‘ಶಾಪಿಂಗ್’ ಎಂಬ ಪದವೇ ನನಗೆ ಬಲು ಇಷ್ಟ. ಅದನ್ನು ‘ಕೊಳ್ಳುಬಾಕತನ’ ಎಂದೆಲ್ಲಾ ಕೆಟ್ಟದಾಗಿ ಕರೆಯುವುದನ್ನು ನಾನು ಸುತರಾಂ ಒಪ್ಪಲಾರೆ. ಕಂಪ್ಯೂಟರ್ /ಮೊಬೈಲ್ ಮುಂದೆ ಕುಳಿತು ಆ್ಯಪ್ಗಳಲ್ಲಿ ‘ಶಾಪ್’ ಮಾಡುವುದು ನನ್ನ ಪಾಲಿಗೆ ಏನೇನೂ ಮಜಾ ತರಲಾರದು. ಸಾದಾ ದಿನಗಳಲ್ಲಿ, ಕೆಲಸದ ಒತ್ತಡದಲ್ಲಿ ಹೊರಗೆ ಹೋಗಿ ಅಗತ್ಯ ವಸ್ತುಗಳನ್ನಾದರೂ ಖರೀದಿ ಮಾಡುವುದೇ ಕಷ್ಟ. ಹೀಗಿರುವಾಗ ನನ್ನಮಟ್ಟಿಗೆ ಶಾಪಿಂಗ್ ಎಂದರೆ ಪ್ರವಾಸಕ್ಕೆ ಹೋದಾಗ ನಾನು ಉತ್ಸಾಹದಿಂದ ಚೌಕಾಸಿ ಮಾಡಿ, ಹೊಸತನ್ನು ಖರೀದಿಸಿ, ಸಂತಸಪಡುವ ಪ್ರಕ್ರಿಯೆಯೇ.

ಪ್ರವಾಸಿ ಕಂಪನಿಗಳು ಪ್ರವಾಸದ ವೇಳಾಪಟ್ಟಿ ನೀಡುವಾಗ ಕೆಲವು ಅವಧಿಗಳನ್ನು ‘ಶಾಪಿಂಗ್’ಗಾಗಿ ಎಂದು ಹಾಕಿರುತ್ತಾರಷ್ಟೆ. ಇದು ಸಾಮಾನ್ಯವಾಗಿ ನನ್ನಲ್ಲಿ ಸಂಶಯ ಮೂಡಿಸಿಬಿಡುತ್ತದೆ! ಅವರು ನ್ಯಾಯವಾಗಿಯೇ ಹಾಗೆ ಹಾಕಿರಬಹುದಾದರೂ ಆ ಕಂಪನಿಗೂ, ಅವರು ಕರೆದುಕೊಂಡು ಹೋಗುವ ಮಾಲ್/ ಅಂಗಡಿ/ ಫ್ಯಾಕ್ಟರಿ ಔಟ್ಲೆಟ್ಗೂ ಒಳನಂಟು ಇರಬಹುದೇ/ ಮತ್ತೊಂದು ತಾಣಕ್ಕೆ ಕರೆದುಕೊಂಡು ಹೋಗುವ ಬದಲು ಇವರು ನಮ್ಮನ್ನು ಸುಮ್ಮನಾಗಿಸಲು ಶಾಪಿಂಗ್ ಅಸ್ತ್ರ ಉಪಯೋಗಿಸುತ್ತಿರಬಹುದೇ? ಹೀಗೆ ನನ್ನ ಅನುಮಾನದ ರೈಲು ಓಡಲಾರಂಭಿಸುತ್ತದೆ. ನಾನು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ವಿವಿಧ ಕಾರಣಗಳಿಗಾಗಿ ಸುತ್ತಾಡುವುದರಿಂದ, ತಿರುಗಾಡುವುದರ ಬಗೆಗೆ ಇರುವಷ್ಟೇ ಅಗಾಧ ಎನ್ನುವ ಅನುಭವವನ್ನು ‘ಶಾಪಿಂಗ್’ನಲ್ಲಿಯೂ ಸಂಪಾದಿಸಿಬಿಟ್ಟಿದ್ದೇನೆ! ಹಾಗಾಗಿ ಪ್ರವಾಸಿ ಕಂಪನಿಗಳಾಗಲಿ, ಇತರ ಪ್ರವಾಸಿಗಳಾಗಲಿ ನೋಡುವುದಕ್ಕಿಂತ ‘ಶಾಪಿಂಗ್’ ಬಗ್ಗೆ ನನ್ನ ದೃಷ್ಟಿಕೋನವೇ ಬದಲಾಗಿಬಿಟ್ಟಿದೆ!

ನನ್ನ ಮಟ್ಟಿಗೆ ದೇಶೀಯ/ ಅಂತರ್ದೇಶೀಯ ಪ್ರವಾಸಿ ತಾಣಗಳಲ್ಲಿ ಉಳಿದ ಪ್ರೇಕ್ಷಣೀಯ ಸ್ಥಳಗಳಂತೆ, ಅಲ್ಲಿನ ಮಾರುಕಟ್ಟೆ-ಬಜಾರ್ಗಳೂ ಪ್ರೇಕ್ಷಣೀಯ ಸ್ಥಳಗಳೇ. ವಿವಿಧ ರೀತಿಯ ಬದುಕುಗಳನ್ನು ನಾವು ಅಲ್ಲಿ ನೋಡುತ್ತೇವೆ. ನಾನಂತೂ ಚೌಕಾಸಿ ಮಾಡುವ ಕೌಶಲವನ್ನು ಈ ಮಾರುಕಟ್ಟೆಗಳಿಂದಲೇ ಕಲಿತವಳು. ಶಾಪಿಂಗ್ ಬಗೆಗಿನ ನನ್ನ ಅನುಭವಗಳ ಮೊದಲ ಮೈಲಿಗಲ್ಲು ಬಹುಶಃ ನನ್ನ ಹದಿಹರೆಯದ ದಿನಗಳಲ್ಲಿ. ದೆಹಲಿಯ ಕರ್ನಾಟಕ ಸಂಘಕ್ಕೆ ನೃತ್ಯ ಕಾರ್ಯಕ್ರಮ ನೀಡಲು ಹೋಗಿದ್ದೆವು. ಸುತ್ತಮುತ್ತಲ ಸರೋಜಿನಿ ಬಾಗ್, ಪಾಲಿಕಾ ಬಜಾರ್ ತಿರುಗಾಡಿದೆವು. ಹಿರಿಯರು ಮಾಡುತ್ತಿದ್ದ ಚೌಕಾಸಿ ವ್ಯಾಪಾರವನ್ನು ನಾನು ಕುತೂಹಲದಿಂದ ಗಮನಿಸುತ್ತಿದ್ದೆ. ಒಬ್ಬ ಬ್ಯಾಗ್ಗಳನ್ನು ಮಾರುತ್ತಿದ್ದ. ಒಂದಕ್ಕೆ 500 ರೂಪಾಯಿ ಎನ್ನುತ್ತಿದ್ದ. ನಾನು ‘ನೋಡೇ ಬಿಡೋಣ’ ಎಂದು 100 ರೂಪಾಯಿಗೆ ಕೇಳಿದೆ. ನನಗೆ ಅದು ಬೇಕಾಗಿರಲಿಲ್ಲ. ಆತ ಕೈಯಾಡಿಸಿದ. ನಾನೂ ಮುನ್ನಡೆದೆ. ಮಾರುಕಟ್ಟೆಯಿಂದ ಹೊರ ಬರುವಷ್ಟರಲ್ಲಿ ಆತ ‘100 ರೂಪಾಯಿಗೆ ಕೊಡುತ್ತೇನೆ, ತೆಗೆದುಕೊಳ್ಳಿ’ ಎಂದು ಬೆನ್ನು ಹತ್ತಿದ. ‘ಬೇಡದ ಬ್ಯಾಗ್ಗೆ ಇಷ್ಟು ಕಾಟ’ ಎಂದು ಎಲ್ಲರ ಹತ್ತಿರ ಬೈಸಿಕೊಳ್ಳಬೇಕಾಯ್ತು. ಪಾಲಿಕಾ ಬಜಾರ್-ಸರೋಜಿನಿ ಬಾಗ್ಗಳನ್ನು ಓಡಾಡಿ ಹೊರಬರುವಾಗ ಸಾಕೋಸಾಕಾಗಿತ್ತು.

ಚೌಕಾಸಿಯ ಬಗ್ಗೆ ಸರಿಯಾದ ಪಾಠವನ್ನು ನಾನು ಕಲಿತಿದ್ದು ಮುಂಬಯಿನ ಫ್ಯಾಷನ್ ಸ್ಟ್ರೀಟ್ನಲ್ಲಿ. ನನ್ನ ಸೋದರಮಾವ ನನ್ನ ಜೊತೆ ಬಂದಿದ್ದರು. ಅವರು ಹೇಳಿದ್ದರು, ‘ನಿನಗೆ ಏನು ಬೇಕೋ ಆರಿಸು, ಒಮ್ಮೆ ಆ ತುದಿಯಿಂದ ಈ ತುದಿಗೆ ಓಡಾಡು. ಆದರೆ, ದುಡ್ಡು ಕೊಡುವಾಗ ಮಾತ್ರ ಮಾತಾಡಬೇಡ, ನನಗೆ ಬಿಡು’. ‘ಗುರು’ವಿನಿಂದ ಕಲಿಯಲು ಉತ್ಸುಕಳಾಗಿ ಒಂದೆಡೆ ಒಂದೆರಡು ಡ್ರೆಸ್ ಆರಿಸಿದೆ. ಸುಮ್ಮನೇ ನಿಂತೆ. ಮಾವ ಅಂಗಡಿಯವನ ಬಳಿ ಬೆಲೆ ಕೇಳಿದರು. ಅವನು ಹೇಳಿದ ತಕ್ಷಣ ‘ಓ ಎರಡರ ಬೆಲೆ ಹೇಳ್ತಿದ್ದೀಯ, ಸಾಕಷ್ಟು ಚೀಪೇ, ಕೊಡು’ ಎಂದರು. ಅವನು ನಗುತ್ತ ‘ನಾನು ಹೇಳಿದ್ದು ಒಂದರದ್ದು ಸಾಬ್’ ಎಂದು ನಕ್ಕ. ಹೀಗೇ ರಂಜನೀಯವಾಗಿ ಚೌಕಾಸಿ ಮುಂದುವರಿಯಿತು. ಆತ ಹೇಳಿದ್ದ ಕಾಲು ಬೆಲೆಗೆ ಡ್ರೆಸ್ಗಳು ನನ್ನ ಕೈಲಿದ್ದವು!

ನನ್ನ ‘ಗುರು’ ಹೇಳಿದ್ದು ‘ನೋಡು ಇಂತಹ ಮಾರುಕಟ್ಟೆಗಳಲ್ಲಿ ಕೊಳ್ಳುವಾಗ, ಅವರು ಹೇಳಿದ ಬೆಲೆಯ ಕಾಲು ಭಾಗದಷ್ಟಕ್ಕೆ, ಅಂದರೆ ನಮಗೇ ಕೇಳಲು ನಾಚಿಕೆ ಎನಿಸುವಷ್ಟಕ್ಕೆ ಕೇಳಬೇಕು. ಅವರು ಕೊಡುವುದಿಲ್ಲ ಎಂದಾಗ ಮುನ್ನಡೆಯಲು ಸಿದ್ಧರಿರಬೇಕು. ಒಮ್ಮೆ ನೀನು ಕೇಳಿದ ಬೆಲೆ ಗಿಟ್ಟದಿದ್ದರೆ ಇನ್ನು 10 ರೂಪಾಯಿ ಹೆಚ್ಚು ಮಾಡು. 100 ಅಲ್ಲ. ನೀನು ಸೈಕಿಯಾಟ್ರಿ ಓದುತ್ತಿರಬಹುದು. ಆದರೆ ಇವರೆಲ್ಲಾ ಇಲ್ಲಿಗೆ ಬರುವ ಜನರ ಮನಸ್ಸನ್ನು ಕ್ಷಣಾರ್ಧದಲ್ಲಿ ಅಳೆಯುವ ಜಾಣರು. ಯಾವ ಮನೋವಿಜ್ಞಾನಿಗೂ ಇವರು ಕಡಿಮೆಯಿಲ್ಲ’. ಅದರಲ್ಲಿಯೂ ನನ್ನಂಥ ಸೀಮಿತ ಸಮಯವನ್ನಿಟ್ಟುಕೊಂಡು, ಓಡುವ, ಅವಸರದಲ್ಲಿ ಒಂದಿಷ್ಟನ್ನು ಕೊಳ್ಳುವ ವ್ಯಕ್ತಿಗೆ ಇವು ಬಹು ಉಪಯುಕ್ತ ಮಾರ್ಗಸೂಚಿಗಳಾಗಿದ್ದವು.

ಹೀಗೇ ಚೌಕಾಸಿಯ ವಿವಿಧ ತಂತ್ರಗಳನ್ನು ಕಲಿಯುತ್ತಾ ಇರುವಾಗ, ಒಮ್ಮೆ ಆರು ತಿಂಗಳ ಶಿಶುವನ್ನೆತ್ತಿಕೊಂಡು ಟರ್ಕಿಯ ಇಸ್ತಾಂಬುಲ್ನ ಗ್ರ್ಯಾಂಡ್ ಬಜಾರ್ಗೆ ಹೋಗಿದ್ದೆ. ಟರ್ಬನ್-ಸಿಹಿತಿಂಡಿ ಕೊಳ್ಳುತ್ತಾ, ಮಾತನಾಡುತ್ತಾ, ದೃಷ್ಟಿಗಾಗಿ ಹಾಕುವ ‘ನೀಲಿಕಣ್ಣು’ -blue eye– ಬೇಕೆಂದು ಚೌಕಾಸಿ ಆರಂಭಿಸಿದೆ. ಚಿಕ್ಕ ಅಂಗಡಿ, ನೀಲಿಕಂಗಳ, ಉದ್ದ ಮೂಗಿನ ಎತ್ತರದ ವೃದ್ಧ ಮಾಲೀಕ. ನಾನು ಚೌಕಾಸಿ ಮಾಡಿಯೇ ಮಾಡಿದೆ. ಆತ 10 ಟರ್ಕಿಷ್ ಲಿರಾ ಎಂದದ್ದಕ್ಕೆ ನಾನು ಎರಡೇ ಲಿರಾಕ್ಕೆ ಕೇಳಿದ್ದೆ. ಆತ 4ರ ಹತ್ತಿರ ಬಂದ. ನಾನು 3 ಕೊಡುತ್ತೇನೆ ಎಂದು ಹಟ ಮಾಡಿದೆ. ಆಮೇಲೆ ಆತ ಅಂದ – ‘ನೀನು ಚೆನ್ನಾಗಿ ಚೌಕಾಸಿ ಮಾಡ್ತೀಯಮ್ಮ, ನೋಡು ಬೇಕಾದರೆ ನಿನ್ನ ಮುದ್ದು ಮಗು ಕೊಟ್ಟರೆ, ನಾನು ಇಡೀ ಅಂಗಡಿಯನ್ನೇ ನಿನಗೆ ಕೊಟ್ಟು ಬಿಡ್ತೀನಿ. ಇಲ್ಲಾಂದರೆ 4 ಲಿರಾಕ್ಕೆ ಈ ನೀಲಿಕಣ್ಣು ಕೊಡ್ತೀನಿ’. ನಾನು 4 ಲಿರಾ ತೆಗೆದಿಟ್ಟು ‘ಇಡೀ ಅಂಗಡಿಯಲ್ಲ, ಟರ್ಕಿಯನ್ನೇ ಕೊಡ್ತೀರಿ ಅಂದ್ರೂ, ನನ್ನ ಮಗು ಕೊಡಕ್ಕಾಗಲ್ಲ’ ಎಂದು ಆತನ ಗ್ರಾಹಕರನ್ನು ಮಣಿಸುವ ಪ್ರತಿಭೆಗೆ ಬೆರಗಾಗಿ ಬೇಗ ಹೊರಬಂದೆ!

ಎಲ್ಲರಿಗೂ ಚೌಕಾಸಿ ಮಾಡುವುದು ಸುಲಭ ಸಾಧ್ಯವಲ್ಲ. ಮಾರಾಟಗಾರರೂ ನಿಮ್ಮಲ್ಲೊಬ್ಬ ‘ಯಶಸ್ವೀ ಚೌಕಾಸಿ ಮಾಡುವವ, ಅಪಮಾನ ಮಾಡದೆ/ ಅಪಮಾನಗೊಳ್ಳದೆ ತಮಾಷೆಯಾಗಿ ಮಾತನಾಡುವವ’ ಇದ್ದಾನೆ ಎಂಬುದನ್ನು ಗುರುತಿಸಿಬಿಡುತ್ತಾರೆ.

ಚೌಕಾಸಿ ಮಾಡುವುದರ ಹಿಂದೆಯೂ ಹಲವು ಮನೋವೈಜ್ಞಾನಿಕ ಅಂಶಗಳಿವೆ ಎಂದು ನನಗೆ ಅನ್ನಿಸುತ್ತದೆ. ‘ಆ ಕ್ಷಣ ಬೇಕು’ ಎಂಬ ಆಸೆಯನ್ನು ನಿಯಂತ್ರಿಸಿಕೊಳ್ಳಬೇಕು. ಶಾಪಿಂಗ್ ಮಾಡುವ ಕ್ಷಣದಲ್ಲಿ ಅನ್ನಿಸುವ ‘ಈ ಸೀರೆ /ಡ್ರೆಸ್/ಬಳೆ/ಸರ/ ಎಲೆಕ್ಟ್ರಾನಿಕ್ ವಸ್ತು/ಇತ್ಯಾದಿ ಸಿಗದಿದ್ದರೆ ತಡೆಯಲೇ ಸಾಧ್ಯವಿಲ್ಲ’ ಎಂಬ ಭಾವನೆಯನ್ನು ನಿಯಂತ್ರಿಸಿಕೊಳ್ಳಬೇಕು. ಮಕ್ಕಳಿಗೆ ಕಲಿಸಬೇಕೆಂದು ಮನೋವಿಜ್ಞಾನ ಹೇಳುವ delayed gratification (ನಿಧಾನವಾಗಿ ಆಸೆ ಪೂರೈಸುವುದು) ಅನ್ನು, ಶಾಪಿಂಗ್ ಮಾಡುವಾಗ ಸ್ವತಃ ಪಾಲಿಸಬೇಕು. ‘ಇನ್ನಷ್ಟು ಬೇಕು’ ಎನ್ನುವಾಗಲೇ ನಿಲ್ಲಿಸುವ ಕೌಶಲವನ್ನು ರೂಢಿಸಿಕೊಳ್ಳಬೇಕು. ಶಾಪಿಂಗ್ ಮಾಡುವ ಭರದಲ್ಲಿ ದುಡ್ಡು-ವಸ್ತು-ಮಕ್ಕಳು ಕಳೆಯಬಹುದಾದ ಸಾಧ್ಯತೆಗಳನ್ನು ನೆನಪಿಡಬೇಕು ಮತ್ತು ನಾಚಿಕೆ ಬಿಡಬೇಕು! ಅಂದರೆ ಚೌಕಾಸಿ ಮಾಡುತ್ತಿರುವವರ ಬಗ್ಗೆ ಇತರರು ಪತಿ/ ಪತ್ನಿ/ ಮಕ್ಕಳು/ ಸ್ನೇಹಿತರು ಅಂದುಕೊಳ್ಳುವ ‘ಇಷ್ಟು ಕಡಿಮೆಗೆ ಕೇಳುತ್ತಿದ್ದಾರೆ, ಮರ್ಯಾದೆ ಇಲ್ವೇ’ ಎಂಬ ಪ್ರಶ್ನೆಯನ್ನು ಎದುರಿಸಬೇಕು. ‘ಯಾವ ಮಾರಾಟಗಾರನೂ ತನಗೆ ಲಾಭವಿಲ್ಲ ಎಂದರೆ ಮಾರುವುದಿಲ್ಲ’ ಎಂಬ ಸತ್ಯವನ್ನು ಅರಿಯುವುದು ಈ ಸಮಯದಲ್ಲಿ ಬಹು ಉಪಯುಕ್ತ.

ಈಗಲೂ ಯಾವುದೇ ಕಾರಣಕ್ಕೆ ಪರವೂರು /ಪರದೇಶಕ್ಕೆ ಹೋಗಲಿ, ಅಲ್ಲಿನ ಮಾರುಕಟ್ಟೆಗಳ ಬಗ್ಗೆ ನಾನು ಮೊದಲೇ ಮಾಹಿತಿ ಕಲೆ ಹಾಕದೆ ಬಿಡುವುದಿಲ್ಲ. ಮಾರುಕಟ್ಟೆ ತೆರೆಯುವ ಸಮಯ, ಅಲ್ಲಿ ಸಿಗುವ ವಸ್ತುಗಳು ಇತ್ಯಾದಿಗಳನ್ನು ತಿಳಿದಿದ್ದರೆ ಸುಲಭವಾಗಿ ಶಾಪಿಂಗ್ ಅನುಭವ ಪಡೆಯಬಹುದು. ಗೋವಾದ ಅಲೆಮಾರಿ ಮಾರುಕಟ್ಟೆ (ಫ್ಲೀ ಮಾರ್ಕೆಟ್), ಮೆಲ್ಬೋರ್ನ್ನ ವಿಕ್ಟೋರಿಯಾ ಮಾರ್ಕೆಟ್, ಎಡಿನ್ಬರೋದ ಸಂಡೇ ಮಾರ್ಕೆಟ್, ಲಖನೌದ ಅಮೀನಾಬಾದ್, ಬೀಜಿಂಗ್ನ ಪರ್ಲ್ ಮಾರ್ಕೆಟ್, ಶಿಲ್ಲಾಂಗ್ನ ಮಾರ್ಕೆಟ್, ಜಪಾನ್ನ ಹೃಕುಯನ್ ಶಾಪ್, ಲಂಡನ್ನಿನ ಪೌಂಡ್ಶಾಪ್ ಇವೆಲ್ಲವೂ ಹೋಗಿ ನೋಡಬೇಕಾದ ಸ್ಥಳಗಳೇ. ಇಂದಿಗೂ ಮುಂಬಯಿಯ ಫ್ಯಾಷನ್ ಸ್ಟ್ರೀಟ್ ನನ್ನ ನೆಚ್ಚಿನ ತಾಣಗಳಲ್ಲಿ ಒಂದು.

ಸಾಂಪ್ರದಾಯಿಕವಾದ ಮಾರುಕಟ್ಟೆಗಳು ಆಧುನಿಕ ಮಾಲ್ಗಳಿಗಿಂತ ಹೆಚ್ಚಾಗಿ ಸ್ಥಳೀಯ ಜನಜೀವನ-ಸಂಸ್ಕೃತಿ-ತಿಂಡಿ-ತಿನಿಸುಗಳನ್ನು ನಮಗೆ ಪರಿಚಯಿಸುತ್ತವೆ. ಶಾಪಿಂಗ್ನಲ್ಲಿ ನನ್ನ ಅನುಭವ ಪಕ್ವಗೊಳ್ಳುತ್ತಾ, ನಾನು ಕಲಿತಿರುವುದು ಬಹಳಷ್ಟು. ಬೇಡದಷ್ಟು-ಆಸೆಯಿಂದ ಖರೀದಿಸಿ ಆ ಮೇಲೆ ಪ್ಯಾಕ್ ಮಾಡುವ ಸಂಕಟ, ವಿಮಾನದಲ್ಲಿ ಹೆಚ್ಚು ದುಡ್ಡು ತೆತ್ತು ಲಗ್ಗೇಜ್ ಸಾಗಿಸಬೇಕಾದ ಕಷ್ಟಗಳಿಂದ ನಾನೀಗ ಸಾಕಷ್ಟು ದೂರ! ಆದರೆ, ಈಗಲೂ ನನಗೆ ವಿಶಿಷ್ಟ ಎನಿಸುವ, ನನ್ನೂರಿನಲ್ಲಿ ಸಿಗದ, ನಮ್ಮೂರಿನಲ್ಲಿ ಬಲು ದುಬಾರಿಯಾದ, ಹೋದ ಸ್ಥಳದಲ್ಲಿ ಅಗ್ಗಕ್ಕೆ ಸಿಗುವ ವಸ್ತು ನನ್ನ ಲಗೇಜ್ ಏರುತ್ತದೆ. ಕೊಳ್ಳುವ ಸಂತಸದಷ್ಟೇ ಚೌಕಾಸಿ ಮಾಡುವಾಗ ಮಾರಾಟಗಾರರ ಮಾತಿನ ಚುರುಕು-ನಗೆ ಚಟಾಕಿ, ಜಾಣ್ಮೆ ಮುದ ನೀಡುತ್ತವೆ. ನಾನು ಪ್ರವಾಸದಲ್ಲಿರುವಾಗ ನನ್ನವರನ್ನು ನೆನೆಸಿಕೊಂಡೆ ಎಂಬ ಗುರುತಿಗೆ ಮ್ಯಾಗ್ನೆಟ್ಗಳು, ಸ್ಮರಣಿಕೆಗಳನ್ನು ಕೊಳ್ಳುವುದನ್ನು ನಾನು ಮರೆಯುವುದಿಲ್ಲ. ‘ಶಾಪ್ಪಿಂಗಾ? ನಾವು ಬರೋದಿಲ್ಲ’ ಎಂದು ರಾಗವೆಳೆಯುವ ಗಂಡ-ಮಕ್ಕಳನ್ನು ಎಳೆದುಕೊಂಡಾದರೂ ‘ಮಾರುಕಟ್ಟೆಗಳು’ ಎಂಬ ಪವಿತ್ರ ಸ್ಥಳಗಳಿಗೆ ಹೋಗುವ ಸಾಹಸ ಮಾಡುತ್ತೇನೆ. ಇಲ್ಲ ಎಂದು ಹೇಳಲಾಗದೆ, ಬಲೆಗೆ ಬಿದ್ದು, ಹೆಚ್ಚು ದುಡ್ಡು ತೆರುವ ಫಜೀತಿಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಪಾಠವನ್ನು ಪ್ರಾಯೋಗಿಕವಾಗಿ ಅವರಿಗೆ ಕಲಿಸುತ್ತೇನೆ! ಇದು ಜೀವನಕ್ಕೂ ಉಪಯುಕ್ತ ಪಾಠವೇ ಅಲ್ಲವೆ?!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.