(ಈ ಬರಹವು ಪ್ರಜಾವಾಣಿಯ ಭಾನುವಾರದ ಪುರವಣಿಯಲ್ಲಿ ಫೆ.2, 2020ರಂದು ಪ್ರಕಟವಾಗಿತ್ತು)

ಹೊಸ ಆಕರಗಳು ಬೆಳಕಿಗೆ ಬಂದಾಗ ಇಲ್ಲವೇ ಹಳೆಯ ಆಕರಗಳಲ್ಲಿ ಹೊಸಹೊಳಹುಗಳು ಮಿಂಚಿದಾಗ, ಅರ್ಧವಿರಾಮವಿತ್ತು ನಿಲ್ಲಿಸಿದ್ದ ಬರಹದೆಡೆಗೆ ಮರಳಬೇಕಾಗುವುದು. ಇಸಿಲವು ಕನ್ನಡ ಪದವಲ್ಲ, ಪ್ರಾಕೃತದ್ದು ಎಂದಾಗ, ಅದು ತೆರವು ಮಾಡಿದ ಸ್ಥಾನವನ್ನು ತುಂಬಲು ಅಷ್ಟೇ ಪುರಾತನವಾದ ಕನ್ನಡ ಪದವಾವುದಾದರೂ ಇದೆಯೇ ಎಂಬುದರ ಹುಡುಕಾಟದಲ್ಲಿರುವ ನಮಗೆ ಇತ್ತೀಚೆಗೆ ದೊರಕಿರುವ ಕೆಲವು ಪ್ರಾಕೃತ ಶಾಸನಗಳು ಈ ಕ್ಷೇತ್ರದೆಡೆ ಮತ್ತೊಮ್ಮೆ ಮರಳುವಂತೆ ಮಾಡಿ, ಆರಂಭ ಕಾಲದ ಕರ್ನಾಟಕದ ಇತಿಹಾಸದಲ್ಲಿ ಹೊಸ ಬಗೆಯ ಆಸಕ್ತಿಯನ್ನು ಉಂಟು ಮಾಡಿವೆ.

ಅಶೋಕನು ಹಾಕಿಸಿದ ಶಾಸನಗಳು: ತನ್ನ ಜೀವಿತಾವಧಿಯಲ್ಲಿ ಹಾಕಿಸಿದ ಹಲವು ಬಗೆಯ ಶಾಸನಗಳಲ್ಲಿ ಅತಿಹೆಚ್ಚು ಸಂಖ್ಯೆಯ ಕಿರುಬಂಡೆ ಶಾಸನಗಳನ್ನು ಅಶೋಕನು ಕ್ರಿ.ಪೂ. ಮೂರನೆಯ ಶತಮಾನದಲ್ಲಿ ಹಾಕಿಸಿದ್ದು ಕೆಳದಖ್ಖಣದಲ್ಲಿ. ಇವಲ್ಲದೆ ಬೃಹತ್ ಬಂಡೆಶಾಸನ (ಯರ್ರಗುಡಿ), ಸ್ತಂಭಶಾಸನ (ಅಮರಾವತಿ), ವಿಶೇಷ ಶಾಸನ (ಸಣ್ಣತಿ)ಗಳ ಒಂದೊಂದು ಮಾದರಿಯನ್ನೂ ಇಲ್ಲಿ ಪರಿಚಯಿಸಿದ್ದನು. ಈ ಎಲ್ಲ ಶಾಸನಗಳಲ್ಲಿ ಅಶೋಕನು ಹೆಸರಿಸಿದ್ದು ತನ್ನ ಸಾಮ್ರಾಜ್ಯದ ಎರಡು ಆಡಳಿತ ಘಟಕಗಳಾದ ಸುವಣ್ಣಗಿರಿ ಮತ್ತು ಇಸಿಲವನ್ನು ಮಾತ್ರ. ಆತ ಹೆಸರಿಸಿದ ಸುವಣ್ಣಗಿರಿ ಮತ್ತು ಇಸಿಲದಲ್ಲಿ ಒಂದೂ ಆತನ ಆಡಳಿತದ ನಂತರ ಉಳಿದುಕೊಳ್ಳಲಿಲ್ಲ. ಆತನು ಹೆಸರಿಸದೆ ಹಾಕಿಸಿದ ಶಾಸನ ಕೇಂದ್ರಗಳಲ್ಲಿ ಬಹುತೇಕ ಗ್ರಾಮಗಳು ಇತಿಹಾಸದಲ್ಲಿ ಮುಂದುವರಿದವು. ಇವುಗಳಲ್ಲಿ ಪ್ರಧಾನವೂ ಹೆಸರಾರ್ಹವೂ ಆಗಿರುವುದು ಕುಪನ ಅಥವಾ ಇಂದಿನ ಕೊಪ್ಪಳ.

ಕನಗನಹಳ್ಳಿ ಸ್ತೂಪದ ವಿಶೇಷತೆಗಳು: ಕನಾಟಕದ ಇನ್ನಿತರೆಡೆ ಅಶೋಕನು ಬರೆಸಿರುವ ಬಂಡೆಗಳ ಕಿರುಶಾಸನಗಳಂತೆ ಈ ಶಾಸನವಿಲ್ಲ; ಅಪರೂಪವಾಗಿ ಆತನು ಬರೆಸಿರುವ ಫಲಕ ಶಾಸನ ಇದಾಗಿರುವುದಲ್ಲದೆ, ಅಷ್ಟೇ ಅಪರೂಪದ ಸಂದೇಶವನ್ನೂ ಹೊಂದಿದೆ. ಕನಗನಹಳ್ಳಿಯ ಸ್ತೂಪದ ಹೊರಮೈ ಮಧ್ಯಭಾಗವನ್ನು ಅಲಂಕರಿಸಿರುವ 59 ಉಬ್ಬುಶಿಲ್ಪದ ಬೃಹತ್ ಫಲಕಗಳು ಮತ್ತು ಇವುಗಳ ಅಡಿಯಲ್ಲಿ ಸಾಲುಗೊಂಡು ಜೋಡಿಸಿರುವ ಸುಮಾರು 100 ಹರಿವಾಣಗಳು. ಸಚಿತ್ರ ಫಲಕಗಳನ್ನು ಕವಚ ಪದದಿಂದ, ಹರಿವಾಣಗಳನ್ನು ಪುಫಗಹನಿ ಪದದಿಂದ ಪ್ರಾಕೃತ ಶಾಸನಗಳಲ್ಲಿ ಕರೆಯಲಾಗಿದೆ. (ಪುಫ-ಪುಷ್ಪ; ಗಹನಿ-ಗುಂಪು, ಸಂಗ್ರಹ).

ಸಂದರ್ಶಕರು ಸ್ತೂಪಕ್ಕೆ ಪ್ರದಕ್ಷಿಣೆ ಹಾಕುವಾಗ ಕವಚಗಳೆಡೆ ಉಗ್ಗುತ್ತಿದ ಪುಪ್ಪಗಳು, ಕೆಳಗೆ ಬಿದ್ದು ಈ ಪುಫಗಹನಿಗಳಲ್ಲಿ ಸಂಗ್ರಹವಾಗುತ್ತಿದ್ದವು. ಇವೆರಡು ವಾಸ್ತುಘಟಕಗಳನ್ನು ದೇಶದ ಬೇರೆ ಬೇರೆ ಭಾಗದಿಂದ ಇಲ್ಲಿಗೆ ಬಂದಿದ್ದ ಬೌದ್ಧಾನುಯಾಯಿಗಳು ದಾನ ಮಾಡಿದ್ದರು. ಇವರಲ್ಲಿ ಧಾನ್ಯಕಟಕದ ಆರು ದಾನಿಗಳ, ಕುಪನ ದ ಮೂವರ, ಹಿಮಾಲಯ ಮತ್ತು ಬಟನು-50 ಒಬ್ಬೊಬ್ಬ ದಾನಿಗಳ ಹೆಸರುಗಳಿವೆ.

ಕುಪನದ ದಾನಿಗಳು: ಇಲ್ಲಿ ನಮಗೆ ಪ್ರಸ್ತುತವಾದವರು ಕುಪನ ಹೆಸರಿನ ಮೂವರು ಬೌದ್ಧರು. ಅವರ ವಿವರ ಹೀಗಿದೆ:

1. ಪುಫಗಹನಿಯೊಂದನ್ನು (ಸಂ.22) ದಾನಮಾಡಿದ ಕುಪನನೆಂಬವನು ತಾನೊಬ್ಬ ಉಪಾಸಕನೆಂದು ಗುರುತಿಸಿಕೊಂಡಿರುವನು. ಈತನು ಬುದ್ಧನ ಅನುಯಾಯಿಯಾದ ಒಬ್ಬ ಗೃಹಸ್ಥನೆಂದು, ತಾನು ಹುಟ್ಟಿದ ಸ್ಥಳನಾಮದಿಂದ ಗುರುತಿಸಿಕೊಂಡಿದ್ದನೆಂದು, ಅರ್ಥೈಸಬಹುದು.

2. ಎರಡು ಪುಫಗಹನಿಗಳನ್ನು ದಾನಮಾಡಿದ (ಸಂ.24, 25) ಇನ್ನೊಬ್ಬ ಕುಪನನು ಖಜನಕರ ಪದದೊಡನೆ ತಾನು ಬರೆಸಿದ ಎರಡೂ ಶಾಸನಗಳಲ್ಲಿ ಗುರುತಿಸಿಕೊಂಡಿರುವನು. ಖಜನಾಕರಸ ಮಹಿಸಕಸ ಕುಪನಸ ದಾನ ಎಂಬುದು ಪೂರ್ಣಪಠ್ಯ. ಮಹಿಸಕದ ಖಜನಾಕರ ನಿವಾಸಿಯಾದ ಕುಪನ ಮತ್ತು ಮಹಿಸಕದ ಖಜನಕಾರ ಕುಪನ ಎಂದು. ಎರಡೂ ಬಗೆಯಲ್ಲಿ ಇದನ್ನು ಅರ್ಥೈಸಬಹುದು. ಎರಡನೆಯದನ್ನು ಕುಪನನು ಖಜನಕಾರ (ಭಂಡಾರಿ ಅಥವಾ ಖಜಾನೆಯ ಅಧಿಕಾರಿ) ಎಂದು ಅರ್ಥಮಾಡಬಹುದು. ಈತನು ಸ್ಥಳನಾಮದಿಂದ ಗುರುತಿಸಿಕೊಂಡದ್ದು ಮತ್ತು ಈ ಸ್ಥಳವು ಖಜಾನೆಯ ಕೇಂದ್ರವಾಗಿದ್ದು ಇಲ್ಲಿ ಸ್ಪಷ್ಟವಾಗಿದೆ.

3. ಇನ್ನೊಬ್ಬ ಕುಪನನ ಉಲ್ಲೇಖವು ಒಂದು ತೃಟಿತ ಶಾಸನದಲ್ಲಿ ಕಾಣಿಸಿಕೊಂಡಿದ್ದು, ಕುಪನ ರಠಕಸಅಯ ಎಂಬ ಪಾಠವನ್ನು ಹೊಂದಿದೆ. ದಾನಿಯಾದರೂ ಈತನು ಕೊಟ್ಟ ದಾನವಾವುದೆಂಬುದು ಸ್ಪಷ್ಟವಾಗುತ್ತಿಲ್ಲ. ಅಲ್ಲದೆ ತನ್ನ ಹೆಸರನ್ನು ತಿಳಿಸದೆ ಅಯ-(ಆರ್ಯ)ನೆಂದು ಕರೆದುಕೊಂಡಿರುವ ಈತನು ಗೃಹಸ್ಥನಾಗಿರಲಿಲ್ಲ, ಭಿಖ್ಖುವಾಗಿದ್ದನು ಎನ್ನಬಹುದು. ಗೌರವಯೋಗ್ಯ ಅಥವಾ ಪೂಜಾರ್ಹ, ಎಂಬುದು ಅಯ ಪದದ ಅರ್ಥ. ಈ ಭಿಖ್ಖು ತನ್ನ (ಪೂರ್ವಾಶ್ರಮದಲ್ಲಿ) ಕುಪನರಠಿಕ, ಅಂದರೆ ಕುಪನ ರಾಷ್ಟ್ರದವನಾಗಿರುವ ಸಾಧ್ಯತೆ ಇದೆ.

ಆರಂಭಕಾಲದ ನಗರ: ಈ ಮೂರು ಶಾಸನಗಳು ಕನ್ನಡನಾಡಿನ ಆರಂಭಕಾಲದ ನಗರವೊಂದರ ಇತಿಹಾಸವನ್ನು ಬಿಚ್ಚಿಟ್ಟಿವೆ. ಈ ಕುಪನವು ಇಂದಿನ ಕೊಪ್ಪಳ ಜಿಲ್ಲಾ (ಹಿಂದೆ ರಾಯಚೂರು ಜಿಲ್ಲೆಯ) ಕೇಂದ್ರವಾದ ಕೊಪ್ಪಳವನ್ನು ಸೂಚಿಸುವುದೆಂಬುದನ್ನು ಸುಲಭವಾಗಿ ಗ್ರಹಿಸಬಹುದು. ಈ ಸ್ಥಳಕ್ಕೆ ಐತಿಹಾಸಿಕ ಮಹತ್ವವನ್ನು ಮೊತ್ತಮೊದಲು ತಂದುಕೊಟ್ಟವನು ಮೌರ್ಯ ಸಾಮ್ರಾಟ ಅಶೋಕ. ಈತನು ಬರೆಸಿದ ಎರಡು ಕಿರುಶಾಸನಗಳಲ್ಲಿ ಒಂದು ಗವಿಮಠದ ಬೆಟ್ಟದ ಮೇಲಿದ್ದರೆ, ಇನ್ನೊಂದು ಪಾಲ್ಕಿಗುಂಡು ಬೆಟ್ಟದ ಮೇಲಿದೆ. ಈ ಎರಡು ಶಾಸನಗಳಲ್ಲಿ ಈ ಸ್ಥಳವನ್ನು ಆತನು ಹೆಸರಿಸಿಲ್ಲ; ಇಲ್ಲಿ ಮಾತ್ರವಲ್ಲ, ಕೆಳದಖ್ಖಣದಲ್ಲಿ ಬರೆಸಿದ ಯಾವ ಸ್ಥಳದ ಹೆಸರನ್ನೂ (ಸುವರ್ಣಗಿರಿ ಮತ್ತು ಇಸಿಲ ಹೊರತುಪಡಿಸಿ) ಅಶೋಕನು ಹೆಸರಿಸಿಲ್ಲ.

ಕ್ರಿ.ಪೂ. ಮೂರನೆಯ ಶತಮಾನದಲ್ಲಿ ಈ ಸ್ಥಳಗಳು ಅನಾಮಧೇಯ ಗ್ರಾಮಗಳಾಗಿದ್ದರೂ ನಿವಾಸ ಸ್ಥಾನಗಳಾಗಿದ್ದವು. ಬೃಹತ್ ಶಿಲಾಯುಗದ ನೆಲಸಿಗರು ತಾವು ವಾಸಿಸುತ್ತಿದ್ದ ಸ್ಥಳವನ್ನು ವಿಶಿಷ್ಟ ಹೆಸರಿನಿಂದ ಗುರುತಿಸುತ್ತಿರಲಿಲ್ಲ. ಒಂದು ವೇಳೆ ಗುರುತಿಸಿದರೂ ಅದನ್ನು ಬರೆದು ತಿಳಿಸುತ್ತಿರಲಿಲ್ಲ ಮತ್ತು ಬರೆಯುವ ಅಕ್ಷರಜ್ಞಾನವೂ ಅವರಿಗೆ ಇರಲಿಲ್ಲ. ಅಶೋಕನಿಂದ ಅಕ್ಷರಗಳನ್ನೂ ಬರೆಯುವ ವಿಧಾನವನ್ನೂ ಕಲಿತುಕೊಂಡ ಈ ಜನಾಂಗವು ಅವನಿಂದ ಬದುಕುವ ಗುರಿಯನ್ನು ಅರಿತುಕೊಂಡಿತು. ಮೊದಲ ಹಂತದಲ್ಲಿ ಬರವಣಿಗೆಗೆ ಪೋಷಣೆ ಒದಗಿಸಿದವರು ಸಾತವಾಹನರು (ಕ್ರಿ.ಪೂ. ಎರಡರಿಂದ ಕ್ರಿ.ಶ. ಎರಡನೆಯ ಶತಮಾನದ ಅಂತ್ಯ) ಮತ್ತು ಅವರ ಸಮಕಾಲೀನರು. ಕನ್ನಡನಾಡಿನಲ್ಲಿ ಬರಹವು ಸಾರ್ವತ್ರಿಕವಾಗಿದ್ದು ಕ್ರಿ.ಪೂ. ಎರಡನೆಯ ಶತಮಾನದಿಂದೀಚಿಗೆ, ಈ ಮೂರು ಪ್ರಾಕೃತ ಶಾಸನಗಳನ್ನು ಬರೆಸಿದ್ದೂ ಇದೇ ಕಾಲದಲ್ಲಿ.

ಕೊಪ್ಪಳದ ಗವಿಮಠ ಮತ್ತು ಪಾಲ್ಕಿಗುಂಡಿನ ಮೇಲೆ ಅಶೋಕ ಬರೆಸಿದ ಶಾಸನಗಳಲ್ಲಿ ಆತನು ತನ್ನ ಬಗ್ಗೆ ಒಂದೆರಡು ಮಾತುಗಳನ್ನು ಮತ್ತು ಅತಿ ಕೆಳಹಂತದ ಬೃಹತ್ ಶಿಲಾಯುಗದ ತನ್ನ ಪ್ರಜೆಗಳು ಸಂಕಲ್ಪಿಸಿಕೊಳ್ಳಬೇಕಾದ ಒಂದೆರಡು ಮಾತುಗಳನ್ನು ಹೇಳಿರುವನು. ತನ್ನ ಬಗ್ಗೆ ಹೇಳುತ್ತಾ ತಾನು ಎರಡೂವರೆ ವರ್ಷಗಳ ಹಿಂದೆ ಉಪಾಸಕ (ಬುದ್ಧನ ಅನುಯಾಯಿ)ನಾಗಿದ್ದುದನ್ನು, ಒಂದು ವರ್ಷದ ಹಿಂದೆ ಸಂಘವನ್ನು ಸಂದರ್ಶಿಸಿ ತನ್ನ ಆಸಕ್ತಿಯನ್ನು ಹೆಚ್ಚಿಸಿಕೊಂಡಿದ್ದನ್ನು, ತಿಳಿಸುವನು.ಈ ಕಾಲದಲ್ಲಿ ಸಾಮಾನ್ಯರಿಗೆ ದೇವರ ಸಂಪರ್ಕ ಇಲ್ಲದಿರುವುದನ್ನು ಅರಿತು, ದೈವತ್ವವು ಶ್ರೇಷ್ಠ ಕುಲಜರ ಸ್ವತ್ತಲ್ಲ, ನಿಷ್ಠೆಯಿಂದ ಪ್ರಯತ್ನಿಸಿದರೆ ಅಂತ್ಯಜರೂ ವಿಮುಕ್ತಿಯನ್ನು ಪಡೆಯಬಹುದು ಎಂಬ (ಕರ್ಮಸಿದ್ಧಾಂತವನ್ನು ಪ್ರಶ್ನಿಸುವ) ತತ್ವವನ್ನು ಬೋಧಿಸುವನು.

ಕುಪನದ ಸ್ವರೂಪ ಮತ್ತು ಹಿರಿಮೆ: ಅಶೋಕನ ಕಾಲದಲ್ಲಿಯೇ ಕುಪನವು ಒಂದು ವಸತಿಸ್ಥಾನವಾಗಿತ್ತು ಮಾತ್ರವಲ್ಲ ಆಡಳಿತಾ ಘಟಕವಾಗುವ ಅರ್ಹತೆಯನ್ನೂ ಪಡೆದುಕೊಂಡಿತ್ತು ಎಂಬುದನ್ನು ಸಾತವಾಹನರ ಕಾಲದ ಈ ಶಾಸನಗಳಿಂದ ಊಹಿಸಬಹುದು. ಇದೇನೇ ಇರಲಿ, ಈ ಕಾಲದಲ್ಲಿ ಇದೊಂದು ಖಜಾನಾ ಕೇಂದ್ರವಾಗಿತ್ತೆನಿಸುವುದು. ಇದಕ್ಕೂ ಮುಖ್ಯವಾಗಿ, ಈ ಹೆಸರಿನ ರಠ್ಠ ಅಥವಾ ರಾಷ್ಟ್ರವೆಂಬ ಆಡಳಿತಾ ಕೇಂದ್ರವು ಇಲ್ಲಿತ್ತು. ಇನ್ನೂ ಮಹತ್ವದ ವಿಷಯವೆಂದರೆ ಈ ರಠವು ಮಾಹಿಸದ (ಅಂದರೆ ಮಹಿಷ ಮಂಡಲವೆಂದು ಬೌದ್ಧದಾಖಲೆಯಲ್ಲಿ ಗುರುತಿಸಿಕೊಂಡಿರುವ) ಬೃಹತ್ ರಾಜ್ಯಾಂಗವಾಗಿದ್ದು.

ಸುಮಾರು ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಈ ನಗರದ ಅತಿದೊಡ್ಡ ಸಾಧನೆ ಎಂದರೆ, ಅದು ತನ್ನ ಜನ್ಮನಾಮವನ್ನು ಇತಿಹಾಸದುದ್ದಕ್ಕೂ ಕಾಯ್ದುಕೊಂಡು ಬಂದಿರುವುದು. ಆರಂಭದಲ್ಲಿ ಕುಪನ ಎಂದು ಕರೆದುಕೊಂಡಿದ್ದ ಈ ಸ್ಥಳವು ಮೊದಲ ಸಹಸ್ರಮಾನದುದ್ದಕ್ಕೂ ಕುಪಣ ಮತ್ತು ಕೊಪಣ ಎಂಬ ಹೆಸರಿನಿಂದಲೇ ಮುಂದುವರಿಯಿತು. ಇಲ್ಲಿಯ ವ್ಯವಹಾರ ಭಾಷೆಯು ಪ್ರಾಕೃತದಿಂದ ಸಂಸ್ಕೃತಕ್ಕೆ ಹಾಗೂ ಕನ್ನಡಕ್ಕೆ ಬದಲಾದರೂ ಇದು ತನ್ನ ಹೆಸರಿನಲ್ಲಿ ಬದಲಾವಣೆಯನ್ನು ತಂದುಕೊಂಡದ್ದು ನ ದಿಂದ ಣ ವರ್ಣಕ್ಕೆ (ಕುಪನ-ಕುಪಣ), ಕ ದಿಂದ ಕೊ (ಕುಪನ-ಕುಪಣ) ವರ್ಣಕ್ಕೆ ಮಾತ್ರ.

ಇದರಂತೆ ಮೊದಲ ಬೌದ್ಧಕೇಂದ್ರವಾಗಿದ್ದ ಈ ಸ್ಥಳವು ನಂತರ ಪ್ರಸಿದ್ಧ ಜೈನ ಕೇಂದ್ರವಾಗಿ ಒಂದು ಸಹಸ್ರಮಾನಕ್ಕೂ ಹೆಚ್ಚು ಕಾಲ ಇತಿಹಾಸದಲ್ಲಿ ಮೆರೆಯಿತು. ಶಾಸನಗಳಿಗೆ ಮಾತ್ರ ಸೀಮಿತವಾಗದ ಇದರ ಉಲ್ಲೇಖವು ಆರಂಭಕಾಲದ ಕನ್ನಡ ಕಾವ್ಯಗಳಲ್ಲಿಯೂ ಧ್ವನಿಸಿತು. ಕನ್ನಡದ ಮೊದಲ ಕವಿ, ಕವಿರಾಜಮಾರ್ಗದ ಕರ್ತೃ, ಶ್ರೀವಿಜಯನು ಇದನ್ನು ಮಹಾಕೊಪಣನಗರ ಎಂದು (I, 37) ಕೊಂಡಾಡಿದರೆ, 10ನೆಯ ಶತಮಾನದ ಮೊದಲ ಗದ್ಯಕವಿ ಚಾವುಂಡರಾಯನು ಇದನ್ನು ಕೊಪಣಾದ್ರಿ (ಚಂಪೂ) ಎಂದು ಮತ್ತು ಈತನ ನೆಚ್ಚಿನ ಚಂಪೂಕವಿ ರನ್ನನು ಇದನ್ನು ಕೊಪಣಾಚಲವೆಂದು ಕರೆದು, ಈ ಸ್ಥಾನದ ಪಾವಿತ್ರ್ಯವನ್ನು ಮನದಟ್ಟು ಮಾಡಿಕೊಟ್ಟಿರುವರು.

ಕುಪನ (ಕುಪಣ-ಕೊಪಣ=ಕೊಪ್ಪಳ)ದಂತೆ ಇಷ್ಟೊಂದು ದೀರ್ಘಕಾಲ ಒಂದೇ ಹೆಸರಿನಿಂದ ಕರೆಸಿಕೊಂಡ ಇನ್ನೊಂದು ಸ್ಥಳವು ಕರ್ನಾಟಕದ ಇತಿಹಾಸದಲ್ಲಿ ಇದೆಯೇ, ಎಂಬುದೊಂದು ಕುತೂಹಲ ಕೆದಕುವ ಜಿಜ್ಞಾಸೆ. ರಾಷ್ಟ್ರದ ಹೆಸರಾಂತ ಪವಿತ್ರ ಸ್ಥಳಗಳಾದ ವಾರಣಾಸಿ, ಪ್ರಯಾಗ, ಕುರುಕ್ಷೇತ್ರ, ಮದುರೈ, ಶ್ರೀಶೈಲ, ಮುಂತಾದವುಗಳ ಸಾಲಿನಲ್ಲಿ ನಿಲ್ಲಬಲ್ಲ ಕರ್ನಾಟಕದ ಏಕೈಕ ಸ್ಥಳನಾಮ ಇದಾಗಿದೆ, ಎನ್ನಬಹುದೇನೋ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.