ಕನ್ನಡ ಸಾಹಿತ್ಯದ ಜೀವನದಿಗೆ ಸೇರುವ ಪುಟ್ಟದೊಂದು ತೊರೆ ಮಕ್ಕಳ ಸಾಹಿತ್ಯ. ಈ ತೊರೆಯಲ್ಲೀಗ ಹೊಸ ನೀರಿನ ರಭಸ, ಉಲ್ಲಾಸ – ‘ವಸಂತ ಬಾಲ ಸಾಹಿತ್ಯ ಮಾಲೆ’ ಹೆಸರಿನಲ್ಲಿಎಚ್.ಎಸ್. ವೆಂಕಟೇಶ ಮೂರ್ತಿ ಅವರು ಸಂಪಾದಿಸಿರುವ ಹನ್ನೆರಡು ಕೃತಿಗಳ ಮೂಲಕ.

ಕೆ.ವಿ. ತಿರುಮಲೇಶ್, ವೈದೇಹಿ, ನಾಗರಾಜ ಶೆಟ್ಟಿ, ಚಿಂತಾಮಣಿ ಕೊಡ್ಲೆಕೆರೆ, ಎಚ್. ಡುಂಡಿರಾಜ್, ಟಿ.ಎಸ್. ರಮಾನಂದ, ವಿಜಯಶ್ರೀ ಹಾಲಾಡಿ, ಬಸು ಬೇವಿನಗಿಡದ, ರಾಧೇಶ ತೋಳ್ಪಾಡಿ, ಶ್ರೀನಿವಾಸ ಉಡುಪ ಹಾಗೂ ಜಿ.ಎನ್. ರಂಗನಾಥರಾವ್ ಅವರೊಂದಿಗೆ ಸಂಪಾದಕರಾದ ಎಚ್ಚೆಸ್ವಿ ಅವರೂ ಮಕ್ಕಳಿಗಾಗಿ ಮಾಲೆ ಕಟ್ಟಿದ್ದಾರೆ. ಪದ್ಯ, ಗದ್ಯ, ನಾಟಕ ಮಾಲೆಯ ಚೆಲುವನ್ನು ಹೆಚ್ಚಿಸಿದೆ. ‘ಈ ಸಾಹಿತ್ಯ ಮಾಲೆ ನನ್ನ ಜೀವನದ ಬಹು ಮುಖ್ಯ ಸಂಪಾದನೆ; ‘ಬುದ್ಧಚರಣ’ ಮತ್ತು ‘ಕುಮಾರವ್ಯಾಸ ಕಥಾಂತರ’ ಮಾಲೆಯಷ್ಟೇ ಮುಖ್ಯವಾದುದು’ ಎನ್ನುವ ಎಚ್ಚೆಸ್ವಿಯವರ ಮಾತುಈ ಮಾಲೆಯ ಮಹತ್ವವನ್ನು ಹೇಳುವಂತಿದೆ. ಅವರು ಬರೆದಿರುವ ದೀರ್ಘ ಪ್ರಸ್ತಾವನೆ, ಕನ್ನಡದಲ್ಲಿನ ಮಕ್ಕಳ ಸಾಹಿತ್ಯದ ಬೆಳವಣಿಗೆಯನ್ನು ಅರಿಯುವವರಿಗೆ ಪಕ್ಷಿನೋಟ ಒದಗಿಸುವಂತಿದೆ.

ಶೇಕ್ಸ್‌ಪಿಯರ್‌ನ ‘ಟೆಂಪೆಸ್ಟ್’ ನಾಟಕವನ್ನು ಆಧರಿಸಿ ’ಧಾಂ ಧೂಂ ಸುಂಟರಗಾಳಿ’ ಹೆಸರಿನಲ್ಲಿ ವೈದೇಹಿ ಅವರು ರೂಪಿಸಿರುವ ಮಕ್ಕಳ ನಾಟಕ ಈಗಾಗಲೇ ಪ್ರಕಟಣೆ ಹಾಗೂ ರಂಗಪ್ರಯೋಗಗಳನ್ನು ಕಂಡಿದೆ. ಮಾರ್ಕ್ ಟ್ವೈನ್‌ರ ಕೃತಿಯನ್ನು ಆಧರಿಸಿ ಜಿ.ಎನ್. ರಂಗನಾಥ ರಾವ್ ಅವರು ‘ಟಾಮಿಯ ಪ್ರಚಂಡ ಸಾಹಸಗಳು‘ ಹೆಸರಿನಲ್ಲಿ ಕಾದಂಬರಿ ರಚಿಸಿದ್ದಾರೆ. ಈ ಎರಡೂ ಕೃತಿಗಳು ಕನ್ನಡದ ಮಕ್ಕಳಿಗೆ ತಮ್ಮದಲ್ಲದ ಹೊಸ ಆವರಣವೊಂದನ್ನು ಪರಿಚಯಿಸಿಕೊಳ್ಳುವ ಅವಕಾಶಗಳಾಗಿವೆ.

‘ಪಾಪು ಪದ್ಯಗಳು ಮತ್ತು ಓಬೀರಾಯನ ಕಥೆ’ ಕೃತಿ, ಮಕ್ಕಳ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಶ್ರೀನಿವಾಸ ಉಡುಪರ ಸ್ಮರಣೆ ಆಗಿರುವಂತೆಯೇ, ಅವರನ್ನು ಹೊಸಗಾಲದ ಮಕ್ಕಳಿಗೆ ಪರಿಚಯಿಸುವ ಪ್ರಯತ್ನವೂ ಆಗಿದೆ. ಎಚ್ಚೆಸ್ವಿ ಅವರ ‘ಗುಬ್ಬಿ ಜಂಕ್ಷನ್’ ಹಾಗೂ ಟಿ.ಎಸ್. ನಾಗರಾಜ ಶೆಟ್ಟಿ ಅವರ ‘ನರಿಯಣ್ಣನ ಅಂಗಡಿ’ಆಯ್ದ ಕವಿತೆಗಳ ಸಂಕಲನಗಳು.

ಈ ಮಾಲೆಯ ಮೂಲಕವೇ ಮೊತ್ತಮೊದಲ ಬಾರಿಗೆ ಪ್ರಕಟಗೊಂಡಿರುವ ಪದ್ಯ ಕೃತಿಗಳಲ್ಲಿ ಹೆಚ್ಚು ಗಮನಸೆಳೆಯುವುದು ಕೆ.ವಿ. ತಿರುಮಲೇಶರ ‘ಪುಟ್ಟನ ಮನ’ ಹಾಗೂ ಚಿಂತಾಮಣಿ ಕೊಡ್ಲೆಕೆರೆ ಅವರ ‘ಓಕೆ ಮೇಕೆ’. ರಮ್ಯಕಲ್ಪನೆ ಹಾಗೂ ಪದವಿನೋದದ ಮೂಲಕ
ಎಳೆಯ ಮನಸ್ಸುಗಳಿಗೆ ಲಗ್ಗೆಯಿಡುವ ತಿರುಮಲೇಶರ ಪದ್ಯಗಳು, ಕನ್ನಡ ಸಾಹಿತ್ಯ ಪರಂಪರೆಯನ್ನು ಮಕ್ಕಳಿಗೆ ಪರಿಚಯಿಸುವ ಪ್ರಯತ್ನಗಳೂ ಆಗಿವೆ. ದಾಸರು, ಷರೀಫರು, ಪಂಜೆ, ಅಡಿಗ, ಅನಂತಮೂರ್ತಿ, ರಾಮಚಂದ್ರ ಶರ್ಮ, ಕಂಬಾರ – ಹೀಗೆ ಅನೇಕ ಕನ್ನಡ ಲೇಖಕರನ್ನು ನೆನಪಿಸುವ ರಚನೆಗಳು ‘ಪುಟ್ಟನ ಮನ’ ಸಂಕಲನದಲ್ಲಿವೆ.

‘ಸಿಂಡ್ರೆಲಾ ಅಂಬ್ರೆಲಾ’ದ ಚಿಂತಾಮಣಿಯವರ ‘ಓಕೆ ಮೇಕೆ’ಯಲ್ಲಿ ಮಕ್ಕಳ ನಾಲಗೆಗೆ ಒಗ್ಗುವ ಹಾಗೂ ನೆನಪಿನಲ್ಲಿ ಉಳಿಯುವ ಸೊಗಸಾದ ರಚನೆಗಳಿವೆ. ಶಿವ–ಶಿವೆಯರ ಮೂಲಕ ಹೇಳುವ ಕೌಟುಂಬಿಕ ತತ್ವದಷ್ಟೇ ಸಹಜವಾಗಿ, ‘ಜಾತಿ ಭೂತ ಓಡಿಹೋಗು / ತೋರಬೇಡ ಮೂತಿ / ಕುಣಿದು ಕುಣಿದು ಹಾಡುತಾರೆ / ರಮ್ಯಾ ಕಮಲಾ ಪ್ರೀತಿ’ ಎಂದು ಬರೆಯಬಲ್ಲ ಕವಿ ಅವರು. ಕಲರ್ ಟೀವಿಯೊಳಗೆ ಪುಟ್ಟನೊಬ್ಬ ಜಾರಿಬಿದ್ದಾಗ ಏನಾಗುತ್ತದೆ ಎನ್ನುವುದನ್ನು ಸ್ವಾರಸ್ಯಕರ ಪದ್ಯವಾಗಿಸಬಲ್ಲರು. ವಿಜಯಶ್ರೀ ಹಾಲಾಡಿ ಅವರ ‘ಪಟ್‌ಪಟೆ ಕಾಯಿ ಚಟ್‌ಪಟ’ ಸಾಕುಪ್ರಾಣಿಗಳ ಲೋಕದ ಆಪ್ತ ಪದ್ಯಗಳ ಗುಚ್ಛ. ಬೆಳ್ಳಿ ಬೆಕ್ಕಿನ ಗುಣಗಳ ಬಗ್ಗೆ ಹೇಳುತ್ತಲೇ, ಮನುಷ್ಯನ ಅವಗುಣಗಳನ್ನು ಸೂಚಿಸುವ ಜಾಣ್ಮೆ ಅವರದು. ಬೆಕ್ಕು–ನಾಯಿಗಳಂಥ ಪ್ರಾಣಿಗಳ ಮೂಲಕ ಮಗುಲೋಕದೊಂದಿಗೆ ಇಷ್ಟು ತೀವ್ರತೆಯಲ್ಲಿ ಸಂವಾದ ನಡೆಸಿರುವ ಕನ್ನಡ ಕವಿ ಬಹುಶಃ ವಿಜಯಶ್ರೀ ಒಬ್ಬರೇ ಇರಬೇಕು.

ವಿಜಯಶ್ರೀ ಅವರು ಕಾವ್ಯದ ಮೂಲಕಪ್ರಾಣಿಲೋಕ ಕಾಣಿಸಿದರೆ, ಆ ಪ್ರಯತ್ನವನ್ನು ಡಾ.ಟಿ.ಎಸ್. ರಮಾನಂದ ಕಥೆಗಳ ಮೂಲಕ ಮಾಡಿದ್ದಾರೆ. ‘ಮರಿ ಆನೆಗೆ ಮಾತು ಮತ್ತು ಇತರ ಕಥೆಗಳು’ ಸಂಕಲನದ ಐದೂ ರಚನೆಗಳು ಪ್ರಾಣಿಗಳ ಕುರಿತ ಕಾಳಜಿ ಮತ್ತು ಪರಿಸರ ಪ್ರೇಮವನ್ನು ಭಿತ್ತಿಯಾಗಿರಿಸಿಕೊಂಡಿವೆ. ಕಣ್ಮರೆಯಾಗುತ್ತಿರುವ ಕಾಡು ಮತ್ತು ಅಲ್ಲಿನ ಜೀವವಿಶೇಷವನ್ನು ಮಕ್ಕಳ ಭಾವಕೋಶದಲ್ಲಾದರೂ ಮತ್ತೆ ಜೀವಗೊಳಿಸುವ ಪ್ರಯತ್ನದಂತೆ ಅವರ ಕಥೆಗಳು ಕಾಣಿಸುತ್ತವೆ. ಬಸು ಬೇವಿನಗಿಡದ ಅವರ ‘ಒಳ್ಳೆಯ ದೆವ್ವ’ – ಮನುಷ್ಯನ ಮನಸ್ಸೇ ದೆವ್ವದ ಬೀಡಾಗಿರುವುದನ್ನು ಸೂಚಿಸುವ ಕಾದಂಬರಿ; ಹೈಸ್ಕೂಲು ವಿದ್ಯಾರ್ಥಿಗಳು ಓದಬಹುದಾದ ರಮ್ಯ ಕಥಾನಕ.

ಪದ್ಯಗಳ ಮೂಲಕ ಮಕ್ಕಳ ಸಾಹಿತ್ಯಪ್ರಿಯರಿಗೆ ಪರಿಚಿತರಾದ ರಾಧೇಶ ತೋಳ್ಪಾಡಿ, ‘ನವಿಲ ಕರುಣೆ’ ಕಾದಂಬರಿಯ ಮೂಲಕ ಗದ್ಯ ಪ್ರಕಾರಕ್ಕೆ ಹೊರಳಿಕೊಂಡಿರುವುದು ಕುತೂಹಲಕರ. ಕಾವ್ಯಕ್ಕೆ ಹತ್ತಿರವಾದ ಭಾಷೆ ಹಾಗೂ ಚಿತ್ರವತ್ತಾದ ವಿವರಗಳಿಂದ ರಾಧೇಶರ ಕಾದಂಬರಿ ಗಮನಸೆಳೆಯುತ್ತದೆ. ಮನುಷ್ಯನ ಔದಾರ್ಯ–ಸಣ್ಣತನ ಹಾಗೂ ಪ್ರಕೃತಿಯ ಕರುಣೆಯನ್ನು ಚರ್ಚಿಸುವ ಈ ಕಾದಂಬರಿ, ಮಕ್ಕಳ ಮನಸ್ಸಿಗೆ ಉಲ್ಲಾಸದೊಂದಿಗೆ ವಿಚಾರವನ್ನೂ ದಾಟಿಸುವ ಹಂಬಲ ಹೊಂದಿದೆ.

‘ಕಾಳಿಗುಡ್ಡದ ಕೌತುಕ’ಡುಂಡಿರಾಜ್‌ರ ಪನ್ ಮತ್ತು ಫನ್ ಎರಡನ್ನೂ ಒಳಗೊಂಡಿರುವ ಮಕ್ಕಳ ನಾಟಕ. ಕನ್ನಡ ಪಂಡಿತರ ಭಾಷಾಪ್ರೀತಿ, ಮಕ್ಕಳ ಸಾಹಸ ಪ್ರವೃತ್ತಿ ಹಾಗೂ ಪರಿಸರ ಪ್ರೀತಿ, ಹೊಸ ತಲೆಮಾರಿನ ಮೊಬೈಲ್ ದಾಸ್ಯದ ಕುರಿತ ವ್ಯಂಗ್ಯೋಕ್ತಿಯ ಮೂಲಕ ಗಮನಸೆಳೆಯುವ ಈ ನಾಟಕ, ಸಾಮಾಜಿಕ–ಶೈಕ್ಷಣಿಕ ಕಾಳಜಿಯನ್ನು ಭಿತ್ತಿಯಲ್ಲಿರಿಸಿಕೊಂಡಿದೆ.

ಇಲ್ಲಿನ ಹನ್ನೆರಡು ಬರಹಗಾರರೊಂದಿಗೆಕಲಾವಿದರಾದ ಪ.ಸ. ಕುಮಾರ್ ಮತ್ತು ಸಂತೋಷ ಸಸಿಹಿತ್ಲು ಅವರನ್ನೂ ನೆನಪಿಸಿಕೊಳ್ಳಬೇಕು. ಅವರ ಸೊಗಸಾದ ಚಿತ್ರಗಳು ಕಥೆ–ಕವಿತೆಯಷ್ಟೇ ಸೊಗಸಾಗಿವೆ, ಚಿಣ್ಣರಿಗೆ ಪ್ರಿಯವಾಗುವಂತಿವೆ.

ಮಕ್ಕಳ ಸಾಹಿತ್ಯ ರಚನೆ ಮತ್ತು ಪ್ರಕಟಣೆ ಎರಡೂ ಕಷ್ಟ ಎನ್ನುವಂತಹ ಸಂದರ್ಭದಲ್ಲಿ ಪ್ರಕಟಗೊಂಡಿರುವ ‘ವಸಂತ ಬಾಲ ಸಾಹಿತ್ಯ ಮಾಲೆ’ಯ ಕೃತಿಗಳು, ಕನ್ನಡ ಮಕ್ಕಳ ಸಾಹಿತ್ಯಕ್ಕೆ ಸ್ವಾಗತಾರ್ಹ ಸೇರ್ಪಡೆ.ಬರವಣಿಗೆಯ ಗುಣಮಟ್ಟದೊಂದಿಗೆ ಮುದ್ರಣದ ಚೆಲುವೂ ಹದವಾಗಿ ಮಿಳಿತಗೊಂಡುನವಿಲುಗರಿಗಳಂತೆ ರೂಪುಗೊಂಡಿರುವ ಈ ಪುಸ್ತಕಗಳು ಪಾಲಕರು ತಮ್ಮ ಮಕ್ಕಳಿಗೆ ನೀಡಬಹುದಾದ ಒಳ್ಳೆಯ ಉಡುಗೊರೆಯೂ ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.