ಚಿಂಟು ಪೆಪ್ಪರಮಿಂಟು ತಿಂತಾ ಇದ್ದ. ಆವತ್ತು ಶನಿವಾರ. ಶಾಲೆ ಮಧ್ಯಾಹ್ನಕ್ಕೇ ಮುಗಿದಿತ್ತು. ಊಟದ ನಂತರ ಏನು ಮಾಡೋದು, ಸ್ನೇಹಿತರೆಲ್ಲ ಆಡೋಕೆ ಬರೋದು ಸಂಜೆಗೇ ತಾನೆ? ಅಲ್ಲಿವರೆಗೆ? ಯೋಚಿಸುತ್ತಾ ನಡೆಯುತ್ತಿದ್ದವನು ತಲುಪಿದ್ದು ಊರಾಚೆಯ ಹಾಸು ಬಂಡೇ ಮೇಲಕ್ಕೆ. ಪೆಪ್ಪರಮಿಂಟು ಮುಗಿಯೋವರೆಗೆ ಬಾಯಿ ಸಿಹಿಯಾಗಿಯೇ ಇತ್ತು. ಮುಗಿದ ಮೇಲೆ? ಆಲೋಚನೆ ಹತ್ತಿತು. ಈಗೇನು ಮಾಡೋದು?

ಎದುರಿಗೆ ಸಣ್ಣ ಬಂಡೆ ಮೇಲಕ್ಕೆ ಮುಳ್ಳು ಕಂಟಿ ಹಾದು ಒಂದು ಓತಿಕ್ಯಾತ ಓಡಿ ಬಂತು. ತುದೀಲಿ ಕೂತು ಚಿಂಟೂನ್ನೇ ನೋಡತೊಡಗಿತು. ಸ್ವಲ್ಪ ದೂರದಲ್ಲಿ ನಿಂತು ಅದನ್ನೇ ದಿಟ್ಟಿಸಿದ. ಅದು ತಲೆಯನ್ನು ಮೇಲಕ್ಕೂ ಕೆಳಕ್ಕೂ ಆಡಿಸಿತು.
ಓತಿ ಓತಿ ಬಂಡೆ ಮೇಲೆ ಕೂತಿ
ಯಾಕಾಡಿಸ್ತೀ ಹಾಗೆ ಮೂತಿ?
ಹಿಂದೇನು ಮಾಡಿದ್ದೆ ತಪ್ಪು?
ಒಪ್ಕೋತಿದ್ದಿ ಇದು ಒಪ್ಪು!

ಹೀಗೆನ್ನುತ್ತಾ ಸರ್ರನೆ ಅದರ ಬಳಿಗೆ ಓಡಿದ. ಅದೂ ಬಹಳ ವೇಗವಾಗಿ ಪೇರಿ ಕಿತ್ತಿತು! ಚಿಂಟು ಅದರ ಬೆನ್ನು ಹತ್ತಿದ. ಅದು ಮುಂದಕ್ಕೆ ಜೋರಾಗಿ ಓಡೋದು, ಇವನು ಮತ್ತೂ ಜೋರಾಗಿ ಹಿಂಬಾಲಿಸೋದು... ಒಂದು ಕಡೆ ನೋಡ್ತಾನೆ, ಅರೆ, ಇದೇನಿದು? ಯಾರೋ ಹುಡುಗ ತಂತೀ ಬೇಲೀಲಿ ಸಿಕ್ಕಿಹಾಕಿಕೊಂಡಿದಾನೆ. ‘ಅಮ್ಮಾ ಅಮ್ಮಾ’ ಅಂತ ಅವನು ನೋವಿನಿಂದ ನರಳುತ್ತಿದಾನೆ. ಹತ್ತಿರಕ್ಕೆ ಹೋದ. ಎರಡು ತಂತಿಗಳು ಅವನನ್ನು ಹಿಡಿದುಕೊಂಡಿವೆ. ಆ ಹುಡುಗ ಕೇಳಿಕೊಂಡ:

ಪುಟ್ಟಾ ಪುಟ್ಟಾ ಕಾಪಾಡೊ ನನ್ನ
ನನ್ನ ಲೋಕಕ್ಕೆ ಒಯ್ತೀನಿ ನಿನ್ನ
ಬೇಕಾದ್ದು ಕೊಡ್ತೀನೋ ಚಿನ್ನ
ದಮ್ಮಯ್ಯ ಬಿಡಿಸೋ ತಂತೀನ.

ಚಿಂಟು ಕೂಡಲೆ ಚುರುಕಾದ. ಅತ್ತಿತ್ತ ನೋಡಿದ. ಒಂದು ಒಣಮರದಿಂದ ದೊಡ್ಡ ಕೋಲನ್ನು ಲಟಕ್ಕನೆ ಮುರಿದು ತಂದ. ಓಡಿಹೋಗಿ ಕೆಳಗಿನ ತಂತಿಯನ್ನು ಕಾಲಿನಿಂದ ಒತ್ತಿಕೊಂಡ. ಉದ್ದ ಕೋಲಿನಿಂದ ಮೇಲಿನ ತಂತಿಯನ್ನು ಮೀಟಿದ. ಆ ಹುಡುಗ ‘ಬದುಕಿದೆಯಾ ಬಡ ಜೀವವೇ’ ಅಂದುಕೊಳ್ಳುತ್ತ ಚಂಗನೆ ನೆಗೆದು ತಪ್ಪಿಸಿಕೊಂಡ. ಖುಷಿಯಿಂದ ನಗುತ್ತ ಬಂದ. ಚಿಂಟು ಕೈ ಕುಲುಕಿದ. ‘ಬಾ ಹೋಗೋಣ’ ಎನ್ನುತ್ತ ಅವನನ್ನು ಭುಜದ ಮೇಲೆ ಕೂರಿಸಿಕೊಂಡ. ನಿಂತಲ್ಲೇ ಮೂರು ಬಾರಿ ತಿರುಗಿದ.

‘ಧ್ರಾಂ ಧ್ರಾಂ ಧ್ರಾಂ’ ಎಂದು ಮೂರು ಬಾರಿ ಮಂತ್ರ ಜಪಿಸಿದ. ಕೂಡಲೆ ಇಬ್ಬರೂ ಆಕಾಶಕ್ಕೆ ಹಾರಿದರು. ಹಾರುತ್ತಲೇ ಆ ಹುಡುಗ ಚಿಂಟೂನ ಹೆಸರು, ಊರು, ಮನೆಗಳ ಬಗ್ಗೆ ತಿಳಿದುಕೊಂಡ. ಚಿಂಟೂನು ವಿಚಾರಿಸಿದ:

‘ನೀನು ಯಾರು? ಎಲ್ಲಿಂದ ಬಂದೆ? ನಿನ್ನ ಅಪ್ಪ ಅಮ್ಮ ಯಾರು? ಈಗ ಹೇಳಿದ ಹಾಗೆ ಮಂತ್ರ ಹೇಳಿ ಯಾಕೆ ತಂತಿಯಿಂದ ಬಿಡಿಸಿಕೊಳ್ಳಲಿಲ್ಲ?’

ಯಕ್ಷಲೋಕದ ಬಾಲಕ ನಾನು
ಭೂಮಿಯ ನೋಡಲು ಬಂದವನು
ಪ್ರಾಣಿಯ ಬಲೆಯಲಿ ಸಿಲುಕಿದೆನಲ್ಲ
ಮಂತ್ರವ ಜಪಿಸಲು ಆಗಲೆ ಇಲ್ಲ

ತಾನು ಮೂರು ಬಾರಿ ತಿರುಗಿ ಮಂತ್ರ ಹೇಳಬೇಕಾಗಿತ್ತು. ಆದರೆ ತಂತಿಗಳ ನಡುವೆ ಸಿಕ್ಕಿ ಬಿದ್ದುಬಿಟ್ಟಿದ್ದನಾಗಿ ಅದು ಸಾಧ್ಯವಾಗಿರಲಿಲ್ಲ. ಚಿಂಟು ಬಿಡಿಸಿದ್ದರಿಂದ ಆ ಪುಟ್ಟ ಯಕ್ಷ ಬಚಾವಾಗಿದ್ದ!

ಅದೊಂದು ಸುಂದರವಾದ ಬೆಟ್ಟ. ಒಂದು ಗುಹೆಯ ಮುಂದೆ ಆ ಯಕ್ಷ ಬಾಲಕ ಇಳಿಸಿದ. ಗುಹೆಯ ಬಾಯಿಗೆ ಒಂದು ದೊಡ್ಡ ಬಂಡೆ ಮುಚ್ಚಿತ್ತು. ಅದನ್ನು ನೋಡಿದ ಕೂಡಲೆ ಚಿಂಟೂಗೆ ಅಜ್ಜಿ ಹೇಳಿದ್ದ ಕತೆಯ ನೆನಪಾಯಿತು. ಅದರಲ್ಲಿ ಅಲೀಬಾಬ ಇಂಥ ಬಂಡೆ ಮುಂದೆ ನಿಂತು
‘ಬಾಗಿಲು ತೆಗೆಯೇ ಸೇಸಮ್ಮ’ ಅಂದ ಕೂಡಲೆ ಇದು ತೆರೆದುಕೊಳ್ಳುತ್ತದೆ. ಈಗ ಈ ಬಾಲಕ ಹೇಳಿದ ಮಂತ್ರ ಬೇರೆಯೇ ಆಗಿತ್ತು:

‘ಧ್ರೀಂ ಧ್ರೀಂ ಧ್ರೀಂ’. ಥಟ್ಟನೆ ಆ ಬಂಡೆ ಪಕ್ಕಕ್ಕೆ ಸರಿಯಿತು. ಇಬ್ಬರೂ ಒಳಕ್ಕೆ ಹೋದರು. ಚಿಂಟು ನೋಡ್ತಾನೆ, ಅಬ್ಬಬ್ಬ; ಎಂಥ ದೈತ್ಯ? ಯಕ್ಷ ಬಾಲಕ ಹೇಳಿದ:

ಸಾಲು ಸಾಲಿನಲಿ ಜೋಡಿಸಿವೆ ಸ್ವೀಟು
ಕಂಡೂ ಕೇಳದ ಬಗೆಬಗೆ ಚಾಕೊಲೇಟು
ಬೆಣ್ಣೆಯ ತುಪ್ಪದ ಜೇನಿನ ಬಿಸ್ಕತ್ತು
ಮೆದ್ದರೆ ಕೂತು ತಿಳಿವುದು ಗಮ್ಮತ್ತು!

‘ಬಾ ಚಿಂಟೂ ಮೆಲ್ಲೋಣ’. ಕರೆದ ಕೂಡಲೆ ಖುಷಿಯಾಗಿ ನುಗ್ಗಿದ ಚಿಂಟು. ಇಬ್ಬರೂ ಬೇಕು ಬೇಕಾದ್ದನ್ನೆಲ್ಲ ಸ್ವಲ್ಪ ಸ್ವಲ್ಪ ಸವಿದರು. ಚೆನ್ನಾಗಿದ್ದದ್ದನ್ನೆಲ್ಲ ಸ್ವಲ್ಪ ಹೆಚ್ಚಾಗಿಯೇ ‘ಗುಳುಂ’ ಮಾಡಿದರು. ಅಲ್ಲಿ ಇಲ್ಲಿ ಓಡಾಡಿ ಅಲ್ಲಿನ ಸೊಗಸನ್ನೆಲ್ಲ ನೋಡಿ ಚಿಂಟು ಕಣ್ತಂಬಿಕೊಂಡ; ಖುಷಿ ಪಟ್ಟ. ಆ ಲೋಕವೇ ಹಾಗೆ; ಮಾಯಾಲೋಕ. ಇಬ್ಬರೂ ಗುಹೆಯಿಂದ ಹೊರಬಂದರು. ಆ ಯಕ್ಷಕುಮಾರ ಮತ್ತೆ ಚಿಂಟೂನನ್ನು ಭುಜದ ಮೇಲೆ ಕೂರಿಸಿಕೊಂಡ. ಮೂರು ಬಾರಿ ತಿರುಗಿ ಕಣ್ಣುಚ್ಚಿ ಮಂತ್ರ ಜಪಿಸಿದ.

‘ಧ್ರೂಂ ಧ್ರೂಂ ಧ್ರೂಂ’
ಕೂಡಲೆ ಆ ಬಂಡೆ ಬಾಗಿಲು ಸರಿದು ಮುಚ್ಚಿಕೊಂಡಿತು! ಯಕ್ಷ ಬಾಲಕ ಮೇಲಕ್ಕೆ ನೆಗೆದ. ಅವರು ಹಾರಿದ್ದ ಜಾಗಕ್ಕೇ ಬಂದ ಮೇಲೆ ಚಿಂಟೂನನ್ನು ಮೆಲ್ಲಗೆ ಕೆಳಗಿಳಿಸಿದ. ನಗುನಗುತ್ತಲೇ ಚಿಂಟೂನ ಕೈ ಕುಲುಕಿದ. ‘ಬೈ ಬೈ’ ಹೇಳುತ್ತ ಮೇಲಕ್ಕೆ ಮಂತ್ರ ಹೇಳಿ ಹಾರಿದ. ಹಾರುತ್ತ ಹಾರುತ್ತ ಮಾಯವಾದ!

ಬಂಡೆ ಮೇಲೆ ಕೂತಿದ್ದ ಚಿಂಟು ತಲೆ ಕೊಡವಿಕೊಂಡ. ಕಲ್ಪನಾ ಲೋಕದಿಂದ ಹೊರಬಂದ. ಅಹ! ಇದು ಕಲ್ಪನೆಯಾದರೇನಂತೆ? ಎಷ್ಟು ಚೆಂದಿತ್ತು ಅಲ್ವೇ? ಅಜ್ಜ ಅಜ್ಜೀರು ಹೇಳೋ ಕತೆಗಳನ್ನು ಕೇಳ್ತಾ ಇದ್ದರೆ ನಿಮಗೂ ಇಂಥ ಕಲ್ಪನೆಗಳು ತಪ್ಪದೆ ಬರ್ತವೆ... ಅವರಿಂದ ಕತೆ ಹೇಳಿಸಿಕೊಂಡು ನೀವೂ ಕೇಳ್ತೀರಲ್ಲ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.