ಜೀವನದಲ್ಲಿ ಹದವಾಗಿ ಬೆಂದರೆ ಬೇಂದ್ರೆಯಾಗುತ್ತಾರೆ ಎಂಬ ಮಾತಿದೆ. ಅದೇ ರೀತಿ ಮೇವುಂಡಿಯಾಗಲು ಯಾವ ಯಾವ ಮೇವು ಉಣ್ಣ ಬೇಕು? ಹೀಗಂತ ಜಯತೀರ್ಥ ಮೇವುಂಡಿ ಅವರನ್ನು ಕೇಳಿದರೆ ಅವರು ಮೇವಿನ ಪಟ್ಟಿಯನ್ನೇ ಕೊಡುತ್ತಾರೆ. ಅಮ್ಮನ ಆಶೀರ್ವಾದ ಎಂಬ ಮೇವು, ಗುರುಗಳ ಹಾರೈಕೆಯ ಮೇವು, ಎಲ್ಲಕ್ಕಿಂತ ಹೆಚ್ಚಾಗಿ ಭಗವಂತನ ಕೃಪೆಯ ಮೇವು ಸೇರಿ ಈ ಮೇವುಂಡಿಯಾಗಿದೆ ಎಂದು ಹೇಳುತ್ತಾರೆ.

ಸಪ್ತಕ ಸಂಸ್ಥೆಯ ಕಾರ್ಯಕ್ರಮದಲ್ಲಿ ಪ್ರವೀಣ್ ಗೋಡ್ಖಿಂಡಿ ಅವರ ಜೊತೆ ಜುಗಲ್ಬಂದಿ ನಡೆಸಲು ಬೆಂಗಳೂರಿಗೆ ಬಂದಿದ್ದ ಜಯತೀರ್ಥ ಮೇವುಂಡಿ ಹೀಗೆಯೇ ಒಂದಿಷ್ಟು ಹೊತ್ತು ಹರಟೆಗೆ ಸಿಕ್ಕಿದ್ದರು. ಸಂಗೀತದ ಜೊತೆಗೆ ಜೀವನದ ಹುಲುಸಾದ ಮೇವನ್ನೂ ಮೆಲುಕು ಹಾಕಿದರು.

‘ಅಮ್ಮ ಯಾವಾಗಲೂ ಹೇಳೋರು. ನೀನು ಎಷ್ಟೇ ಸಾಧನೆ ಮಾಡು, ದುಡ್ಡು ಮಾಡು, ಹೆಸರು ಮಾಡು. ಆದರೆ ಯಾವುದೇ ಕಾಲಕ್ಕೂ, ಯಾವುದೇ ಕಾರಣಕ್ಕೂ ಭಗವಂತನ ಕೈ ಬಿಡಬೇಡ. ನೀನು ಎಷ್ಟೇ ಉತ್ತುಂಗಕ್ಕೆ ಬೆಳೆದರೂ ಅದು ದೇವರು ಕೊಟ್ಟಿದ್ದು ಎಂಬ ಭಾವನೆ ಇರಬೇಕು. ಸಂಗೀತ ಆದರೂ ಅಷ್ಟೆ, ಬೇರೆ ಏನೇ ಆದರೂ ಅಷ್ಟೆ, ಅದನ್ನು ಭಗವಂತನಿಗೇ ಸಮರ್ಪಣೆ ಮಾಡಬೇಕು’

ಇದು ಅಮ್ಮ ಹಾಕಿದ ಮೇವು. ಅದನ್ನು ಮೆಲ್ಲುತ್ತಾ ಇದ್ದೇನೆ. ನನ್ನ ಸಂಗೀತವೆಲ್ಲಾ ಭಗವಂತನಿಗೇ ಸಮರ್ಪಣೆ. ಅಮ್ಮನಿಂದ ಬಳುವಳಿಯಾಗಿ ಇನ್ನೊಂದಿಷ್ಟು ಬಂದಿದೆ. ಅದು ರಾಮ ರಕ್ಷಾ ಸ್ತೋತ್ರ, ವಿಷ್ಣು ಸಹಸ್ರನಾಮ. ಮತ್ತೊಂದಿಷ್ಟು ಮಂತ್ರಗಳು. ಇವೆಲ್ಲಾ ಧ್ವನಿಗೆ ಸಂಬಂಧಿಸಿದವೇ ಆಗಿವೆ. ಸಂಕಷ್ಟದ ಸಮಯದಲ್ಲಿ ಈ ಮೇವುಗಳನ್ನೇ ಬಳಸಿದ್ದೇನೆ. ಅವು ನನ್ನನ್ನು ಗೆಲ್ಲಿಸಿವೆ.

ಇದರಲ್ಲಿ ಕೊಂಚವೂ ಅಪನಂಬಿಕೆ ಅವರಿಗೆ ಇಲ್ಲ. ದೇವರು ಕೊಟ್ಟಿದ್ದು. ದೇವರಿಗೇ ಸಮರ್ಪಿಸುತ್ತೇನೆ ಎಂದೇ ಅವರು ಹಾಡುತ್ತಾರೆ. ತಾವು ಈ ಭಾವನೆಯಲ್ಲಿ ಹಾಡುವುದರಿಂದ ಅದರ ತರಂಗ ಕೇಳುಗರಿಗೂ ತಲುಪುತ್ತದೆ ಎಂದು ಅವರು ಹೇಳುತ್ತಾರೆ.

ಅದಕ್ಕಾಗಿ ತಾವು ಸಮಯ ಸಿಕ್ಕಾಗಲೆಲ್ಲಾ ಶ್ರೀರಂಗಂ ಅಥವಾ ಮಂಜುಗುಣಿಗೆ ಹೋಗಿ ಹಾಡುತ್ತಾ ಕುಳಿತುಕೊಳ್ಳುವುದಾಗಿ ಹೇಳುತ್ತಾರೆ. ಅಲ್ಲಿ ವ್ಹಾ ವ್ಹಾ ಹೇಳುವವರಿಲ್ಲ. ಚಪ್ಪಾಳೆ ತಟ್ಟುವವರಿಲ್ಲ. ಆದರೆ ಅಲ್ಲಿ ಹಾಡುವ ಸುಖ ಬೇರೆಯದೇ ಲೆವಲ್ ಎಂಬುದು ಅವರ ನಂಬಿಕೆ.

‘ಅಮ್ಮ ನನ್ನಲ್ಲಿ ಸಂಗೀತದ ಬೀಜ ಬಿತ್ತಿದರು. ನಂತರ ಗುರುಗಳಾದ ಅರ್ಜುನ್ ಸಾ ನಾಕೋಡ ಮತ್ತು ಶ್ರೀಪತಿ ಪಾಡಿಗಾರ ಕಲಿಸಿದರು. ಕಿರಾಣಾ ಘರಾಣ ಹೇಳಿಕೊಟ್ಟರು. ನಮ್ಮ ಗುರುಗಳಿಗೂ ಬೇರೇನೂ ಬೇಡಿಕೆ ಇರಲಿಲ್ಲ. ತಮ್ಮ ಸಂತತಿ ಮುಂದುವರಿಯಬೇಕು ಅಷ್ಟೆ. ನಮಗೂ ಅವಾಗ ಬೇರೆ ಏನೂ ತಿಳಿಯುತ್ತಿರಲಿಲ್ಲ. ಗುರುಗಳೂ ಹೇಳಿದಂಗೆ ಮಾಡುತ್ತಿದ್ದೆವು. ಇದು ಯಮನ್ ರಾಗ. ಎರಡು ತಾಸು ಪ್ರಾಕ್ಟೀಸ್ ಮಾಡು ಎಂದರೆ ಮಾಡುತ್ತಿದ್ದೆವು. ಇದು ಮಾಲಕಂಸ್ ಮೂರು ತಾಸು ಅಭ್ಯಾಸ ಮಾಡು ಎಂದರೆ ಮಾಡುತ್ತಿದ್ದೆವು. ಆಗ ನಮ್ಮ ತಲೆ ಇದ್ದಿದ್ದು ಒಂದೇ: ರಿಯಾಜ್ ರಿಯಾಜ್ ರಿಯಾಜ್ ಅಷ್ಟೆ.’

‘ನಾನು ಗೋವಾ ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದೆ. 1995ರಲ್ಲಿ ಒಂದು ದಿನ ಭೀಮಸೇನ ಜೋಶಿ ಅವರು ಕರೆ ಮಾಡಿದರು. ಪುಣೆಯ ಸವಾಯಿ ಗಂಧರ್ವ ಉತ್ಸವದಲ್ಲಿ ಹಾಡಬೇಕು ಎಂದು ಕೇಳಿಕೊಂಡರು. ನನಗೆ ಅದೇನು ಕನಸೊ ನನಸೋ ಗೊತ್ತಾಗಲಿಲ್ಲ. ಒಪ್ಪಿಕೊಂಡೆ. ಅಲ್ಲಿ ಹೋಗಿ ನೋಡಿದರೆ ಬೃಹತ್ ವೇದಿಕೆ. ಮುಂದೆ ಸಾವಿರಾರು ಪ್ರೇಕ್ಷಕರು. ಎಲ್ಲಕ್ಕಿಂತ ಮುಂದಿನ ಸಾಲಿನಲ್ಲಿಯೇ ಭೀಮಸೇನ ಜೋಶಿ ಕುಳಿತಿದ್ದರು. ನಾನು ನಡುಗಿಬಿಟ್ಟೆ. ಏನ್ ಅವರ ಶರೀರ, ಅವರ ಶಾರೀರ. ಏನ್ ಅವರ ವಿದ್ಯಾ. ಅದನ್ನು ನೆನೆದು ನನಗೆ ಸ್ವರವೇ ಹೊರಡಲಿಲ್ಲ. ನನ್ನ ಸ್ಥಿತಿ ಗಮನಿಸಿದ ಭೀಮಸೇನ ಜೋಶಿ ಅವರು ನನ್ನ ಬಳಿಗೆ –ಬಂದು ತಂಬೂರ ಕೂಡಿಸಿಕೊಟ್ಟು ‘ಹೆದರ ಬೇಡ. ವೇದಿಕೆಯಲ್ಲಿ ಕುಳಿತು ಹಾಡುವಾಗ ನಾನು ತಾನ್ಸೇನ್ ಅಪ್ಪ ಎಂದೇ ಹಾಡಬೇಕು’ ಎಂದು ಹೇಳಿ ಹೋದರು. ಅವರ ಮಾತು ಕೇಳಿದ್ದೇ ಧೈರ್ಯ ಬಂತು. ಹಾಡಿದೆ. ಹಾಡುತ್ತಲೇ ಇದ್ದೆ. ಹಾಡುತ್ತಲೇ ಇದ್ದೇನೆ’ ಎಂದು ಮೆಲುಕು ಹಾಕಿದರು.

‘ಮುಂಬೈಯಲ್ಲಿ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ಲತಾ ಮಂಗೇಶ್ಕರ್ ಅವರ ಕಾರ್ಯದರ್ಶಿ ಫೋನ್ ಮಾಡಿ ಲತಾಜಿ ನಿಮ್ಮನ್ನು ಭೇಟಿ ಮಾಡಲು ಬಯಸಿದ್ದಾರೆ ಎಂದರು. ಲತಾಜಿ ಎಂದರೆ ನನ್ನ ಪಾಲಿಗೆ ಸಾಕ್ಷಾತ್ ಸರಸ್ವತಿ. ಅವರು ನನ್ನ ಭೇಟಿ ಮಾಡಲು ಬಯಸಿದ್ದಾರೆ ಎಂದರೆ ಅದು ದೇವತೆಯ ಸಾಕ್ಷಾತ್ಕಾರ ಎಂದು ಭಾವಿಸಿ ಹೋಗಿ ಭೇಟಿ ಮಾಡಿದೆ. ‘ನನಗೆ ಕಿರಾಣಾ ಘರಾನ ಇಷ್ಟ. ಅಮೀರ್ ಖಾನ್ ಸಾಹೇಬರ ಹಾಡುಗಾರಿಕೆ ಕೇಳಿದ್ದೇನೆ. ಅವರ ಆಲಾಪ, ಪ್ರಶಾಂತ ಹಾಡುಗಾರಿಕೆ ಎಲ್ಲಾ ಇಷ್ಟ. ನಾನು ಅವರ ದೊಡ್ಡ ಫ್ಯಾನ್’ ಎಂದು ಹೇಳಿದ ಲತಾಜಿ ತಕ್ಷಣವೇ ‘ನೀವು ಶುದ್ಧ ಕಲ್ಯಾಣ್ ಹಾಡ್ತೀರಾ, ಅಮೀರ್ ಖಾನ್ ಬಂದೀಶ್ ಬರುತ್ತಾ ಹೇಳಿ ನೋಡೋಣ ಎಂದರು. ನಾನು ಹಾಡಿದೆ. ಅವರಿಗೆ ಇಷ್ಟವಾಯ್ತು. ಅವರ ಕಂಪನಿ ವತಿಯಿಂದಲೇ ರೆಕಾರ್ಡ್ ಮಾಡಿ ಬಿಡುಗಡೆ ಮಾಡಿದರು’ ಎಂದು ಹೇಳುವಾಗ ಇಂತಹ ಮೇವು ಎಷ್ಟು ಜನರಿಗೆ ಸಿಗುತ್ತದೆ ಎಂಬ ಭಾವ ಅವರ ಮೊಗದಲ್ಲಿ.

‘ನನಗೆ ಯಂಗ್ ಮೆಸ್ಟ್ರೊ ಪ್ರಶಸ್ತಿ ಬಂದಿತ್ತು. ದೆಹಲಿ ಅಶೋಕಾ ಮೈದಾನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ. ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರೇ ಪ್ರಶಸ್ತಿ ನೀಡುವವರು. ನಾನು ಅವರ ಮುಂದೆ ಹೋಗಿ ನಿಂತೆ. ಅವರು ತುಂಬಾ ಆತ್ಮೀಯವಾಗಿ ಬರಮಾಡಿಕೊಂಡರು. ನಿನಗೆ ಯಾವ ರಾಗ ಇಷ್ಟ ಎಂದು ಕೇಳಿದರು. ನಾನು ಶುದ್ಧ ಕಲ್ಯಾಣ್, ದರ್ಬಾರಿ ಕಾನಡಾ, ಮಾಲಕಂಸ್ ಎಂದೆ. ಬೆನ್ನು ತಟ್ಟಿದರು. ನನ್ನ ಜೊತೆ ಅವರು ನಡೆದುಕೊಂಡ ರೀತಿಯನ್ನು ನೋಡಿದಾಗ ಅವರು ರಾಷ್ಟ್ರಪತಿ ಅಂತ ಅನ್ನಿಸಲೇ ಇಲ್ಲ. ಅವರೇ ಅಷ್ಟು ಸರಳ ಇರುವಾಗ ನಾನು ಇನ್ನೂ ಸರಳವಾಗಿರಬೇಕು ಎಂದುಕೊಂಡೆ’ ಎನ್ನುತ್ತಾ ಕುರ್ಚಿಯಲ್ಲಿ ಇನ್ನಷ್ಟು ಸರಿದು ಕುಳಿತರು.

‘ಹೀಗೆ ದೊಡ್ಡವರ ಆಶೀರ್ವಾದ ಸಿಗುತ್ತಲೇ ಹೋಯಿತು. ಪಂಡಿತ್ ರವಿಶಂಕರ್, ಝಾಕಿರ್ ಹುಸೇನ್ ಸೇರಿ ಬಹುತೇಕ ಎಲ್ಲ ದೊಡ್ಡ ಕಲಾವಿದರೂ ಹರಸಿದ್ದಾರೆ. ದೊಡ್ಡ ದೊಡ್ಡ ಕಲಾವಿದರನ್ನು ನೋಡಿ ಸಂಗೀತವನ್ನೂ ಕಲಿತಿದ್ದೇನೆ. ಬದುಕುವುದನ್ನು ಕಲಿತಿದ್ದೇನೆ. ‘ಅಷ್ಟು ದೊಡ್ಡ ಕಲಾವಿದರೇ ಇಷ್ಟೊಂದು ಸರಳವಾಗಿದ್ದಾರೆ. ನಾನು ಇನ್ನೂ ಸರಳವಾಗಿರಬೇಕು ಎಂದು ಅದನ್ನೇ ರೂಢಿಸಿಕೊಂಡಿದ್ದೇನೆ. ದೊಡ್ಡವರ ಸಾಧನೆ ನೋಡಿದಾಗಲೆಲ್ಲಾ ನಾನು ಎಷ್ಟು ಚಿಕ್ಕವನು ಎನ್ನುವುದು ಗೊತ್ತಾಗುತ್ತದೆ. ಇನ್ನೂ ಏನೂ ಸಾಧನೆ ಮಾಡಿಲ್ಲ ಎನ್ನುವುದು ತಿಳಿಯುತ್ತದೆ. ಅದಕ್ಕಾಗಿ ದೊಡ್ಡವರನನ್ನು ನೋಡಿ ಕಲಿಯುತ್ತೇನೆ. ನನಗೆ ಮಾದರಿ ಎಂದರೆ ಭೀಮಸೇನ ಜೋಶಿ. ಅವರೇ ನನಗೆ ಸ್ಫೂರ್ತಿ. ಅವರ ಹಾದಿಯಲ್ಲಿಯೇ ಸಾಗುತ್ತಿದ್ದೇನೆ. ನನ್ನ ಒಬ್ಬನೇ ಮಗ ಲಲಿತ್ ಕೂಡಾ ನನ್ನ ಬಳಿಯೇ ಸಂಗೀತ ಕಲಿಯುತ್ತಿದ್ದಾನೆ. ನಾನು ಗಳಿಸಿದ ಮೇವು ಅವನಿಗೆ ಉಣಿಸುತ್ತಿದ್ದೇನೆ’ ಎಂದು ಹೇಳುವಾಗ ತಾವು ಉಂಡ ಮೇವು ವ್ಯರ್ಥವಾಗಿಲ್ಲ ಎಂಬ ಭಾವ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.