ಚಂದ್ರಶೇಖರ ಕಂಬಾರ ಅವರ ಹೊಸ ಕಾದಂಬರಿ ‘ಶಿವನ ಡಂಗುರ’ ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ‘ಶಿಖರ ಸೂರ್ಯ’ ನಂತರದ ಕಂಬಾರರ ಈ ಕಾದಂಬರಿ ಹಲವು ನವಿರು ಕಥನಗಳ ಮೋಹಕ ಗುಚ್ಛದಂತಿದೆ. ಕಂಬಾರರ ಭಾಷೆಯ ಬಾಗು–ಬಳುಕು ಸೊಗಡು ಎಲ್ಲದರ ಅಭಿವ್ಯಕ್ತಿಯಂತಿರುವ, ಸ್ವತಂತ್ರ ಸಣ್ಣಕಥೆಯಂತೆ ಓದಿಸಿಕೊಳ್ಳುವ ಗುಣದ, ‘ಶಿವನ ಡಂಗುರ’ ಕಾದಂಬರಿಯ ಒಂದು ಭಾಗ ಇಲ್ಲಿದೆ.

ಆಸಲ ವಾರ್ಷಿಕ ಪರೀಕ್ಷೆ ಮುಗಿದು ಸೂಟಿ ಸುರುವಾಗಿತ್ತು. ವಸಂತ ರುತುವಿಗೆ ಕಾಡು ಅರಳಿ ಪರಿಮಳಗಳಿಂದ ಘಮಘಮಿಸುತ್ತಿತ್ತು. ಚೆಂಬಸವ ಈಗ ದನಕಾಯುವ ಲಸಮನಿಗೆ ಅಂಟಿಕೊಂಡ. ಹಸಿರು ಕಾಡಿನಲ್ಲಿ ಕಾರೀ, ಬಾರೀ, ಹಣ್ಣು ಹರಿದು ತಿನ್ನುವುದು, ಹಸೀ ಮಾವಿನ ಕಾಯಿ, ನೆಲ್ಲೀಕಾಯಿ ತಿನ್ನುತ್ತ ಅಲೆದಾಡುವುದು ಚೆಂಬಸವನಿಗೆ ಬಹಳ ಸುಖ ನೀಡುತ್ತಿತ್ತು. ಕಟ್ಟಿಕೊಂಡು ಹೋದ ಬುತ್ತಿಯನ್ನು ಇಬ್ಬರೂ ತಿಂದು ಹೊಳೆನೀರು ಕುಡಿದು ಅಣ್ಣತಮ್ಮಂದಿರಂತೆ ಅದು ಇದು ಹರಟುತ್ತಿದ್ದರು.

ಅಲ್ಲದೆ ಚೆಂಬಸನಿಗೆ ತಿಳಿಯದ ಕಾಡಿನ ಅನೇಕ ಸಂಗತಿಗಳು ಲಸಮನಿಗೆ ಗೊತ್ತಿದ್ದವು. ಯಾವ ಮರಗಿಡ ಬಳ್ಳಿಗಳನ್ನ ಮುಟ್ಟಬಹುದು, ಯಾವುದನ್ನಲ್ಲ, – ಎಂಬುದರಿಂದ ಹಿಡಿದು ಯಾವುದು ವಿಷಕಾರಿ, ಯಾವುದು ಮದ್ದು ಎಂಬಿವೆಲ್ಲ ಅವನಿಗೆ ಗೊತ್ತಿದ್ದವು. ಅವನಿಗೆ ಗೊತ್ತಿಲ್ಲದ ಹಾವು ಹಕ್ಕಿ ಪ್ರಾಣಿಗಳೇ ಇರಲಿಲ್ಲ. ಕೂಗಿದ ದನಿ ಕೇಳಿ ಅದ್ಯಾವ ಹಕ್ಕಿಯೆಂದು ಹೇಳುತ್ತಿದ್ದ. ಹಕ್ಕಿಗಳ ಸ್ವಭಾವ, ದೌರ್ಬಲ್ಯ, ಚಟಗಳು ಕೂಡ ಲಸಮನಿಗೆ ಗೊತ್ತಿದ್ದವು.

ಅವನ ಮಾತು ಕೇಳದೆ ಚೆಂಬಸನೊಮ್ಮೆ ಒಂದು ಎಲೆ ಹರಿದಾಗ – ಇಡೀ ದಿನ ಕೈ ತುರಿಸಿಕೊಂಡು, ಪರಚಿಕೊಂಡು ಸಂಜೆ ಹೊತ್ತಿಗೆ ಕೈ ಬಾತಿತ್ತು, ಲಸಮನಿಂದ ಆಮೇಲೆ ಗೊತ್ತಾಯಿತು, ಅದು ತುರಚೀ ಎಲೆ, ಕೈಯಾರೆ ಮುಟ್ಟಬಾರದು, ಮುಟ್ಟಿದರೆ ಭಯಂಕರ ನವೆ, ತುರಿಕೆ ಉಂಟಾಗುತ್ತದೆ ಎಂದು. ಲಸಮ ಇಂಥ ತಪ್ಪುಗಳನ್ನು ಎಂದೂ ಮಾಡುತ್ತಿರಲಿಲ್ಲ.

ಒಂದು ದಿನ ಲಸಮ ಜೇಬಿನ ತುಂಬ ಕಾರೀಹಣ್ಣು ಹರಿದುಕೊಂಡು ಆಮೇಲೆ ದನ ಮನೆಗೆ ಬರುವ ಸಮಯವಾಗಿ ‘ಮನೀಗಿ ಹೋಗೂನ್ನಡಿ’ ಅಂದ. ಅಷ್ಟೊಂದು ಅಪರೂಪದ ಕಾರೀಹಣ್ಣನ್ನ ಉತ್ಸಾಹದಿಂದ ಹರಿದುಕೊಂಡನಲ್ಲ, ಯಾಕಿದ್ದೀತೆಂದು ಸಹಜ ಕುತೂಹಲ ಕೆರಳಿತು ಚೆಂಬಸನಲ್ಲಿ. ಕಾರೀಹಣ್ಣು ಮೈತುಂಬ ಹರಿತ ಮತ್ತು ಬಿರುಸಾದ ಮುಳ್ಳಿರುವ ಕಂಟಿಯಲ್ಲಿ ಸಿಕ್ಕುವ ಅಪರೂಪದ ಚಿಕ್ಕಹಣ್ಣು. ತನಗೊಂದೂ ಕೊಡದೆ ಒಯ್ಯುತ್ತಿರುವನಲ್ಲ ಯಾರಿಗಿದ್ದೀತು ಎಂದು ಚಂಬಸನಿಗೆ ಆಶ್ಚರ್ಯವಾಯಿತು.

‘ಇವ್ಯಾರಿಗೆ?’ ಅಂದ.
‘ಶಾರಿಗೆ’
‘ಶಾರಿ ಯಾರು? ನಿನಗೇನಾಗಬೇಕು?’
‘ಕೊಟ್ಟಿಗೆ ಮನೆ ನಾಗಣ್ಣ ನನ್ನ ಸೋದರ ಮಾವ. ಈ ಶಾರಿ ಅವನ ಮಗಳು. ಕಾರೀ ಹಣ್ಣಂದರ ಆಕಿಗಿ ಭಾಳ ಆಸೆ, ಸಂಜಿಕ ಬರೋವಾಗ ತರ್ತೀನಂತ ಹೇಳಿದ್ದೆ. ದಾರೀ ಕಾಯತಾಳ’.
‘ನೀ ಮದಿವ್ಯಾಗ್ತೀಯೇನ ಮತ್ತ?’ ಅಂದ ನಗಾಡುತ್ತ
‘ಇಲ್ಲ ಮಾರಾಯಾ, ಆಕಿ ಆಗಲೇ ಜೋಗ್ತಿ ಆಗ್ಯಾಳ. ಅಕಾ ಅವರ ಮನಿ ಬಂತು. ಹೋಗಿ ಕೊಟ್ಟ ಬರ್ತೀನಿ’ ಅಂದ. ಅಷ್ಟರಲ್ಲಾಗಲೇ ಒಂದು ಎಮ್ಮೆ ಉಳಿದ ದನಗಳಿಂದ ಬೇರ್ಪಟ್ಟು ಬೇರೆ ದಾರಿ ಹಿಡಿದಿತ್ತು. ‘ಹೋಗಿ ಲಗು ಬಾ’ ಎಂದು ಚಂಬಸ ಹೇಳುತ್ತಿರುವಂತೆ ದೂರದಲ್ಲಿ ಒಬ್ಬ ಹುಡುಗಿ ಬೇರ್ಪಟ್ಟ ಸದರಿ ಎಮ್ಮೆಯನ್ನ ಹೊಡೆದುಕೊಂಡು ಹೋಗಲು ಮುಂದೆ ಬಂದಳು. ಅವಳ ರೂಪ, ನಡೆಯ ನಿಲುವುಗಳಿಂದ ವಿದ್ಯುತ್ ತಾಗಿದಂತೆ ಒಂದು ಕ್ಷಣ ಚಂಬಸ ಸ್ತಬ್ಧನಾಗಿ ನಿಂತು ಬಿಟ್ಟ. ಕೊಟ್ಟಿಗೆ ಮನೆಯ ಯಮುನಕ್ಕ ಇವನಿಗೆ ಗೊತ್ತಿತ್ತು. ಒಮ್ಮೆ ಆಕೆ ಇವನೆದುರು ಬಂದಾಗ ಸರಿದು ನಿಂತು ಚಂಬಸ ಹೋಗುವುದಕ್ಕೆ ದಾರಿ ಮಾಡಿಕೊಟ್ಟಿದ್ದಳು. ಈತ ಅವಳನ್ನು ನೋಡಲೇ ಇಲ್ಲವೆಂಬಂತೆ ದಾಟಿ ಬಂದಿದ್ದ. ಆಕೆಗೆ ಇಂಥ ಸುಂದರ ಮಗಳಿರುವುದನ್ನು ನೋಡಿ ಚಂಬಸ ಹುಬ್ಬು ಗಂಟು ಹಾಕಿದ.

ನಿಂತ ಶಾರವ್ವನಿಗೂ ಆಶ್ಚರ್ಯ! ಗುರುತೇ ಇಲ್ಲದಂತೆ ತನ್ನನ್ನ ದಿಟ್ಟಿಸಿ ನೋಡುತ್ತಿದ್ದ ಚೆಂಬಸನ ಕಂಡು ಹೊಯ್ಕಾಯಿತು. ಯಾಕಂದರೆ ನಡಾವಳಿಯಿಂದ ತಾನು ತುಂಗವ್ವನ ಅಣ್ಣನ ಮಗಳು. ಅಂದರೆ ಸೋದರ ಸೊಸೆ, ಆದ್ದರಿಂದಲೇ ಆಕೆ ಅವನ ಜೊತೆ ನೇರವಾಗಿ ಮಾತಾಡಿರಲಿಲ್ಲವಾದರೂ ಅವರಿವರ ಮುಂದೆ ‘ಮಾವ’ ಎಂದೇ ಚಂಬಸನನ್ನು ಹೆಮ್ಮೆಯಿಂದ ಗುರುತಿಸಿದ್ದಳು. ಈಗ ತನ್ನನ್ನ ಆ ರೀತಿ ನೋಡಿದ ಅವನನ್ನ ತುಂಟತನದಿಂದಲೇ ನೋಡಿದಳು. ತನ್ನನ್ನು ನೋಡಿ ಅವ ನಕ್ಕಂತಿತ್ತು. ಆತ ಹಾಗೆ ನಕ್ಕಾಗ ಅವನ ಚಿಗುರು ಮೀಸೆಯ ಕೆಳಗಿನ ಹಲ್ಲು ಹೊಳೆದಂಗಾಯ್ತು. ಶಾರವ್ವನ ಮೈತುಂಬ ಕಾಮನಬಿಲ್ಲಿನಂಥ ಭಾವತರಂಗಗಳು ಸುಳಿದಾಡಿ ನಾಚಿ ಹಿಂದಿರುಗಿದಳು.

ಯಾಂತ್ರಿಕವಾಗಿ ದನಕರುಗಳ ಹಿಂದೆ ನಡೆಯುತ್ತ ‘ಈ ಹುಡಿಗೀನ್ನ ಎಲ್ಲೋ ನೋಡಿಧಂಗೈತಲ್ಲ? ಎಲ್ಲಿ?’ ಅಂತ ನೆನಪು ಮಾಡಿಕೊಳ್ಳಲು ಧ್ಯಾನಿಸಿದ; ಚಂಬಸ: ‘ಹೌದು, ಈಗ ಒಂದೆರಡು ವಾರಗಳ ಹಿಂದೆ ಇರಬೇಕು. ಆಗಿನ್ನೂ ನಮಶ್ಶಿವಾಯ ಪಿಶಾಚಿಯೇ ಆಗಿದ್ದ. ಒಂದು ಶುಕ್ರವಾರ ಸಂತೆಯ ದಿವಸ ಮಧ್ಯಾಹ್ನ ಒಪ್ಪತ್ತಿನ ಸಾಲೆ ಮುಗಿಸಿ ಲಸಮನ ಹುಡುಕಿಕೊಂಡು ಕಾಡಿಗೆ ಹೊರಟಾಗ ನೇರಿಲಹಣ್ಣಿನಾಸೆಯಾಗಿ ಮೆಲ್ಲಗೆ ಬಿಳಿಪಿಶಾಚಿಗೆ ಸುಳಿವು ಸಿಗದಿರಲೆಂದು ಅತ್ತಿತ್ತ ನೋಡುತ್ತ ಜಪ್ಪಿಸಿ ನಡುಗಡ್ಡೆಗೆ ಬಂದ. ಮುದುಕ ಅಲ್ಲಿದ್ದನೋ ಇಲ್ಲವೋ, ಇದ್ದಾನೆಂದು ಭ್ರಮಿಸಿ ಜಾಗರೂಕತೆಯಿಂದಲೇ ಬಾಗಿ ಹೆಜ್ಜೆ ಹಾಕುತ್ತಿದ್ದ. ಚಿಕ್ಕಂದಿನಲ್ಲಿ ತುಂಗವ್ವ ಹೇಳಿದ ಕತೆ ನೆನಪಾಯಿತು: ನಮಶ್ಶಿವಾಯ ಸ್ವಾಮಿ ಅಂದರೆ ಬಿಳಿ ಪಿಶಾಚಿ. ಅಲ್ಲಿಗೆ ಹೋದ ಮಕ್ಕಳನ್ನು ಹಿಡಿದು ಹದ್ದು ಮಾಡಿ ಹಾರಿಸುತ್ತಾನೆಂದು ಹೇಳಿದ್ದಳಲ್ಲ, ಆ ಬಿಳೀ ಪಿಶಾಚಿ ಹಾಗೇ ಇರಬೇಕೆಂದು ಇವನೂ ನಂಬಿದ್ದ.

ಆ ದಿನ ಬಿಳಿಪಿಶಾಚಿಯ ಕಣ್ಣು ತಪ್ಪಿಸಿ ಚಂಬಸ ಒಬ್ಬನೇ ಮರ ಹತ್ತಿದ್ದ. ಕೈಯಳತೆಯಲ್ಲೇ ಬೇಕಾದಷ್ಟು ಹಣ್ಣು ಇದ್ದುದರಿಂದ ಟೊಂಗೆಯ ಅಲುಗಬೇಕಾದ ಅಗತ್ಯವಿರಲಿಲ್ಲ. ಜೇಬು ತುಂಬಿಕೊಂಡು ಇನ್ನೇನು ಇಳಿಯಬೇಕು, ಕೆಳಗಡೆ ಇವನ ಹಾಗೇ ಕಳ್ಳತನದಿಂದ ನುಗ್ಗಿದ ಒಂದು ಹುಡುಗಿ ಪಿಳಿಪಿಳಿ ಕಣ್ಣು ಬಿಡುತ್ತ ಇವನ್ನನ್ನೇ ನೋಡುತ್ತ ನಿಂತುಕೊಂಡಿತ್ತು. ಸುಂದರವಾದ ದೊಡ್ಡ ಕಣ್ಣು, ಗುಲಾಬಿ ವರ್ಣದ ದುಂಡು ಮುಖ, ತುಂಬಿದ ತೋಳು, ದಟ್ಟವಾದ, ಬಾಚಿ ಹಿಂದೆ ಕಟ್ಟಿಕೊಂಡಿದ್ದರೂ ಸ್ವಚ್ಛಂದವಾಗಿ ಹರಡಿದ್ದ ಕಪ್ಪು ಕೂದಲು, ಕೆಂಪು ತುಟಿಗಳ ಅರೆತೆರೆದು ಆಸೆಯಿಂದ ಇವನನ್ನೇ ನೋಡುತ್ತಿದ್ದಳು. ತಮ್ಮೂರಿನಲ್ಲಿ ಇಷ್ಟೊಂದು ಚಂದದ ಹುಡುಗಿ ಇದ್ದುದೇ ಗೊತ್ತಿರಲಿಲ್ಲ.

ಮೈಮರೆತು ಅವಳನ್ನೇ ನೋಡುತ್ತಿರಲು ತನಗೂ ಹಣ್ಣು ಚೆಲ್ಲೆಂದು ಸನ್ನೆ ಮಾಡಿದಳು! ಫಳ್ಳನೆ ಹೊಳೆವ ಹಲ್ಲು ತೆರೆದು ಕೇದಗೆ ನಗೆ ನಗುತ್ತ ನಿಂತವಳಿಗೆ ಹಣ್ಣು ಚೆಲ್ಲಬೇಕೆಂಬಷ್ಟರಲ್ಲಿ ‘ಯಾರದು?’ ಎಂದು ಬಿಳಿಪಿಶಾಚಿಯ ದನಿ ಕೇಳಿಸಿತು. ತಕ್ಷಣ ಹುಡುಗಿ ತುಂಗವ್ವನ ಕತೆಯ ದೇವತೆಯಂತೆ ಅದೆಲ್ಲೋ ಮಾಯವಾದಳು. ಅಷ್ಟರಲ್ಲಿ ಪಿಶಾಚಿ ಬಂದನಾದ್ದರಿಂದ ಇವನೂ ದಟ್ಟ ಪೊದೆಯ ಹಿಂದೆ ಅಡಗಿಕೊಂಡು ಕೂತ. ಬಂದ ಮುದುಕ ಅತ್ತಿತ್ತ ನೋಡಿ ಹೋದ.

ಪೊದೆಯಿಂದ ಹೊರಬಂದು ಅಲ್ಲಿಂದಲೇ ಹುಡುಕಿದ. ಹುಡುಗಿ ಪ್ರಾಣಿಸಹಜ ಚಾಲಾಕಿನಿಂದ ಎಲ್ಲಿ ಯಾವಾಗ ಹ್ಯಾಗೆ ಅಡಗಿದಳೆಂದು ತಿಳಿಯಲಿಲ್ಲ. ಆದರೆ ಅರೆದೆರೆದ ತುಟಿಯ, ಬಿಳಿಯ ಸುಂದರಿಯ ಸ್ನಿಗ್ಧ ರೂಪ ಮಾತ್ರ ಇವನ ಮನಸ್ಸಿನಲ್ಲಿ ಅಚ್ಚಳಿಯದೆ ಹಾಗೇ ಉಳಿದಿತ್ತು. ತನ್ನ ಹರಿತವಾದ ನಗೆಯಿಂದಿರಿದು ಹುಡುಗನ ಹೃದಯವನ್ನ ಗಾಯಗೊಳಿಸಿದ್ದಳು ಹುಡುಗಿ. ಈಗ ನೋಡಿದರೆ ಇವಳು ಯಮನವ್ವನ ಮಗಳೆಂದು ತಿಳಿದು ಚಂಬಸನಿಗೂ ತಿಳಿಯದಂತೆ ಸಂತೋಷವಾಯಿತು.

ಇನ್ನೊಂದು ದಿನ ಸಂಜೆ ಸಮಯ, ದನಗಳ ಹಿಂಡಿನೊಂದಿಗೆ ಇಬ್ಬರೂ ಊರ ಕಡೆಗೆ ಬರುತ್ತಿದ್ದರು. ಲಸಮ ಹಿಂಡುವ ದನಗಳೊಂದಿಗೆ ಊರ ಕಡೆ ಹೊರಟ. ಚಂಬಸ ಎತ್ತುಗಳನ್ನು ಊರ ಬದಿಯ ತೋಟದ ಮನೆಯ ಕಡೆಗೆ ಹೊಡೆದುಕೊಂಡು ನಡೆದ. ಆಗಲೇ ಆಕಾಶದಲ್ಲಿ ಮೋಡಗಳು ಕೂಡು ಬೀಳತೊಡಗಿದ್ದವು. ಮಳೆಗಾಳಿ ಬೀಸಿ ಮಳೆ ಬರುವ ಎಲ್ಲ ಲಕ್ಷಣಗಳೂ ಕಂಡುವಾಗಿ ಅವಸರ ಮಾಡಿ ಎತ್ತುಗಳನ್ನ ಓಡಿಸಿಕೊಂಡು ಬಂದು ತೋಟದ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ. ಅವುಗಳ ಮುಂದೆ ಮೇವು ಚೆಲ್ಲುವುದರೊಳಗೆ ಹೊರಗೆ ದೊಡ್ಡ ಹನಿ ಬೀಳತೊಡಗಿದವು.

ಹೊರಬಂದು ನೋಡಿದರೆ ಉಕ್ಕಿನ ಮುಳ್ಳಿನಂಥ ಹನಿ ಸುರಿಯತೊಡಗಿದವು. ಲಸಮ ಬರಲಿಕ್ಕಿಲ್ಲವೆಂದು ಇವನೇ ದೀಪ ಹಚ್ಚಿಟ್ಟ. ಅಷ್ಟರಲ್ಲಿ ಹೊರಗೆ ಏನೋ ಬಿದ್ದಂತಾಗಿ ಬಂದು ನೋಡಿದರೆ ಇದೇ ಹುಡುಗಿ ಶಾರಿ ಕಟ್ಟೆಯ ಮೇಲೆ ಉರುವಲ ಕಟ್ಟಿಗೆಯ ಹೊರೆ ಚೆಲ್ಲಿ ಒದ್ದೆ ಸೆರಗನ್ನು ಹಿಂಡತೊಡಗಿದ್ದಳು. ಆಗಲೇ ಕೆಳಗಿನ ಸೀರೆ ತೊಯ್ದು ಮೊಳಕಾಲಿಗಂಟಿಕೊಂಡಿತ್ತು. ಆಕಾಶದಲ್ಲಿ ಕರಿಯ ಮೋಡಗಳು ಸೇರಿ ಗುದಮುರಿಗೆಯಾಡುತ್ತ ಮಿಂಚುಗಳ ಚಿಮ್ಮಿ ಡೊಳ್ಳು ಬಾರಿಸಿದಂತೆ ನಗಾಡುತ್ತಿದ್ದವು.

ಹುಡುಗಿ ಅಸಹಾಯಕಳಾಗಿ ಇವನ ಕಡೆ ನೋಡಿ ತೊಯ್ದ ಮುಖದಲ್ಲೇ ಮಂದಹಾಸ ಮೂಡಿಸಿದಳು. ತಕ್ಷಣ ಚಂಬಸ ಒಳಗೆ ಗೂಟಕ್ಕೆ ತೂಗು ಹಾಕಿದ್ದ ತನ್ನ ಕಂಬಳಿ ತಗೊಂಬಂದು ‘ಕಟ್ಟಿಗೆ ಹೊರೆ ಇಲ್ಲೇ ಇರಲಿ, ಕತ್ತಲಾಗೋದರೊಳಗ ಊರ ಸೇರಿಕೊ’ ಎಂದು ಕೊಟ್ಟ. ಹುಡುಗಿ ಅವಸರದಿಂದ ಕಂಬಳಿಯ ಗೊಂಗಡಿ ಮಾಡಿಕೊಳ್ಳಲು ಪ್ರಯತ್ನಿಸುತ್ತ ನಿಂತಳು. ಅವಳ ಗೊಂದಲ ನೋಡಿ ಅವಳಿಗದು ಗೊತ್ತಿಲ್ಲವೆಂದು ಸರ್ರನೆ ಕಸಿದು ತಾನೇ ಗೊಂಗಡಿ ಮಾಡಿ ತಲೆ ಮೇಲೆ ಹೊದಿಸಿದ. ಅವನಿಂದ ಕಣ್ಣು ಕೀಳುವುದು ಕಷ್ಟಕರ ಅನ್ನಿಸಿತು ಶಾರವ್ವನಿಗೆ. ತನಗೇ ಗೊತ್ತಿಲ್ಲದಂತೆ ಅವನನ್ನೇ ನೋಡುತ್ತ ನಿಂತಳು.

‘ಇಲ್ಲಿ ಹಿಡಿದುಕೊ’ ಎಂದು ಅವಳ ಎಡಗೈ ತಗೊಂಡು ಕಂಬಳಿಗಂಟಿಸಿ ‘ಎಲಾ ಇವಳ! ಎಷ್ಟ ಚಂದ ಬೆಳೆದಾಳಲ್ಲ!’ ಎಂದು ಅಂದುಕೊಂಡು ತನ್ನ ಕೈ ಹಿಂತೆಗೆದುಕೊಂಡ. ಅವಳ ಕೈ ಸ್ಪರ್ಶಿಸಿದ ಹಸ್ತದ ಭಾಗವನ್ನು ಇನ್ನೊಂದು ಕೈಯಿಂದ ಮೆಲ್ಲಗೆ ಸವರಿಕೊಂಡು ಸುಖದ ತೆರೆಗಳ ಮೇಲೆ ತೇಲಾಡುತ್ತ ಅವಳ ಕಡೆ ನೋಡಿದ. ಅವಳೂ ಕಂಬಳಿಯ ಅಂಚನ್ನು ನೀಳವಾದ ಬಿಳಿಯ ಬೆರಳಲ್ಲಿ ಹಿಡಿದುಕೊಂಡು ಹೊರಡಲೋ ಬೇಡವೋ ಎಂಬಂತೆ ಅವನ ಮುಖವನ್ನೇ ನೋಡುತ್ತ ನಿಂತಳು. ಅವಳಿಗೋ ಅಳುಕು ಅನುಮಾನ ಭಯ.... ಮತ್ತೆ ಚಂಬಸನೇ ಅವಸರ ಮಾಡಿದ ‘ಕಂಬಳಿ ನಾಳಿ ಕೊಟ್ಟೀಯಂತ. ಮೊದಲೋಡು’ ಅಂದ. ಹೊರೆ ಅಲ್ಲೇ ಬಿಟ್ಟು ಓಡಿದಳು.

ಅವಳು ತುಂಗವ್ವನ ಅಣ್ಣನ ಮಗಳೆಂದು ಚಂಬಸನಿಗೆ ಗೊತ್ತಾಗಿತ್ತು. ಹನಿ ನಿಂತು ಆಗಲೇ ಕತ್ತಲಾಗಿತ್ತು. ಮಳೆ ಸುರಿಸಿದ್ದಕ್ಕೆ ದೇವರಿಗೆ ಕೃತಜ್ಞತೆ ಹೇಳಿ ಅವಳ ಉರುವಲ ಹೊರೆ ಹೊತ್ತುಕೊಂಡು ಊರ ಕಡೆಗೆ ಹೆಜ್ಜೆ ಹಾಕಿದ. ಸೀದಾ ಅವಳ ಕೊಟ್ಟಿಗೆ ಮನೆಯ ಅಂಗಳದ ಕಟ್ಟೆಯ ಮೇಲೆ ಹೊರೆಯಿಟ್ಟು ಮನೆಗೆ ಹೋದ. ಸುಮಾರು ಹತ್ತು ವರ್ಷದವಳು, ಹದಿನಾಲ್ಕರ ಬೆಳವಣಿಗೆ ಬೆಳೆದಿದ್ದಳು ಶಾರವ್ವ, ತಕ್ಷಣ ಯಮುನಕ್ಕ ಜಾಗೃತಳಾಗಿ ಮಗಳನ್ನು ನಿಯಂತ್ರಣಕ್ಕೆ ಒಳಪಡಿಸಿದಳು. ಈಗ ಶಾರವ್ವ ಯಮುನಕ್ಕನ ಒಂಟಿ ಮಗಳಲ್ಲ. ತುಂಗವ್ವಾಯಿಯ ಕಣ್ಗಾವಲು, ನಾಗ ಲಸಮರ ಬಲಾಢ್ಯ ತೋಳುಗಳ ಕಾವಲಲ್ಲಿ ಬೆಳೆಯುತ್ತಿದ್ದಳು.

ಆ ರಾತ್ರಿ ಮಲಗಿದಾಗ, ತನ್ನ ಕಲ್ಪನೆಗೆ-ಕಂಬಳಿ ಹೊರುವ ಮುನ್ನಿನ, ಮಳೆಗೆ ತೊಯ್ದು ನಿಂತ ಸುಂದರಿಯ ಆಕೃತಿಯನ್ನ ಕಣ್ಣೆದುರು ಮೂಡಿಸಿಕೊಂಡ: ಮಾವಿನ ತಳಿರಿನ ಮೈಬಣ್ಣದ, ತೆಳು ಸೊಂಟದ, ಆದರೆ ಮೈತುಂಬಿಕೊಂಡ ಹುಡುಗಿಯ ಮುಖದಲ್ಲಿ ಬೆರಗು ಭಯ ಬೆರೆತ, ತುಪ್ಪದ ಸೊಡರಿನಂಥ ದೊಡ್ಡ ಕಣ್ಣುಗಳು, ಚಂದದ ಸಂಪಗೆಯೆಸಳಿನ ಮೂಗು, ಕಾಡು ಕೆಂಪು ಹೂವರಳಿದ ಕೆನ್ನೆಗಳ, ಕೆದರಿದ ತಲೆಯ, ಇನ್ನೇನು ಅರಳಲಿದ್ದ ಯೌವನದ ಮುಗ್ಧ ಬಾಲೆಯನ್ನೇ ಧೇನಿಸುತ್ತ ‘ತಾನ್ಯಾಕೆ ಅವಳನ್ನ ಪ್ರೀತಿಸಬಾರದು?’ ಅಂದುಕೊಂಡ.

ಹೌದಲ್ಲ! ಒಂದು ವೇಳೆ ಪ್ರೀತಿಸಿದರೆ ತಪ್ಪೇನು? ತಪ್ಪಿಲ್ಲ. ಆದರೆ ಜಾತಿ ಬೇರೆ, ಕುಲ ಬೇರೆ, ಹುಟ್ಟಿದಾಗ ತುಂಗವ್ವನ ಹಾಲು ಕುಡಿದದ್ದಕ್ಕೇ ಜನ ತನ್ನನ್ನು ಹೊಲೆಯ ಅಂತಿರಬೇಕಾದರೆ ಮದುವೆಯಾದರೆ ಬಿಡ್ತಾರೆಯೆ? ಇಲ್ಲ. ಜನ ಅಂದರೂ ಬಿಟ್ಟರೂ ಏನೀಗ? ಅಂದವರು ತಮ್ಮ ಮನೇಲಿರ್ತಾರ. ತಾನು ಪ್ರೀತಿಸುವವನೇ! ಅಂತ ತೀರ್ಮಾನಿಸಿದ. ಹಾಗಂತ ಅವಳೂ ಪ್ರೀತಿಸಬೇಕಲ್ಲ? ದೊಡ್ಡವರು, ಊರ ಗೌಡರ ಮಗ ಕೇಳಿದ ಮಾತ್ರಕ್ಕೆ ಇಲ್ಲ ಅನ್ನಲಾಗದೆ ಒಪ್ಪಿದರೆ ಅದು ಪ್ರೀತಿಯೆ? ಬೇಡ. ಹಾಗಾದರೆ ಮನಸ್ಸಿನಲ್ಲೇ ಪ್ರೀತಿಸಬಹುದಲ್ಲಾ! ಹಾಗೆ ಪ್ರೀತಿಸಿದರೆ ಯಾರಿಗೂ ಗೊತ್ತಾಗುವುದಿಲ್ಲ. ತನ್ನ ಪಾಡಿಗೆ ತಾನು ಅವಳನ್ನು ಪ್ರೀತಿಸುವುದು ಅಸಾಧ್ಯವಾದುದಲ್ಲ! – ಇಂತೀ ಪರಿ ಯೋಚಿಸಿ ಚಂಬಸ ಅವಳ ಹೊರೆ ಹೊತ್ತ ಹಾಗೆ ಎದೆಯಲ್ಲಿ ಹೊತ್ತಿದ್ದ ಅವಳ ರೂಪವನ್ನು ಎದೆಯಿಂದ ಹೊರತೆಗೆದು ಮುದ್ದಿಸಿ ಮಗ್ಗಲು ಬದಲಿಸಿದ.

ಇತ್ತ ಮಾರನೇ ದಿನ ಬೆಳಿಗ್ಗೆ ಯಮುನಕ್ಕ ಅಂಗಳ ಗುಡಿಸಬೇಕೆಂದು ಎದ್ದು ಮಲಗಿದ್ದ ಮಗಳನ್ನ ‘ಶಾರವ್ವಾ, ಶಾರಕ್ಕಾ ಬೆಳಗಾಗೇತಿ ಏಳಽ ಮಗಳಽ’ ಎಂದು ಹೇಳುತ್ತ ನೋಡಿದರೆ ‘ಅಯ್ಯಽ ಖೋಡಿ ತನ್ನ ಕೌಂದಿ ಬದೀಗಿ ಸರಿಸಿ ಮಾವನ ಕಂಬಳಿ ಹೊದ್ದಾಳ!’ ಎಂದೂ ಜೋರಾಗಿ ಅಂದುಕೊಳ್ಳುತ್ತ ಹೊರ ಬಂದು ನೋಡಿದಳು. ಉರುವಲ ಕಟ್ಟಿಗೆಯ ಹೊರೆ ಕಟ್ಟೆಯ ಮೇಲೆ ಬಿದ್ದಿತ್ತು. ‘ಹೊರಿ ತರಲಿಲ್ಲ ಅಂದಿದ್ದೀಯಲ್ಲೇ ಖೋಡೀ! ತಾ ತಂದದ್ದ ತಾನಽ ಮರತಾಳ’ ಎಂದು ತಂತಾನೇ ಅಂದುಕೊಂಡು ಅಂಗಳ ಗುಡಿಸತೊಡಗಿದಳು. ಮಾತು ಕೇಳಿಸಿಕೊಂಡ ಶಾರವ್ವ ತಕ್ಷಣ ಎದ್ದು ಬಂದು ಉರುವಲ ಹೊರೆ ನೋಡಿ ಚಂಬಸ ತಂದು ಚೆಲ್ಲಿದ್ದು ಖಾತ್ರಿಯಾಗಿ ನಾಚಿ ತುಟಿ ಕಚ್ಚಿಕೊಂಡು ತಾಯಿಗೆ ಗೊತ್ತಾಗದಂತೆ ಮತ್ತೆ ಒಳಗೋಡಿ ಅದೇ ಕಂಬಳಿ ಹೊದ್ದು ಮಲಗಿದಳು.

ಕದ್ದೂ ಎದೆಯಲ್ಲಿ ಭಾರವಾಗಿ ಕೂತಿದ್ದ ಚೆಂಬಸನ ಹೊರ ತಂದು ಹಸಿದ ಕಂಗಳಿಂದ ತನ್ನ ನೋಡಿದ್ದನ್ನ ನೆನೆದು ಅದೇ ಭಂಗಿಯ ಅವನನ್ನ ಕಣ್ಣೆದುರಿಟ್ಟುಕೊಂಡಳು. ‘ಏನು ಹಾಂಗ ನೋಡೋದು? ಒಂದ, ಯಾಡ ಬಾರಿ ಆದರ ಆಗಲಿ ಅಂದೇನು? ಎಷ್ಟಂದರೂ ಊರ ಗೌಡ, ಸಾವ್ಕಾರ, ತುಂಗವ್ವಾಯೀ ಮಗ, ಸೋದರ ಮಾವ ಅಂತ ಸುಮ್ಮನಾದರ ಕಣ್ಣು ಪಿಳುಕಿಸದಽ ಒಂದಽ ಸಮ ಹಂಗ ನೋಡೋದ? ನಾ ಅಂದರ ಏನಂದುಕೊಂಡಿದ್ದಾನು? ಜೋಗ್ತಿ, ಕರದರ ಬರ್ತಾಳ ಬಿಡು ಅಂದ್ಕೊಂಡಿರಬೇಕು!.... ಇಲ್ಲಿಲ್ಲ ಹಂಗಿರಲಾರದು.

ಕಂಬಳಿ ಗೊಂಗಡಿ ಮಾಡಿ, ಕಾಳಜಿಯಿಂದ ತಲೀಮ್ಯಾಲ ಹೊದಿಸಿ ಲಗು ಓಡು ಅಂತ ಮಾಯೆ ಮಾಡಿದನಲ್ಲ. ಬರೋವಾಗ ನೋಡಿದರ ಎಷ್ಟ ಚಂದ ನಕ್ಕ! ಊರ ಹುಡಿಗೇರೆಲ್ಲ ಮಾತಾಡ್ಯಾನೋ ಇಲ್ಲೊ, ತಮ್ಮ ಕಡೆ ನೋಡ್ಯಾನೊ ಇಲ್ಲೊ? ಅಂತ ಕಣ್ಣಾಗ ಜೀವಾ ಇಟ್ಟುಕೊಂಡರೂ ನೋಡದವ ನನ್ನ ನೋಡಿ ಇಷ್ಟ ಚಂದ ನಗಬೇಕಂದರ! ಏನಾರ ಆಗಲಿ ಇಂಥಾ ಸೋದರ ಮಾವಗ ಒಂದು ಮುದ್ದ ಕೊಡಾಕಽ ಬೇಕ ತಗಿ’ ಅಂದವಳೇ ಎದುರಿಗಿದ್ದವನನ್ನ ಸೆಳೆದು ತಬ್ಬಿ ಮುದ್ದಿಸಿ ಮಗ್ಗಲು ಬದಲಿಸಿದಳು.

ಈ ಮಧ್ಯೆ ತುಂಗವ್ವನ ನೆರೆಹೊರೆ ಹುಡುಗಿಯನ್ನ ಸುಲಧಾಳದ ವರನಿಗೆ ಮದುವೆ ಮಾಡಿ ಕೊಡಲು ದಿಬ್ಬಣ ಹೊರಟಿತು. ಅವರಲ್ಲಿ ತುಂಗವ್ವನ ಮೊಮ್ಮಗಳು ಶಾರಿಯೂ ಇರುವಳೆಂದು ಗೊತ್ತಾಗಿ ತುಂಗವ್ವನಿಗೆ ‘ಎವ್ವಾ ನಾನೂ ದಿಬ್ಬಣ ಬರ್ತೀನಬೇ’ ಅಂದ ಚಂಬಸ. ಹೊಲೆಯರ ಮದುವೆಗೆ ಗೌಡರ ಮಗ ದಿಬ್ಬಣ ಬರುವುದೆ? ಆದರೆ ಸುಲಧಾಳ ಅವನ ತಾಯಿಯ ತೌರೂರಾದ್ದರಿಂದ, ಅವನ ಬಳಗವೆಲ್ಲಾ ಅಲ್ಲೇ ಇರುವುದರಿಂದ ಒಂದೆರಡು ದಿನ ಅಜ್ಜ, ಆಯಿ, ಮಾವಂದಿರೊಂದಿಗೆ ಕಳೆದು ಬರಲೆಂದು ‘ಬಾ’ ಅಂದಳು. ತನ್ನ ಆಸೆ ಇಷ್ಟು ಬೇಗ ಈಡೇರೀತೆಂದು ಚಂಬಸನೂ ಅಂದುಕೊಂಡಿರಲಿಲ್ಲ.

ಉತ್ಸಾಹದಿಂದ ಅಂಗಿ ಚಣ್ಣ ಮತ್ತು ಟವೆಲು ತಗೊಂಡು ಕೈಚೀಲಿಗಿರಿಸಿಕೊಂಡು ತಯಾರಾದ. ದಾರಿಗಿರಲೆಂದು ಅವನ ಅತ್ತೆ (ಅಂದರೆ ರಾಜಪ್ಪಗೌಡನ ಮಡದಿ) ನಾಲ್ಕು ಅಂಟಿನುಂಡಿ ಕಟ್ಟಿ, ಅಲ್ಲೀತನಕ ದಾರಿಗಿರಲೆಂದು ಊಟ ಕಟ್ಟಿಕೊಟ್ಟಳು. ದಿಬ್ಬಣದ ಎರಡು ಬಂಡಿ ತಯಾರಾಗಿದ್ದವು. ಗಂಡಸರ ಬಂಡಿಯಲ್ಲಿ ಮುದುಕರು ಚಂಬಸ ಕೂತಿದ್ದು, ಇನ್ನೊಂದರಲ್ಲಿ ಹೆಂಗಸರಿದ್ದರು. ಶಾರವ್ವ ಹೆಂಗಸರ ಬಂಡಿಯಲ್ಲಿದ್ದಳಾಗಿ ಚಂಬಸನಿಗೆ ನಿರಾಸೆಯಾಯ್ತು.

ಪಾಶ್ಚಾಪುರ ದಾಟಿ ತಾಮ್ರಪರ್ಣಿ ನದಿಯ ದಂಡೆಯ ಮೇಲೆ ಊಟಕ್ಕಾಗಿ ಗಾಡಿಗಳನ್ನ ನಿಲ್ಲಿಸಿದರು. ದಿಬ್ಬಣದಲ್ಲಿ ಮಕ್ಕಳೆಂದರೆ ಚಂಬಸ ಮತ್ತು ಶಾರವ್ವ ಇಬ್ಬರೇ. ಊಟದ ಗಂಟು ಬಿಚ್ಚಿದ ಮೇಲೆ ಚಂಬಸ ತನ್ನ ಅತ್ತೆ ಕಟ್ಟಿದ್ದ ಎರಡು ಉಂಡಿ ತಗೊಂಡು ಶಾರಿಯ ಬಳಿಗೆ ಹೋಗಿ ‘ತಗೊ’ ಅಂದ. ಅವಳು ತುಂಗವ್ವನ ಮುಖ ನೋಡಿದಳು. ತುಂಗವ್ವ ‘ತಗೊ’ ಅಂದಳು. ಇಬ್ಬರೂ ಉಂಡಿ ತಿಂದರು. ದಿಬ್ಬಣದ ಬಂಡಿಗಳು ಸುಲಧಾಳ ತಲುಪಿದಾಗ ಆಗಲೇ ಕತ್ತಲಾಗಿತ್ತು. ಬೀಗರಿಗೆ ಇವರು ಬಂದ ಸುದ್ದಿ ತಲುಪಿಸಿ ಸ್ವಾಗತಿಸಲು ಬರಲೆಂದು ಊರ ಹೊರಗಿನ ಗುಡಿಯ ಹತ್ತಿರ ಕಾಯುತ್ತಿದ್ದರು. ಬಂದಮೇಲೆ ದಿಬ್ಬಣವನ್ನು ವೈಭವದ ಮೆರವಣಿಗೆಯಲ್ಲಿ ಕರೆದೊಯ್ಯುವುದು ರೂಢಿ.

ಅಷ್ಟರಲ್ಲಿ ಶಿವಾಪುರದ ಬೀಗರಿಗೆ ಒಂದು ಭಯಾನಕ ಸುದ್ದಿ ತಲುಪಿತು. ಮದುವೆಯಲ್ಲಿ ಬೀಗರು ಬೀಗರಿಗೆ, ಅವರು ಇವರಿಗೆ, ಇವರು ಅವರಿಗೆ ಚೇಷ್ಟೆ ಮಾಡುವುದು ಇದ್ದೇ ಇರುತ್ತದೆ. ಪರಸ್ಪರ ಬಣ್ಣ ಎರಚುವುದು, ಬೆಲ್ಲದ ಬದಲು ಹುಗ್ಗಿಗೆ ಖಾರ ಹಾಕುವುದು, ಚೇಷ್ಟೆಯ ಮಾತಾಡುವುದು ಇತ್ಯಾದಿ. ಇವೆಲ್ಲ ಮದುವೆ ಕಾಲದ ಸರ್ವೇಸಾಮಾನ್ಯ ಮೋಜುಗಳು. ಆದರೆ ಇವರಿಗೆ ಮುಟ್ಟಿದ ಭಯಾನಕ ಸುದ್ದಿ ಯಾವುದೆಂದರೆ ಮೆರವಣಿಗೆಯಲ್ಲಿ ಬರುವ ಬೀಗರ ಮೇಲೆ ಬಣ್ಣದ ಬದಲು ಟಾರು (ಡಾಂಬರು) ಸುರಿಯುವರೆಂದು ಸುದ್ದಿ ಹಬ್ಬಿ ತಬ್ಬಿಬ್ಬಾದರು. ಮೊದಲೇ ಬಡವರು.

ಹಬ್ಬ ಹರಿದಿನಗಳಲ್ಲಿ ಧರಿಸಿಕೊಳ್ಳಲು ಅವರಿಗಿರೋದು ಒಂದೇ ಹಸನಾದ ಅಂಗಿ, ಒಂದೇ ಧೋತ್ರ, ಒಂದೇ ರುಂಬಾಲು! ಆ ದಿನ ಉಪಯೋಗಿಸಿ ಕಟ್ಟಿಟ್ಟರೆ ಮತ್ತೆ ಆ ಗಂಟನ್ನು ಬಿಚ್ಚೋದು ಇನ್ನೊಂದು ಹಬ್ಬಹರಿದಿನದಂದೇ! ಅಂಥ ಅಪರೂಪದ ಬಟ್ಟೆಯ ಮೇಲೆ ಟಾರು ಬಿದ್ದರೆ ಅದು ಮತ್ತೆ ಉಪಯೋಗಕ್ಕೆ ಬರುವುದುಂಟೆ? ಹೋಗಲಿ ಟಾರು ಬಿದ್ದ ಬಟ್ಟೆ ಧರಿಸಿಕೊಂಡು ಮದುವೆಯಲ್ಲಿ ಓಡಾಡುವುದುಂಟೆ? ಗಂಡಸರಂತೂ ಆಗಲೇ ಮುಖ ಸಪ್ಪೆ ಮಾಡಿಕೊಂಡು ಕುಸ್ತಿಯಲ್ಲಿ ಸೋತವರಂತೆ ಹತಾಶರಾಗಿದ್ದರು. ಈ ಸುದ್ದಿ ಕೇಳಿ ಕಂಗಾಲಾಗಿ ತಕರಾರು ತೆಗೆದರು.

ಆದರೆ ಇವರ ತಕರಾರು ಕೇಳಲಿಕ್ಕೆ ಜವಾಬ್ದಾರಿಯ ಬೀಗರ್ಯಾರೂ ಅಲ್ಲಿರಲಿಲ್ಲ. ಅಲ್ಲಿದ್ದವರು ನಮಗಿದೆಲ್ಲ ಗೊತ್ತಿಲ್ಲವೆಂದು ನಕ್ಕು ಸುಮ್ಮನಾದರು. ಹಾಗಾದರೆ ಗಂಡಸರು ಮೆರವಣಿಗೆಯಲ್ಲಿ ಭಾಗವಹಿಸುವುದೇ ಬೇಡವೆಂದು ಒಬ್ಬ ಹಿರಿಯನೆಂದ, ಹಂಗಂದರೆ ಹೆಣ್ಣಿನ ಕಡೆಯ ಬೀಗರು ಹೆದರಿದ ಹೇಡಿಗಳಾದಂತಾಗುವುದಿಲ್ಲವೆ? ಎಂದನೊಬ್ಬ ಹುರಿಮೀಸೆ. ಕೊನೆಗೆ ಗಂಡಸರೆಲ್ಲ ತಂತಮ್ಮ ಅಂಗಿ ರುಂಬಾಲುಗಳನ್ನು ಕಳಚಿ ಮುದ್ದಿ ಮಾಡಿ ತಂತಮ್ಮ ಕಂಕುಳಲ್ಲಿಟ್ಟುಕೊಂಡು ಮೆರವಣಿಗೆಯಲ್ಲಿ ಭಾಗವಹಿಸುವುದೆಂದು ತೀರ್ಮಾನವಾಯಿತು!

ಮುಂದಿನ ದೃಶ್ಯ ಮಾತ್ರ ಲೋಕೋತ್ತರವಾಗಿತ್ತು! ಊರಿನ ಮುಖ್ಯ ಬೀದಿಗಳಿಗೆ ಮೆರವಣಿಗೆ ಹೋಗಲಿಲ್ಲ. ಹೊರಕೇರಿ ಅದನ್ನು ದಾಟಿ ಹೊಲಗೇರಿ - ಎರಡೇ ಓಣಿ ಮೆರವಣಿಗೆ ನಡೆದದ್ದು. ಆದರೆ ಪುಟ್ಟ ರಸ್ತೆ ಮೆರವಣಿಗೆಯನ್ನ ನೋಡಲು ಜನ ಕಿಕ್ಕಿರಿದು ಸೇರಿ ಸ್ಥಳ ಸಾಲದಾಗಿತ್ತು. ಯಾಕಂತೀರೋ? ದಿಬ್ಬಣದ ಗಂಡಸರು ಬರೀ ಲಂಗೋಟಿಯಲ್ಲಿದ್ದು ತಂತಮ್ಮ ಅಂಗಿಧೋತ್ರ ರುಂಬಾಲುಗಳನ್ನು ತಂತಮ್ಮ ಕಂಕುಳಲ್ಲಿಟ್ಟುಕೊಂಡು ಶಿಸ್ತಿನಿಂದ ಎರಡು ಸಾಲಾಗಿ ನಡೆದಿದ್ದಾರೆ! ಅವರ ಹಿಂದೆ ಹೆಂಗಸರು ಮುಖ ಕಾಣದಂತೆ ಸೆರಗು ಹೊದ್ದುಕೊಂಡು ಗುಂಪು ಗುಂಪಾಗಿ ಮುನ್ನಡೆಯುತ್ತಿದ್ದಾರೆ!

ಹಲಗೆಯವರು ಕುಣಿಕುಣಿದು ಹಲಗೆ ನುಡಿಸುತ್ತ ಮುಸಿ ಮುಸಿ ನಗುತ್ತಿದ್ದಾರೆ! ಆಜುಬಾಜು ದಲಿತರಷ್ಟೇ ಅಲ್ಲ ಊರೊಳಗಿನ ಕುಲವಂತರೂ ಮೆರವಣಿಗೆ ನೋಡಲು ಓಡೋಡಿ ಬಂದು ಸೇರುತ್ತಿದ್ದಾರೆ! ಆಜೂಬಾಜು ಕಿಕ್ಕಿರಿದು ಸೇರಿದ ಜನ ಬಾಯ್ಮುಚ್ಚಿಕೊಂಡು, ತೆರೆದುಕೊಂಡು ನಗುತ್ತಿದ್ದಾರೆ! ಮಕ್ಕಳು ಕೈ ಮಾಡಿ ತೋರಿಸಿ ನಗುತ್ತಿವೆ! ನಿಜ ಹೇಳಬೇಕೆಂದರೆ ಸುತ್ತಲಿನ ಆ ಭಾಗದ ಯಾವ ಹಟ್ಟಿಯಲ್ಲೂ ಮೆರವಣಿಗೆ ನೋಡಲು ಇಷ್ಟು ಜನ ಸೇರಿರಲಾರರು. ಸೇರಿದ ಜನ ಮೆರವಣಿಗೆ ನೋಡಿ ಹುಚ್ಚರಾಗುವಷ್ಟು ನಕ್ಕರು. ದಿಬ್ಬಣದ ಬೀಗರು ಹುಚ್ಚರಾಗುವಷ್ಟು ಅವಮಾನಿತರಾದರು.

ಮಾರನೇ ದಿನ ಮುಂಜಾನೆ ನಿನ್ನೆಯ ಅವಮಾನದಿಂದ ಜಗಳವಾಗಿರಬಹುದೇ ಅಂತ ಸಂಶಯ ಬಂತು ಮಾವನ ಮನೆಯಲ್ಲಿ ಮಲಗಿದ್ದ ಚಂಬಸನಿಗೆ. ಯಾವುದಕ್ಕೂ ಹೋಗಿ ನೋಡುವುದೇ ಒಳ್ಳೆಯದೆಂದು ಮಾವನ ಮನೆಯಿಂದ ಮದುವೆ ಮನೆಗೆ ಬಂದ. ಅಷ್ಟರಲ್ಲಿ ಶಾರಿಯೇ ಎದುರು ಬಂದು ‘ತುಂಗವ್ವಾಯೀನ ಕರೀಲೇನ ಮಾವಾ?’ ಅಂದಳು. ‘ಗಂಡಸರೆಲ್ಲಾ ಎಲ್ಲಿ? ಜಳಕಾ ಮಾಡಾಕ ಹೋಗ್ಯಾರೇನ?’ ಅಂದ. ಶಾರಿ ಗೊಳ್ಳನೇ ನಕ್ಕು ಕೈಯಿಂದ ಬಾಯಿ ಮುಚ್ಚಿಕೊಂಡಳು. ನಿನ್ನೆಯ ನಗೆಯನ್ನ ಮುಂದುವರಿಸಿರಬೇಕೆಂದುಕೊಂಡ. ಆಸುಪಾಸು ಯಾರಿರಲಿಲ್ಲವಾದ್ದರಿಂದ ಮಾತಾಡುವ ಅವಕಾಶ ಸಿಕ್ಕಿತ್ತಲ್ಲ– ‘ಹೌಂದು, ಮೋರ್ತದ ಯಾಳೆ ಆಗಲಿಲ್ಲೇನ?’ ಅಂದ.
‘ಗಂಡಸರೆಲ್ಲ ರೇಲ್ವೆ ಹಳೀಮ್ಯಾಲ ಕುಂತಾರ. ನೀನಽ ಹೋಗಿ ಕರಕೊಂಬಾ ಮಾವಾ’ ಅಂದಳು.
‘ಯಾಕ? ಏನಾರ ಎಡವಟ್ಟ ಆಗೇತೇನು?’
ಬೀಗರಂದ ಮೇಲೆ ದಿಬ್ಬಣದ ಜೊತೆ ಅವರು ಮತ್ತು ಇವರ ಸಿಟ್ಟು ಸೆಡವು ಇರೋವೆ.

‘ಅಯ್ಯಽ ಎರಡ ಹೆಜ್ಜೆ ಹೋಗಿ ನೋಡ ಮಾವಾ’ ಎಂದು ಸಿಟ್ಟು ಮಾಡಿದಂತೆ ಹೇಳಿದಳು ಶಾರವ್ವ. ಹೋಗುವುದಕ್ಕೆ ಇವನೂ ತಿರುಗಿದ ಮೇಲೆ ಶಾರವ್ವ ಮತ್ತೆ ಬಾಯಿ ಮುಚ್ಚಿಕೊಂಡು ನಕ್ಕಳು. ಹೆಂಗಸರು ಮಾತ್ರ ತಮ್ಮ ಪಾಡಿಗೆ ತಾವು ಮದುವೆ ತಯಾರಿ ನಡಿಸೇ ಇದ್ದರು. ಆದರೆ ಅವರೂ ನಗಾಡುತ್ತಿದ್ದರು. ಊರ ಹೊರಗೆ ರೇಲ್ವೆ ಹಳಿಯ ಕಡೆಗೆ ಹೋದರೆ ದಿಬ್ಬಣದ ಗಂಡಸರೆಲ್ಲ ರೇಲ್ವೆ ಹಳಿಯ ಮೇಲೆ ಸಾಲಾಗಿ ಕೂತಿದ್ದಾರೆ! ಯಾಕೋ ಎಲ್ಲರೂ ಇವನನ್ನು ನೋಡಿ ನಾಚಿಕೊಂಡ ಹಾಗಿತ್ತು. ಎಲ್ಲರ ಮುಖದ ಮೇಲೂ ಸೋತ ಭಾವ ನಿಚ್ಚಳವಾಗಿ ಮೂಡಿ ಎಲ್ಲ ಮುಖಗಳು ಒಂದೇ ಪ್ರಮಾಣದಲ್ಲಿ ಬಾಡಿದ್ದವು. ಪ್ರತಿಯೊಬ್ಬರೂ ಆಗಾಗ ವೀರಾವೇಶದಿಂದ ರೇಲ್ವೆ ಹಳಿಗೆ ತಿಗ ತಿಕ್ಕುತ್ತಿದ್ದಾರೆ! ಒಬ್ಬ ಹಿರಿಯನ ಹತ್ತಿರ ಹೋಗಿ ಕೇಳಿದಾಗ ಆತ ಹೇಳಿದ:

‘ಬೀಗರ ಸುದ್ದಿ ಏನ ಹೇಳೂಣ್ರಿ ಗೌಡ್ರ. ಈ ಬೀಗ ಸೂಳೀಮಕ್ಕಳು ಹಂಡೇದ ನೀರಾಗ ತುರಚೀ ಸೊಪ್ಪಿನ ಪುಡಿ ಹಾಕಿದ್ದರು! ಬೆಳಿಗ್ಗೆದ್ದ ತಂಬಿಗಿ ತಗೊಂಡ ಬೈಲಕಡೆ ಕುಂತಿವಿ ನೋಡು, ಆವಾಗಿಂದ ತುರಿಸಿಕೊಳ್ಳೋದಽ ಆಗೇತಿ. ಈ ರೇಲ್ವೆ ಹಳಿ ಕಾದಾವಲ್ಲ ಎಳಿ ಬಿಸಲಿಗೆ, ಹಿತ ಅನ್ನಿಸಿ ಕುಂತಿವಿ. ಸಧ್ಯ ಹೆಂಗಸರಿಗೆ ಹಂಡೇದ ನೀರ ಬಳಸಬ್ಯಾಡ್ರೀ ಅಂತ ಲಗೂನ ಹೇಳಿ ಕಳಿಸಿದಿವಿ’. ಇಲ್ಲೂ ಈಗಲೂ ಬೀಗರೇ ಗೆದ್ದಿದ್ದರು! ಶಿವಾಪುರದ ಹಳ್ಳಿ ಮುಕ್ಕುಗಳು ಸೋತು ಸೋತು ಹುಚ್ಚರಾಗಿದ್ದರು. ಶಾಸ್ತ್ರಗಳೆಲ್ಲ ಮುಗಿದು ಅಕ್ಕೀಕಾಳು ಬೀಳುವುದಕ್ಕೆ ಮಧ್ಯಾಹ್ನದ ಹೊತ್ತು ಇಳಿಯತೊಡಗಿತ್ತು.

ದಿಬ್ಬಣ ಹೋದುದಕ್ಕೆ ಚಂಬಸನಿಗಾದ ನಿವ್ವಳ ಲಾಭವೆಂದರೆ ಸಾಯಂಕಾಲ ಹೊಸ ಗಂಡ ಹೆಂಡತಿ ಪರಸ್ಪರ ಹೆಸರು ಹೇಳುವುದು, ಕೆನ್ನೆಗಳಿಗೆ ಅರಿಷಿಣ ಹಚ್ಚುವುದು, – ಆ ನೆಪದಲ್ಲಿ ನೆರೆದ ಹುಡುಗ ಹುಡುಗಿಯರೂ ತಂತಮ್ಮ ಓರಗೆಯವರಿಗೆ ಅರಿಷಿಣ ಹಚ್ಚಿ ಕೊಂಚ ಕಾಮ, ಕೊಂಚ ಪ್ರೀತಿ, ಕೊಂಚ ಕನಸು, ಕೊಂಚ ಕಲ್ಪನೆ – ಅಂತೂ ಯಾವುದೂ ಅತಿಯಾಗದಂತೆ ಪ್ರಾಯದ ಸೊಕ್ಕನ್ನು ಅನುಭವಿಸುವ ಒಂದು ಅವಕಾಶ ಪಡೆದದ್ದು. ಚಂಬಸನೂ ಎರಡೂ ಅಂಗೈಗಳಿಗೆ ಅರಿಷಿಣ ಹಚ್ಚಿಕೊಂಡು ಮದುವೆ ಮನೆಯಲ್ಲಿ ಶಾರಿಯನ್ನು ಹುಡುಕಿಕೊಂಡು ಹೋದ. ಅವಳೂ ಇವನನ್ನೇ ಹುಡುಕುತ್ತಿದ್ದಳು.

ಇವನನ್ನು ನೋಡಿದೊಡನೆ ಓಡುವಂತೆ ಮಾಡಿ ‘ಬ್ಯಾಡೊ ಮಾವಾ’ ಎಂದು ಹೇಳುತ್ತ ‘ದಯಮಾಡಿ ಹಚ್ಚೋ ಮಾವಾ’ ಎಂಬಂತೆ ಇವನ ತೆಕ್ಕೆಗೆ ಸಿಕ್ಕು ಸಣ್ಣ ನಡುವ ಬಳುಕಿಸುತ್ತ ಜಿಂಕೆ ಕಣ್ಣುಗಳ ಅರೆತೆರೆದು ನೋಡುತ್ತ, ಮೃದುವಾದ ಕೆನ್ನೆಗಳನ್ನ ಇವನ ಅಂಗೈಗೊಡ್ಡಿ, ತುಂಬಿಕೊಂಡ ದುಂಡನೆಯ ಮೊಲೆಗಳಿಂದ ಇವನೆದೆಗೆ ಗುದ್ದಿ ಅರೆದು ತನ್ನ ಮೈ ಬಿಸಿಯನ್ನ, ಯೌವನದ ಉಮೇದನ್ನ ಸುಖಿಸಿ ಹಂಚಿಕೊಂಡಳು. ಅವಳೂ ಅರಿಷಿಣ ಹಚ್ಚಲೆಂದು ಇವನು ತೆಕ್ಕೆ ಸಡಿಲಿಸಿದಾಗ ಶಾರಿ ನಿತ್ರಾಣವಾಗಿದ್ದಳು. ‘ಎಷ್ಟಾದರೂ ಹಚ್ಚು’ ಎಂದು ಸುಮ್ಮನೇ ಕೈಯಳತೆಯಲ್ಲೇ ನಿಂತಿದ್ದಳು. ಅಷ್ಟರಲ್ಲಿ ತುಂಗವ್ವನ ದನಿ ಕೇಳಿ ಇಬ್ಬರೂ ದೂರವಾದರು. ಇಬ್ಬರೂ ಬೆವರಿದ್ದರು.

ಬಾಯಿ ಹೇಳದ್ದನ್ನು ಕಣ್ಣು ಹೇಳಿತು. ಕಣ್ಣು ಅರಿಯದ್ದನ್ನು ವಯಸ್ಸು ತಿಳಿಸಿತು. ಕಣ್ಣು ಕಣ್ಣು ಕೂಡಿ ಮಾತಾಡುವ ಭಾಷೆಯೊಂದನ್ನು ಸೃಷ್ಟಿಸಿಕೊಂಡವು. ಅವೆಷ್ಟು ವಾಚಾಳಿಗಳಾದವು ಅಂದರೆ ಈಗ ಕಣ್ಣು ಎಂಥಾ ಜಟಿಲ ಪ್ರಶ್ನೆ ಕೇಳಿದರೂ ನೋಟ ದೀರ್ಘವಾಗಿ ಉತ್ತರಿಸುತ್ತಿತ್ತು. ಕುತೂಹಲದ ಹೀಚುಗಾಯಿ ಪ್ರೇಮವಾಗಿ ಹಣ್ಣಾಗಿತ್ತು. ರಾತ್ರಿಯೆಲ್ಲ ಇಬ್ಬರೂ ರಂಗು ರಂಗಿನ ಕನಸು ಕಂಡರು. ಬೆಳಗಿನ ಹಕ್ಕಿಗಳ ಚಿಲಿಪಿಲಿ ಸಮೇತ ಬಂದ ತಂಗಾಳಿ ಇಬ್ಬರ ನೆನಪುಗಳಿಗೆ ಹೊಸ ಪ್ರಾಯ ಕೊಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.