ತುಂಗಾ ಮತ್ತು ಗಂಗಾ ಇಬ್ಬರದೂ ಎಡೆಬಿಡದ ಸ್ನೇಹ. ಅವಳನ್ನು ಬಿಟ್ಟು ಇವಳಿಲ್ಲ; ಇವಳನ್ನು ಬಿಟ್ಟು ಅವಳಿಲ್ಲ. ತುಂಗಾ ಓದಿನಲ್ಲಿ ಮುಂದು; ಗಂಗಾ ಮಾತಿನಲ್ಲಿ ಚಾಲೂಕು. ಯಾವಾಗಲೂ ಚಿನಕುರಳಿಯಂತೆ ಪಟಪಟನೆ ಮಾತಾಡುತ್ತಾಳೆ. ಅದರಲ್ಲೂ ವಿಶೇಷವೆಂದರೆ ಗಾದೆಗಳನ್ನು ಬಳಸೋದು.

ಶಾಲೆಗೆ ಹೋಗ್ತಾ ದಾರೀಲಿ ತುಂಗಾ ಕೇಳಿದಳು,
‘ಲೇ ಗಂಗಾ, ಇಷ್ಟೊಂದು ಗಾದೆ ಹೇಳ್ತೀಯಲ್ಲಾ? ಅದು ಹೇಗೇ ಕಲಿತುಕೊಂಡೆ?’
‘ನಮ್ಮಜ್ಜಿ ಇದಾಳಲ್ಲಾ, ಯಾವಾಗಲೂ ಗಾದೆ ಉದುರಿಸ್ತಾನೇ ಇರ್ತಾಳೆ. ‘ಹಿರಿಯಕ್ಕನ ಚಾಳಿ ಮನೇ ಮಂದಿಗೆಲ್ಲ’ ಅನ್ನೋ ಹಾಗೆ ನಂಗೂ ಅದೇ ಚಾಳಿ ಬಂದುಬಿಟ್ಟಿದೆ!’
‘ಅಬ್ಬಬ್ಬ, ಈಗಲೂ ಗಾದೇನ ಸೇರಿಸಿಯೇ ಮಾತಾಡಿದೆ ಕಣೇ. ಶಾಲೆ ಬೆಲ್ಲು ಹೊಡೀತು. ಬೇಗ ಬಾ. ಇಲ್ಲಾಂದ್ರೆ ಮೇಷ್ಟ್ರು ‘ಜಾಣನಿಗೆ ಮಾತಿನ ಪೆಟ್ಟು ಕೋಣನಿಗೆ ದೊಣ್ಣೆ ಪೆಟ್ಟು’ ಅಂತ ಅಂದುಬಿಟ್ರೆ ಗತಿ?’
ಅಂತ ತಾನೂ ಒಂದು ಗಾದೆ ಹೇಳಿ ತುಂಗಾ ನಕ್ಕುಬಿಟ್ಟಳು. ಗಂಗಾಗೂ ನಗು ಬಂತು.

ಸಂಜೆ ಶಾಲೆ ಬಿಟ್ಟಿತು. ಮತ್ತೆ ಗೆಳತಿಯರ ಮಾತು ಶುರುವಾಯಿತು.
‘ಗಂಗಾ ನಿನ್ನ ಮಾತು ಎಲ್ಲರಿಗೂ ಇಷ್ಟ ಕಣೇ’.
‘ತುಂಗಾ ಅದಕ್ಕೇ ಹೇಳೋದು, ‘ಬಾಯಿ ಇದ್ದೋನು ಬೊಂಬಾಯಿಯಲ್ಲೂ ಬದುಕಿದ’ ಅಂತ. ಗಾದೆ ಜನವಾಣಿ ಕಣೇ. ಜನವಾಣಿಯೇ ದೇವವಾಣಿ. ಬರೀ ಮಾತು ಚೆಂದವಾಗಿರೋದಷ್ಟೇ ಅಲ್ಲ, ಗಾದೆಗಳ ಪ್ರಯೋಜನವೂ ಬಹಳ. ಈ ಗಾದೆ ಕೇಳಿದೀಯಾ? ‘ಮಾತನಾಡಿದರೆ ಮಹಾಭಾರತಾನೂ ತಪ್ಪಿಸಬಹುದು? ಅಂತ. ವೇದ ಸುಳ್ಳಾದರೂ ಗಾದೆ ಸುಳ್ಳಾಗೋದಿಲ್ಲ ಅನ್ನೋದು ಗೊತ್ತಾ ನಿನಗೆ? ಅದಕ್ಕೆ ಅಷ್ಟು ಮಹತ್ವ ಇದೇ ಕಣೇ. ನಿಮ್ಮ ಮನೆ ಬಂತು. ನೀನು ನಡಿ. ನಾಳೆ ಮತ್ತೆ ಭೇಟಿ ಆಗೋಣ’.

ಆವತ್ತು ತರಗತಿಯ ಕೊಠಡಿಯಲ್ಲಿ ಗದ್ದಲವೋ ಗದ್ದಲ. ಜಲಜಾಳ ಮೊಬೈಲು ಕಾಣೆಯಾಗಿತ್ತು. ಭಯದಿಂದ ಅವಳು ಅಳೋಕೇ ಶುರು ಮಾಡಿಬಿಟ್ಟಳು. ಗೆಳತಿಯರೆಲ್ಲಾ- ‘ನಿಮ್ಮಪ್ಪನಿಗೆ ಗೊತ್ತಾದ್ರೆ ಹೊಡೀತಾರೇನೆ? ನಿಮ್ಮಮ್ಮ ಬಯ್ಯಲ್ವಾ?’ ಅಂತ ಬೇರೆ ಹೇಳ್ತಾ ಇದ್ರು. ಜಲಜ ಅಳುವನ್ನು ಮತ್ತಷ್ಟು ಜೋರು ಮಾಡಿದಳು.
ಅಷ್ಟರಲ್ಲಿ ಗಂಗಾ, ‘ಏಯ್ ಎಲ್ಲ ಸುಮ್ನಿರಿ. ‘ಉರಿಯೋ ಗಾಯಕ್ಕೆ ಉಪ್ಪು ಹಚ್ಚಿದರು’ ಅನ್ನೋ ಹಾಗೆ ಅವಳನ್ನು ಮತ್ತಷ್ಟು ಹೆದರಿಸ್ತಾ ಇದೀರಲ್ಲಾ? ಪಾಪ ಮೊದಲೇ ಮೊಬೈಲು ಕಳಕೊಂಡಿದಾಳೆ, ನಿಮಗೇನಾಗಬೇಕು? ‘ಬೆಕ್ಕಿಗೆ ಚೆಲ್ಲಾಟ ಇಲೀಗೆ ಪ್ರಾಣ ಸಂಕಟ’ ಅನ್ನೋ ಹಾಗೆ’ ಅಂದಳು. ಅಷ್ಟರಲ್ಲಿ ಮೇಷ್ಟ್ರು ಬಂದ್ರು.

‘ಏನದು ಗಲಾಟೆ? ಎಲ್ಲ ಕೂತ್ಕೊಳ್ಳಿ. ಒಬ್ರು ಏನಾಯ್ತೂಂತ ಹೇಳಿ. ಗಂಗಾ ನೀನು ಹೇಳಮ್ಮ’ ಅಂದ್ರು. ಗಂಗಾ ಎದ್ದು ನಿಂತು ವಿಷಯವನ್ನು ತಿಳಿಸಿದಳು.
‘ಅದಕ್ಕೇ ನಾವು ಹೇಳೋದು, ಶಾಲೆಗೆ ಮೊಬೈಲು ತರಬೇಡೀಂತ. ನಿಮಗೇನಕ್ಕೆ ಇಲ್ಲಿ ಬೇಕು ಅದು? ಈಗ ಯಾರಾದರೂ ತೆಗೆದುಕೊಂಡಿದ್ರೆ ಕೊಟ್ಟುಬಿಡ್ರಪ್ಪ. ಶಿಕ್ಷೆ ಏನೂ ಕೊಡೋದಿಲ್ಲ. ಮತ್ತೊಬ್ಬರ ವಸ್ತುವಿಗೆ ಆಸೆ ಪಡಬಾರದು’ ಅಂದರು ಅವರು.
ಯಾರೊಬ್ಬರೂ ಉತ್ತರಿಸಲಿಲ್ಲ. ‘ಈಗ ಪಾಠಕ್ಕೆ ಬರೋಣ. ಆಮೇಲೆ ನೋಡೋಣ’ ಅಂತ ಅವರು ಪುಸ್ತಕ ತೆರೆದರು.

ಊಟದ ಬೆಲ್ಲು ಹೊಡೆದಾಗ ಮತ್ತೆ ಗುಂಪು ಸೇರಿತು.
‘ಕಳ್ಳನ ಮನಸ್ಸು ಹುಳ್ಳ ಹುಳ್ಳಗೆ ಅಂತ ಗಾದೆ. ಎಲ್ರನ್ನೂ ಒಂದ್ಸಲ ನೋಡಿ’ ಅಂತ ಗಂಗಾ ಕಣ್ಣಾಡಿಸಿದಳು. ಗಿರಿಜಳ ಮೋರೆ ಸಪ್ಪಗೆ ಕಂಡಿತು. ತುಂಗಾಗೆ ಅವಳು ಮೆತ್ತಗೆ ಹೇಳಿದಳು.
‘ಅವಳೇ ಕಳ್ಳಿ ಇರಬೇಕು ಕಣೇ. ಬೆಲ್ಲ ಗುದ್ದಿದ ಗುಂಡು ಕಲ್ಲಿನ ಹಾಗೆ ಮೌನವಾಗಿದಾಳೆ ನೋಡು. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡೀತಂತೆ’.
‘ಹಾಗೆಲ್ಲ ಸುಂಸುಮ್ಮನೆ ಅನುಮಾನ ಪಡಬಾರದು ಗಂಗಾ, ಅವಳೇ ತಗೊಂಡಿದಾಳೆ ಅಂತ ಹೇಗೆ ಹೇಳ್ತೀಯಾ?’

‘ಏ ಸುಮ್ನಿರೇ, ‘ಕಳ್ಳನನ್ನು ನಂಬಿದರೂ ಕುಳ್ಳಿಯನ್ನು ನಂಬಬಾರದು’ ಅಂತ ಗಾದೆ ಇಲ್ವೇ? ಅವಳೇ ಮತ್ತೆ ಕುಳ್ಳಿ. ಹ್ಯಾಗೆ ನೋಡ್ತಾ ಇದಾಳೆ ನೋಡು.
‘ಸಂದಿಯಲ್ಲಿ ಸಮಾರಾಧನೆ’ ಅನ್ನೋ ಹಾಗೆ ಜಲಜಾನ ಯಾಮಾರಿಸಿ ಕದ್ದುಬಿಟ್ಟಿರಬೇಕು’. ಅದಕ್ಕೆ ತುಂಗಾನೂ ಒಂದು ಗಾದೆ ಉರುಳಿಸಿದಳು.
‘ನಮಗ್ಯಾಕೆ ಬಾರೇ, ‘ಮಾಡಿದವರ ಪಾಪ ಆಡಿದವರ ಬಾಯೊಳಗೆ’ ಅಂದ ಹಾಗೆ’ ಎಂದು ಇಬ್ಬರೂ ಪಕಪಕ ನಕ್ಕರು.
ಸಂಜೆ ಶಾಲೆ ಬಿಟ್ಟಿತು. ಗಂಗಾ ತುಂಗಾಳನ್ನೂ ಮನೆಗೆ ಕರೆದಳು. ಇವತ್ತು ನಮ್ಮನೇಲೇ ಕಾಫಿ ಕುಡಿ ಬಾರೇ, ಬೇಗ ಹೋಗುವಿಯಂತೆ ಅಂತ. ಸರಿ, ಇಬ್ಬರೂ ಮನೆ ಹೊಕ್ಕರು. ಕೈಕಾಲು ತೊಳಕೊಂಡರು. ಅಜ್ಜಿ ಹತ್ರ ಕೂತರು.

‘ಇವತ್ತು ಸ್ಕೂಲ್ನಲ್ಲಿ ಏನು ಹೇಳಿಕೊಟ್ರು ಮಕ್ಕಳೇ?’ ಅಂತ ಅಜ್ಜಿ ಮಾಮೂಲಿನಂತೆ ಕೇಳಿದರು. ನಡೆದ ಸಂಗತಿಯನ್ನು ಇಬ್ಬರೂ ವರದಿ ಮಾಡಿದರು. ಗಂಗಾ ತನ್ನ ಅನುಮಾನವನ್ನು ವ್ಯಕ್ತಪಡಿಸಿದಳು.
ಆಗ ಅಜ್ಜಿ, ‘ನೋಡಿ ಮಕ್ಕಳಾ, ಪ್ರತ್ಯಕ್ಷವಾಗಿ ನೋಡಿಯೂ ಪ್ರಮಾಣಿಸಿ ನೋಡಬೇಕು ಅಂತಾರೆ. ಹಾಗೆಲ್ಲ ಕದ್ದದ್ದನ್ನು ನೀವು ನೋಡದೆ ಊಹೆ ಮಾಡಬಾರದು ತಿಳೀತಾ?’ ಅಂದರು. ಎಲ್ಲರೂ ಕಾಫಿ ಕುಡಿದರು. ಅಷ್ಟರಲ್ಲಿ ಜಲಜಾ ಓಡಿ ಬಂದಳು.

‘ನಿಧಾನಕ್ಕೆ ಬಾರೆ, ಯಾಕೆ ಏದುಸಿರು ಬಿಡ್ತಾ ಇದೀಯಾ?’ ಗಂಗಾ ಕೇಳಿದಳು.
‘ನನ್ನ ಮೊಬೈಲು ಮನೇಲೇ ಇತ್ತು ಕಣೇ. ಶಾಲೆಗೆ ತರೋದನ್ನ ಮರೆತುಬಿಟ್ಟಿದ್ದೆ’ ಅಂದಳು. ಆಗ ತುಂಗಾ ಗಂಗಾಳ ಮುಖ ನೋಡಿದಳು. ಅಜ್ಜಿ ಹೇಳಿದರು:

‘ಅದಕ್ಕೇ ಹೇಳೋದು ಮಕ್ಕಳೇ ‘ಆತುರಗಾರನಿಗೆ ಬುದ್ಧಿ ಮಟ್ಟ, ತಾಳಿದವನು ಬಾಳಿಯಾನು ಅಂತೆಲ್ಲ. ಕಳ್ಳನನ್ನು ನಂಬಿದರೂ ಕುಳ್ಳಿಯನ್ನು ನಂಬಬಾರದು ಅಂತ ಗಾದೆ ಇದೆ, ನಿಜ. ಆದರೆ ಅದು ಎಂಥದೋ ಸಂದರ್ಭದಲ್ಲಿ ಹುಟ್ಟಿರುತ್ತೆ. ಎಲ್ಲ ಗಾದೆಗಳೂ ಎಲ್ಲ ವೇಳೆಗಳಲ್ಲೂ ನಿಜ ಅಂತ ತಿಳೀಬೇಡಿ ಗೊತ್ತಾಯ್ತಾ’ ಅಂದರು. ಗಂಗಾ ಮೌನವಾಗಿ ತಲೆ ಆಡಿಸಿದಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.