ಸ್ಥಾಪಿಸಿದ ಧಾರವಾಡದ ಕನ್ನಡ ರಿಸರ್ಚ್ ಇನ್ಸ್ಟಿಟ್ಯೂಟ್ (ಕೆಆರ್ಐ) ಮುಂತಾದ ಮೊದಲಿನ ಸಂಸ್ಥೆಗಳ ಧೋರಣೆಗಳಲ್ಲಿ ಕರ್ನಾಟಕದ ಇತಿಹಾಸ, ಸಂಸ್ಕೃತಿ ಕುರಿತು ವಿವಿಧ ಆಯಾಮಗಳಲ್ಲಿ ಜ್ಞಾನ ಸೃಷ್ಟಿಸುವುದು ಮುಖ್ಯವಾಗಿತ್ತು. ಹೀಗೆ ಧಾರವಾಡದಲ್ಲಿ ವರಕವಿ ಬೇಂದ್ರೆ ನೇತೃತ್ವ ವಹಿಸಿದ್ದ ‘ಗೆಳೆಯರ ಗುಂಪು’ಗಳಂತಹ ಅನೌಪಚಾರಿಕ ಸ್ನೇಹಿತರ ಬಳಗಗಳೂ ಕರ್ನಾಟಕದುದ್ದಗಲಕ್ಕೂ ಜ್ಞಾನ ಸೃಷ್ಟಿಯ ತಾಣಗಳಾಗಿದ್ದವು. ಇವೆಲ್ಲವುಗಳ ಹಿಂದೆ ಕರ್ನಾಟಕ ರಾಜ್ಯದ ಏಕೀಕರಣ, ಭಾರತದ ಸ್ವಾತಂತ್ರ್ಯ ಸಂಗ್ರಾಮದಂತಹ ರಾಜಕೀಯ ಚಳವಳಿಗಳ ಸಂದರ್ಭ ಒಂದು ರಾಜಕೀಯ ಪ್ರೇರಣೆಯಾಗಿ ಕೆಲಸ ಮಾಡಿರುವುದಿದೆ.

ಕನ್ನಡ ನಾಡಿನ ಸಮಸ್ಯೆಗಳ ಕುರಿತಾದ ಜ್ಞಾನ ಸೃಷ್ಟಿಯು ಕರ್ನಾಟಕದಲ್ಲಿ ವಿಶ್ವವಿದ್ಯಾಲಯಗಳು ಸ್ಥಾಪನೆಗೊಂಡ ನಂತರ ಚುರುಕಾಗಿರುವುದನ್ನು ಗಮನಿಸಬಹುದು. 1916ರಲ್ಲಿ ಸ್ಥಾಪಿತವಾದ ಮೈಸೂರು ವಿಶ್ವವಿದ್ಯಾಲಯ, 1949ರಲ್ಲಿ ಧಾರವಾಡದಲ್ಲಿ ಸ್ಥಾಪಿತಗೊಂಡ ಕರ್ನಾಟಕ ವಿಶ್ವವಿದ್ಯಾಲಯ ಈ ದಿಸೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿವೆ. ಈ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ಕೇಂದ್ರಗಳಾಗಿ, ತದನಂತರ ಸ್ವತಂತ್ರ ವಿಶ್ವವಿದ್ಯಾಲಯಗಳಾದ ಮಂಗಳೂರು ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯಗಳು ತಮ್ಮ ಮಾತೃ ವಿಶ್ವವಿದ್ಯಾಲಯಗಳ ಪರಂಪರೆಯನ್ನು ಮುಂದುವರಿಸಿದವು.

ಈ ಕಾಲಘಟ್ಟದಲ್ಲಿ ಪಿಎಚ್.ಡಿ ಪದವಿಗಳಿಗಾಗಿ ಬರೆದ ಪ್ರಬಂಧಗಳೇ ಇರಬಹುದು, ಸಂಶೋಧನಾ ಯೋಜನೆಗಳೇ ಇರಬಹುದು, ವಿದ್ವಾಂಸರು ವೈಯಕ್ತಿಕವಾಗಿ ಕೈಗೊಂಡ ಸಂಶೋಧನೆಗಳಾಗಿರಬಹುದು ಇವೆಲ್ಲವೂ ಜ್ಞಾನ ಸೃಷ್ಟಿಯ ಬರವಣಿಗೆಗಳಾಗಿ ಉಪಯುಕ್ತವಾಗಿವೆ. ಬೆಂಗಳೂರು ವಿಶ್ವವಿದ್ಯಾಲಯ ಸೇರಿದಂತೆ ಈ ಮೊದಲಿನ ವಿಶ್ವವಿದ್ಯಾಲಯಗಳ ಕನ್ನಡ ಅಧ್ಯಯನ ಸಂಸ್ಥೆಗಳು ಮತ್ತು ಸಮಾಜ ವಿಜ್ಞಾನ, ಮುಖ್ಯವಾಗಿ ಇತಿಹಾಸ ಹಾಗೂ ಪ್ರಾಕ್ತನಶಾಸ್ತ್ರದ ವಿಭಾಗಗಳು ಕೈಗೊಂಡ ಅಧ್ಯಯನಗಳು ಅಂತರರಾಷ್ಟ್ರೀಯ ಮಟ್ಟದ ಸಿದ್ಧಾಂತಗಳನ್ನು ಸೃಷ್ಟಿಸದೇ ಇರಬಹುದು. ಆದರೆ, ಅವು ಕನಿಷ್ಠಪಕ್ಷ ಮಾಹಿತಿಯನ್ನಾದರೂ ವ್ಯವಸ್ಥಿತವಾಗಿ ದಾಖಲಿಸುವ ಮಹತ್ವದ ಕೆಲಸವನ್ನಂತೂ ಮಾಡಿವೆ.

1991ರಲ್ಲಿ ಸ್ಥಾಪಿತಗೊಂಡ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮೂಲ ಉದ್ದೇಶ ಕನ್ನಡ ನಾಡು-ನುಡಿ ಕುರಿತು ಜ್ಞಾನ ಸೃಷ್ಟಿಸುವುದಾಗಿತ್ತು. ಕನ್ನಡದ ವಿದ್ವಾಂಸರನ್ನು ಕಲೆಹಾಕಿ, ಜ್ಞಾನ ಸೃಷ್ಟಿ ಮಾಡಿದ ಅದರ ಕಾರ್ಯವನ್ನು ನೆನಪಿಸಿಕೊಳ್ಳುವುದು ಸೂಕ್ತ. ಸುಮಾರು ಎರಡು ದಶಕಗಳಲ್ಲಿ ಈ ವಿಶ್ವವಿದ್ಯಾಲಯದ ವಿದ್ವಾಂಸರು ಕರ್ನಾಟಕತ್ವ ಕುರಿತು ಕೈಗೊಂಡ ಸಂಶೋಧನೆಗಳು ಹಾಗೂ ಇಲ್ಲಿಯ ಪ್ರಸಾರಾಂಗದ ಪ್ರಕಟಣಾ ಕೆಲಸ ಪ್ರಶಂಸನೀಯ.

ಮುಂದೆ ಸ್ಥಾಪಿತವಾದ ವಿಶ್ವವಿದ್ಯಾಲಯಗಳು ಇಂತಹ ಕೆಲಸವನ್ನು ತಕ್ಕಮಟ್ಟಿಗೆ ಮುಂದುವರಿಸಿವೆ, ನಿಜ. ಆದರೆ ಅವು ಬೆಳೆದು ಬರುವಷ್ಟರಲ್ಲಿ ವಿಶ್ವವಿದ್ಯಾಲಯ ಎಂಬ ಸಂಸ್ಥೆಯೇ ಬಿಕ್ಕಟ್ಟನ್ನು ಎದುರಿಸುವಂತಾಯಿತು. ಈ ಹಿಂದೆ ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸುತ್ತಿದ್ದ ಪ್ರಬುದ್ಧ ಕರ್ನಾಟಕ, ಕರ್ನಾಟಕ ವಿಶ್ವವಿದ್ಯಾಲಯದ ಕರ್ನಾಟಕ ಭಾರತಿ ಹಾಗೂ ಸಾಹಿತ್ಯ ಪರಿಷತ್ತಿನ ಪತ್ರಿಕೆಗಳ ಕೆಲಸವನ್ನು ತುಮಕೂರು ವಿಶ್ವವಿದ್ಯಾಲಯದ ‘ಲೋಕಜ್ಞಾನ’ ಎಂಬ ವಿದ್ವತ್ ಪತ್ರಿಕೆ ಮುಂದುವರಿಸಿತ್ತು.

ಇನ್ನು ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಕನ್ನಡಕ್ಕಾಗಿ ಸರ್ಕಾರಿ ಸಂಸ್ಥೆಗಳು ಹುಟ್ಟಿಬಂದವು. ಅವುಗಳಲ್ಲಿ ಮುಖ್ಯವಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಂತಹ ಅಕಾಡೆಮಿಗಳು ಮತ್ತು ಸರ್ಕಾರದ ಅನುದಾನ ಪಡೆದ ಹಲವು ಟ್ರಸ್ಟ್ ಮತ್ತು ಖಾಸಗಿ ಸಂಸ್ಥೆಗಳು ಕನ್ನಡದ ಬೌದ್ಧಿಕತೆಯನ್ನು ಪೋಷಿಸಿವೆ.

ಇಲ್ಲಿಯವರೆಗೆ ನಿರೂಪಿಸಿದ ಈ ಕಥನ ಅಪೂರ್ಣವಾಗಿದೆ. ಇದು ಎಷ್ಟೋ ಉದಾಹರಣೆ, ದತ್ತಾಂಶಗಳನ್ನು ನಮೂದಿಸಿಲ್ಲ. ಆದರೆ ಒಂದು ಭಾಷಿಕ ಸಮುದಾಯದ ರಾಜ್ಯ ನಿರ್ಮಾಣ ಆಗುವಲ್ಲಿ ಜ್ಞಾನ ಸೃಷ್ಟಿಯ ಮಹತ್ವವನ್ನು ವಿಶದೀಕರಿಸಲು ಈ ಅತಿ ಸಂಕ್ಷಿಪ್ತ ಇತಿಹಾಸ ಒಂದು ಪರಿಪೇಕ್ಷೆ ಒದಗಿಸಿದರೆ ಸಾಕೆನಿಸುತ್ತದೆ.

ಅಂದಿನ ಸಂಸ್ಥೆಗಳು ಜ್ಞಾನವನ್ನು ಪರಿಕಲ್ಪಿಸಿದ್ದು ಕರ್ನಾಟಕ ಏಕೀಕರಣದ ಕಾವು, ದೇಶಪ್ರೇಮ ಹಾಗೂ ವಸಾಹತು ಕಾಲಘಟ್ಟದ ತುಮುಲಗಳ ಒತ್ತಡದಲ್ಲಿ. ಒಟ್ಟಾರೆಯಾಗಿ ಭಾರತ ಹಾಗೂ ಕರ್ನಾಟಕ, ಈ ಎರಡೂ ರಾಷ್ಟ್ರೀಕರಣದ ಯುಗಧರ್ಮವು ಈ ಕಾಲಘಟ್ಟದ ಜ್ಞಾನವನ್ನು ರೂಪಿಸಿದೆ. ಇಲ್ಲಿ ಜ್ಞಾನವು ಸಾಂಸ್ಕೃತಿಕ ಅಗತ್ಯವಾಗಿತ್ತು. ಆದರೆ ಇಂದಿನ ಪರಿಸ್ಥಿತಿ ಬದಲಾಗಿದೆ. ಈಗ ಜ್ಞಾನವೆನ್ನುವುದು ಆರ್ಥಿಕ ಸರಕಾಗಿದೆ. ರಾಷ್ಟ್ರೀಯತೆಯ ವಿಘಟನೆ ಪ್ರಾರಂಭವಾಗಿ, ಆಂತರಿಕ ಹಾಗೂ ಬಾಹ್ಯ ಗಡಿರೇಖೆಗಳು ರಾಷ್ಟ್ರ-ಪ್ರಭುತ್ವದಲ್ಲಿಟ್ಟ (ನೇಶನ್-ಸ್ಟೇಟ್) ನಮ್ಮ ನಂಬಿಕೆಯನ್ನು ಅಲ್ಲಾಡಿಸುತ್ತಿವೆ. ರಾಷ್ಟ್ರೋತ್ತರದ ಈ ಯುಗದಲ್ಲಿ ಕನ್ನಡದ ಯಾಜಮಾನ್ಯವನ್ನು, ಒಂದೇ ತರಹದ ಕನ್ನಡದ ನುಡಿಯನ್ನು ಪ್ರಶ್ನಿಸುವ ಕಾಲ ದೂರವಿಲ್ಲ. ಭಾರತದಲ್ಲಾಗುತ್ತಿರುವ ರಾಜ್ಯಗಳ ಪುನರ್ವಿಂಗಡಣೆಯು ಭಾಷಾವಾರು ಪ್ರಾಂತ್ಯದ ಪರಿಕಲ್ಪನೆಯ ಅಂತ್ಯದ ಪ್ರಾರಂಭವನ್ನೂ ಮಾಡಿದಂತಿದೆ.

ಈ ತರಹದ ಸವಾಲುಗಳು ಒಂದು ಕಡೆ ಇದ್ದರೆ, ಇನ್ನೊಂದು ಕಡೆ ಕನ್ನಡತ್ವದ ಕುರಿತು, ಮುಖ್ಯವಾಗಿ ಸೃಜನಶೀಲ ಪ್ರಕಾರಗಳಲ್ಲಿ ಜ್ಞಾನ ಸೃಷ್ಟಿ ಹಿಂದೆಂದಿಗಿಂತಲೂ ಈಗ ಉತ್ಕೃಷ್ಟವಾಗಿಯೇ ನಡೆಯುತ್ತಿದೆ. ಈ ಕೆಲಸವನ್ನು ಹೆಚ್ಚಾಗಿ ಸರ್ಕಾರೇತರ ಸಾಂಸ್ಥಿಕ ಹೊಸ ತಾಣಗಳು ವಿಶೇಷವಾಗಿ ಅಂತರ್ಜಾಲದ ಮೂಲಕ ಮಾಡುತ್ತಿವೆ. ಆದರೆ ಇಂದು ಈ ಮೇಲೆ ಉದ್ಧರಿಸಿದ, ಕನ್ನಡಕ್ಕಾಗಿಯೇ ಇರುವ (ಸರ್ಕಾರಿ) ಸಂಸ್ಥೆಗಳು ಈ ಕೆಲಸವನ್ನು ನಿಭಾಯಿಸುವಲ್ಲಿ ಸೋಲುತ್ತಿವೆ. ಅವುಗಳ ಧ್ಯೇಯ, ಉದ್ದೇಶಗಳು ತಮ್ಮ ಮೊನಚು ಕಳೆದುಕೊಂಡು ಮೊಂಡಾಗಿರುವಂತೆ ಕಾಣುತ್ತಿದೆ.

ಇಂದು ನಾವು ಕನ್ನಡದಲ್ಲಿ ಸಂಶೋಧನೆಯೊಂದನ್ನು ಕೈಗೊಳ್ಳಬೇಕಾದರೆ, ಈ ಯಾವ ಸಂಸ್ಥೆಗಳೂ ಇದಕ್ಕೆ ಸಂಬಂಧಪಟ್ಟಂತೆ ಧನಸಹಾಯ ಮಾಡುವ ಯೋಜನೆಗಳನ್ನು ರೂಪಿಸಿಲ್ಲ. ಸಂಶೋಧನೆಗಳನ್ನು ಪ್ರಕಟಿಸಲು ಉತ್ಕೃಷ್ಟಮಟ್ಟದ ವಿದ್ವತ್ ಪತ್ರಿಕೆಗಳು ನಮ್ಮ ನಡುವೆ ಇಲ್ಲ. ಕೇವಲ ಪುಸ್ತಕ ಪ್ರಕಟಣೆ ಮಾಡುವುದೊಂದೇ ಈ ಸಂಸ್ಥೆಗಳ ಕೆಲಸವಾದರೆ ಕನ್ನಡದ ಜ್ಞಾನ ಸೃಷ್ಟಿ ಹಿಂದುಳಿಯಬಹುದು. ಈ ಎಲ್ಲ ಸಂಸ್ಥೆಗಳ ವೆಬ್ಸೈಟ್ಗಳಿಂದ ಹಿಡಿದು ಅವುಗಳ ಒಟ್ಟಾರೆ ಕಾರ್ಯಯೋಜನೆಗಳನ್ನು ಮುರಿದು ಕಟ್ಟಬೇಕಾಗಿದೆ.

ಇನ್ನು ವಿಶ್ವವಿದ್ಯಾಲಯಗಳ ಜ್ಞಾನಶಿಸ್ತುಗಳು ಕನ್ನಡತ್ವದ ಜ್ಞಾನ ಸೃಷ್ಟಿಗಾಗಿ ಅಂತರ್ಶಿಸ್ತೀಯತೆಗೆ ತೆರೆದುಕೊಂಡು, ಅಧ್ಯಯನದ ಹೊಸ ವಿಧಾನಗಳನ್ನು ಶೋಧಿಸುತ್ತಾ, ಬಹುಭಾಷಾ (ಕೊನೆಯಪಕ್ಷ ದ್ವಿಭಾಷಾ) ಕಸುವನ್ನು ಮೈಗೂಡಿಸಿಕೊಂಡರೆ ಉಚಿತವೆನಿಸುತ್ತದೆ. ಕನ್ನಡತ್ವವೆಂದರೆ ಕೇವಲ ಸಾಹಿತ್ಯ, ಸಂಸ್ಕೃತಿ ಅಷ್ಟೇ ಅಲ್ಲ ಎನ್ನುವುದಾದರೆ, ಈ ಜಗತ್ತನ್ನು ರೂಪಿಸುತ್ತಿರುವ ವಿಜ್ಞಾನ, ತಂತ್ರಜ್ಞಾನ, ಇನ್ನುಳಿದ ಜಾಗತಿಕ ಆಗುಹೋಗುಗಳ ತಿಳಿವಳಿಕೆಯನ್ನು ತಜ್ಞರು ಕನ್ನಡದಲ್ಲಿ ಸೃಷ್ಟಿ ಮಾಡುವುದು ‘ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.