ಗಾಂಧೀವಾದಿ, ಸ್ವಾತಂತ್ರ್ಯ ಹೋರಾಟಗಾರ, ಪತ್ರಿಕೋದ್ಯಮಿ, ಸಾಹಿತಿ- ಸಿದ್ದವ್ವನಹಳ್ಳಿ ಕೃಷ್ಣಶರ್ಮರ ವ್ಯಕ್ತಿತ್ವಕ್ಕೆ ಹಲವು ಮುಖ. ಅವರು ಹುಟ್ಟಿದ್ದು ಜುಲೈ 4, 1904ರಲ್ಲಿ. ತಂದೆ ರಂಗಾಚಾರ್, ತಾಯಿ ಶೇಷಮ್ಮ.

ಕನ್ನಡದ ಹಿಂದಿನ ಪೀಳಿಗೆಯ ಲೇಖಕರಲ್ಲಿ `ಶರ್ಮತ್ರಯ'ರು ಪ್ರಸಿದ್ಧರು. ತಿರುಮಲೆ ತಾತಾಚಾರ್ಯ ಶರ್ಮ, ಸಿದ್ದವ್ವನಹಳ್ಳಿ ಕೃಷ್ಣಶರ್ಮ ಮತ್ತು ಬೆಟಗೇರಿ ಕೃಷ್ಣಶರ್ಮ ಇವರೇ ಆ `ಶರ್ಮತ್ರಯ'ರು. ಈ ಮೂರೂ ಮಂದಿಯೂ ಭಾರತೀಯ ಸ್ವಾತಂತ್ರ್ಯ ಹೋರಾಟದ ನಿಸ್ಸೀಮ ಯೋಧರು; ಬಾಳನ್ನು ತಾವು ಕಂಡ ಆದರ್ಶದ ಸಾಧನೆಗೆ ಮೀಸಲಾಗಿ ಇಟ್ಟವರು. ಪತ್ರಿಕೋದ್ಯಮ ಇವರನ್ನು ತನ್ನ ಸೆಳೆತದ ಕಕ್ಷೆಯಲ್ಲಿ ಆತುಕೊಂಡಿತ್ತು. ಗಾಂಧಿ ಯುಗದ ಕರೆಗೆ ಮೂವರೂ ಓಗೊಟ್ಟಿದ್ದರು, ಒಬ್ಬೊಬ್ಬರ ಸಾಧನೆ ಮತ್ತು ಸಿದ್ಧಿ ಇಂದಿನ ಪೀಳಿಗೆಗೆ ಒಂದು ಸ್ಫೂರ್ತಿಯ ಕೇಂದ್ರ.

ವಿದ್ಯಾರ್ಥಿಯಾಗಿದ್ದಾಗ ಸಿದ್ದವ್ವನಹಳ್ಳಿ ಕೃಷ್ಣಶರ್ಮರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲುಗೊಂಡದ್ದು ಆ ಕಾಲ ಸಂದರ್ಭಕ್ಕೆ ಸಹಜವೇ ಆಗಿತ್ತು. ಸ್ವಾತಂತ್ರ್ಯ ಚಳವಳಿಯ ಕಾವು ಪ್ರಖರವಾಗಿದ್ದ ದಿನಗಳಲ್ಲಿ ಅದರಿಂದ ದೂರವುಳಿಯುವುದು ಸಿದ್ದವ್ವನಹಳ್ಳಿ ಅವರಂಥ ತರುಣರಿಗೆ ಅಸಾಧ್ಯದ ಮಾತಾಗಿತ್ತು.

ಪತ್ರಕರ್ತರಾಗಿ ಕೂಡ ಸಿದ್ದವ್ವನಹಳ್ಳಿ ಅವರ ಸಾಧನೆ ಮಹತ್ವದ್ದು. ಬೆಂಗಳೂರಿನಲ್ಲಿ ಕೃಷ್ಣಶರ್ಮರು ತಾತಾಚಾರ್ಯರಿಗೆ ಬಲಗೈ ಆಗಿ ನಿಂತರು. ಅವರೇ ಕೆಲವು ಕಾಲ ಪತ್ರಿಕೆಯ ಸಂಪಾದಕತ್ವ ವಹಿಸಿಕೊಂಡರು. ಅವರು ಬರೆಯುತ್ತಿದ್ದ ಟೀಕೆ-ಟಿಪ್ಪಣಿಗಳು, ಲಘು ಸಂಪಾದಕೀಯಗಳು, ಸರಕಾರದ ಅನ್ಯಾಯಗಳ ಬಗೆಗೆ ಎಸೆಯುತ್ತಿದ್ದ ಪ್ರಶ್ನೆ ಪೀಠಿಕೆಗಳ ಸವಾಲುಗಳೂ ಅವರನ್ನು ರಾಜ್ಯದ ಲೇಖಕರ ಉನ್ನತ ಪಂಕ್ತಿಯಲ್ಲಿ ನಿಲ್ಲಿಸಿದವು. ಕಾಂಗ್ರೆಸ್ಸಿನ ಧ್ಯೇಯ ಧೋರಣೆಗಳ ಪ್ರಚಾರ, ಪ್ರಗತಿ ವಿರೋಧಿಗಳ ಸೊಲ್ಲನ್ನು ನಿಲ್ಲಿಸಿ ಅವರ ವಾಗ್ಬಂಧನವನ್ನೇ ಮಾಡುವಂಥ ಮಾತಿನ ಚಾತುರ್ಯ ಕೃಷ್ಣಶರ್ಮರ ವೈಶಿಷ್ಟ್ಯವಾಗಿತ್ತು. ಕನ್ನಡಕ್ಕೆ ಪ್ರಾಧಾನ್ಯತೆಯ ಪ್ರಶ್ನೆ ಬಂದಾಗ, ಅದರ ಬಗೆಗೆ ಓಜೋಯುಕ್ತವಾಗಿ, ವೀರತನದಿಂದ ಹೋರಾಡಿದ ಕಡುಗಲಿಗಳ ತಂಡದ ನಾಟಕರಲ್ಲಿ ಅವರಿಗೆ ಮುಖ್ಯವಾದ ಸ್ಥಾನವಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಉರ್ದು, ಸಂಸ್ಕೃತ, ಇಂಗ್ಲಿಷ್ ಭಾಷೆಗಳ ಮೇಲೆ ಅವರು ಹಿಡಿತ ಸಾಧಿಸಿದ್ದರು.

ವೃತ್ತಪತ್ರಿಕಾ ಕ್ಷೇತ್ರದಲ್ಲಿ ಶರ್ಮರು ಪ್ರಸಿದ್ಧಿಗೆ ಬಂದುದು `ಹರಿಜನ' ಪತ್ರಿಕೆಯ ಕನ್ನಡ ಆವೃತ್ತಿಯನ್ನು ತರಲು ಯತ್ನಿಸಿದಾಗ. ಹರಿಜನ ಪತ್ರಿಕೆ ಗಾಂಧೀಜಿಯ ಸಮಗ್ರ ಪ್ರಯೋಗಗಳ ಮುಖವಾಣಿಯಾಗಿತ್ತು. ಅದು ಗಾಂಧೀ ವಿಚಾರದ ಕೇಂದ್ರ ಬಿಂದುವಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರಿಗೆ ಆತ್ಮಪರೀಕ್ಷೆ ಮಾಡಿಕೊಳ್ಳಲು ದರ್ಪಣದಂತಿತ್ತು.

ಗಾಂಧೀ ವಿಚಾರಗಳನ್ನು ಕನ್ನಡಕ್ಕೆ ತರುವ ಕೆಲಸ ಉತ್ತರ ಕರ್ನಾಟಕದಲ್ಲಿ ದೇಶಭಕ್ತ ಹರ್ಡೇಕರ ಮಂಜಪ್ಪನವರು, ರಂಗನಾಥ ದಿವಾಕರರು ಇವರುಗಳಿಂದಲೂ ಮೈಸೂರು ರಾಜ್ಯದಲ್ಲಿ ಬಹುಮಟ್ಟಿಗೆ ದಿವಂಗತ ದ.ಕೃ. ಭಾರದ್ವಾಜರಿಂದಲೂ ಆರಂಭವಾಗಿದ್ದಿತು. ಗೊರೂರು ರಾಮಸ್ವಾಮಿ ಅಯ್ಯಂಗಾರರೂ, ನ. ಭದ್ರನವರೂ ತಾತಾಚಾರ್ಯರೂ ನೆಲವನ್ನು ಹಸನು ಮಾಡಿ ಬೀಜ ನೆಟ್ಟರು. ಇಬ್ಬರು ಕನ್ನಡಿಗರು ಗಾಂಧೀಜಿಯ ಆತ್ಮಕಥೆಯನ್ನು ಕನ್ನಡಕ್ಕೆ ತಂದಿದ್ದರು. ಆದರೆ ಗಾಂಧೀ ಸಾಹಿತ್ಯಕ್ಕಾಗಿಯೇ ತನ್ನ ತನು-ಮನ- ಹೃದಯಗಳನ್ನು ಅರ್ಪಿಸಿದ ವ್ಯಕ್ತಿ ಸಿದ್ದವ್ವನಹಳ್ಳಿ ಅವರು.

ಕೃಷ್ಣಶರ್ಮರ `ವರ್ಧಾಯಾತ್ರೆ', `ಪರ್ಣಕುಟಿ', `ದೀಪಮಾಲೆ' ಕೃತಿಗಳು ಅವರ ಸಾಹಿತ್ಯ ನಿರ್ಮಾಣಶಕ್ತಿಯ, ಸೃಜನಾತ್ಮಕ ಶಕ್ತಿಯ ದ್ಯೋತಕವಾಗಿವೆ. `ಪರ್ಣಕುಟಿ' ಸೇವಾಗ್ರಾಮದ ಜೀವಕಳೆ ತುಂಬಿದ ಚಿತ್ರ. ಅಹಮದಾಬಾದಿನ ಸತ್ಯಾಗ್ರಹ ಆಶ್ರಮವನ್ನು ತ್ಯಜಿಸಿ, ವರ್ಧಾಕ್ಕೆ ಬಂದು ನೆಲೆಸಿದ ಬಾಪೂ, ಕೆಲವು ಕಾಲದ ಮೇಲೆ ಅವರ ಶಿಷ್ಯ ಜಮನಾಲಾಲರ ಕೈಂಕರ್ಯದ ಫಲವಾಗಿ ಸೇವಾಗ್ರಾಮದಲ್ಲಿ ರೂಪುಗೊಂಡ ಪರ್ಣಕುಟಿಯಲ್ಲಿ ನೆಲೆಸಿದರು. ಅಲ್ಲಿಗೆ ಜಗತ್ತಿನ ಹೇಮಾಹೇಮಿಗಳು ಬಂದು, ಬಾಪೂ ದರ್ಶನ ಪಡೆಯುತ್ತಿದ್ದರು. ಇಂಥ `ಪರ್ಣಕುಟಿ' ಕೃಷ್ಣಶರ್ಮರು ಕನ್ನಡ ಸಾಹಿತ್ಯಕ್ಕೆ ನೀಡಿದ ಅನುಪಮ ಕೊಡುಗೆ.

`ದೀಪಮಾಲೆ' ಕೃಷ್ಣಶರ್ಮರ ಇನ್ನೊಂದು ಉತ್ಕೃಷ್ಟ ಕೃತಿ. ಇದರಲ್ಲಿ ಇರುವುದು ಹದಿನಾಲ್ಕು ವ್ಯಕ್ತಿಚಿತ್ರಗಳು. ಈ ವ್ಯಕ್ತಿಗಳೆಲ್ಲ ಗಾಂಧೀ ಪ್ರಭಾವಳಿಯಲ್ಲಿ ರಾರಾಜಿಸಿದವರೇ- ಸರೋಜಿನಿದೇವಿ, ಠಕ್ಕರ್ ಬಾಪಾ, ಆಚಾರ್ಯ ವಿನೋಬಾ, ಮೌಲಾನಾ ಅಜಾದ್, ಜಮನಾಲಾಲ್ ಬಜಾಜ್, ವಲ್ಲಭಭಾಯಿ, ಕೃಪಲಾನಿ, ಹೀಗೆ. ಈ ವ್ಯಕ್ತಿಚಿತ್ರಗಳು ಗಾಂಧೀಯುಗದ ಚಿರಪರಿಚಿತ ನಾಯಕರುಗಳ ವ್ಯಕ್ತಿತ್ವ ಪರಿಚಯದ ಜೊತೆಗೆ ಬೇರೆ ಬೇರೆ ವರ್ಣದ ಬಲ್ಬುಗಳನ್ನು ಗಾಂಧೀ ವ್ಯಕ್ತಿತ್ವದ ಹಿನ್ನೆಲೆಯಲ್ಲಿ ಪೋಣಿಸಿಕೊಟ್ಟಂತಿದೆ.

ಸಿದ್ದವ್ವನಹಳ್ಳಿಯವರು ಮಾಡಿದ ಅನುವಾದ ಕೃತಿಗಳು ಗಾಂಧೀಜಿಯ `ಹಿಂದ್ ಸ್ವರಾಜ್ಯ' ಕೃತಿಯಿಂದ ಆರಂಭವಾಗಿ ನವಜೀವನದವರು ಪುಸ್ತಕಗಳ ರೂಪದಲ್ಲಿ ಪ್ರಕಟಿಸಿದ ಹಲವಾರು ಹೊತ್ತಗೆಗಳವರೆಗೆ ಹರಡಿಕೊಂಡಿದೆ. ಅವರು ಸ್ಥಾಪಿಸಿದ `ಗಾಂಧಿ ಸಾಹಿತ್ಯ ಸಂಘ'ವೇ ಹಲವಾರು ಪುಸ್ತಕಗಳನ್ನು ಪ್ರಕಟಿಸಿದೆ.

ದಿವಂಗತ ಕೆ.ಎಂ. ಮುನ್ಷಿಯವರ `ಕೃಷ್ಣಾವತಾರ' ಮೂರು ಸಂಪುಟಗಳಲ್ಲಿ ಅನುವಾದ ಕಂಡಿತು. ವಾಲ್ಮೀಕಿ ರಾಮಾಯಣವನ್ನು ಕನ್ನಡ ವಚನದಲ್ಲಿ (1500 ಪುಟ, 3 ಸಂಪುಟ) ರಚಿಸಿದ ಕೀರ್ತಿ ಇವರದೇ. `ರಾಮಾವತಾರ' ಶರ್ಮರ ಇನ್ನೊಂದು ಪ್ರಸಿದ್ಧ ಕೃತಿ.

ಗಾಂಧೀಜಿ ತರುವಾಯ ಗಾಂಧೀ ವಿಚಾರದ ಸರ್ವೋದಯ ವಿಚಾರ ಆಚಾರದ ಮೂರ್ತಸ್ವರೂಪರಾದವರು ವಿನೋಬಾ. ಇವರ ಸಾಹಿತ್ಯವನ್ನೂ ಶರ್ಮರು ಅನುವಾದ ರೂಪದಲ್ಲಿ ಕೊಟ್ಟಿದ್ದಾರೆ. ಗಾಂಧೀ ಪರಿವಾರದಲ್ಲಿ ಪ್ರಮುಖರೆನಿಸಿದ್ದ ಮಶ್ರೂವಾಲಾ, ಜೆ.ಸಿ. ಕುಮಾರಪ್ಪ, ದಾದಾ ಧರ್ಮಾಧಿಕಾರಿ, ಇವರುಗಳ ವಿಶ್ಲೇಷಣಾತ್ಮಕ ಸಮಾಲೋಚನೆಗಳ ಕೃತಿಗಳನ್ನೂ ಕನ್ನಡಕ್ಕೆ ತಂದಿದ್ದಾರೆ. ಕೃಷ್ಣಶರ್ಮರು ಕೆಲವು ವರ್ಷಗಳ ಕಾಲ `ಸರ್ವೋದಯ' ಎಂಬ ಪತ್ರಿಕೆಯನ್ನು ನಡೆಸಿದರು.

ಸಿದ್ದವ್ವನಹಳ್ಳಿ ಕೃಷ್ಣಶರ್ಮರ ಜನ್ಮ ಶತಾಬ್ಧಿ (2004-05) ಅವರ ಸಮಗ್ರ ಕೃತಿಗಳು ಮೂರು ಬೃಹತ್ ಸಂಪುಟಗಳಲ್ಲಿ ಪ್ರಕಟಗೊಂಡವು. ಸಾಹಿತ್ಯ ಮಾರಾಟದಿಂದ ಬಂದು ಉಳಿದ ಹಣವನ್ನು ನಿಧಿಯಾಗಿ ಇಟ್ಟು `ಸಿದ್ದವ್ವನಹಳ್ಳಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್' ರಚಿಸಲಾಗಿದೆ. ಶರ್ಮಾಜಿ ಅವರು ದುಡಿದಿದ್ದ ಕ್ಷೇತ್ರಗಳಲ್ಲಿ -ವಿಚಾರ ಸಾಹಿತ್ಯ, ಜನಸೇವೆ ಹಾಗೂ ರಚನಾತ್ಮಕ ಕಾರ್ಯಕ್ರಮಗಳಲ್ಲಿ- ಗಣನೀಯ ಸೇವೆ ಸಲ್ಲಿಸುವ ವ್ಯಕ್ತಿ ಅಥವಾ ಸಂಸ್ಥೆಗಳಿಗೆ ಪುರಸ್ಕಾರದ ಪ್ರೋತ್ಸಾಹ ನೀಡುವುದು, ಯುವ ಜನರಲ್ಲಿ ಚಿಂತನಪರತೆಯನ್ನು ಉತ್ತೇಜಿಸಲು ಕಾರ್ಯಕ್ರಮಗಳು ಹಮ್ಮಿಕೊಳ್ಳುವುದು ಟ್ರಸ್ಟ್ನ ಚಟುವಟಿಕೆಗಳಲ್ಲಿ ಸೇರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.