‘ಕಾಗೆ ಕಾರುಣ್ಯದ ಕಣ್ಣು’ ಬರಗೂರು ರಾಮಚಂದ್ರಪ್ಪನವರ ‘ಆಯ್ದ ಅನುಭವಗಳ ಕಥನ’. ಈ ಕೃತಿಗೆ ಆತ್ಮಕಥನದ ಸ್ವರೂಪವೂ ಇದೆ. ಇಲ್ಲಿನ ಅನುಭವಗಳ ಮೂಲಕ ಬರಗೂರರ ಜೀವನಕ್ಕೆ ಸಂಬಂಧಿಸಿದ ಸ್ಥೂಲಚಿತ್ರವೊಂದನ್ನು ಕಂಡುಕೊಳ್ಳಬಹುದಾದರೂ, ಈ ಕೃತಿಯನ್ನು ಅವರು ಕರೆದಿರುವಂತೆ ಅನುಭವಗಳ ಕಥನ ಎಂದು ಗುರ್ತಿಸುವುದೇ ಹೆಚ್ಚು ಸರಿ. ಏಕೆಂದರೆ, ಬದುಕಿನ ಅನುಭವಗಳನ್ನು ನಿರೂಪಿಸುವಲ್ಲಿ ಲೇಖಕರ ಆತ್ಮಪ್ರಜ್ಞೆಗಿಂತಲೂ ವೈಚಾರಿಕ ನಿಷ್ಠೆಯೇ ಕೃತಿಯಲ್ಲಿ ಹೆಚ್ಚು ಕ್ರಿಯಾಶೀಲವಾಗಿದೆ. ವೈಯಕ್ತಿಕ ಬದುಕಿನ ಘಟನೆಗಳನ್ನು ವಿವರಿಸುವುದಕ್ಕಿಂತಲೂ ತಮ್ಮ ಸಾರ್ವಜನಿಕ ಜೀವನದ ನಡೆ–ನುಡಿಗಳನ್ನು ನೆನಪಿನ ಗಣಿಯಿಂದ ಹೆಕ್ಕಿ ತೆಗೆಯುವಲ್ಲಿ ವ್ಯಕ್ತವಾಗಿರುವ ಲೇಖಕರ ಆದ್ಯತೆಯೂ ಪುಸ್ತಕದ ಚೌಕಟ್ಟನ್ನು ಸ್ಪಷ್ಟಪಡಿಸುವಂತಿದೆ.

ಯಾವುದನ್ನು ಹೇಳಬೇಕು, ಎಷ್ಟು ಹೇಳಬೇಕು ಎನ್ನುವ ಔಚಿತ್ಯಪ್ರಜ್ಞೆ ಈ ಅನುಭವ ಕಥನಕ್ಕೆ ವಿಶೇಷ ಹೊಳಪು ನೀಡಿದೆ. ಓದುಗರಿಗೆ ಹೆಚ್ಚು ಆಪ್ತವಾಗಬಹುದಾದ ರಮ್ಯ ಹಾಗೂ ಭಾವುಕ ಸನ್ನಿವೇಶಗಳನ್ನು ಬರಗೂರರು ಪ್ರಜ್ಞಾಪೂರ್ವಕವಾಗಿಯೇ ನಿಯಂತ್ರಿಸಿಕೊಂಡಿದ್ದಾರೆ. ಉದಾಹರಣೆಗೆ, ಪ್ರೇಮ ಮತ್ತು ವಿವಾಹದ ಬಗ್ಗೆ ಕನಿಷ್ಠ ಮಾಹಿತಿಯಷ್ಟೇ ಕೃತಿಯಲ್ಲಿದೆ. ಆದರೆ, ಅನುದಿನದ ದಂದುಗಗಳು ತಮ್ಮ ದಾಂಪತ್ಯವನ್ನು ಹೇಗೆಲ್ಲ ಹೈರಾಣಾಗಿಸಿದವು ಎನ್ನುವುದನ್ನು ವಿವರವಾಗಿಯೇ ಬರೆದುಕೊಂಡಿದ್ದಾರೆ. ಬರಗೂರರ ಔಚಿತ್ಯಪ್ರಜ್ಞೆ ಅಥವಾ ಜೀವನ ದೃಷ್ಟಿಕೋನಕ್ಕೆ ಮತ್ತೊಂದು ನಿದರ್ಶನ, ಅವರು ತಮ್ಮ ಜೀವನದ ಮೇಲೆ ಪ್ರಭಾವ ಬೀರಿರುವವರನ್ನು ನೆನಪಿಸಿಕೊಂಡಿರುವ ರೀತಿ. ತಮಗೆ ನೆರವಾದವರನ್ನು ಕೃತಜ್ಞತಾಪೂರ್ವಕವಾಗಿ ನೆನಪಿಸಿಕೊಂಡಿರುವ ಲೇಖಕರು, ತಮಗೆ ತೊಂದರೆ ಕೊಟ್ಟವರನ್ನೂ ಮರೆತಿಲ್ಲ. ಆದರೆ, ಬೇಸರದ ಸಂಗತಿಗಳನ್ನು ದಾಖಲಿಸುವಾಗ, ಆ ಘಟನೆಗೆ ಕಾರಣರಾದ ವ್ಯಕ್ತಿಗಳ ಹೆಸರನ್ನು ಅವರು ದಾಖಲಿಸಿಲ್ಲ. ಘಟನೆ ಹಾಗೂ ಅದರ ಪರಿಣಾಮವನ್ನು ಹಂಚಿಕೊಳ್ಳುವುದು ಮುಖ್ಯವೇ ಹೊರತು, ಆ ಕಹಿಗೆ ಕಾರಣರಾದವರ ಹೆಸರನ್ನು ಹೇಳುವುದು ಮುಖ್ಯವಲ್ಲ ಎನ್ನುವ ಅವರ ನಿಲುವು ಸುಲಭದ್ದಲ್ಲ, ಎಲ್ಲರಿಗೂ ಸಾಧ್ಯವಾಗುವಂತಹದ್ದೂ ಅಲ್ಲ. ಹಾಗೆಂದು, ತಮ್ಮ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವಲ್ಲಿ ಹಾಗೂ ನಿಷ್ಠುರ ನಿರ್ಧಾರ ತೆಗೆದುಕೊಳ್ಳುವಲ್ಲಿ ಅವರು ಹಿಂಜರಿದಿಲ್ಲ ಎನ್ನುವುದಕ್ಕೆ ಕೃತಿಯುದ್ದಕ್ಕೂ ಉದಾಹರಣೆಗಳಿವೆ.

ಬರಗೂರರು ನೆಚ್ಚಿದ ರೂಪಕಗಳಲ್ಲಿ ಕಾಗೆ ಪ್ರಮುಖವಾದುದು. ಅದರ ಕಾರುಣ್ಯದ ಕಣ್ಣು ಎಲ್ಲರದೂ ಆದಾಗ, ಸಮಾಜದಲ್ಲಿನ ತರತಮಗಳನ್ನು ಅರ್ಥ ಮಾಡಿಕೊಳ್ಳುವುದು ಹಾಗೂ ಆ ಸಮಸ್ಯೆಗಳನ್ನು ಹೋಗಲಾಡಿಸುವ ಪೂರಕವಾದ ಚಿಂತನೆ ಸಾಧ್ಯವಾಗುತ್ತದೆ ಎನ್ನುವುದನ್ನು ‘ಕಾಗೆ ಕಾರುಣ್ಯದ ಕಣ್ಣು’ ಶೀರ್ಷಿಕೆ ಧ್ವನಿಸುತ್ತಿರುವಂತಿದೆ. ಅನುಬಂಧದಲ್ಲಿನ ಆರು ಅಧ್ಯಾಯಗಳು ಸೇರಿದಂತೆ ಈ ಕೃತಿಯ ಒಟ್ಟು ಹನ್ನೆರಡು ಅಧ್ಯಾಯಗಳ ಆಶಯವೂ, ಬದುಕು ಸಮಾಜದ ಬಗೆಗಿನ ಕಾರುಣ್ಯದ ಕಣ್ಣು ಎಲ್ಲರದೂ ಆಗಬೇಕು ಎನ್ನುವುದಾಗಿದೆ.

ಈ ಕೃತಿಯ ಮುಖ್ಯವಾದ ಭಾಗ ದಾಂಪತ್ಯದ ಕುರಿತಾದ ಚದುರಿದ ಚಿತ್ರಗಳದು. ಪ್ರಭಾವ–ಪ್ರೇರಣೆಗಳನ್ನು ಒಳಗೊಂಡೂ ಸ್ವಂತಿಕೆ ಹಾಗೂ ಪರಸ್ಪರ ಗೌರವವನ್ನು ಇಬ್ಬರೂ ಉಳಿಸಿಕೊಂಡ ದಾಂಪತ್ಯ ಇಲ್ಲಿಯದು. ಪ್ರಸಿದ್ಧರ ಪತ್ನಿಯರು, ಪತಿಯ ಪ್ರಭಾವಳಿಯಲ್ಲಿ ಕಳೆದುಹೋಗಿರುವ ಉದಾಹರಣೆಗಳೇ ಹೆಚ್ಚು. ಆದರೆ, ರಾಜಲಕ್ಷ್ಮಿಯವರು ಬರಗೂರರ ಪ್ರಭೆಯಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳದೆ, ತಮ್ಮ ವ್ಯಕ್ತಿತ್ವದ ಪ್ರಭೆಯಿಂದ ಪತಿಯ ನೈತಿಕ ಶಕ್ತಿಯನ್ನು ಮತ್ತಷ್ಟು ಗಟ್ಟಿಯಾಗಿಸಿದ್ದಾರೆ; ಕುಟುಂಬ ಹಾಗೂ ಬಂಧುಮಿತ್ರರ ನಡುವೆ ತಮ್ಮದೇ ಆದ ನೈತಿಕ ಹಾಗೂ ವೈಚಾರಿಕ ನೆನಪುಗಳನ್ನು ಉಳಿಸಿಹೋಗಿದ್ದಾರೆ. ಈ ನೆನಪುಗಳನ್ನು ಬರಗೂರರು ಪ್ರಾಂಜಲವಾಗಿ ದಾಖಲಿಸಿದ್ದಾರೆ.

ಈ ಕಥನದ ನಾಯಕನನ್ನು ಐದು ರೂಪಗಳಲ್ಲಿ ಗುರ್ತಿಸಬಹುದು. ಒಂದು, ಕುಟುಂಬಪ್ರೇಮಿ. ಎರಡು, ಒಳ್ಳೆಯ ಮೇಷ್ಟ್ರು. ಮೂರನೆಯದು, ಆಡಳಿತಗಾರನಾಗಿ ತೋರಿದ ಕ್ರಿಯಾಶೀಲತೆ. ನಾಲ್ಕನೆಯದು, ಬರಹಗಾರನಾಗಿ ಹಾಗೂ ಸಿನಿಮಾ ನಿರ್ದೇಶಕನಾಗಿ ಕೈಗೊಂಡ ಸಾಹಸಯಾತ್ರೆಗಳು. ಐದನೆಯದು, ಸಂಘಟನೆಯ ಸುಖದುಃಖದೊಂದಿಗೆ ಬೆಸೆದುಕೊಂಡ ಬದುಕು. ಈ ಐದು ಸಂಗತಿಗಳನ್ನು ಪ್ರತ್ಯೇಕವಾಗಿ ನೋಡುವುದು ಸಾಧ್ಯವಿಲ್ಲ ಎನ್ನುವ ಮಟ್ಟಿಗೆ ಅವು ಬರಗೂರರ ವ್ಯಕ್ತಿತ್ವದೊಂದಿಗೆ ತಳುಕು ಹಾಕಿಕೊಂಡಿವೆ.

ಬರಗೂರರ ವೈಯಕ್ತಿಕ ಹಾಗೂ ಸಾರ್ವಜನಿಕ ಜೀವನಗಳ ನಡುವಿನ ಗೆರೆ ತೀರಾ ತೆಳು ಎನ್ನುವುದು ಈ ಕೃತಿಯ ಮೂಲಕ ಸ್ಪಷ್ಟವಾಗುತ್ತದೆ. ಎರಡು ಮೂರು ಅಧ್ಯಾಯಗಳನ್ನು ಹೊರತುಪಡಿಸಿದರೆ, ಉಳಿದ ಕಥನಗಳೆಲ್ಲವೂ ಬರಗೂರರ ಸಾರ್ವಜನಿಕ ಜೀವನದ ವಿವರಗಳೇ ಆಗಿವೆ. ಯಾವುದೇ ಕ್ರಿಯಾಶೀಲ ವ್ಯಕ್ತಿಗೆ, ಜೀವನದ ಒಂದು ಹಂತದಲ್ಲಿ ಸಮಾಜವೇ ಕುಟುಂಬವಾಗಿ ರೂಪುಗೊಳ್ಳುವುದು ಸಹಜ. ಈ ಅಭೇದ ಬರಗೂರರ ಪಾಲಿಗೂ ಸಾಧ್ಯವಾಗಿದೆ. ಆ ಕಾರಣದಿಂದಲೇ ಸಾಹಿತ್ಯ–ಸಿನಿಮಾ ಸಂಕಥನಕ್ಕಿಂತಲೂ ಹೆಚ್ಚಿನ ಪಾಲು ಸಾಮಾಜಿಕ ಸಂಕಥನಕ್ಕೆ ದೊರಕಿದೆ. ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮಾಡಿದ ಕೆಲಸಗಳ ವಿವರಗಳು ಇಲ್ಲಿವೆ; ಸಾಂಸ್ಕೃತಿಕ ನೀತಿಯ ರೂಪು–ರೇಷೆ ಹಾಗೂ ಪಠ್ಯಪುಸ್ತಕ ಪರಿಷ್ಕರಣೆಯ ವಿವರಗಳಿವೆ. ಸಾಹಿತಿಗಳು, ಸಿನಿಮಾ ಮಂದಿ ಹಾಗೂ ರಾಜಕಾರಣಿಗಳೊಂದಿಗಿನ ಒಡನಾಟದ ಪ್ರಸಂಗಗಳಿವೆ. ಈ ಎಲ್ಲ ಪ್ರಸಂಗಗಳು ಲೇಖಕನೊಬ್ಬ ತನ್ನ ನೈತಿಕತೆ ಮತ್ತು ಸೃಜನಶೀಲ ಬದ್ಧತೆಯಿಂದ ಪಡೆಯಬಹುದಾದ ಅವ್ಯಾಜ ಪ್ರೀತಿಗೆ ನಿದರ್ಶನಗಳಂತಿವೆ. ಈ ಪ್ರೀತಿ ಬರಗೂರರಿಗೆ ಸಂತಸವನ್ನಷ್ಟೇ ನೀಡಿಲ್ಲ, ಸಂಕಟವನ್ನೂ ನೀಡಿದೆ. ದೊಡ್ಡ ಜವಾಬ್ದಾರಿಗಳನ್ನು ನೀಡಿರುವಂತೆ ಸವಾಲುಗಳನ್ನೂ ಎದುರಿಗಿಟ್ಟಿದೆ. ಹೀಗೆ ಎದುರಾದುದೆಲ್ಲವನ್ನೂ ಆದಷ್ಟೂ ನಿಸ್ಪೃಹವಾಗಿ ಎದುರಿಸುತ್ತ, ತನ್ನನ್ನು ರೂಪಿಸಿದ ಸಮಾಜವನ್ನು ಆರೋಗ್ಯಕರವಾಗಿಸಲು ನಿರಂತರವಾಗಿ ಪ್ರಯತ್ನಿಸಿದ ಬರಗೂರರ ಅನುಭವಗಳ ಕಥನ, ಆಧುನಿಕ ಕರ್ನಾಟಕದ ಐದಾರು ದಶಕಗಳ ಸಾಮಾಜಿಕ–ಸಾಂಸ್ಕೃತಿಕ ಚರಿತ್ರೆಯ ಕಿರುನೋಟವೂ ಹೌದು.

ಕಾಗೆ ಕಾರುಣ್ಯದ ಕಣ್ಣು

ಲೇ: ಬರಗೂರು ರಾಮಚಂದ್ರಪ್ಪ

ಪ್ರ: ಅಂಕಿತ ಪುಸ್ತಕ, ಬೆಂಗಳೂರು.

ಸಂ: 9019190502.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.