ಕನ್ನಡಕ್ಕೆ ಸೇರಿದ ನಮ್ಮದೇ ಪದವೆಂದು ಅನೇಕರು ತಿಳಿದಿರಬಹುದಾದ ಹಲವಾರು ಶಬ್ದಗಳು ಬೇರೆ ಭಾಷೆಯಿಂದ ಬಂದವೆಂಬುದನ್ನು ಅರಿತರೆ ಆಶ್ಚರ್ಯವಾದೀತು. ನಮ್ಮ ನಿತ್ಯ ಬಳಕೆಯ ‘ತರಕಾರಿ’ ಪದ ಪರ್ಶಿಯನ್ ಭಾಷೆಯಿಂದಲೂ, ‘ಉಮೇದುವಾರ’, ‘ಅರ್ಜಿ’ ಪದಗಳು ಅರೇಬಿಕ್ ಭಾಷೆಯಿಂದಲೂ ಕನ್ನಡಕ್ಕೆ ಬಂದವು. ನೋಂದಣಿ, ದಾಖಲೆ, ನಕಲು, ನೌಕರ, ಚಂದಾ- ಪದಗಳು ಪರ್ಶಿಯನ್‌ನಿಂದ ಬಂದರೆ, ಸಾದಿಲ್‌ವಾರ್, ವಕಾಲತ್, ಹಕ್ಕು, ಹವಾ, ಹವ್ಯಾಸಗಳೆಲ್ಲಾ ಅರೇಬಿಕ್ ಪದಗಳು.

ಕನ್ನಡಕ್ಕೆ ಸೇರಿದ ನಮ್ಮದೇ ಪದವೆಂದು ಅನೇಕರು ತಿಳಿದಿರಬಹುದಾದ ಹಲವಾರು ಶಬ್ದಗಳು ಬೇರೆ ಭಾಷೆಯಿಂದ ಬಂದವೆಂಬುದನ್ನು ಅರಿತರೆ ಆಶ್ಚರ್ಯವಾದೀತು. ನಮ್ಮ ನಿತ್ಯ ಬಳಕೆಯ ‘ತರಕಾರಿ’ ಪದ ಪರ್ಶಿಯನ್ ಭಾಷೆಯಿಂದಲೂ, ‘ಉಮೇದುವಾರ’, ‘ಅರ್ಜಿ’ ಪದಗಳು ಅರೇಬಿಕ್ ಭಾಷೆಯಿಂದಲೂ ಕನ್ನಡಕ್ಕೆ ಬಂದವು. ನೋಂದಣಿ, ದಾಖಲೆ, ನಕಲು, ನೌಕರ, ಚಂದಾ- ಪದಗಳು ಪರ್ಶಿಯನ್‌ನಿಂದ ಬಂದರೆ, ಸಾದಿಲ್‌ವಾರ್, ವಕಾಲತ್, ಹಕ್ಕು, ಹವಾ, ಹವ್ಯಾಸಗಳೆಲ್ಲಾ ಅರೇಬಿಕ್ ಪದಗಳು. ಕನ್ನಡದಲ್ಲಿ ನಿತ್ಯ ಬಳಕೆಯಲ್ಲಿರುವ ಇಂತಹ ಸುಮಾರು ಎರಡು ಸಾವಿರಕ್ಕೂ ಅಧಿಕ ಪರ್ಶಿಯನ್, ಅರೇಬಿಕ್ ಪದಗಳನ್ನು ಒಂದೆಡೆ ಸೇರಿಸಿದ ‘ಅರಬ್ಬಿ- ಪಾರ್ಸಿ ಕನ್ನಡ ಶಬ್ದಕೋಶ’ವೊಂದನ್ನು ಹಿರಿಯ ವಿದ್ವಾಂಸ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿಯವರು ಪ್ರಕಟಿಸಿದ್ದಾರೆ.

ಟೋಫಿ (ಪಾರ್ಸಿ)- ಟೊಪ್ಪಿಗೆ; ಟಂಟಾ, ತಂಟೆ (ಪಾ) – ತಂಟೆ, ಜಗಳ; ಝೆಂಡಾ (ಪಾ)- ಬಾವುಟ, ನಿಶಾನಿ; ಫನ್ನಾ (ಪಾ) – ಬಟ್ಟೆಯ ಅಗಲ, ಅಗಲಳತೆ; ಪಟ್ಟಾ, ಪಟ್ಟೆ (ಪಾ)- ಅಧಿಕಾರ ಪತ್ರ (ಭೂಮಿ); ಪರವಾ, ಪರ್ವಾ (ಪಾ) – ಚಿಂತೆ; ಗೊಡವೆ–ಅರಿವು (ಪರವಾಗಿಲ್ಲ); ಮರ್ಜಿ (ಅರಬ್ಬಿ)–ಇಷ್ಟ, ದಯೆ; ಮಹಜರ್ (ಅ)–ಮಹಜರು, ಪಂಚನಾಮೆ; ಹಮಾಲ (ಅ) – ಕೂಲಿ, ನೌಕರ; ಹುಂಡಿ (ಅ)- ಹುಂಡಿ ಮೊದಲಾದವು ಈ ಶಬ್ದಕೋಶದ ಕೆಲವು ಉದಾಹರಣೆಗಳಷ್ಟೆ.

ಕನ್ನಡದಲ್ಲಿ ಈಚೆಗೆ ಭಾಷಾ ಸಂಬಂಧಿತ ಹಲವು ನೂತನ ನಿಘಂಟುಗಳು ಪ್ರಕಟವಾಗಿವೆ. ಪ್ರೊ. ಎಂ. ಮರಿಯಪ್ಪ ಭಟ್ಟರ ಪರಿಷ್ಕೃತ ಕಿಟೆಲ್ ನಿಘಂಟು ಸಂಪುಟಗಳ ಬಳಿಕ ಈಚೆಗೆ ದ್ರಾವಿಡ ಭಾಷಾ ಜ್ಞಾತಿ ಪದಕೋಶ (ಪ್ರಧಾನ ಸಂಪಾದಕ- ಪ್ರೊ. ಹಂಪನಾ), ಪ್ರಾಕೃತ- ಕನ್ನಡ ಬೃಹತ್ ನಿಘಂಟು (ಕನ್ನಡಕ್ಕೆ ಡಾ. ಆರ್. ಲಕ್ಷ್ಮೀನಾರಾಯಣ) ಮುಂತಾದವು ಅವುಗಳಲ್ಲಿ ಕೆಲವು. ಪಂಡಿತ ಸೇಡಿಯಾಪು ಕೃಷ್ಣಭಟ್ಟ, ಶಿವರಾಮ ಕಾರಂತ, ಜಿ. ವೆಂಕಟಸುಬ್ಬಯ್ಯ, ಪಂಡಿತ ಕವಲಿ, ಪ್ರೊ. ಎಲ್.ಎಸ್. ಶೇಷಗಿರಿರಾವ್ ಹೀಗೆ ನಾವು ಹಲವು ಹಿರಿಯರ ನಿಘಂಟುಗಳನ್ನೂ ಹೆಸರಿಸಬಹುದು.

ಅವುಗಳೊಡನೆ ಔದ್ಯೋಗಿಕ, ಆಡಳಿತಾತ್ಮಕ, ಪ್ರಾದೇಶಿಕ (ಕುಂದಾಪುರ ಕನ್ನಡ, ಇತ್ಯಾದಿ), ಸಾಹಿತ್ಯಿಕ (ಪಂಪ, ಕುಮಾರವ್ಯಾಸ ಇತ್ಯಾದಿ ನಿಘಂಟುಗಳು), ಭಾಷಾವಾರು (ಕನ್ನಡ, ಸಂಸ್ಕೃತ, ಹಿಂದಿ, ಇಂಗ್ಲಿಷ್, ಮರಾಠಿ, ಉರ್ದು ಇತ್ಯಾದಿ), ಜಾನಪದ (ಬಾಲಕೃಷ್ಣ ಜಂಬಲಗಿ ಅವರ ‘ನುಡಿ ಜಾನಪದ’ ಇತ್ಯಾದಿ), ಕಲೆ (ಡಾ. ಎಂ. ಪ್ರಭಾಕರ ಜೋಶಿಯವರ ಯಕ್ಷಗಾನ ನಿಘಂಟು) ಇತ್ಯಾದಿ ಶಬ್ದಕೋಶಗಳೂ ಕನ್ನಡದಲ್ಲಿವೆ. ಈ ಸಾಲಿಗೆ ಇದೀಗ ಹೊಸದಾಗಿ ಅರಬ್ಬಿ- ಪಾರ್ಸಿ- ಕನ್ನಡ ಶಬ್ದಕೋಶವೂ ಸೇರಿದೆ.

ಸಾಮಾನ್ಯವಾಗಿ ಸಂಸ್ಕೃತ ಅಥವಾ ಇತರ ಕೆಲವು ಭಾರತೀಯ ಭಾಷಾ ಮೂಲಗಳಿಂದ ಬಂದ ಪದಗಳನ್ನು ನಿಘಂಟುಗಳಲ್ಲಿ ಸೂಚಿಸುವ ಕ್ರಮವಿದೆ. ಆದರೆ ವಿದೇಶೀ ಮೂಲದ ಶಬ್ದಗಳನ್ನು ಹಾಗೆ ಸೂಚಿಸುವ ಪರಿಪಾಠ ನಮ್ಮಲ್ಲಿ ಅಷ್ಟಾಗಿ ಬೆಳೆದುಬಂದಿಲ್ಲ. ಕೆಲವು ನಿಘಂಟುಗಳಲ್ಲಿ ಮಾತ್ರ(ಉದಾ:ಪಂಡಿತ್ ಕವಲಿಯವರ ಕಸ್ತೂರೀ ಕೋಶ) ಅನ್ಯದೇಶೀಯ ಎಂದು ಗುರುತಿಸುತ್ತಾರೆ. ಜಿ. ವೆಂಕಟಸುಬ್ಬಯ್ಯನವರ ‘ಎರವಲು ಪದಕೋಶ’, ಪಾ.ವೆಂ. ಆಚಾರ್ಯರ ‘ಪದಾರ್ಥ ಚಿಂತಾಮಣಿ’ ಮುಂತಾದ ಕೃತಿಗಳಲ್ಲಿ, ಮಂಜೇಶ್ವರ ಗೋವಿಂದ ಪೈಗಳ ಸಂಶೋಧನಾ ಬರಹಗಳಲ್ಲಿ ಪೋರ್ಚುಗೀಸ್, ಗ್ರೀಕ್ ಮೊದಲಾದ ಭಾಷೆಗಳಿಂದ ಕನ್ನಡಕ್ಕೆ ಬಂದ, ಕನ್ನಡದಿಂದ ಬೇರೆ ಭಾಷೆಗಳಿಗೆ ಹೋಗಿರಬಹುದಾದ ಹಲವು ಪದಗಳ ಮೂಲ ತಿಳಿಯುತ್ತದೆ.

ಡಾ. ಕೆ. ಶಂಕರ ಕೆದಿಲಾಯರು ಕನ್ನಡಕ್ಕೆ ಎರವಲು ಬಂದು ಇಲ್ಲೇ ಉಳಿದ ಅರೇಬಿಕ್ ಮತ್ತು ಪರ್ಶಿಯನ್ ಪದಗಳ ಸಂಶೋಧನಾ ಅಧ್ಯಯನ ಮಾಡಿದ್ದಾರೆ. ಆಡಳಿತದಲ್ಲಿ ಉಪಯೋಗಿಸುವ ವಿದೇಶೀ ಪದಗಳಿಗೆ (ಪರ್ಶಿಯನ್, ಅರೇಬಿಕ್ ಸೇರಿ) ನಿಶ್ಚಿತ ಅರ್ಥಕೊಡುವ ಗ್ಲಾಸರಿಗಳು ಚಾರಿತ್ರಿಕವಾಗಿ ಬ್ರಿಟಿಷರ ಆಡಳಿತ ಕಾಲದಿಂದಲೂ ಬೆಳೆದು ಬಂದಿವೆ. ಕಾನೂನು ಆಡಳಿತದ ಸ್ಪಷ್ಟ, ನೇರ ವಿವರಣೆಗಳಿಗೆ ಅಂತಹ ಲಘು ಶಬ್ದಕೋಶಗಳು ಬೇಕಾಗಿದ್ದವು. ಜರ್ಮನಿಯಿಂದ ಬಂದಿದ್ದ ರೆವರೆಂಡ್ ಕಿಟ್ಟೆಲ್ಲರ ಕನ್ನಡ ನಿಘಂಟು ರಚನೆಗೆ ಅಂತಹ ಆಡಳಿತಾತ್ಮಕ ಕಾರಣಗಳಿಗಾಗಿಯೇ ಬ್ರಿಟಿಷರು ಧನ ಸಹಾಯ ಮಾಡಿದರು. ಅವುಗಳಲ್ಲಿ ಮುಖ್ಯವಾಗಿ ಎಚ್.ಎಚ್. ವಿಲ್ಸನ್‌ರ (1855) ನ್ಯಾಯಾಂಗ ಮತ್ತು ಕಂದಾಯ ಇಲಾಖೆಗಳ ಗ್ಲಾಸರಿ ಮತ್ತು ಇತರ 12 ಕೃತಿಗಳನ್ನು ಡಾ. ಕುಲಕರ್ಣಿಯವರು ತಮ್ಮ ಆಕರ ಸೂಚಿಯಲ್ಲೂ ಹೆಸರಿಸುತ್ತಾರೆ.

ಅಂಚೆಯೆಂಬುದಕ್ಕೆ ನಾವು ನಿತ್ಯ ಬಳಸುವ ಟಪ್ಪಾಲು ಪದ ಪಾರ್ಸಿ ಎಂಬುದು ನೂತನ ಅರಬ್ಬಿ-ಪಾರ್ಸಿ ಶಬ್ದಕೋಶದಲ್ಲಿ ಸೂಚಿತವಾಗಿದೆ. ಈ ಮೊದಲು ಅದೇ ಪದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಕ್ಷಿಪ್ತ ನಿಘಂಟಿನಲ್ಲೂ ಸೇರಿದೆ. ಅಲ್ಲಿ ಅರ್ಥವಿವರಣೆ ಜೊತೆ ನಾಮಪದ ಎಂದು ಮಾತ್ರ ಸೂಚಿತವಾಗಿದೆ. ‘ಟಪಾಲು’ ಈಗ ಕನ್ನಡದ ಪದವೇ ಆಗಿದೆ ಎಂಬುದನ್ನದು ಸೂಚಿಸುತ್ತದೆ. ಅಂತಹ ಹಲವು ಪದಗಳ ಮೂಲ ಅರಿಯಲು ಅರಬ್ಬಿ- ಪಾರ್ಸಿ ಕನ್ನಡ ಶಬ್ದಕೋಶ ಸಹಕರಿಸುತ್ತದೆ.

ಡಾ. ಕುಲಕರ್ಣಿಯವರು ಕರ್ನಾಟಕದ ಬಹಮನಿ, ಆದಿಲ್‌ಶಾಹಿ ಆಡಳಿತಗಳ ಬಗ್ಗೆ ಅಧಿಕೃತವಾಗಿ ಹೇಳಬಲ್ಲವರು. ಕ್ರಿ. ಶ. 1347 ರಲ್ಲಿ ಕರ್ನಾಟಕದ ಕೆಲವು ಭಾಗಗಳು ಬಹಮನಿ ಆಡಳಿತಕ್ಕೆ ಸೇರಿದ ಬಳಿಕ 1948 ರವರೆಗೆ, ಅಂದರೆ ಹೈದರಾಬಾದ್ ನಿಜಾಮರ ಆಡಳಿತದಲ್ಲಿದ್ದ ಕರ್ನಾಟಕದ ಭಾಗಗಳು ಸ್ವತಂತ್ರ ಭಾರತದಲ್ಲಿ ಸೇರ್ಪಡೆ ಆಗುವವರೆಗೆ ನಮ್ಮ ರಾಜ್ಯದಲ್ಲಿ ಪರ್ಶಿಯನ್ ಭಾಷೆ ಹಲವು ಕಡೆ ರಾಜಭಾಷೆಯಾಗಿ ಆಡಳಿತದಲ್ಲಿತ್ತು.

ಸುಮಾರು 600 ವರುಷಗಳ ಕಾಲ ಬಳಕೆಯಲ್ಲಿದ್ದ ರಾಜ ಭಾಷೆಯ ಪದಗಳು ನಿತ್ಯದ ಬಳಕೆಗೆ ಸೇರುವುದು ಸಹಜ. ‘ಸರಕಾರ’ ಎಂಬುದೇ ಪರ್ಶಿಯನ್ ಪದ. ‘ರೈತ’ ‘ಜಿಲ್ಲೆ’, ‘ತಾಲೂಕು’ ಪದಗಳು ಕೂಡಾ ಕನ್ನಡ ಮೂಲದ್ದಲ್ಲ. ಇಂತಹ ಹಲವು ಪದಗಳನ್ನು ಒಬ್ಬರ ಅಧ್ಯಯನದಿಂದ ಒಟ್ಟು ಮಾಡುವುದು ಸರಳ ಕೆಲಸವಲ್ಲ. ಅಂತಹ ಅಭಿನಂದನೀಯ ಕೆಲಸವನ್ನು ಡಾ. ಕುಲಕರ್ಣಿಯವರು ಮಾಡಿದ್ದಾರೆ. ಶಬ್ದಕೋಶದ ಮುಂದಿನ ಆವೃತ್ತಿಗಳಲ್ಲಿ ಅದನ್ನು ಪರಿಷ್ಕರಿಸುವುದು ಕನ್ನಡ ವಿದ್ವತ್ ವಲಯಕ್ಕೆ ಸೇರಿದ್ದಾಗಿದೆ.

ಭಾಷೆಯೊಂದು ಹಲವು ಕಾರಣಗಳಿಂದ ಬೆಳೆಯುತ್ತದೆ. ಕನ್ನಡ ಭಾಷೆಯೊಳಗೆ ಸೇರಿರುವ ವಿದೇಶಿ ಪದಗಳು ಅಚ್ಚ ಕನ್ನಡ ಶಬ್ದಗಳಂತೆ ಪ್ರಭಾವಶಾಲಿಯಾಗಿವೆ. ಇಂಗ್ಲಿಷ್ ಭಾಷೆ ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಹಲವು ಭಾಷೆಗಳಿಂದ ನೂತನ ಪದಗಳನ್ನು ಪಡೆಯುತ್ತಲಿದೆ. ಅವುಗಳನ್ನು ವಿಧ್ಯುಕ್ತವಾಗಿ ನಿಘಂಟಿಗೆ ಸೇರಿಸುವ ಕೆಲಸವನ್ನೂ ಅಲ್ಲಿನ ವಿದ್ವಾಂಸರು ಪ್ರತಿ ವರುಷ ಮಾಡುತ್ತಾರೆ.

ವಿಜ್ಞಾನ, ತಂತ್ರಜ್ಞಾನ ಮತ್ತಿತರ ಆಧುನಿಕ ಆರ್ಥಿಕತೆಯಿಂದ ಜನಜೀವನ ಬೆಳೆದಂತೆ ಸಂಪರ್ಕಕ್ಕೆ ಬರುವ ಹೊಸ ಭಾಷೆಗಳ ಪದಗಳು ನಮ್ಮ ಭಾಷೆಯೊಳಗೆ ಸೇರುತ್ತವೆ. ಕೃಷಿಯಲ್ಲಿ ಟ್ರಾಕ್ಟರ್‌ಗಳ ಉಪಯೋಗ ಹೆಚ್ಚಾದಂತೆ ಬೇಸಾಯದ ನಿತ್ಯಬಳಕೆಯಲ್ಲಿ ಹಲವು ಪದಗಳು ವ್ಯತ್ಯಾಸಗೊಂಡವು. ಅದರ ಬಗ್ಗೆ ಮಾಡಿವಂತಿಕೆ ಇರಬೇಕಾಗಿಲ್ಲ. ಹಾಗೆಯೇ ಅರೇಬಿಕ್, ಪರ್ಶಿಯನ್, ಇಂಗ್ಲಿಷ್, ಗ್ರೀಕ್, ಪೋರ್ಚುಗೀಸ್, ಟರ್ಕಿ, ಫ್ರೆಂಚ್, ಯಾವುದೇ ಭಾಷೆಯ ಪದಗಳನ್ನಾದರೂ ಕನ್ನಡ ಅರಗಿಸಿಕೊಂಡು ತನ್ನದಾಗಿಸಿಕೊಳ್ಳಬಲ್ಲದು. ಇದು ಹೊಸದಲ್ಲ. ಈ ಶಬ್ದಕೋಶದಿಂದ ಡಾ. ಕುಲಕರ್ಣಿಯವರು ಕನ್ನಡ ಭಾಷಾ ಅಧ್ಯಯನ ಪರಂಪರೆಗೆ ಮೌಲ್ಯಯುತವಾದ ಹೊಸ ಕೊಡುಗೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.