‘ಕಥಾಮಾಲೆ’ ಯೇಸುಕ್ರಿಸ್ತರ ಜೀವನ ಕಥನವನ್ನು ಕಾವ್ಯವಾಗಿಸಿ ಪೋಣಿಸಿದ ಮಾಲೆ. ಈ ಕಾವ್ಯಖಂಡ 1862ರಲ್ಲಿ ಮಂಗಳೂರಿನ ‘ಬಾಸೆಲ್ ಮಿಷನ್ ಪ್ರೆಸ್’ನಿಂದ ಪ್ರಕಟವಾಯಿತು. ಯೇಸುವಿನ ಜನನದಿಂದ ತೊಡಗಿ ದಿವ್ಯಾರೋಹಣದವರೆಗಿನ ಕಥೆ ಈ ಕಾವ್ಯದಲ್ಲಿ ಬಿತ್ತರಗೊಂಡಿದೆ.

43 ಅಧ್ಯಾಯ ಅಥವಾ ಕಾವ್ಯಖಂಡಗಳಿರುವ ಕಾವ್ಯದ ಮೊದಲಿಗೆ ‘ವಂದನಾ ವಾಕ್ಯ’ ಎನ್ನುವ ನಾಂದೀರೂಪದ 5 ಭಾಮಿನೀ ಷಟ್ಪದಿಗಳೂ ಕೊನೆಯಲ್ಲಿ ‘ಸಮಾಪ್ತಿವಾಕ್ಯವು’ ಎನ್ನುವ ಮಂಗಲರೂಪದ ಮೂರು ಭಾಮಿನೀ ಷಟ್ಪದಿಗಳೂ ಇವೆ. 43(+2) ಒಳವಿಭಾಗಗಳುಳ್ಳ ‘ಕಥಾಮಾಲೆಯೊಳಗೆ ಒಟ್ಟು 452 ಪದ್ಯಗಳಿದ್ದು 206 ಭಾಮಿನಿ ಷಟ್ಪದಿ, 73 ವಾರ್ಧಕ ಷಟ್ಪದಿ ಹಾಗೂ 174 ಪೂರ್ವಿರಾಗ, ಮಟ್ಟತಾಳದಲ್ಲಿ ರಚನೆಗೊಂಡ ಕೀರ್ತನೆಯ ರೂಪದ ಹಾಡುಗಳಿವೆ. ಪೂರ್ವಿರಾಗದಲ್ಲಿ ರಚಿತವಾದ ರಚನೆಗಳು ದಾಸರ ಪದಗಳಂತೆ ಪಲ್ಲವಿ ಹಾಗೂ ಅನಿರ್ದಿಷ್ಟ ಸಂಖ್ಯೆಯ ಚರಣಗಳನ್ನು ಒಳಗೊಂಡಿವೆ.

ಈ ಕಾವ್ಯಕ್ಕೆ ಕಿಟೆಲ್ ಕೊಟ್ಟ ಹೆಸರು ‘ಕಥಾಮಾಲೆ’. ಯೇಸುವಿನ ಬದುಕಿನ ಸುತ್ತ ಹೆಣೆದ ಕತೆಗಳಿಗೆ, ಸಾಮತಿಗಳಿಗೆ ಇಲ್ಲಿ ಒತ್ತು. ಯೇಸುವಿನ ಹೆಸರನ್ನು ಕಾವ್ಯಕ್ಕೆ ಶೀರ್ಷಿಕೆಯಾಗಿ ನೀಡದೆ, ‘ಕಥಾಮಾಲೆ’ ಎಂಬ ರೂಪಕಾತ್ಮಕ ಹೆಸರನ್ನು ನೀಡಿದ್ದಾರೆ. ಬೈಬಲ್‌ನ ಹೊಸ ಒಡಂಬಡಿಕೆಯು ಈ ಕಾವ್ಯಕ್ಕೆ ಕಥಾವಿನ್ಯಾಸವನ್ನು ಒದಗಿಸಿದರೂ ಜೆ. ಬಾರ್ಥ್ ಅವರ ‘Fiftytwo biblical stories for School and Families’ ಎನ್ನುವ ಜರ್ಮನ್ ಗ್ರಂಥವೇ ಇದಕ್ಕೆ ಮುಖ್ಯ ಆಕರ.

ಕಿಟೆಲರ ಕಾಲಕ್ಕಾಗಲೇ ಕನ್ನಡದಲ್ಲಿ ಪದ್ಯ ಹಿಂದೆ ಸರಿದು ಗದ್ಯಪ್ರಕಾರ ಮುಂಚಾಚುತ್ತಿತ್ತು. ಅಷ್ಟಾಗಿಯೂ ಕಿಟೆಲ್ ತನ್ನ ಸೃಜನಶೀಲತೆಯನ್ನು ಪದ್ಯದಲ್ಲೇ ಹರಿಯಬಿಡುವುದು ತಮ್ಮ ಕಾರ್ಯಸಾಧನೆಗೆ ಅನುಕೂಲವೆಂದು ಭಾವಿಸಿದರು. ಸ್ಥಳೀಯ ಸಂಸ್ಕೃತಿಯನ್ನು ಅರಗಿಸಿಕೊಂಡು ಆ ಸಂಸ್ಕೃತಿಯ ಜೀವಧಾತುಗಳನ್ನು ಬಳಸಿಕೊಂಡು ಕಾವ್ಯರಚನೆ ಮಾಡಬೇಕೆನ್ನುವುದು ಕಿಟೆಲರ ಆಶಯವಾಗಿತ್ತು. ಹೀಗೆ ಮಾಡಿದರೆ ಮಾತ್ರ ಸುವಾರ್ತಾ ಸಂದೇಶವನ್ನು ಹಂಚಲು ಬಂದ ‘ವಿದೇಶಿ’ಯರು ಸ್ವದೇಶಿಯರಾಗಲು ಸಾಧ್ಯ ಎಂದು ಪ್ರತಿಪಾದಿಸಿದರು.

ಕುಮಾರವ್ಯಾಸ ಭಾರತ, ಜೈಮಿನಿ ಭಾರತ, ದಾಸರ ಪದಗಳು ಸ್ಥಳೀಯ ಜನಸಮುದಾಯದ ಮೇಲೆ ಮೂಡಿಸಿದ ಸಾಂಸ್ಕೃತಿಕ ಚಹರೆಗಳನ್ನು, ಬೀರಿದ ಪರಿಣಾಮಗಳನ್ನು ಗಮನಿಸಿದ ಕಿಟೆಲರು ಧರ್ಮೋಪದೇಶ ನೀಡುವಲ್ಲಿ, ಚರ್ಚುಗಳಲ್ಲಿ ಪ್ರಸಂಗ ನಡೆಸುವಲ್ಲಿ ಕ್ರಿಸ್ತಧರ್ಮ ದೀಕ್ಷೆ ನೀಡುವಲ್ಲಿ ದೇಶೀಯ ಹಾಡು, ಪದಗಳನ್ನು ಬಳಸುವುದು ಹೆಚ್ಚು ಪರಿಣಾಮಕಾರಿ ಎಂದು ಬಾಸೆಲ್‌ನ ತಮ್ಮ ಮೇಲಧಿಕಾರಿಗಳಿಗೆ ಬರೆದರು. ಆದರೆ ಇದಕ್ಕೆ ಮೇಲಿನವರಿಂದ ಸಾನುಕೂಲಕರ ಅಭಿಪ್ರಾಯ ಬರಲಿಲ್ಲ.

ಬಾಸೆಲ್‌ಗೆ ಬರೆದ ಪತ್ರವೊಂದರಲ್ಲಿ ಕಿಟೆಲರು ಹೀಗೆ ಬರೆಯುತ್ತಾರೆ. “ಭಾರತದ ಎಲ್ಲ ಕ್ರೈಸ್ತ ತರಬೇತಿ ಶಾಲೆಗಳಲ್ಲಿ ಹಿಂದೂ ಸಂಗೀತ ಹಾಗೂ ಭಾರತೀಯ (ಕನ್ನಡ) ಛಂದ ಶ್ಶಾಸ್ತ್ರವನ್ನು ಕಲಿಸಬೇಕೆನ್ನುವುದು ನನ್ನ ಬಹುದಿನಗಳ ಆಸೆ.

ಹಾಗೆ ಮಾಡಿದಲ್ಲಿ ನಿಶಿತಮತಿಗಳಾದ ಭಾರತೀಯ ಯುವಕರು ಸ್ಥಳೀಯ ಭಾಷೆಗಳಲ್ಲಿ ಅಪ್ಪಟ ದೇಸೀ ಶೈಲಿಯಲ್ಲಿ ಕ್ರೈಸ್ತಗೀತಗಳನ್ನು ಬರೆಯುವ ಸಾಧ್ಯತೆಯಿದೆ. ...... ಚರ್ಚುಗಳಲ್ಲಿ ಪಾಶ್ಚಾತ್ಯ ವಾದ್ಯಪರಿಕರಗಳನ್ನು ಬಳಸದೆ ತಬ್ಲಾ, ಕೊಳಲುಗಳನ್ನು ನುಡಿಸುತ್ತಾ, ಬೀದಿಗಳಲ್ಲಿ ಹಿಂದೂಗಳು ಭಜನಾಗೀತೆಗಳನ್ನು ಹಾಡಿಕೊಂಡು ಹೋಗುವಂತೆ ನಮ್ಮವರು ದೇಸೀ ಭಜನಾಶೈಲಿಯಲ್ಲಿ ಕ್ರೈಸ್ತ ಗೀತಗಳನ್ನು ಹಾಡಿಕೊಂಡು ಹೋದರೆ ಜನರ ಪ್ರೀತಿಗಳಿಸುವುದು ಸುಲಭವಾದೀತು’’. ಅದಕ್ಕೆಂದೇ ಕಿಟೆಲರು ಷಟ್ಪದಿ, ಚೌಪದ, ದಾಸರ ಪದಗಳ ಮಟ್ಟುಗಳನ್ನೇ ಆಯ್ದುಕೊಂಡು ಕಾವ್ಯರಚಿಸಿದರು.

ಸಾಮಾನ್ಯವಾಗಿ ಮಧ್ಯಕಾಲೀನ ಕನ್ನಡಕವಿಗಳು ಹಾಗೂ ಹಸ್ತಪ್ರತಿಕಾರರು ಕಾವ್ಯದ ಮೊದಲಿಗೆ ‘ಶ್ರೀ ಗಣೇಶಾಯ ನಮಃ’, ‘ಶ್ರೀ ಪಂಪಾ ವಿರೂಪಾಕ್ಷ ಪಾದವೇ ಗತಿ’ ಎಂದು ಮುಂತಾಗಿ ಬರೆಯುತ್ತಿದ್ದಂತೆ ಕಿಟೆಲರು ‘ಕಾವ್ಯಮಾಲೆ’ಯ ಮೊದಲಿಗೆ ‘ಶ್ರೀ ಮೊಹಾವಾಯ ನಮಃ’ ಎಂದು ಬರೆವ ಮೂಲಕ ಕ್ರೈಸ್ತಕಾವ್ಯಕ್ಕೆ ಭಾರತೀಯತೆಯ ಮೆರುಗನ್ನು ಇತ್ತರು. ಕಿಟೆಲ್ ತಮ್ಮ ಕ್ರೈಸ್ತಕಾವ್ಯದ ‘ವಂದನಾ ವಾಕ್ಯ’ ಭಾಗದಲ್ಲಿ ಕಾವ್ಯದ ಓದುಗರನ್ನು ‘ಹಿಂದು ದೇಶದ ಸಕಲ ಕುಲದವರೇ’ ಎಂದು ಕರೆದಿರುವುದು ಅವರ ಭಾರತೀಯತೆಯ ಕಡೆಗಿನ ಒಲವನ್ನು ಹೇಳುತ್ತದೆ.

ಕಾವ್ಯದೊಳಗಿನ ನುಡಿಬಿನ್ನಾಣವೂ ವಿಶಿಷ್ಟವಾಗಿದೆ. ಕೆಲವೊಂದು ಅಂಶಗಳಲ್ಲಿ ಕಿಟೆಲ್ ಸಮಕಾಲದ ಕನ್ನಡ ಬೈಬಲ್‌ನ ಭಾಷಾರಚನೆಯನ್ನು ಮೀರಿ ಭಾರತೀಯ ಕಥನಪರಂಪರೆಗೆ ಸಮೀಪವಾಗುತ್ತಾರೆ. ಕನ್ನಡದಲ್ಲಿ ಆ ಕಾಲಕ್ಕೆ ಲಭ್ಯವಿದ್ದ ಕುಮಾರವ್ಯಾಸಭಾರತ, ಜೈಮಿನಿ ಭಾರತ, ಚೆನ್ನಬಸವ ಪುರಾಣ, ಬಸವ ಪುರಾಣ, ದಾಸರ ಪದಗಳು, ಯಕ್ಷಗಾನ ಪ್ರಸಂಗ ಸಾಹಿತ್ಯಗಳನ್ನು ಓದಿ ಕರಗತ ಮಾಡಿಕೊಂಡಿದ್ದರು.

ಯೇಸುವನ್ನು ಕುರಿತು ಕಾವ್ಯದೊಳಗೆ ಬಳಸಿದ ವಿಶೇಷಣಗಳಾದ ಪ್ರೇಮಸಾಗರ ಯೇಸು, ಗುರು ಯೇಸು, ಯೇಸು ಗುರು, ಯೇಸು ಪತಿ, ಯೇಸುವೊಡೆಯ, ಸರ್ವಶಕ್ತ ಯೇಸು – ಮುಂತಾದ ನುಡಿನಾಣ್ಯಗಳನ್ನು ಗಮನಿಸಬೇಕು. ಜೊತೆಗೆ ಭಾರತೀಯ ತತ್ವಶಾಸ್ತ್ರಗಳಲ್ಲಿ ಬಳಕೆಯಲ್ಲಿರುವ ‘ಮೋಕ್ಷ’, ‘ದರ್ಶನ’, ‘ಅಭಿಷೇಕ’, ‘ಪದಕಮಲ’ – ಇಂತಹ ನುಡಿಗಟ್ಟುಗಳನ್ನು ಮುಕ್ತವಾಗಿ ಬಳಸುತ್ತಾರೆ. ಬೈಬಲ್‌ಗೆ ಪರ್ಯಾಯ ಪದವಾಗಿ ‘ವೇದ’ವನ್ನು ಬಳಸಿದರೆ ಬೈಬಲ್ ಅನುವಾದದಲ್ಲಿ ಬಳಕೆಯಲ್ಲಿರುವ ‘ಕರ್ತ’, ‘ದೇವ’ ಪದಗಳಿಗೆ ‘ಈಶ’, ‘ಈಶ್ವರ’ ಪದಗಳನ್ನು ಧಾರಾಳವಾಗಿ ಬಳಸಿದ್ದಾರೆ.

ಯುರೋಪಿಂದ ಬಂದ ಮಿಶನರಿಗಳಲ್ಲಿ ಬೈಬಲ್ ಕಥಾಸೂತ್ರವನ್ನು ಬಳಸಿಕೊಂಡು ಸ್ವತಂತ್ರಕಾವ್ಯವನ್ನು ಬರೆವ ಮೊದಲ ಪ್ರಯತ್ನ ಕಿಟೆಲ್‌ರಿಂದ ನಡೆಯಿತು. ಇದಕ್ಕೆ ಕಿಟೆಲರಿಗೆ ಅವರ ಸಹಬಂಧವರಿಂದಾಗಲೀ, ಬಾಸೆಲ್‌ನ ಒಡೆಯರಿಂದಾಗಲೀ ಬೆಂಬಲವಿರಲಿಲ್ಲ. ಕಿಟೆಲರ ಕನ್ನಡ ಕಾವ್ಯಪ್ರೇಮ ಹಾಗೂ ಸ್ಥಳೀಯ ಜನರಿಗೆ ಬೈಬಲ್‌ನ ಸಾರವನ್ನು ಮನದಟ್ಟುಮಾಡಿಕೊಡಲು ಕಾವ್ಯರೂಪವೇ ಹೆಚ್ಚು ಪರಿಣಾಮಕಾರಿ ಮಾಧ್ಯಮ ಎಂದು ತಿಳಿದ ಫಲ ಈ ಕಾವ್ಯದ ರಚನೆ ಎನ್ನುವುದು ಖಚಿತ. ಕಿಟೆಲರಲ್ಲಿದ್ದ ಕ್ರೈಸ್ತತತ್ವದ ಭಾರತೀಕರಣದ ತುಡಿತ ಈ ಕಾವ್ಯರಚನೆಯ ಹಿಂದೆ ಕೆಲಸಮಾಡಿರುವ ಸಾಧ್ಯತೆಯಿದೆ.

ರೆ. ಫರ್ಡಿನಾಂಡ್ ಕಿಟೆಲ್‌ರ ‘ಕಥಾಮಾಲೆ’ಯಿಂದ ಆಯ್ದ, ವಾರ್ಧಿಕ ಷಟ್ಪದಿಯಲ್ಲಿರುವ ಕಾವ್ಯಭಾಗ.

ಕ್ರೂಜೆಯ ಮರಣವು

ಜನರ ಗುಂಪೇಸುವನು ಹಾಸ್ಯಗೈದಾ ಸಮಯ–
ದನಕ ತೊಡಿಸಿದ್ದ ರಕ್ತಾಂಬರವ ತೆಗೆದಿಟ್ಟು
ಪುನಹ ಸ್ವವಸ್ತ್ರಗಳನಾತನಿಗೆ ಧರಿಸಿ ಬಳಿಕಸುವಳಿಸ ಕೊಂಡೋಯ್ಹಿತೂ।
ವಿನತಾತ್ಮನಾದೇಸು ಶಿಲುಬೆಯನು ತಾ ಹೊತ್ತು
ಹನನತಳಕೈದಲ್ಕೆ ವನದಿಂದ ಬರುವೊಬ್ಬ
ಮನುಜನನು ಕಂಡಿವನ ಮೇಲಿಲುಬೆ ಹೇರಿಟ್ಟರೇಸುವದ ಹೊರಲಾರದೇ ।।2।।

ಮರುಣತಳಕೊಯ್ದವರು ಗುರುಪತಿಗೆ ಕರೆಬೋಳ
ಬೆರಸಿರುವ ಮದ್ಯರಸ ಕುಡಿಯಕೊಡಲವನೇನು
ಮರಳಿಲ್ಲದಳಿಯುವಂತದನೊಲ್ಲೆನೆಂದನೈ ಮರುಭಯವ ಗೆದ್ದ ಮನದೀ
ಬರಹನುಡಿಯೊದಗಲವನೊಡನಿಬ್ಬರಧಮರನು
ಮರಗಂಚಕಾಣಿಯಿಂ ಜಡಿಸಿದರು ಗುಡ್ಡದಲ್
ಲೆರಡು ಕಡೆಯೊಬ್ಬೊಬ್ಬ ಕಳ್ಳನಿದ್ದಮಲಪತಿಯೇಸು ತೂಗಿಹನಾಯೆಡೇ ।।2।।

ಮೊಳೆಘಾಯರಕ್ತ ಸೋರ್ಸೋರಲವನೆನ್ಪಿತನೆ
ತಿಳಿಯದೀ ಜನಕೆ ತಾನ್ಗೈಯುವದು ಮನ್ನಿಸದ–
ನಿಳೆಗೆ ಬೀಳ್ವೆನ್ರಕ್ತವದರ ಹಿತಕಾಗಲೆಂದತಿ ದಯದಿ ಬೇಡಿಕೊಂಡಾ
ಬಳಿಕ ನೆರೆಯಾಚಿಯರು ಶಿಲುಬೆಯಲಿ ಬರಹವನ್
ನಳಕಿಸೆಲೆ ಯೂದಿಯರಸೆಂದೇಕೆ ಬರೆಸಿದ್ದಿ-
ಯೊಳಿತಲ್ಲವೆನ್ನಲ್ಪಿಲಾತನಾನ್ ಬರೆದದ್ದೆ ಬರೆದಿರಲಿಯೆಂದು ಸುರಿದಾ ।।3।।

ಯಾಜಕರು ಗುಂಪವರು ದಂಡವರು ಬೈದು ನೀ
ಕ್ರೂಜೆಯಿಂದಿಳಿ ದೇವಸುತನಾದರೆನೆ ಶಿಲುಬೆ–
ಯಾ ಜನರೊಳೊಬ್ಬನೂ ದೇವರವನಾಗಿದ್ದರೆಮನು ನಿನನೈ ಬಿಡಿಸೆನೇ
ಈ ಜರೆವ ನುಡಿ ಕೇಳಿ ಮತ್ತೊಬ್ಬ ಖಳನಧಿಕ–
ತೇಜನೀತ್ಯಾತ್ಮದೇವಂಗೆ ಭಯಪಡೆಯೆಯಾ?
ತ್ಯಜಿಸೀ ಬುದ್ಧಿಯನ್ನಾಂ ಮರಣ ಪಾತ್ರರಕಟಾದರಿವನನಪರಾಧೀ ।।4।।

ಕರಗಲೀ ನಿನ್ಗರ್ವವೆಂದೇಸುವೀಕ್ಷೀಸುತ
ಕರುತನೆಲೆ ನೆನ್ರಾಜ್ಯವೈದುವಂದೆನ್ನನು
ಮರೆಯದೆಲೆ ನೆನಸಿಕೊಳ್ಳೆಂದುಸುರಲೇಸು ದಿಟ ಪಾಲಿಸುತಲಿಂತೊರೆದನೂ
ಪರದೈಸ ವರಸುಖದೊಳಿಂದೆಯೆನ್ನೊಡನೆ ಕೂ–
ಡಿರುವಿ ನಿಂಗಿದನು ನಿಚ್ಚಯದಿಂದಲುಸುರಿದನು
ನರನೆಂದಾಡಿ ತನ್ನಾಪತ್ತ ಪರರಿಗಾಗ್ಯತಿ ನೆನಸದಿದ್ದನೊಲೆದೂ ।।5।।

ತದನು ಪತಿಯೇಸು ತನ್ನಡಿಗಡೆಯ ತಾಯಿಯನು
ಮುದಶಿಷ್ಯನನು ತಾಯಿಯನುಜಳನು ಮರಿಯಳನು
ವದನವೆತ್ತೀಕ್ಷಿಸುತಲಿಗೊ ವನಿತೆ ನಿನ್ನ ಸುತನೆಂದೊರೆದನಾ ತಾಯಿಗೇ
ಸದಮಲನು ಬಳಿಕಲಾ ಶಿಷ್ಯನನು ನೋಡಿಂತು
ವದಸಿದನು - ಕಂದ ನಿನ್ತಾಯಿಯಿಗೊ! ಯಾ ಶಿಷ್ಯ–
ನದನು ಕೇಳ್ಯಾಕೆಯನು ತನ್ಮನೆಯಲಿರಿಸಿಕೊಂಡನ್ನಿಂದ ಸಲಹುತಿರುವಾ ।।6।।

ಬಸಿಲು ಕಡುಕಾಯುತ್ತಲಾರನೆಯ ತಾಸಿನೊಳ–
ಗೆಸೆವ ರವಿಕಿರಣಂಗಳಡಗಡಗಿ ಕತ್ತಲಲೊ
ಮುಸುಕಲಾ ಸೂರ‍್ಯಪತಿಯಿಳೆಯೊಡನೆ ದುಃಖಿಸಿದ ತರವಾಗಿ ತೋರುತಿಹುದೊ
ಪಸರಿಸಿತು ವಿಮಲ ಪತಿಯಾತ್ಮದೊಳು ಸಂಕಟವು
ಬೆಸಸಿದನು - ನನದೇವ ನನದೇವ ನನಗೀಗ
ನಸಿಸುವರೆ ಬಿಟ್ಟೀಯೊಯೆನ್ನುತಲೆ ಬಹುರಕ್ತವೊಸರಂತೆ ಬೀಳ್ವದಿಳೆಗೇ ।।7।।

ಮೂರುತಾಸಾದ ಮೇಲೇಸುಗುರು ಬರಹವನು
ಪೂರಗೈವದಕಾಗಿ ತನ್ನಯಧಿಕಾಶೆಯೊಳು–
ನೀರಡಿಕೆಯಾಯ್ತೆನಗೆಲೆಂದು ಬಲುದನಿಯಿಂದ ಕೂಗಲಾಗೊಬ್ಬನುಹುಳೀ
ಕ್ಷೀರ ಶಿಗಿಸಿಹ ಕೋಲವನ ಬಾಯ್ಗಿಕ್ಕಲಿಕೆ–
ಹೀರಿಕೊಂಡದ ಕುಡಿದನಾವರಿಗೆ ಜನರು ಮಿತಿ
ಮೀರಿಯವಗಣಿಸುತ ಹಾಸ್ಯವನ್ನಾಡುತಿಹರವನ ಶಿಲುಬೆಯಡಿಲೀ ।।8।।

ಕುಡಿದು ಹುಳಿಸಾರವನು ಜಯಮುಖಿಯು ಬಾಯ್ತೆರದು
ತೊಡಗಿದದು ಸಕಲ ಮುಗಿದಾಯ್ತೆನುತಲುತ್ಸವದಿ
ನುಡಿದೀಚೆ ಪಿತನೆಯೆನ್ನಾತ್ಮವನು ನಿನ್ನ ಕರಕೊಪ್ಪಿಸಿದೆನೆಂದ್ಕೂಗಿದಾ
ಬಹನೆ ತಲೆಬಾಗಿಸುತಲದಿನಕಟಾ ಕ್ಷಣವೆ
ಯಡಿಯಿಂದ ಮೇಲವರಿಗಾ ಪುರದ ಪರಮಾತ್ಮ
ಗುಡಿಯೊಳಗೆ ತೆರೆಹರಿಯಿತಾಗಲನ್ಯೋನ್ಯವಾಯ್ತಮಲಾತ್ಮಸಿಳೆಯವರಿಗೇ ।।9।।

ಧರೆಕಂಪವಾಯ್ತೊಡದವಬ್ಬರದಿ ಬಂಡೆಗಳು
ತೆರೆದವ್ಸಮಾಧಿಗಳು ನಿದ್ದೆಗೊಂಡಸುವಳಿದ
ನರರನೇಕಾನೇಕರೆಚ್ಚತ್ತು ಪತ್ಯೇಸುವೆದ್ದಾಗತಾವೆದ್ದರೂ
ತರತರದ ಧರಣಿಯತ್ಪುತ ನೋಡಿ ಕ್ರಿಸ್ತೇಸು
ಪರಮಾತ್ರಿ ದನಿಗೈದು ಶಕ್ತಿ ತುಸುಕುಂದದಾ
ಪರಿಯಿಂದಲಳಿದದ್ದು ಕಂಡ್ಗಾವಲಧಿಪತಿಯು ದೇವಜನನು ನಿಜವೆಯೆಂದಾ ।।10।।

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.