ಕನ್ನಡ ಶಾಲೆಗೆ ಪುಷ್ಟಿ ನೀಡಲಿ
ದಶಕಗಳಿಂದ ನೆರೆಯ ಜತ್ತ, ಅಕ್ಕಲಕೋಟ, ಸೊಲ್ಲಾಪುರ ಭಾಗದಲ್ಲಿಯ ಕನ್ನಡ ಶಾಲೆಗಳು ಮುಚ್ಚುತ್ತಿರುವುದರ ಬಗ್ಗೆ ನಮ್ಮ ಸರ್ಕಾರಕ್ಕೆಷ್ಟು ಮಾಹಿತಿಯಿದೆ? ಅದಕ್ಕೆ ಕ್ರಮವೇನು ಜರುಗಿಸಿದ್ದಾರೆ? ಅಲ್ಲಿಯ ಸರ್ಕಾರದ ಷಡ್ಯಂತ್ರದ ಭಾಗವಾಗಿರಬಹುದಾದ ನೀತಿಗಳಿಗೆ ನಮ್ಮ ಸರ್ಕಾರದ ಪ್ರತಿ ತಂತ್ರಗಳು ಯಾವುವು? ಅಲ್ಲಿಯ ಶಿಕ್ಷಣ ನೀತಿಯೆಂದರೆ, ಕನ್ನಡ ಶಾಲೆಗಳ ಸ್ಥಿತಿಗತಿಗಳನ್ನು ದಯನೀಯಗೊಳಿಸುವುದು. ನಿವೃತ್ತಿಯಾದ ಕನ್ನಡ ಶಾಲೆಯ ಶಿಕ್ಷಕರ ಸ್ಥಾನಕ್ಕೆ ಹೊಸ ನೇಮಕಾತಿ ಮಾಡದೇ ಇರುವುದು. ಇದರಿಂದ ಕನ್ನಡ ಶಿಕ್ಷಕರ ಕೊರತೆ ಸೃಷ್ಟಿಗೊಳ್ಳುತ್ತದೆ. ಆಗ ಸಹಜವಾಗಿ ಕನ್ನಡ ಶಾಲೆಗಳ ಕದ ಮುಚ್ಚುತ್ತದೆ. ಅವು ಮರಾಠಿ ಶಾಲೆಗಳಾಗಿ ಪರಿವರ್ತನೆ ಆಗುತ್ತವೆ. ಇದು ಕನ್ನಡ ಕುಂದುವ ಕಾಡುವ ಭಯ!
ಹೀಗೆ ಕನ್ನಡ ಶಿಕ್ಷಕರಿಲ್ಲದೇ ಕನ್ನಡ ಶಾಲೆಗಳು ಮುಚ್ಚಿ, ಭವಿಷ್ಯತ್ತಿನಲ್ಲಿ ಕನ್ನಡವೇ ಮಾಯವಾಗುವ ಸೂಚನೆಗಳಿವೆ. ಕಾಸರಗೋಡು ಮತ್ತು ಸೊಲ್ಲಾಪುರ ಕನ್ನಡ ಭಾಷಿಕ ಪ್ರದೇಶಗಳ ಶೈಕ್ಷಣಿಕ, ಸಾಂಸ್ಕೃತಿಕ ಅಗತ್ಯಗಳ ಸಮೀಕ್ಷೆ ನಡೆದು ಕ್ರಮ ಜರುಗಿಸುವ ತುರ್ತು ಅಗತ್ಯವಿದೆ. ಈ ಮೂಲಭೂತ ವಿಚಾರಗಳತ್ತ ಸರ್ಕಾರ ಗಮನ ಹರಿಸಲಿ.