ದಿನದ ನಟ್ಟ ನಡುವಿಗೆ ಬೆಂಗಳೂರಿನ ದಟ್ಟ ವಾಹನ ಸಂಚಾರದಿಂದ ದೂರ ದೇವನಹಳ್ಳಿಯ ಕಡೆಗೆ ಸಾಗಿದರೆ ಏರ್ಪೋರ್ಟಿನ ವಿಶಾಲ ಆವರಣ. ಬಲು ಎತ್ತರದ ಚಾವಣಿಯ ಕೆಳಗೆ ಸಾಕಷ್ಟು ಬೆಳಕು ಬೇಕಷ್ಟು ಗಾಳಿ. ಆದರೆ, ಒಂಥರ ಸಂಚಲನವೇ ಇಲ್ಲದಂತಹ ವಾತಾವರಣ.

ಬಿಸಿಲು ಇಳಿಯತೊಡಗಿದಂತೆ ವಿಶಾಲ ಬಯಲಿನಲ್ಲಿ ಸಾಗಿ ಎದುರುಬಿಸಿಲಿಗೆ ಕಣ್ಣು ಕಿರಿದಾಗಿಸಿ ಅತ್ತಿತ್ತ ನೋಡುತ್ತಿರುವಷ್ಟರಲ್ಲಿ ವಿಮಾನ ಸಮೀಪಿಸಿದ್ದೆವು. ಕಿಟಕಿ ಪಕ್ಕದ ಸೀಟಿನಲ್ಲಿ ಕುಳಿತ ಮೇಲೆ ಹೊರಗೇ ಗಮನ. ತಿಳಿ ಬಾನ ಹರವಿನಲ್ಲಿ ಸಾಗಿದಂತೆ ನಾವೊಂದು ಅನಂತದಲಿ ಚಲಿಸುವ ಚುಕ್ಕಿಯಂತೆ ತೋರುತ್ತಿದ್ದಿರಬೇಕು. ನೆಲದ ಮೇಲೆ ನಿಂತವರಿಗೆ ಅನಿಸಿತು. ಹಲವು ಸಾವಿರ ಅಡಿಗಳೆತ್ತರದಲ್ಲಿ ಹಗುರ ವಾಗಿ ಮೈಯೂದಿಕೊಂಡ ಬೆಳ್ಮೋಡಗಳು ದಟ್ಟ ಮೋಡಗಳನ್ನು ತಾಕುವಲ್ಲಿ ತೂರಿ ಬಂದ ಸೂರ್ಯನ ಕಿರಣ ವಿದ್ಯುಲ್ಲೇಖೆಯಂತೆ ತೋರಿದ ಪರಿಯನ್ನಂತೂ ಕಂಡೇ ಅನುಭವಕ್ಕೆ ದಕ್ಕಿಸಿಕೊಳ್ಳಬೇಕು.

ಮೋಡವೂ ರಸ್ತೆ ಮೇಲಿನ ಉಬ್ಬಿನಂತೆ ಲೋಹದ ಹಕ್ಕಿಯನ್ನು ತುಸು ತುಸುವೇ ಮೇಲೆತ್ತಿ ತನ್ನ ಘನ ಸಾರದ ಅನುಸಾರ ಮೈದಡವಿ ಕಳಿಸಿದಂತೆನಿಸುತಿತ್ತು. ಅಸ್ತವ್ಯಸ್ತವಾದ ಹಾಸಿನ ಮೇಲೆ ತೇಲಿದಂತೆ. ಇನ್ನೇನು ಮಳೆ ಬರುವ ಹೊತ್ತು. ಮೋಡಗಳು ಹಲವು ಛಾಯೆಗಳಲ್ಲಿ ಅದೆಂಥ ಕಲಾತ್ಮಕ ಆಕಾರ ತಳೆಯುತ್ತವೆ ಎಂದೆಲ್ಲ ಕತ್ತು ನೋಯುವಷ್ಟು ಹೊತ್ತು ನಿಂತ ನೆಲದಿಂದ ನಿರುಕಿಸಿದ ಸನ್ನಿವೇಶಗಳು ಎಷ್ಟೋ ಇದ್ದವು. ಎರಡು ಸಲ ವಿಮಾನಯಾನದಲ್ಲಿ ಮಳೆ ಕಂಡಿತ್ತಾದರೂ ಅದು ಕತ್ತಲಾವರಿಸಿದ ಮೇಲೆಯೇ... ಅಷ್ಟಾಗಿ ಅನುಭವಕ್ಕೆ ಬಂದಿರಲಿಲ್ಲ. ಹೊರಟಿದ್ದು ಮುಂಬೈಗೆ ಅದೂ ಮಾನ್ಸೂನಿನಲ್ಲಿ.

ಮುಂಗಾರಿನ ಹದ ಮಳೆಯ ನಿರೀಕ್ಷೆಯಲ್ಲಿ ನಿಂತ ನೆಲದಿಂದ ಆಕಾಶವನ್ನು ಕಂಡದ್ದಕ್ಕಿಂತ ತೀರ ಭಿನ್ನ ಅನುಭವವಿದು. ಮೋಡಗಳ ಮೇಲಿಂದ, ಅವುಗಳ ಸನಿಹದಿಂದ ಮಳೆಗಾಲದ ಮುಗಿಲು ಕಂಡ ಕ್ಷಣ ಎಲ್ಲಕೂ ಮಿಗಿಲು. ಮಳೆ ಬೀಳುವಾಗ ಕುತೂಹಲದಿಂದ ಆಕಾಶದತ್ತ ಮುಖ ಮಾಡಿ ನಿಲ್ಲುವುದಕ್ಕೂ ಹೀಗೆ ಮಳೆ ಬೀಳುವ ಎಡೆಯಿಂದಲೇ ಮಳೆಯಾಗಮನವನ್ನು ಇನ್ನಿಲ್ಲದಂತೆ ಬಯಸಿದ ಕ್ಷಣಕ್ಕೂ ವ್ಯತ್ಯಾಸ ಇದ್ದೇ ಇತ್ತು.

ವಿಮಾನ ಉತ್ತರದತ್ತ ಚಿಮ್ಮಿದಂತೆನಿರಪಾಯಕಾರಿ ಮೋಡಗಳು ಬಾಂಬೆ ಮಿಠಾಯಿಯಂತೆ ಕಾಣತೊಡಗಿ ದ್ದವು. ಅಷ್ಟರಲ್ಲಿ... ಅರೆರೆ ಆಕಾಶ ಎಲ್ಲಿ ಹೋಯಿತು? ನೋಡನೋಡುತ್ತಿದ್ದಂತೆ ಬಿಳಿಯ ಮೋಡದ ಮುಖ ಕಪ್ಪಿಟ್ಟು ಅವುಗಳ ಹೊರೆಯೂ ಅನುಭವಕ್ಕೆ ಬರತೊಡಗಿತ್ತು. ಅಲ್ಲಿ ಸೂರ್ಯನಿಲ್ಲ. ಗುಡುಗು ಕಿವಿಯಪ್ಪಳಿಸಲಿಲ್ಲ. ಮಿಂಚಿನ ಸೆಳಕಿತ್ತು. ಅಹಹಾ ಏನದೃಷ್ಟ ಎನಿಸಿಬಿಡುವಂಥ ಅಮೂರ್ತ ಚಿತ್ರ.

ಮಳೆಯ ನಿರೀಕ್ಷೆಯಲ್ಲಿ ಕಿಟಕಿಗೇ ಮುಖವಿಟ್ಟು ಕಾದಿರುವಾಗಲೇ ಕಣ್ಣೆದುರೇ ಕಂಡರೂ ಅಪ್ಪಿಕೊಳ್ಳ ಹೋದರೆ ಕೈಗೆ ಸಿಗದೆ ತಪ್ಪಿಸಿಕೊಂಡು ಓಡಿ ಸತಾಯಿಸುವ ತುಂಟ ಹುಡುಗನಂತೆ ದೂರ ದೂರಕೆ ಹೋಗುತಿರುವ ಕಪ್ಪು ಮೋಡಗಳು...ಚೆದುರಿಹೋದ ಬಿಡಿಚಿತ್ರಗಳು. ದೊಡ್ದದೊಂದು ಡ್ರೋನ್ ಕ್ಯಾಮೆರಾ ದಂತೆ ನಾವು ಕುಳಿತ ವಿಮಾನ... ಈಗ ದಂಡೆತ್ತಿ ಹೊರಟ ಮಾನ್ಸೂನಿನ ಸೇನಾ ಮುಂದಳದ ಮೇಲೆ ಹಾರಿದಂತಿತ್ತು. ಮೋಡ ಭೇದಿಸಿಕೊಂಡು ವೇಗವಾಗಿ ಚಲಿಸುವಾಗ ಅಷ್ಟೇ ವೇಗವಾಗಿ ಮೋಡಗಳು ಹಿಂದಕ್ಕೆ ಚಲಿಸಿದ್ದು ಒಂಥರ ಕ್ಯಾಮೆರಾದ ಫ್ಲ್ಯಾಷ್ ಬೆಳಕಿನಂತೆಯೇ ಕಾಣುತಿತ್ತು. ಕತ್ತಲುಗವಿದು ಮಂಕಾದ ವಾತಾವರಣ. ಸುಳಿ ಸುತ್ತುತ್ತಿದ್ದ ಮೋಡ ಒಮ್ಮೆಲೆ ವಿಸ್ತರಿಸಿ ನಮ್ಮ ಪಕ್ಕ, ಮೇಲೆ, ಕೆಳಗೆ ಹರಡಿಕೊಂಡಂತೆ... ಗಾಢ ಬೂದಿ ಬಣ್ಣದೊಳಗೆ ನಾವು ತೂರಿಹೋದಂತೆ... ಕಣ್ಣಿಗೆ ಎರಚಿದ ಮಂಕುಬೂದಿ! ಇನ್ನೇನೂ ಕಾಣದೆ... ಊಫ್ ದಟ್ಟನೆ ಮೋಡ ಸೀಳಿ ಹೊರಟೆವೆ? ಸುರಂಗದೊಳ ಹೊಕ್ಕು ಶರವೇಗದಲ್ಲಿ ಈಚೆ ಬಂದೆವೇನೊ ಎನಿಸುವ ಹೊತ್ತಿಗೆ ಪುಟ್ಟ ಕಿಟಕಿಯಾಚೆ ಆರ್ದ್ರತೆ ಗೋಚರಿಸಿತ್ತು.

ಮಳೆಯ ಮೊದಲ ಕಣ ಕಾಣಿಸಿಕೊಂಡ ರೂಪ ವಿಸ್ಮಯವೇ. ಚೂಪಾದ ಸೂಜಿಯಂತೆ, ಬಾಣಗಳ ಆಕಾರದಲ್ಲಿ ರೆಕ್ಕೆಯ ಮೇಲೆ ಮೂಡಿದ ತೇವದಿಂದಲೇ ಅರಿವಿಗೆ ಬಂದದ್ದು ಮಳೆ ಬಂತು ಅಂತ. ಮಳೆ ಮೇಲಿಂದ ಸುರಿಯದೆ ಎದುರಿನಿಂದ ನಮ್ಮನ್ನು ಹಾದುಹೋದದ್ದು ಕ್ಯಾಪ್ಟನ್ ದನಿ ಸೀಟ್ ಬೆಲ್ಟ್ ಹಾಕಲು ಸೂಚನೆ. ನಾವು ಇನ್ನೇನು ಕೆಟ್ಟ ಹವಾಮಾನವನ್ನು ಎದುರುಗೊಳ್ಳಲಿದ್ದೇವೆ ಎಂಬ ಎಚ್ಚರಿಕೆ.

ಮುಂಬೈನ ನೆಲದತ್ತ ವಿಮಾನ ಇಳಿಯತೊಡಗಿದಾಗ ಹಸಿಯಾದ ಹಸಿರು, ಕಂದು ನೆಲ, ತೊಯ್ದು ತೊಪ್ಪೆಯಾದ ಹಾದಿ. ಅಲ್ಲಿನ ರಸ್ತೆಗಿಳಿದ ಟ್ಯಾಕ್ಸಿಯ ಕಿಟಕಿಯಿಂದ ಕಂಡದ್ದು ಧೋ ಎಂದು ಸುರಿಯುತ್ತಿದ್ದ ಮಳೆ. ನುಸಿಗಡಿದ ಅಂಬರ ಛೇದಿಸಿ ಕೋಟಿ ತೂತಾದವೊ ಎನಿಸುವಂತೆ ಅದಾಗಲೇ ಮೂರು ದಿನಗಳಿಂದ ಆ ನೆಲದಲ್ಲಿ ಬಿಟ್ಟೂ ಬಿಡದೆ ಸುರಿದ ಮಳೆ. ನೆಂದ ಹೃದಯಗಳೆಷ್ಟೋ. ಕಂಡದ್ದು ಯಾವುದಕ್ಕೂ ಜಗ್ಗದಂತೆ ಬಣ್ಣಬಣ್ಣದ ಕೊಡೆಹಿಡಿದು ನಡೆದವರು.

ಅನಾದಿ ಕಾಲದಿಂದ ಮಳೆ, ಬೆಳೆ. ಆದರೆ, ಪ್ರತಿ ಮುಂಗಾರು ಪ್ರವೇಶದಲ್ಲೂ ಆ ಮೊದಲ ಮಳೆ ನೆನಪಾಗದೆ? ಕಳೆದ ಸಲವಂತೂ ತಾಪ ಎಂಥ ತಣ್ಣನೆ ಊರುಗಳನ್ನೂ ತಟ್ಟಿಬಿಟ್ಟಿತ್ತು. ಭುವಿಯೊಡಲ ಬಿಸಿಯುಸಿರು ತೀರದ ದಾಹದಂತೇ ಭಾಸವಾಗಿ ಬೇಸಿಗೆ ಅದೆಂಥ ಕ್ರೂರ ಎಂದೆಲ್ಲ ಶಪಿಸುವ ಮಾತುಗಳು ಕೇಳಿಬಂದ ಹೊತ್ತು. ತಿಳಿ ನೀಲಿ ಬಾನಿಗೇರುವ ವಿರಹ ಭಾವಗಳ ಕಣ ಮಣ ಭಾರ. ಹೊರಲಾರದೆ ಈ ಭಾರ ಇಳಿಸಿ ತಂಪೆರೆವ ಮಹಾರಾಯನೇ ಸೈ ಮಳೆ.

ನೀರವ ಮೌನಕ್ಕೆ ಬೆರೆಸಿದ ಮೆಲು ನಲುಮೆಯಂಥ ಮಳೆಹಾಡು. ಇನ್ನಷ್ಟು ಹತ್ತಿರವಾಗುವ ಗುಡುಗಿನ ಸದ್ದು, ಮಾವಿನ ಮರದೆಲೆಗೆ ಬಡಿಯುವ ಗಾಳಿಯ ತಾಡನದ ಸದ್ದೂ ಸೇರಿ ಅಬ್ಬ ತಾರಕ. ಕಾರಣವೇ ಇಲ್ಲದೆ ಇದ್ದಕ್ಕಿದ್ದಂತೆ ಪ್ರೀತಿಯುಕ್ಕುವ ಹಾಗೆ ಮುನ್ಸೂಚನೆ ನೀಡದೇ ತಬ್ಬುವ ಪರಿಗೆ ಎದೆಯಿದು ತನನ. ಬಾನು ಭೂಮಿಯ ಮಿಲನ ಸದ್ದಿನಲಿ ಏಕಭಾವ. ನಿಲ್ಲದೇ ನಡೆಯುವ ಸಂಗೀತ... ಮನ ಹುಚ್ಚೆದ್ದು ಕುಣಿಯದೆ ಏನು?! ಮಂದ್ರ ಗಡಸು ಸ್ವರಕ್ಕೆ ಆಗಾಗ ತೆಳು ದನಿಯ ಜತೆ ಸೇರಿ ಹವೆಗೇ ಒಂಥರ ಅಮಲು. ಬೆಳಕಿಂಡಿಯತ್ತ ಕಣ್ಣು ನೆಟ್ಟಾಗಲೇ ಅರೆ ಬಿದ್ದೇ ಬಿಟ್ಟಿತಲ್ಲ ಒಂದು ಕಣ! ಅಚ್ಚರಿಯೇ ಸರಿ, ಮೊದಲ ಕಣ ಸ್ಪರ್ಶಿಸಿದ ಕ್ಷಣ ಮೈಯಲೊಂದು ಸಣ್ಣನೆ ನಡುಕ.

ಕಣ್ಮುಚ್ಚಿ ಆಸ್ವಾದಿಸುವಾಗಲೇ ಇನ್ನೆರಡು, ಮತ್ತೆರಡು... ತೊಟ್ಟಿಕ್ಕುತ್ತಿರುವುದು ಮಳೆಯ ಕಣವಲ್ಲ...ಇದೇನು ಅಂಬರದ ಹಣೆಯಿಂದ ಬೆವರೊಸರಿ ಭುವಿಯ ಹಣೆಯ ಮುದ್ದಿಸಿದೆ! ಅವನೆದೆಯಲ್ಲಿ ಮುಚ್ಚಿಟ್ಟುಕೊಂಡುದೆಲ್ಲ ಕರಗಿ ನೀರಾಗಿ ನೇವರಿಸಿ ಸವರಿದೆ ನವಿರು ಮುತ್ತಿನಂತೆ... ಮುತ್ತಿಕ್ಕುವ ಕ್ಷಣ ಭೂಮಿಯಿಂದ ಹೊಮ್ಮುವ ಬಿಸಿಯುಸಿರು..ಪುಳಕ. ಇಂತಹ ಕ್ಷಣಗಳ ನಡುವೆ ತಾತ್ಕಾಲಿಕ ಅಂತರ. ಕಾಲವೇ ಸ್ತಬ್ಧವಾದಂತೆ. ಮಳೆಯದೀಗ ತಡೆಯಿಲ್ಲದ ಚಲನೆ...ತುಸುವೂ ಸಂಕೋಚವಿಲ್ಲ... ಹಾದಿಯುದ್ದಕೂ ಹಚ್ಚೆ ಹಾಕಿದಂತೆ ಸುರಿವ ಈ ಮಳೆ ಬಂದರೊಮ್ಮೆ ಅದೇ ಮತ್ತು. ಮಳೆ ಎಂದರದು ಹಾಗೆಯೇ...ಧಮನಿಯಲಿ ಜೀವವಾಗಿ ಹರಿಯುತಿರುವ ಪ್ರೀತಿ ದ್ರವ್ಯದಂತೆ...ಕಣಕಣದಲೂ ಸಂಭ್ರಮಿಸುವ ಲಾಸ್ಯದಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.