ಚಳಿಗಾಲದ ಸ್ವಾಗತದ ತಯಾರಿ ಇದೀಗ ಬ್ರಿಟನ್ನಿನಲ್ಲಿ ಭರದಿಂದ ಸಾಗುತ್ತಿದೆ. ದಿನದ ಆರಂಭವೂ ಕತ್ತಲಲ್ಲಿ, ಮುಕ್ತಾಯವೂ ಕತ್ತಲೆಯಲ್ಲೇ. ಕಗ್ಗತ್ತಲ ನಸುಕು ಮತ್ತೆ ಮಂಜಿನ ಮುಸುಕು. ಹಸಿರು ಎಲೆಗಳು ಒಂದಕ್ಕೊಂದು ಬಣ್ಣ ಎರಚಿ ಕೆಲವು ವಾರಗಳ ಮಟ್ಟಿಗೆ ಕೆಂಪು ಹಳದಿ ನೇರಳೆಗಳಾಗಿ ಮಿರಮಿರಗೊಂಡು ಇದೀಗ ನೆಲದ ಮೇಲೆ ನೆಲೆಯಾಗಿವೆ. ತಂಗಾಳಿಗೆ ಹೊಯ್ದಾಡುವ ಮರಗಳು ಗಡಿಬಿಡಿಯಲ್ಲಿ ಉದುರುವ ಎಲೆಗಳು. ಎರಡೂ ಕಡೆ ಮರಗಳಿರುವ ಕಾಲುದಾರಿಗಳಲ್ಲಿ ದಾರಿ ಮುಚ್ಚಿಸುವಷ್ಟು ಎಲೆಗಳು ಮತ್ತೆ ಚರಪರ ಹೆಜ್ಜೆಸದ್ದುಗಳು. ಹಗಲೆಂದರೆ ಕತ್ತಲೂ ಹೌದು; ಕತ್ತಲೆಯಲ್ಲೇ ಬೆಳಕೂ ಕಾಣುವುದು. ದಿನವೂ ಬೆಳಕಿಗಿಂತ ಕತ್ತಲಿನ ವೇಳೆ ಹೆಚ್ಚುತ್ತಿರುವುದು. ಸೂರ್ಯ ಶಾಖವೂ ಕುಂದಿ ಕಾಂತಿಹೀನನಾಗಿರುವುದು. ವಾತಾವರಣವನ್ನು ಮೌನ ಮುತ್ತಿ, ಜೀವನ ಅಂತರ್ಮುಖಿ ಆಗಿರುವ ಈ ಹೊತ್ತು.

ಬೇಸಿಗೆಯಲ್ಲಾಗಿದ್ದರೆ ತೆರೆದಿರುತ್ತಿದ್ದ ಮನೆಯ ಕಿಟಕಿಗಳು ಚಳಿಗಾಲಕ್ಕೆ ಮಡಚಿ ಒಳಸೆಳೆದುಕೊಂಡಿವೆ. ಇಂತಹದೇ ಚಳಿಗಾಲವೊಂದರಲ್ಲಿ ಭೇಟಿಗೆ ಬಂದಿದ್ದ ವಿಜ್ಞಾನ ಶಿಕ್ಷಕಿ ನನ್ನಮ್ಮ ಯಾವತ್ತೂ ಬಾಗಿಲು ಕಿಟಕಿಗಳು ಮುಚ್ಚಿದ್ದರೆ ಇವರಿಗೆಲ್ಲ ಶ್ವಾಸೋಚ್ಛಾಸಕ್ಕೆ ಆಮ್ಲಜನಕ ಹೇಗೆ ಸಿಗುವುದೋ ಎಂದು ಚಿಂತೆಗೊಳಗಾಗಿದ್ದಳು. ಸದ್ಯಕ್ಕೆ ಕಿಟಕಿ ಬಾಗಿಲ ಚಡಿಯಲ್ಲಿ ನುಸುಳಿ ಬರುವ ತಣ್ಣಗಿನ ಗಾಳಿಯಷ್ಟೇ ಮನೆಯೊಳಗೆ ಬಂದು ಮೂಗನ್ನು ಏರಿ, ಎದೆ ಗೂಡಿನೊಳಗೆ ಇಳಿದು, ಅಲ್ಲಿನ ಯೋಚನೆಗಳಿಗೆ ಬೆಚ್ಚಿ ಬೆಚ್ಚಗಾಗಿ, ಬಂದ ದಾರಿಯಲ್ಲೇ ಮರಳುತ್ತಿದೆ. ಮತ್ತೊಂದು ವಿಶೇಷ, ಈ ವರ್ಷದ ಚಳಿಗಾಲಕ್ಕೆ ನನ್ನ ನಡು ನೆತ್ತಿಯ ಮೇಲೆ ಕಪ್ಪು ಕೂದಲುಗಳ ರಾಶಿಯಲ್ಲಿ ಕೆಲ ಬಿಳಿ ಕೂದಲುಗಳು ಕಾಣಸಿಕ್ಕಿವೆ. ಇವು ಹುಟ್ಟಾ ಬಿಳಿಯಾ ಅಥವಾ ಈ ಚಳಿಗೆ ಬಣ್ಣ ಬದಲಾಯಿಸಿದ್ದಾ? ಗೊತ್ತಿಲ್ಲ. ಇದೀಗ ದಿನವೂ ಕನ್ನಡಿಯಲ್ಲಿ ನೋಡಿ ನೋಡಿ ಲೆಕ್ಕ ಮಾಡಿ ಮಾಡಿ, ತಲೆಯ ಯಾವ ಮಗ್ಗುಲಿಗೆ ಒಂದೋ ಎರಡೋ ಮೂರೋ ಅಥವಾ ಎಷ್ಟು ಬಿಳಿ ಕೂದಲುಗಳಿವೆ ಎಂಬುದು ಪರಿಚಯ ಆಗಿಬಿಟ್ಟಿದೆ. ಕಚೇರಿಯ ಕೆಲಸದ ನಡುವೆಯೂ ಆಗಾಗ ತಿಳಿಯದೆಯೇ ಕೈ ತಲೆಯ ಮೇಲೆ ಹೋಗಿ ಅವನ್ನು ಮುಟ್ಟಿ, ತಟ್ಟಿ ಮಲಗಿಸುತ್ತ ಕಪ್ಪುಕೂದಲ ರಾಶಿಯಲ್ಲಿ ಅಡಗಿಸುತ್ತ ಕೆಲಸ ಮುಂದುವರಿಸುವುದಿದೆ. ಇಲ್ಲದಿದ್ದರೆ ನಾನು ಕೂತ ಕುರ್ಚಿಯ ಬದಿಯ ಕಿಟಕಿಯ ಗಾಜಿನಲ್ಲಿ ಕಂಡಷ್ಟು ನನ್ನ ಮುಖವನ್ನು ಕಂಡು ಅಂದಾಜಿನಲ್ಲಿ ತಲೆಯ ಮೇಲೆ ಕೈ ನೇವರಿಸುವುದಿದೆ.

ಮೊನ್ನೆಯಷ್ಟೇ ನಮ್ಮ ಕಚೇರಿಯಲ್ಲಿ ಕೆಲಸಕ್ಕೆ ಸೇರಿದ ಇಂಗ್ಲಿಷ್ ಹುಡುಗ ನನ್ನನ್ನೂ, ಕಿಟಕಿಯ ಗಾಜಿನಲ್ಲಿ ನನ್ನ ಮಸುಕು ಪ್ರತಿಬಿಂಬವನ್ನೂ ಜೊತೆ ಜೊತೆಗೆ ನೋಡುತ್ತಾ ಹರಟೆ ಹೊಡೆಯುವುದಿದೆ. ಇಂತಹ ಮಾತುಗಳ ನಡುವೆಯೇ ಒಂದು ದಿನ ನನಗೆ ಮನೆಯಿಂದ ತಂದ ಕೇಕು ಕೂಡ ತಿನ್ನಿಸಿದ. ನನ್ನ ತಲೆಯಲ್ಲಿ ಕಂಡ ಬಿಳಿ ಕೂದಲ ಬಗ್ಗೆ ಅವನಿಗಾದ ಖುಷಿಗೆ ಇರಲಿಕ್ಕಿಲ್ಲ ಅಂದುಕೊಂಡಿದ್ದೇನೆ. ಹಿಂದಿನ ದಿನ ಅವನ ಅಜ್ಜನ ಹುಟ್ಟು ಹಬ್ಬ ಇತ್ತಂತೆ. ವಯಸ್ಸು ಎಷ್ಟೇ ಆದರೂ ಕೇಕು ಕತ್ತರಿಸಿ ತಿನ್ನಿಸಿ ಹುಟ್ಟು ಹಬ್ಬ ಆಚರಿಸುವುದು ಇಲ್ಲಿನ ಜನರ ಪದ್ಧತಿ. ಆದ ವಯಸ್ಸು, ಕಳೆದ ಪ್ರಾಯ, ಉಳಿದ ಆಯಸ್ಸು ಎಲ್ಲವೂ ಸಂಭ್ರಮದ ವಸ್ತು ಯಾಕಾಗಬಾರದು? ಇಂತಹದೆ ಒಂದು ಚಳಿಗಾಲದ ದಿನ, ತೊಂಬತ್ತ ಮೂರು ವರ್ಷಗಳ ಹಿಂದೆ ಈ ಗೆಳೆಯನ ಅಜ್ಜ ಇಂಗ್ಲೆಂಡಿನ ಊರೊಂದರಲ್ಲಿ ಹುಟ್ಟಿದ್ದು. ತನ್ನ ಹದಿನಾಲ್ಕನೆಯ ವಯಸ್ಸಿನಲ್ಲಿ ಬ್ರಿಸ್ಟಲ್ ಎನ್ನುವ ಊರಿಗೆ (ನಾನು ಈಗ ನೆಲಸಿರುವ ಊರು) ವಲಸೆ ಬಂದವ ಅವರಜ್ಜ. ಆ ಕಾಲಕ್ಕೆ ಕೃಷಿ ಜನಪ್ರಿಯ ಮತ್ತು ಅನಿವಾರ್ಯ ಕಾಯಕವಂತೆ. ಮನೆಯ ಮಕ್ಕಳೆಲ್ಲ ಬೇಸಾಯದಲ್ಲಿ ಹಿರಿಯರ ಕೈ ಬಲ ಮಾಡುತ್ತಾ ಬದುಕುತ್ತಿದ್ದರು. ಆವಾಗೆಲ್ಲ ಇಂಗ್ಲೆಂಡಿನಲ್ಲಿ ಕಡ್ಡಾಯ ಶಿಕ್ಷಣ ಜಾರಿಯಲ್ಲಿ ಇರಲಿಲ್ಲ.

ಇದು ಪುರಾತನ ಇಂಗ್ಲೆಂಡಿನ ಹಳೆಯ ಕತೆ. ಎಷ್ಟು ಹಳೆಯದೆಂದರೆ ಕಾರು ಎನ್ನುವುದು ಕಲ್ಪನೆ ಆಗಿದ್ದ ಕಾಲ ಅದು. ಸೈಕಲ್ಲು ಹೊಡೆದುಕೊಂಡೇ ಊರು ದೇಶ ಸುತ್ತುತ್ತಿದ್ದನಂತೆ ಅಜ್ಜ. ಆಗ ಅಷ್ಟು ಸೈಕಲ್ಲು ಹೊಡೆದಿದ್ದಕ್ಕೆ ಇನ್ನೂ ಬದುಕಿದ್ದೇನೆ ಎಂದು ಬಿಯರು ಕುಡಿಯುತ್ತ ಅಜ್ಜ ಕಣ್ಣು ಹೊಡೆಯುತ್ತಾನೆ. ಸರಕಾರ ಒಂದು ದಿನ ಕಡ್ಡಾಯ ಶಿಕ್ಷಣದ ಕಾನೂನು ಜಾರಿಗೆ ತಂದಿತು. ಮಣ್ಣಿನ ಮಕ್ಕಳೆಲ್ಲ ಒಮ್ಮೆಗೆ ಕಂಗಾಲಾದರು. ಬೇಸಾಯಕ್ಕೆ ನೆರವಾಗುತ್ತಿದ್ದ ಎಳೆಯ ಮಕ್ಕಳನ್ನೆಲ್ಲ ಶಾಲೆಗೆ ಕಳುಹಿಸಬೇಕು. ತಲೆಯ ಮೇಲೆ ಕೈ ಹೊತ್ತು ಏನು ಮಾಡುವುದೆಂದು ಯೋಚಿಸಿದರು. ಆಮೇಲೆ ರೈತರೆಲ್ಲ ಸೇರಿ ಸರಕಾರಕ್ಕೆ ಒಂದು ಮನವಿ ಸಲ್ಲಿಸಿದರು. ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬಹುದು, ಆದರೆ ಕೊಯ್ಲಿನ ಸಮಯಕ್ಕೆ ಪ್ರತಿ ವರ್ಷವೂ ಶಾಲೆಗೆ ರಜೆ ಕೊಡಬೇಕೆಂದು. ದೇಶದಾದ್ಯಂತ ಹೆಚ್ಚಿನವರು ರೈತರೇ ಆಗಿದ್ದರಿಂದ ಸರಕಾರಕ್ಕೂ ರೈತರ ಕೋರಿಕೆಯನ್ನು ಕೇಳದೆ ದಾರಿಯಿರಲಿಲ್ಲ. ಅಂತೂ ಒಪ್ಪಿಕೊಂಡ ಸರಕಾರ, ಆಗಸ್ಟ್ ತಿಂಗಳು ದೇಶದ ಎಲ್ಲ ಶಾಲೆಗಳಿಗೆ ರಜೆ ಎಂದು ತೀರ್ಮಾನಿಸಿತು. ಬೇಸಾಯಕ್ಕೆ ಹೆಚ್ಚು ಅನನುಕೂಲ ಆಗದಿರಲೆಂದು ಆಗಸ್ಟ್ ತಿಂಗಳು ರಜೆ ಸಿಕ್ಕಿತು. ಬ್ರಿಟನ್ನಿನಲ್ಲಿ ಕೈಗಾರಿಕೋದ್ಯಮ ಹೊಸ ಎತ್ತರವನ್ನು ಏರುವುದೂ ಶುರು ಆಗಿತ್ತು. ವ್ಯವಸಾಯದ ಜಂಜಾಟಗಳು ಸಾಕಾಯಿತು, ಪಟ್ಟಣ ಪ್ರದೇಶಗಳಲ್ಲಿ ಕೈಗಾರಿಕೆಗಳಲ್ಲಿ ಕೆಲಸ ಮಾಡುವುದೇ ಆಕರ್ಷಣೆ ಆಯಿತು. ಕೈಗಾರಿಕಾ ಕ್ರಾಂತಿಯ ಫಲವಾಗಿ ದೇಶದಲ್ಲೆಲ್ಲ ಉಗಿಬಂಡಿಗಳು, ಟಾರ್ ರಸ್ತೆಗಳು, ಉಕ್ಕಿನ ಸೇತುವೆಗಳು, ಸುರಂಗಗಳು, ಕಾರ್ಖಾನೆಗಳು...

ಮತ್ತೆ ಅವುಗಳೊಳಗೆ ಉದ್ಯೋಗಾವಕಾಶಗಳೂ ಹೆಚ್ಚಿ, ವ್ಯವಸಾಯ ಹಿಂದುಳಿಯಿತು. ಮುಂದೆ ನಡೆದ ಎರಡನೆಯ ವಿಶ್ವ ಯುದ್ಧದಲ್ಲಿ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟು ಬೇಸಾಯಕ್ಕೂ, ಕೈಗಾರಿಕೆಗಳಿಗೂ ತೀರ ಹೊಡೆತವೂ ಬಿತ್ತು. ಇವತ್ತಿನ ಇಂಗ್ಲೆಂಡಿನಲ್ಲಿ ಕೃಷಿ ಮತ್ತು ಕೈಗಾರಿಕೆಗಳು ಅವಶೇಷಗಳಂತೆ ಅಲ್ಲಲ್ಲಿ ಮಾತ್ರ ಕಾಣಿಸುತ್ತವೆ. ಇಷ್ಟೆಲ್ಲಾ ಬದಲಾವಣೆಗಳು ಅದರೂ ಆಗಸ್ಟ್ ರಜೆ ಹಾಗೇ ಮುಂದುವರಿಯಿತು. ಅಜ್ಜ ಹೇಳುತ್ತಾನೆ ‘ಹೊಸ ಇಂಗ್ಲೆಂಡಿನಲ್ಲಿ ಬೇಸಿಗೆ ರಜೆ ಎಂದು ಕರೆಸಿಕೊಳ್ಳುವ ಆಗಸ್ಟ್ ರಜೆಯ ಹಿಂದಿನ ಇತಿಹಾಸ ಇದೇ’ ಎಂದು!

ಈ ಅಜ್ಜನಷ್ಟೇ ಅಲ್ಲ, ಇಲ್ಲಿನ ಎಲ್ಲ ಅಜ್ಜಂದಿರೂ ತಮ್ಮ ದೇಶದ ಕಲ್ಲು, ಮಣ್ಣು, ನದಿ, ಹಳ್ಳ, ರೈಲುಹಳಿ, ಸೇತುವೆ, ನಾಯಕರು, ವಿಜ್ಞಾನಿ, ಸಾಹಿತಿಗಳ ಹಿಂದಿನ ಇತಿಹಾಸವನ್ನು ನೆನಪಿಡುವವರೇ. ಅಂತಹವರಿಗೆ ಬೇಸಿಗೆ ರಜೆಯ ಇತಿಹಾಸ ಯಾಕೆ ಮರೆವಾದೀತು? ಅಜ್ಜನೂ ಶಾಲೆಗೆ ಹೋಗುತ್ತಾ, ಆಗಸ್ಟ್ ತಿಂಗಳಲ್ಲಿ ಗದ್ದೆಯಲ್ಲಿ ಕೊಯ್ಲಿಗೆ ನೆರವಾಗುತ್ತ ಬೆಳೆದ, ಬೆಳೆದು ಹಣ್ಣಾದ; ಹಣ್ಣು ಹಣ್ಣಾದ. ಕಡ್ಡಾಯವಾದ ಶಾಲಾ ಶಿಕ್ಷಣ ಪಡೆದ ಮಕ್ಕಳು, ಮೊಮ್ಮಕ್ಕಳು ಅಜ್ಜನ ಮನೆ ಬಿಟ್ಟು ಬ್ರಿಸ್ಟಲ್ನಲ್ಲೇ ಆಚೀಚೆ ಕೆಲಸಕ್ಕೆ ತೊಡಗಿದರು, ಗೂಡು ಬಿಟ್ಟರು. ನೋಡಲಿಕ್ಕೂ ಕೇಳಲಿಕ್ಕೂ ಮನೆಯಲ್ಲಿ ಯಾರೂ ಇಲ್ಲದ ಅಜ್ಜನಿಗೆ ಸಂಗಾತಿಯಾಗಿ ಒಂದು ಟಿ.ವಿ ಹಾಕಿಸಿಕೊಡುವಾ ಎಂದು ಮಕ್ಕಳು ಮೊಮ್ಮಕ್ಕಳು ತೀರ್ಮಾನಿಸಿದರು. ಬಹಳ ವರ್ಷಗಳಿಂದ ಒಲ್ಲೆ ಎನ್ನುತ್ತಿದ್ದ ಅಜ್ಜ ಒಪ್ಪಿಕೊಂಡ. ಕಳೆದ ವರ್ಷದ ಹುಟ್ಟು ಹಬ್ಬದಲ್ಲಿ ಅಂತೂ ಇಂತೂ ಮನೆಗೊಂದು ಟಿ.ವಿ ಬಂತು. ಅಜ್ಜನ ಸೋತ ಕಣ್ಣುಗಳಿಗೆ ಸಾಮಾನ್ಯ ಗಾತ್ರದ ಟಿ.ವಿ ಕಾಣುತ್ತದೋ ಇಲ್ಲವೋ ಎಂದು ದೊಡ್ಡ ಪರದೆಯ ಟಿ.ವಿ ತಂದು ಕೊಟ್ಟಿದ್ದರು. ಬೆಳಗ್ಗಿಂದ ಸಂಜೆಯವರೆಗೂ ರಿಮೋಟ್ ಕಂಟ್ರೋಲ್ ಹಿಡಿದು ನಡುಗುವ ಬೆರಳುಗಳಿಂದ ಸ್ಪೋರ್ಟ್ಸ್ ಚಾನಲ್ಲುಗಳನ್ನು ತಿರುಗಿಸುತ್ತಾ ಕಾಲಕಳೆಯಲಾರಂಭಿಸಿದ. ಮಹಾ ಮಡಿವಂತ ಟೆಸ್ಟ್ ಕ್ರಿಕೆಟಿನ ಮಹಾನ್ ಸಂಪ್ರದಾಯಸ್ಥ ಅಭಿಮಾನಿಯಾದ ಅಜ್ಜ, ಅವಸರದ ಟ್ವೆಂಟಿ- ಟ್ವೆಂಟಿ ಮಾದರಿ ಟಿವಿಯಲ್ಲಿ ವಿಜೃಂಭಿಸುವಾಗ, ಮತ್ತೆ ಅಂತಹ ಕ್ರಿಕೆಟನ್ನು ಅಜ್ಜ ಖಂಡಿಸಿ ಮಾತಾಡುವಾಗ ಕೈ ಕಾಲುಗಳು ಅಲುಗಿ, ಕೆಂಪಗಿರುವ ಮೈಮುಖ ಇನ್ನೂ ಕೆಂಪಾಗುತ್ತಿದ್ದವು.

ಅಜ್ಜ, ಮಕ್ಕಳು, ಮೊಮ್ಮಕ್ಕಳು ಒಂದೇ ಊರಿನಲ್ಲಿ ಬೇರೆ ಬೇರೆ ಮನೆಗಳಲ್ಲಿ ಬದುಕುವವರಾದ್ದರಿಂದ ತಿಂಗಳಿಗೊಮ್ಮೆಯಾದರೂ ಭೇಟಿಯಾಗಬಹುದು, ಅಜ್ಜನ ಮನೆಯಲ್ಲಿ ಸೇರಬಹುದು. ಅಜ್ಜನಿಗೆ ಪಾರ್ಟಿ ಕೊಡೋಣ ಎಂದು ಊರಿನ ಮೂಲೆಯಲ್ಲಿರುವ ನೂರು ವರ್ಷ ಹಳೆಯ ಚರಿತ್ರೆಯ, ಆದರೆ ಮಕ್ಕಳು ಮೊಮ್ಮಕ್ಕಳು ಇನ್ನೂವರೆಗೂ ಹೋಗದ ಹೋಟೆಲೊಂದಕ್ಕೆ ಕರೆದುಕೊಂಡು ಹೋಗಿದ್ದರಂತೆ. ಮಸುಕು ದೃಷ್ಟಿಯ ಹಿಂದಿರುವ ಚೊಕ್ಕ ನೆನಪಿನಲ್ಲಿ ಸುತ್ತೆಲ್ಲ ನೋಡಿ ಅಜ್ಜ ತಾನು ಇಲ್ಲಿಗೆ ಮೊದಲೊಮ್ಮೆ ಬಂದಿದ್ದೆ, ಆಗ ಈ ಕಿಟಕಿ ಇಲ್ಲಿ ಇರಲಿಲ್ಲ ಎಂದು ಒಂದು ಕಿಟಕಿಯ ಕಡೆಗೆ ಕೈ ತೋರಿಸಿದ್ದಾನೆ. ಗೋಡೆಯ ಬಣ್ಣ ಬೇರೆ ಇತ್ತು ಎಂದು ನೆನಪು ಹರಡಿ ಹುಡುಕಿದ್ದಾನೆ. ಯಾವಾಗ ಬಂದಿದ್ದೆ ಎಂದು ಆಶ್ಚರ್ಯದಿಂದ ಮೊಮ್ಮಗ ಕೇಳಿದರೆ, ಸುಮಾರು ಅರವತ್ತೈದು ವರ್ಷದ ಹಿಂದೆ ಎಂದು ಮುಖದ ನೆರಿಗೆಯ ಬಲೆ ಹರಿದುಕೊಂಡು ಅಜ್ಜ ಜೋರಾಗಿ ನಕ್ಕಿದ್ದಾನೆ. ಅಜ್ಜನ ಹಳೆಯ ನೆನಪಿನೊಡನೆ ಸ್ವಲ್ಪ ದೂರ ತಾನೂ ನಡೆದ ಮೊಮ್ಮಗನ ದೃಷ್ಟಿ ಅರ್ಧದಲ್ಲೇ ಮಂಕಾದಂತಾಗುತ್ತದೆ. ಮರುದಿನ ಆಫೀಸಿಗೆ ಬಂದ ಗೆಳೆಯ ನನ್ನ ಹತ್ತಿರ ಕುಳಿತು ಹಿಂದಿನ ದಿನ ಕೇಕು ಹಂಚುತ್ತಾ ಅಜ್ಜನ ಕತೆಯನ್ನು ಹೀಗೆ ಮುಂದುವರಿಸಿದ್ದಾನೆ. ಕತೆ ಕೇಳುತ್ತ, ನಾನೂ ನಾನು ಕಿಟಕಿಯ ಹೊರಗೆ ಎಡೆದಷ್ಟು ನೋಡುತ್ತಿದ್ದೇನೆ. ಎಲ್ಲಿಯ ತನಕ ದೃಷ್ಟಿ ಹಾಯುತ್ತದೋ ಅವನ್ನೆಲ್ಲ. ಕಿಟಕಿ, ಚಳಿಗಾಲದ ಬೋಳು ಮರಗಳು, ಮರದ ಮೇಲೆ ಮಂಜಿನ ಹೊದಿಕೆ, ಮಂಜಿನ ಹೊದಿಕೆಯ ಹಿಂದೆ ಮೋಡ ಕವಿದ ಆಕಾಶ, ಆಕಾಶದಲ್ಲಿ ಕಾಂತಿ ಕಳೆದುಕೊಂಡ ಸೂರ್ಯ, ಮತ್ತೆ ಅವೆಲ್ಲಕ್ಕಿಂತ ಮೊದಲು ಕಿಟಕಿಯ ಪಾರದರ್ಶಕ ಗಾಜಿನಲ್ಲಿ ಮೂಡುವ ನನ್ನದೇ ಮುಖದ ಮಸುಕು ಪ್ರತಿಬಿಂಬ. ಚಳಿಗಾಲದ ಹಿನ್ನೆಲೆಯಲ್ಲಿ ನನ್ನದೇ ಪ್ರತಿಬಿಂಬವೂ ಗೋಜಲಾದ, ಗುರುತು ಸಿಗದ ಯಾರದೋ ಮುಖದಂತೆ ಕಾಣಿಸುತ್ತದೆ. ಹಣ್ಣು ಮುದುಕನ ಮುಖವೇ ಎಂದು ಒಮ್ಮೆ ಬೆಚ್ಚುತ್ತೇನೆ! ನನ್ನ ನೆತ್ತಿಯ ಮೇಲೊಮ್ಮೆ ಮೆತ್ತಗೆ ಮುಟ್ಟಿ ನೋಡಿ, ಕಿಟಕಿಯಾಚೆ ಏನಿದೆ ಎಂದು ನೋಡುವ ಗೊಡವೆಯೇ ಸಾಕೆಂದು ಸುಮ್ಮನಾಗುತ್ತೇನೆ; ಚಳಿಗಾಲದ ಸ್ವಾಗತದ ತಯಾರಿ ಇದೀಗ ಬ್ರಿಟನ್ನಿನಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.