ಕನ್ನಡ ಭಾಷೆ–ಸಾಹಿತ್ಯವನ್ನು ಬಲಪಡಿಸಲು, ಹೊಸದಿಕ್ಕಿನಲ್ಲಿ ಚಿಂತಿಸಲು ಸೋದರ ಭಾಷೆಗಳಾದ ತಮಿಳು, ತೆಲುಗು, ಮಲಯಾಳಂ, ತುಳು, ಕೊಡವ ಮುಂತಾದ ದ್ರಾವಿಡ ಭಾಷೆಗಳ ನೆರವನ್ನು ಏಕೆ ಪಡೆಯಬಾರದು? ಒಂದೊಮ್ಮೆ ಕನ್ನಡಕ್ಕೆ ಹೊಸ ಮಗ್ಗುಲನ್ನು ಜೋಡಿಸಿ, ಹೊಸಹಾದಿಯಲ್ಲಿ ಸಾಗುವಂತೆ ಮಾಡಿದ ಬಂಗಾಳಿ, ಮರಾಠಿ ಭಾಷಾ ಸಾಹಿತ್ಯಗಳ ಪ್ರಯತ್ನ ಇದೀಗ ಇತಿಹಾಸ. ಕನ್ನಡದ ಜೊತೆಗೆ ಭಾಷಿಕ, ಸಾಹಿತ್ಯಕ ಸಾಹಚರ್ಯವನ್ನು ಹೊಂದಿರುವ, ಕಳ್ಳುಬಳ್ಳಿಯ ನಂಟನ್ನು ಹೊಂದಿರುವ ದ್ರಾವಿಡ ಭಾಷೆಗಳಿಂದ ನಾವೆಷ್ಟು ನೆರವನ್ನು ಪಡೆದಿದ್ದೇವೆ? ಏಕೆ ಪಡೆದಿಲ್ಲ?

ಕಿಟೆಲರು ಬಹಳ ಹಿಂದೆಯೇ ಕನ್ನಡದ ಮೇಲೆ ಸಂಸ್ಕೃತದ ಯಜಮಾನಿಕೆಯನ್ನು ನಿರಾಕರಿಸುವ ದನಿಯನ್ನು ಎತ್ತಿದ್ದರು. ಕನ್ನಡದ ಬಂಧುನುಡಿಗಳ ನಂಟನ್ನು ಕುರಿತು ಎಲ್ಲಿಸ್, ಕಾಲ್ಡ್ವೆಲ್, ವೈಗಲ್, ಟಿ. ಬರೊ, ಎಮಿನೊ ಮುಂತಾದವರು ಚರ್ಚಿಸಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿ ದ್ರಾವಿಡ ಭಾಷೆಗಳ ಸಾಹಿತ್ಯದ ಕೊಳುಕೊಡೆಯನ್ನು ಕುರಿತು ಅನುವಾದ ಯೋಜನೆಯನ್ನು ಯಶಸ್ವಿಯಾಗಿ ನಿರ್ವಹಿಸಿತು. ಇಷ್ಟಾಗಿಯೂ ಕನ್ನಡಿಗರಿಗೆ ಇಂಗ್ಲಿಷ್, ಸಂಸ್ಕೃತಗಳೇ ಹೆಚ್ಚು ಹತ್ತಿರವಾದುವೇ ಹೊರತು ಪಕ್ಕದ ತುಳು, ಮಲಯಾಳಂ, ತೆಲುಗು ಆಗಲಿಲ್ಲ. ಕನ್ನಡದ ಕಾವ್ಯಮೀಮಾಂಸೆಯನ್ನು, ಸಾಹಿತ್ಯ ಮೀಮಾಂಸೆಯನ್ನು ರೂಪಿಸುವಲ್ಲಿ ನಾವು ಸಂಸ್ಕೃತ ಮೀಮಾಂಸಾ ವಿಧಾನವನ್ನೇ ಅನುಸರಿಸಿದೆವು.

ವ್ಯಾಕರಣ ಅಧ್ಯಯನದ ಸಂದರ್ಭದಲ್ಲಿ ‘ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ’ ಎನ್ನುವ ಡಿ.ಎನ್. ಶಂಕರಭಟ್ಟರ ಆಲೋಚನೆಯನ್ನು ಹಲವರು ಒಪ್ಪಿಕೊಂಡರೂ ಶೈಕ್ಷಣಿಕ ವಲಯದಲ್ಲಿ ಅದಕ್ಕೆ ಇನ್ನೂ ಪ್ರವೇಶ ಸಿಕ್ಕಿಲ್ಲ. ನಮ್ಮ ಪಕ್ಕದ ತುಳು ಭಾಷೆಯ ಸಮೃದ್ಧ ಕಾವ್ಯಗಳಾಗಲಿ, ಅಲ್ಲಿನ ಮಾರ್ಗಕಾವ್ಯಗಳ ಅನನ್ಯತೆಯಾಗಲೀ ತಿಳಿದೇ ಇಲ್ಲ. ಕನ್ನಡ ಸಾಹಿತ್ಯ ಚರಿತ್ರೆಯನ್ನು, ಕವಿಗಳ ಕಾಲದೇಶಗಳನ್ನು ನಮ್ಮ ಜನಪದ ರಂಗಕಲೆಗಳ, ಆರಾಧನಾ ರಂಗಕಲೆಗಳ ನಿಜಸ್ವರೂಪವನ್ನು ತಿಳಿಯಲು ಸೋದರ ಭಾಷೆಗಳ ನೆರವನ್ನು ಪಡೆಯಲು ನಾವು ಸೋತಿದ್ದೇವೆ. ಸಂಸ್ಕೃತ ಸಾಹಿತ್ಯ ಕೃತಿಗಳು ರೂಪಿಸುವ ಏಕಾಕೃತಿಯ ರಚನಾ ವಿನ್ಯಾಸಗಳನ್ನು ತಲೆಯಲ್ಲಿ ತುಂಬಿಕೊಂಡಿರುವ ನಾವು ಕರಾವಳಿಯ ತುಳುವ ಸಮಾಜದ ಮಾತೃಮೂಲೀಯ ಕುಟುಂಬ ವ್ಯವಸ್ಥೆ ರೂಪಿಸಿದ ಕಾವ್ಯಗಳ ಬಗೆಗಾಗಲೀ, ಅಲ್ಲಿನ ವಿಭಿನ್ನ ಜೀವನ ವಿಧಾನಗಳಾಗಲೀ ನಮಗೆ ಅಪರಿಚಿತವಾಗಿಯೇ ಉಳಿದಿವೆ.

ತಮಿಳು, ತೆಲುಗು, ಮಲಯಾಳಂ, ಭಾಷೆಗಳು ರೂಪಿಸಿದ ಮಹಾಕಾವ್ಯ (ಮೌಖಿಕ ಇಲ್ಲವೇ ಲಿಖಿತ)ಗಳನ್ನು ನಾವೆಷ್ಟು ಓದಿದ್ದೇವೆ? ಕೇರಳದ ಬ್ಯಾರಿ ಸಮುದಾಯದ ನಡುವೆ ಇರುವ ರಾಮಾಯಣದ ಬಗೆಗೆ ನಮಗೆಷ್ಟು ಗೊತ್ತು? ತಮಿಳಿನ ‘ವಿಲ್ಲುಪಾಟ್ಟು’ಗಳಿಗೂ ತುಳುನಾಡಿನ ಕೋಟಿಚೆನ್ನಯರ ಪಾಡ್ದನಗಳಿಗೂ ಇರುವ ಸಾಂಸ್ಕೃತಿಕ ಸಂಬಂಧಗಳು ಇನ್ನೂ ಅಪರಿಚಿತವಾಗಿಯೇ ಉಳಿದಿವೆ. ಕೊಡವ ಭಾಷೆಯಲ್ಲಿ ದೊರೆಯುವ ಪಣಿಯರವರ ಕಾವ್ಯಗಳಿಗೆ ಕನ್ನಡದ ‘ಹಾಲುಮತ ಕಾವ್ಯ’ದ ಸೃಷ್ಟಿ ಪುರಾಣಕ್ಕೂ ಇರುವ ಸಂಬಂಧಗಳ ಬಗೆಗೆ ವಿವೇಚನೆ ನಡೆದಿದೆಯೇ? (ಪಾಶ್ಚಾತ್ಯ ಕಾವ್ಯಗಳಾದ ಇಲಿಯಡ್, ಒಡಿಸ್ಸಿ, ಗಿಲ್ಗಾಮಿಷ್ನ ತುಲನೆ ಕನ್ನಡದಲ್ಲಿ ನಡೆದಿದೆ).

ಕರ್ನಾಟಕದ ಸ್ವಾತಂತ್ರ್ಯ ಹೋರಾಟವನ್ನು ಹೇಳುವ ಸಂಗೊಳ್ಳಿ ರಾಯಣ್ಣ, ಕಿತ್ತೂರ ಚೆನ್ನಮ್ಮನ ಲಾವಣಿಗಳು ಕನ್ನಡದಿಂದ ಹೊರಕ್ಕೆ ಹೋಗಿವೆಯೇ? ಇಲ್ಲ. ಕೇರಳದ ದಲಿತ ಸಮುದಾಯದ ನಡುವೆ ಇರುವ ಸರ್ಪಾರಾಧನೆಯನ್ನು ಕುರಿತ ‘ಸರ್ಪಂಕಳಿ’, ‘ಸರ್ಪಂತುಳ್ಳಲ್’ಗಳ ವಿವರ ಕನ್ನಡಿಗರಿಗೆ ಎಷ್ಟು ಗೊತ್ತು? ಕನ್ನಡ ಕರಾವಳಿಯ ಮೇದರ ಕಾಳಿಂಗ ಸರ್ಪಾರಾಧನೆ ‘ಕಾಡ್ಯನಾಟ’ದ ವಿವರಗಳು ದೊರೆತಾಗ ಅನೇಕ ಮಡಿಮನಸ್ಸುಗಳು ಸರ್ಪಾರಾಧನೆ ದಲಿತರ ನಡುವೆ ಹೇಗೆ ಇರಲು ಸಾಧ್ಯ ಎಂದು ಹುಬ್ಬೇರಿಸಿದುದು ಪಕ್ಕದ ಸಂಸ್ಕೃತಿಯ ಅರಿವು ಇಲ್ಲದುದರ ಫಲ.

ತಮಿಳುನಾಡಿನ ತೆರುಕ್ಕೂತ್ತು ಹಾಗೂ ಕನ್ನಡದ ಯಕ್ಷಗಾನಗಳು ದ್ರಾವಿಡದ ಕವಲುಗಳು ಎನ್ನುವುದನ್ನು ತಿಳಿಯಬೇಕಾಗಿದೆ. ಕರಾವಳಿಯ ಭೂತಾರಾಧನೆಗೂ ಕೇರಳದ ತೆಯ್ಯಂಗೂ ಇರುವ ನಂಟು ಭಾಷೆಯ ಗಡಿಯನ್ನು ದಾಟಿ ಹೊರಬಂದಿಲ್ಲ. ದ್ರಾವಿಡ ಭೂಪ್ರದೇಶದ ಅನೇಕ ಸಾಂಸ್ಕೃತಿಕ ಪಠ್ಯಗಳು ಅಕ್ಷರ ರೂಪಕ್ಕಿಳಿದು ವಿನಿಮಯಗೊಳ್ಳಬೇಕು. ದೃಶ್ಯರೂಪದಲ್ಲಿ ಭಾಷೆಯ ಗಡಿದಾಟಿ ಹೊರನೆಗೆಯಬೇಕು. ಮಾರ್ಗ ಸಂಸ್ಕೃತಿಯ ಆದಾನ ಪ್ರದಾನದ ಜೊತೆಗೆ ಮೌಖಿಕ ಸಂಸ್ಕೃತಿ, ಭಾಷಿಕ ಅಭಿವ್ಯಕ್ತಿಗಳು ಎಲ್ಲೆ ದಾಟಿ ಹರಿದಾಡಬೇಕು. ನಮ್ಮ ಅಕಾಡೆಮಿಗಳು, ವಿಶ್ವವಿದ್ಯಾಲಯಗಳು ಈ ಬಗೆಯ ಸಾಂಸ್ಕೃತಿಕ ಉಲ್ಲಂಘನ ಕ್ರಿಯೆಗೆ ತೊಡಗಿದಾಗ ನಮ್ಮ ನೆಲದ ‘ಸಾಂಸ್ಕೃತಿಕ ಬಹುತ್ವ’ದ ನಿಜದ ಅರಿವು ಲಭ್ಯವಾಗಲು ಸಾಧ್ಯ.

ಬದಲಾದ ಸಾಮಾಜಿಕ ಸಂದರ್ಭದಲ್ಲಿ ಭಾಷೆ ಎನ್ನುವುದು ಬರಿಯ ಸಂವಹನ ಮಾಧ್ಯಮವಾಗಿ ಉಳಿದಿಲ್ಲ. ಅದು ಪರಸ್ಪರ ಸಾಂಸ್ಕೃತಿಕ ಸಂಬಂಧವನ್ನು ಬೆಸೆಯುವ ಅರಿವಿನ ವಿಸ್ತಾರವೂ ಹೌದು. ಹಾಗೆಯೇ ನಮ್ಮ ಮುಂದಿರುವ ನೆಲ, ಜಲ, ನುಡಿಗಳಂತಹ ಸವಾಲುಗಳನ್ನು, ಬಿಕ್ಕಟ್ಟುಗಳನ್ನು ಮೀರಿ ಜನ ಬದುಕನ್ನು ಕಟ್ಟುವ ದಾರಿಯಾಗಿಯೂ, ಸೋದರಭಾಷೆಗಳನ್ನು ದುಡಿಸಿಕೊಳ್ಳಬೇಕಾಗಿದೆ. ಅದಕ್ಕೆಂದೇ ನಾನು ಹೇಳಿದ್ದು ‘ದ್ರಾವಿಡದ ಬೇರು ನೀರುಂಡೊಡೆ ತಣಿಯದೆ ಕನ್ನಡದ ಶಾಖೋಪ ಶಾಖೆಗಳು’ ಎಂದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.