ಸಾಂಪ್ರದಾಯಿಕತೆಯನ್ನು ಉಳಿಸಿಕೊಂಡು ತಮ್ಮ ಶೈಲಿಯ ಸೌಂದರ್ಯವನ್ನು ಎತ್ತಿ ತೋರುವಂತಹ ಕಾರ್ಯಕ್ರಮಗಳು ಫಲಕಾರಿಯಾಗುತ್ತವೆ. ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಗುರು ಪರಿಮಳ ಹಂಸೋಗಿಯವರ ಪುತ್ರಿ-ಶಿಷ್ಯೆ ಮಹಿಮಾ ಹಂಸೋಗಿ ಕಾರ್ಯಕ್ರಮದ ಪ್ರಥಮಾರ್ಧವನ್ನು ವೀಕ್ಷಿಸಿದಾಗ ಉಂಟಾದ ಅಂತಹದೊಂದು ಅನುಭವ. ಗುರು ಪರಿಮಳ ಮದ್ರಾಸಿನ ಕಲಾಕ್ಷೇತ್ರದ ವಿದ್ಯಾರ್ಥಿನಿ. ಅವರು ತಾವು ಪ್ರತಿನಿಧಿಸುವ ಶೈಲಿಯನ್ನು ಕರಗತ ಮಾಡಿಕೊಂಡು ಅದರ ಸೂಕ್ಷ್ಮತೆಗಳನ್ನು ತಮ್ಮ ಶಿಷ್ಯೆಯರಿಗೆ ಧಾರೆಯೆರೆಯುತ್ತಿರುವುದು ಸುಸ್ಪಷ್ಟ.

ಅಂದಿನ ಕಾರ್ಯಕ್ರಮದಾದ್ಯಂತ ಈ ವೈಶಿಷ್ಟ್ಯವು ತುಂಬಿ ಬಂದು ಸುಸಂಬದ್ಧ ನೃತ್ಯ ಮತ್ತು ಅಭಿನಯಗಳ ಸವಿಯನ್ನು ಉಂಡುವಾಗಿದ್ದು ಸಹಜವೇ. ಕಟ್ಟುನಿಟ್ಟಾಗಿ ತಾನು ಗ್ರಹಿಸಿಕೊಂಡಿರುವ ಚಿಂತನೆಯ ಹಿನ್ನೆಲೆಯಲ್ಲೇ ರಚನೆಗಳನ್ನು ಲೀಲಾಜಾಲವಾಗಿ ಪ್ರದರ್ಶಿಸಿ ರಸಿಕರ ಮೆಚ್ಚುಗೆಗೆ ಮಹಿಮಾ ಪಾತ್ರರಾದರು. ಅವರ ಕಾರ್ಯಕ್ರಮ ಗುಣ ಮತ್ತು ಗಾತ್ರದಲ್ಲಿ ಕಲಾಕ್ಷೇತ್ರದ ಛಾಪನ್ನು ಹೊಂದಿತ್ತು. ಸುಂದರವಾದ ಮುಖ ಚಲನೆಗಳು, ಗಟ್ಟಿಯಾದ ಲಯ ನಿರ್ವಹಣೆ ಮೊದಲ ನೋಟವನ್ನು ಗೆದ್ದ ಅಂಶಗಳು. ವೈವಿಧ್ಯಮಯ ನೃತ್ತ ವಿನ್ಯಾಸವನ್ನು ಹೊತ್ತು ಬಂದ ಅಲರಿಪ್ಪು ಉತ್ಸಾಹ ವರ್ಧಕವಾಗಿತ್ತು. ತ್ರಿಶ್ರ ಆದಿತಾಳದ ಚೌಕಟ್ಟಿನಲ್ಲಿ ಮಹಿಮಾ ಮೂಡಿಸಿದ ಕ್ಲಿಷ್ಟ ಲಯ ಮಾದರಿಗಳು ಸೊಗಸೆನಿಸಿದವು. ಗಣೇಶ ಪಂಚರತ್ನ ಶ್ಲೋಕ (ಮುದಾಕರಾತ್ತ ಮೋದಕಂ)ದ ಅಳವಡಿಕೆಯೊಂದಿಗೆ ಲಯ ಚಾತುರ್ಯವನ್ನು ತೋರಿ ನರ್ತಕಿಯು ನೃತ್ತದ ಮೇಲಿನ ಹಿಡಿತವನ್ನು ಬಿಗಿಗೊಳಿಸಿದರು. ಮುಂದುವರೆಯುತ್ತಾ ಸ್ವರ, ಜತಿಗಳು ಮತ್ತು ನೃತ್ತ ಮತ್ತಷ್ಟು ಭಿನ್ನತೆಗಳ ಲಯ ಮಾದರಿಗಳ ಮೂಲಕ ಕಲ್ಯಾಣಿ ರಾಗದ ಜತಿಸ್ವರ ಅಥವಾ ಸ್ವರಪಲ್ಲವಿಯಲ್ಲಿ ಕಾಣಿಸಿಕೊಂಡವು.

ಸುಪರಿಚಿತ ತೋಡಿ ರಾಗದ ವರ್ಣ ಪ್ರಧಾನಾಂಗವಾಗಿ ಮೆರೆಯಿತು. ತಿರುವಾರೂರಿನ ಶಿವನನ್ನು ಹಾಡಿ ಹೊಗಳುವ ಈ ದೀಕ್ಷಿತರ ರಚನೆಯು ಭಕ್ತಿ ಮತ್ತು ಶೃಂಗಾರ ರಸ ಪ್ರಧಾನವಾದದ್ದು. ತನ್ನ ನಾಯಕನ ಬಗೆಗೆ ಮನಸೋತಿರುವ ನಾಯಕಿಯು ಅವನ ರೂಪವನ್ನು ವರ್ಣಿಸುತ್ತಾ ಅದಕ್ಕೆ ಮಾರು ಹೋಗಿರುವ ತನ್ನನ್ನು ಕಂಡು ಕುಪಿತನಾಗಿರುವುದು ಏಕೆಂದು ಪ್ರಶ್ನಿಸುತ್ತಾ ದಯೆ ತೋರಿ ತನ್ನ ವಿರಹವನ್ನು ನಿವಾರಿಸಲು ಕೋರುತ್ತಾಳೆ. ತನ್ನ ಆದಿಭೌತಿಕ(ಬೇರೆಯವರಿಂದ ಉಂಟಾದದ್ದು), ಆದಿದೈವಿಕ(ವಿಧಿಯಿಂದ ಉಂಟಾದದ್ದು) ಮತ್ತು ಆಧ್ಯಾತ್ಮಿಕ ತಾಪತ್ರಯಗಳನ್ನು ನೀಗಿ ತನ್ನ ಸಾನ್ನಿಧ್ಯವನ್ನು ಒದಗಿಸಿ ಉಪಕರಿಸಬೇಕೆಂದು ಮಾರಕೋಟಿ ಸುಂದರಾಂಗನಾದ ನಾಯಕನನ್ನು ಬೇಡಿಕೊಳ್ಳುವ ಸನ್ನಿವೇಶವನ್ನು ನರ್ತಕಿ ಮಹಿಮಾ ಹಂಸೋಗಿ ಉತ್ತಮ ನೃತ್ಯ, ನೃತ್ತ ಮತ್ತು ಅಭಿನಯಗಳೊಂದಿಗೆ ಸಾಕಾರಗೊಳಿಸಿ ನೋಡುಗರನ್ನು ಆಕರ್ಷಿಸಿದರು. ಗುರು ಪರಿಮಳ ಹಂಸೋಗಿ(ನಟುವಾಂಗ), ಬಾಲಸುಬ್ರಹ್ಮಣ್ಯಶರ್ಮ(ಗಾಯನ), ಜಯರಾಮ್(ಕೊಳಲು), ಗೋಪಾಲ್(ವೀಣೇ), ಪ್ರಸನ್ನಕುಮಾರ್(ವಿವಿಧ ವಾದ್ಯ ಪುಂಜ)ರವರನ್ನು ಒಳಗೊಂಡಿದ್ದ ಸಂಗೀತ ಸಹಕಾರ ಪರಿಣಾಮಕಾರಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.