ಈಚೆಗೆ, ಭಾನುವಾರದ ಪುರವಣಿಯಲ್ಲಿ ಪದ್ಮಚರಣ ಅವರನ್ನು ಕುರಿತು ಸಂಧ್ಯಾ ಶರ್ಮ ಅವರು ಪ್ರಕಟಿಸಿರುವ ಲೇಖನ ಓದಿ ಬರೆಯುತ್ತಿದ್ದೇನೆ. ಪದ್ಮಚರಣರು ಭಾವಗೀತೆ, ಸಿನಿಮಾ ಗೀತೆಗಳಿಗೆ ಕರ್ನಾಟಕ ಸಂಗೀತದ ಅಭಿಜಾತತೆಯ ಸೋಂಕು ನೀಡಿದರು; ಅಲ್ಲದೆ, ಶಿವರಾಮ ಕಾರಂತರೊಂದಿಗಿದ್ದು, ಯಕ್ಷಗಾನ ಸಂಗೀತದಲ್ಲಿ ಅವರು ಮಾಡುತ್ತಿದ್ದ ಪ್ರಯೋಗಗಳ ಭಾಗವಾಗಿಯೂ ಅದೇ ಕೆಲಸ ಮಾಡಿದರು ಅನ್ನುವುದು ದಿಟವಾದ ಮಾತು.

ಪದ್ಮಚರಣ ಅವರು ಬ್ರೆಖ್ಟ್‌ನನಾಟಕಗಳ ಪ್ರಯೋಗಕ್ಕೆ ಕೂಡ ಸಂಗೀತ ಸಂಯೋಜನೆ ಮಾಡಿದ್ದರು ಎಂದು ಸಂಧ್ಯಾ ಶರ್ಮ ಅವರು ತಮ್ಮ ಬರಹದಲ್ಲಿ ಹೇಳಿದ್ದಾರೆ. ಅವರು ಆ ಕೆಲಸಮಾಡಿದ್ದು 1983ರಲ್ಲಿ, ನಾನು ರಾಷ್ಟ್ರೀಯ ನಾಟಕಶಾಲೆಯಲ್ಲಿ ಓದಿ ಮರಳಿಬಂದ ಒಂದು ವರ್ಷದ ಬಳಿಕ ಆ ಜರ್ಮನ್ ಕವಿ-ನಾಟಕಕಾರನ ಮೂರು ನಾಟಕಗಳ ಗೊಂಚಲನ್ನು ಅನುವಾದಿಸಿ, ಬೆಂಗಳೂರು ಸಮುದಾಯ ರಂಗತಂಡಕ್ಕಾಗಿ ನಿರ್ದೇಶಿಸಿದ ಪ್ರಯೋಗವೊಂದಕ್ಕೆ. ಅದು ನಾನು ವೃತ್ತಿನಿರತನಾಗಿ ನಿರ್ದೇಶಿಸಿದ ಪೂರ್ಣಪ್ರಮಾಣದ ಮೊತ್ತಮೊದಲ ಪ್ರಯೋಗವಾಗಿತ್ತು. ಇಂಗ್ಲಿಶಿನ ಅನುವಾದದಲ್ಲಿ ಕ್ರಮವಾಗಿ ಹೀ ಹು ಸೇಸ್ ಯೆಸ್, ಹೀ ಹು ಸೇಸ್ ನೋ, ಮತ್ತು ದ ಮೆಷರ್ಸ್ ಟೇಕನ್ ಎಂಬ ಆ ಮೂರು ನಾಟಕಗಳ ಕನ್ನಡದ ಹೆಸರುಗಳು: ತಲೆದೂಗಿದವನು, ತಲೆದೂಗದವನು, ಮತ್ತು ಕೈಗೊಂಡ ಕ್ರಮಗಳು. ಒಟ್ಟು ಪ್ರಯೋಗದ ಹೆಸರು ಆಪತ್ತಿನ ಕಥೆಗಳು.

ಬಲವಾದ ಹಲವು ಕಾರಣ, ಪ್ರೇರಣೆಗಳಿಂದಾಗಿ, ಆ ಮೂರೂ ನಾಟಕಗಳ ವಸ್ತು ಮತ್ತು ವಿಷಯವು ಕೇವಲ ಹಸಿ-ಹುಸಿಯಾದ ಸಾಮಾಜಿಕ ಕ್ರಾಂತಿಯಲ್ಲ, ಅವುಗಳ ಮೂಲಸತ್ತ್ವವು ಕ್ಲಾಸಿಕಲ್-ಕ್ಲಾಸಿಸಿಸ್ಟ್ ಆದದ್ದು, ಹಾಗಾಗಿ ಆ ನಾಟಕಗಳನ್ನು ಕ್ಲಾಸಿಸಿಸ್ಟ್ ಎಂಬಂಥ ರೀತಿಯಲ್ಲಿ ಪ್ರಯೋಗಿಸಬೇಕು ಅನ್ನುವ ಭಾವ ನನ್ನಲ್ಲಿ ತುಂಬ ತೀವ್ರವಾಗಿತ್ತು. ನಮ್ಮ ಪ್ರಯೋಗವು ಆದಷ್ಟುಮಟ್ಟಿಗೆ ಅಭಿಜಾತ ಮತ್ತು ಆಧುನಿಕಗಳ ಬೆರಕೆ ಆಗಿರಬೇಕು; ಅಭಿಜಾತ ಸಂಗೀತವನ್ನು ಹೊಂದಿರಬೇಕು; ಅದರಲ್ಲಿ ಹಾಡುವವರು, ಸಂಗೀತ ವಾದ್ಯಗಳನ್ನು ನುಡಿಸುವವರು ಆಟದ ವೇಳೆಯಲ್ಲಿ ಪ್ರತ್ಯಕ್ಷವಾಗಿ ಇದ್ದು ಹಾಡಬೇಕು, ನುಡಿಸಬೇಕು; ಹಾಗೂ, ವಾದ್ಯಗಳ ಮಟ್ಟಿಗೆ, ವೀಣೆ ಮತ್ತು ಮೃದಂಗಗಳು ಮಾತ್ರ ಇರಬೇಕು ಎಂದನ್ನಿಸಿತ್ತು.

ಮೇಲಾಗಿ, ‘ಬ್ರೆಖ್ಟ್ ಕೇವಲ ಮಾರ್ಕ್ಸ್‌ವಾದೀ ನಾಟಕಕಾರ. ಮಾರ್ಕ್ಸ್‌ವಾದಿಗಳಿಗೆ ಮತ್ತು ಆಧುನಿಕದ ವ್ಯಾಮೋಹ ಬಡಿದವರಿಗೆ ಪರಂಪರೆಯನ್ನು ಕುರಿತು, ಪೂರ್ವಸೂರಿಗಳ ಉತ್ಕೃಷ್ಟ ಸಾಧನೆಗಳನ್ನು ಕುರಿತು ಗೌರವ, ಶ್ರದ್ಧೆಗಳಿಲ್ಲ’ ಎಂಬ ಕಲ್ಪನೆ ಇತ್ತಲ್ಲ ಆಗ ಹಲವರಲ್ಲಿ (ಮತ್ತು ಈವತ್ತಿಗೂ ಇದೆಯಲ್ಲ) ಆ ಕಲ್ಪನೆ ಎಷ್ಟು ತಪ್ಪಾದದ್ದು ಎಂದು ತೋರಿಸಬೇಕು; ಕವಿ-ನಾಟಕಕಾರನಾಗಿ ಬ್ರೆಖ್ಟನ ಪ್ರತಿಭೆ, ತನ್ನಾಳದಲ್ಲಿ, ನಿಜಕ್ಕೂ ಅಭಿಜಾತವಾದದ್ದು ಅನ್ನುವುದನ್ನು ಕಂಡರುಹಬೇಕು; ಅದಕ್ಕಾಗಿ ಅವನ ಆ ನಾಟಕಗಳನ್ನು ಕರ್ನಾಟಕ ಸಂಗೀತದ ಗಂಧದೊಂದಿಗೆ, ಮತ್ತು ನಮ್ಮಲ್ಲಿನ ಕುಣಿತಭಣಿತದ ರೀತಿಗಳೊಂದಿಗೆ, ಪ್ರಯೋಗಿಸಬೇಕು ಎಂಬ ತುಡಿತವಿತ್ತು. ಆ ತುಡಿತದ ಹಿಂದೆ, ಭಾರತ (ಹಾಗೂ ಚೈನಾ, ಜಪಾನುಗಳಲ್ಲಿನ) ಅಭಿಜಾತ ಚಿಂತನೆ ಮತ್ತು ಕಲೆ, ಮತ್ತು ಯೂರೋಪಿನ ಅಭಿಜಾತ ಚಿಂತನೆ ಮತ್ತು ಕಲೆ - ಇವುಗಳ ಮೂಲತುಡಿತ ಹಾಗೂ ಲಕ್ಷಣಗಳು ಕಡೆಗೂ ಒಂದೇ ಎಂಬ ಭಾವ ಮತ್ತು ತಿಳಿವಳಿಕೆ ನನ್ನ ಮನಸ್ಸಿನಲ್ಲಿತ್ತು. ಅಲ್ಲದೆ, ತಮ್ಮಾಳದಲ್ಲಿ, ಮಾರ್ಕ್ಸ್‌ವಾದ, ಸಮಾಜವಾದಗಳ ಮೂಲ ಮತ್ತು ತುಡಿತವು ಕೂಡ ಆ ಅದೇ ರೀತಿಯಲ್ಲಿ ಅಭಿಜಾತವಾದದ್ದು ಎಂಬ ಭಾವ ಮತ್ತು ತಿಳಿವಳಿಕೆಯಿತ್ತು. ಅಂಥ ಭಾವ, ತಿಳಿವಳಿಕೆಗಳು ನನ್ನಲ್ಲಿ ಈಗಲೂ ಇವೆ. ಇದೆಲ್ಲ ಯಾಕೆ, ಹೇಗೆ ಎಂದು ವಿವರಿಸಲು ದೀರ್ಘವಾದ ಪ್ರಬಂಧವನ್ನೇ ಬರೆಯಬೇಕಾಗುತ್ತದೆ. ಅದಕ್ಕೆ ಇಲ್ಲಿ ಸ್ಥಳಾವಕಾಶವಿಲ್ಲ.

ಒಟ್ಟಿನಲ್ಲಿ, ಅಭಿಜಾತವನ್ನು ಕುರಿತು ನನಗೆ ಎಂದಿನಿಂದಲೂ ಇರುತ್ತ ಬಂದಿರುವ ಒಲವು ಅಂಥ ಪ್ರಯತ್ನ ಮಾಡಲು ಕಾರಣ ಮತ್ತು ಪ್ರೇರಣೆಯಾಗಿತ್ತು.

ಕಾಲೇಜಿನಲ್ಲಿ ನನ್ನ ಮೇಷ್ಟರಾಗಿದ್ದ ಎಚ್. ಕೆ. ರಾಮಚಂದ್ರಮೂರ್ತಿ ಅವರಲ್ಲಿ ಇದನ್ನೆಲ್ಲ ಹೇಳಿಕೊಂಡು, ಸಂಗೀತ ಸಂಯೋಜನೆಗೆ ಯಾರನ್ನು ಕರೆಯಬಹುದು ಎಂದು ಕೇಳಿದೆ. ಅವರು ನನ್ನನ್ನು ಎಸ್. ಕೃಷ್ಣಮೂರ್ತಿ ಅವರ ಬಳಿಗೆ ಕಳಿಸಿದರು. ಕೃಷ್ಣಮೂರ್ತಿ ಅವರು ಪ್ರಸಿದ್ಧ ವಾಗ್ಗೇಯಕಾರರಾದ ಮೈಸೂರು ವಾಸುದೇವಾಚಾರ್ಯರ ಮೊಮ್ಮಗಂದಿರು; ಬೆಂಗಳೂರಿನ ಆಕಾಶವಾಣಿಯ ನಿರ್ದೇಶಕರಾಗಿದ್ದವರು. ಅವರು, 'ನಾನು ಈ ಕೆಲಸವನ್ನು ಮಾಡಲಾರೆ. ಇದನ್ನು ನಿಮಗೆ ಬೇಕಾದಂತೆ ಮಾಡಬಲ್ಲವರು ಪದ್ಮಚರಣರು,' ಎಂದು ಹೇಳಿ, ಆ ಹಿರಿಯರನ್ನು ಉದ್ದೇಶಿಸಿ ಒಂದು ಪತ್ರ ಬರೆದುಕೊಟ್ಟು, ಅವರ ವಿಳಾಸವನ್ನು ತಿಳಿಸಿ, ‘ಅವರನ್ನು ಕೇಳಿಕೊಳ್ಳಿ, ಹೋಗಿ’ ಎಂದರು.

ನನಗೆ ಪದ್ಮಚರಣ ಅವರ ಪರಿಚಯವಿರಲಿಲ್ಲ. ಅವರ ಸಂಗೀತ ಸಂಯೋಜನೆಯ ‘ಉಡುಗಣವೇಷ್ಟಿತ’ ಭಾವಗೀತೆಯನ್ನು, ಮತ್ತು ‘ನಾವು ಬಂದೇವ ಶ್ರೀಶೈಲ ನೋಡೂದಕ್ಕ’ ಎಂದು ಶುರುವಾಗುವ ಸಿನಿಮಾ ಹಾಡನ್ನು, ಕೇಳಿದ್ದೆ ಮತ್ತು ಗುನುಗಿಕೊಂಡಿದ್ದೆ, ಅಷ್ಟೆ. ಆ ಹಾಡುಗಳಿಗೆ ಸಂಗೀತ ಕೂಡಿಸಿದ್ದು ಪದ್ಮಚರಣರು ಎಂದು ಕೂಡ ನನಗೆ ಗೊತ್ತಿರಲಿಲ್ಲ. ಕಾಗದ ಹಿಡಕೊಂಡು ಹೋದೆ, ಅವರ ಬಳಿಗೆ.

ಬೆಂಗಳೂರಿನ ಮಿನರ್ವಾ ಸರ್ಕಲ್ ಬಳಿಯ ಅವರ ಒಂಟಿಕೋಣೆಯ ಬಿಡಾರಕ್ಕೆ ನಾನು ಮೊತ್ತಮೊದಲ ಸಲ ಹೋಗಿ ಬಾಗಿಲು ತಟ್ಟಿದಾಗ, ‘‘ಯಾರು?’’ ಎಂಬ ಗಡುಸು-ಬಿರುಸಾದ ದನಿ ಬಂತು ಒಳಗಿನಿಂದ. ‘‘ಎಸ್. ಕೃಷ್ಣಮೂರ್ತಿಗಳು ಕಳಿಸಿದರು, ಸರ್. ಕಾಗದ ಕೊಟ್ಟಿದ್ದಾರೆ,’’ ಎಂದೆ. ಹಲವು ನಿಮಿಷ ಕಾದಮೇಲೆ ಕದ ಅರ್ಧಮರ್ಧ ತೆರೆಯಿತು. ಅಗಲ ಮುಖ; ಕುಳ್ಳವಲ್ಲ, ಎತ್ತರವೂ ಅಲ್ಲದ ಕೊಂಚ ದಪ್ಪನೆಯ ಆಳು; ಸೊಂಟದ ಸುತ್ತ, ಮಾಸಿದ ಬೂದುಬಣ್ಣದ ಹಳೆಯದೊಂದು ಚೌಚೌಕುಳಿ ಬೈರಾಸು; ಬಿಟ್ಟರೆ, ಬರಿಮೈ; ಕೈಯಲ್ಲಿ ಜಪಮಾಲೆ. ಕಾಗದ ಕೊಟ್ಟಾಗ, ಅದರ ಮೇಲೆ ನಿರ್ಲಕ್ಷ್ಯದೊಂದು ನೋಟ ಹಾಯಿಸಿ, ಸಿಡುಕಿ, ಬಾಗಿಲು ಮುಚ್ಚಿಕೊಂಡರು ನನ್ನ ಮುಖದ ಮೇಲೆ.

ಅವರದ್ದು ಕೊಂಚ ವಿಕ್ಷಿಪ್ತ ಸ್ವಭಾವ, ನಾಟಕಕಾರ ಸಂಸರ ಥರದ ವ್ಯಕ್ತಿತ್ವ, ಆದರೆ ಒಳ್ಳೆಯ ಮನಸ್ಸು ಎಂದು ಮೊದಲೇ ಕೇಳಿದ್ದೆ. ಅದರಿಂದ, ಪಟ್ಟುಬಿಡದೆ ಮತ್ತೆರಡು ಸಲ ಹೋಗಿ, ತೀರ ವಿನಯವಂತಿಕೆಯಿಂದ ಬೇಡಿಕೊಂಡು ಅಂತೂ ಅವರನ್ನು ಒಪ್ಪಿಸಿದೆ.

ಒಪ್ಪಿಕೊಂಡ ಬಳಿಕ ಅವರು ತುಂಬ ಸ್ನೇಹ, ಸಹನೆಯಿಂದ ಇರುತ್ತ, ರವೀಂದ್ರ ಕಲಾಕ್ಷೇತ್ರದ ತಾಲೀಮು ಕೊಠಡಿಗೆ ಅನೇಕ ದಿನಗಳ ಕಾಲ ಬಂದು ಸಂಗೀತ ಕೂಡಿಸಿ, ಹಾಡುಗಳನ್ನು ಕಲಿಸಿಕೊಟ್ಟರು. ವೀಣೆ ಮತ್ತು ಮೃದಂಗ ನುಡಿಸುವ ಇಬ್ಬರು ಎಳೆಯರನ್ನು ಪದ್ಮಚರಣರ ಬಳಿಗೆ ಹೋಗುವ ಮುನ್ನವೇ ಗೊತ್ತುಮಾಡಿಕೊಂಡಿದ್ದೆ. ಪದ್ಮಚರಣರು ಅವರಿಬ್ಬರನ್ನು ಚಿಕ್ಕದೊಂದು ಪರೀಕ್ಷೆಗೆ ಗುರಿಮಾಡಿ, ಅವರ ಯೋಗ್ಯತೆಯ ಬಗ್ಗೆ ತಕ್ಕಮಟ್ಟಿಗೆ ತೃಪ್ತರಾಗಿ, ಸಂಗೀತದ ಕೆಲಸದಲ್ಲಿ ತೊಡಗಿದರು. ನನ್ನ ಅನುವಾದದ ಹಾಡುಗಳನ್ನು ಒಂದೆರಡು ಕಡೆ ತುಸುತುಸುವೇ ಬದಲಾಯಿಸಿ ಅಭಿಜಾತ ಸಂಗೀತದ ರಾಗಗಳಿಗೆ ಒಗ್ಗಿಸಿದರು. ಅದರಿಂದ ನಾನು ತುಂಬ ಕಲಿತೆ.

ಪ್ರಯೋಗದ ಮೊತ್ತಮೊದಲನೆಯ ಹಾಡು ವೇದದ ಋಕ್ಕುಗಳ ಗಾಯನದಂತೆ ಇರಬೇಕು ಎಂದು ನಾನು ಕೇಳಿಕೊಂಡಾಗ, ವೇದ ಮಂತ್ರಗಳನ್ನು ಘೋಷಿಸಲು ಸಾಮಾನ್ಯವಾಗಿ ಬೇಕಾಗುವ ಉದಾತ್ತ, ಅನುದಾತ್ತ, ಸ್ವರಿತ ಸ್ವರಗಳಿಗೆ ದೀರ್ಘಸ್ವರಿತವನ್ನೂ ಸೇರಿಸಿ, ರೇವತಿ ರಾಗದ ಛಾಯೆಯಿರುವಂತೆ ಆ ಹಾಡಿಗೆ ಸಂಗೀತ ಅಳವಡಿಸಿ, ಅದಕ್ಕೆ ತಕ್ಕಂತೆ ವೀಣೆ, ಮೃದಂಗಗಳನ್ನು ಹೇಗೆ ನುಡಿಸಬೇಕು ಎಂದು ಕೂಡ ಆ ವಾದ್ಯಗಾರರಿಗೆ ತಿಳಿಸಿಕೊಟ್ಟರು. ಉಳಿದಂತೆ, ರೇವಗುಪ್ತಿ, ಮಧ್ಯಮಾವತಿ, ಹಿಂದೋಳ, ಶುದ್ಧ ಧನ್ಯಾಸಿ, ಶಿವರಂಜನಿ, ಸಿಂಧು ಭೈರವಿ, ಉದಯರವಿ ಚಂದ್ರಿಕೆ ಈ ಕೆಲವು ರಾಗಗಳು, ಮತ್ತು ಬೇರೆ ಕೆಲವು ಮಟ್ಟುಗಳನ್ನು ಇಟ್ಟುಕೊಂಡು ಪ್ರಯೋಗದ ಆಯಾ ಸನ್ನಿವೇಶದ ಭಾವಕ್ಕೆ ತಕ್ಕಂತೆ ಹಾಡುಗಳಿಗೆ, ಮತ್ತು ರಂಗಕ್ರಿಯೆ ಹಾಗೂ ಕುಣಿತಕ್ಕೆ, ಸ್ವರಲಯ ಸಂಗೀತವನ್ನು ಕೂಡಿಸಿದರು. ಅದೆಲ್ಲವನ್ನು ಕುರಿತು ಆ ಪ್ರಯೋಗದ ಕಡತಗಳಲ್ಲಿ ನಾನು ಮಾಡಿಕೊಂಡ ಟಿಪ್ಪಣಿಗಳು ಈವತ್ತಿಗೂ ನನ್ನ ಬಳಿ ಇವೆ.

ತಾಲೀಮಿಗೆ ಬಂದಾಗ, ‘‘ನೀವೆಲ್ಲ ಕಮ್ಯೂನಿಸ್ಟರು, ಪಾಖಂಡಿಗಳು. ನಿಮ್ಮ ನಡುವೆ ಬಂದು ಸಿಕ್ಕಿಹಾಕಿಕೊಂಡಿದ್ದೇನೆ, ನೋಡು. ಇನ್ನು ಅದರಲ್ಲಿ, ನಿನಗೆ ಕ್ಲಾಸಿಕಲ್ಲು, ಕ್ಲಾಸಿಸಿಸಮ್ಮು ಅನ್ನುವುದರ ಹುಚ್ಚು ಬೇರೆ,’’ ಎಂದು ಆಗಾಗ ಹಾಸ್ಯಮಾಡುತ್ತಿದ್ದರು. ನಮ್ಮ ಪ್ರಯೋಗದಲ್ಲಿನ ನಟರೆಲ್ಲ ನನಗಿಂತಲೂ ಬಹಳ ಚಿಕ್ಕವರು: ಪಿಯುಸಿ ವಯಸ್ಸಿನವರು ಹಲವರು, ಇಪ್ಪತ್ತರ ಆಸುಪಾಸಿನವರು ಒಬ್ಬಿಬ್ಬರು. ಹೆಚ್ಚಿನವರು ದಲಿತ ಸಂಘರ್ಷ ಸಮಿತಿಯ ನಂಟಿದ್ದವರು. ಕೆಲವೊಮ್ಮೆ ಅವರಮೇಲೆಯೂ ಸಿಡುಕಿ, ಕಟಕಿಯಾಡುತ್ತಿದ್ದರು. ಹಾಗಾದಾಗ ನಾವೆಲ್ಲ ದೇಶಾವರಿ ನಕ್ಕು ಸುಮ್ಮನಿರುತ್ತಿದ್ದೆವು. ನನಗೆ ಅದರಿಂದ ಒಮ್ಮೊಮ್ಮೆ ತುಂಬ ಬೇಸರವಾದರೂ ನಾನೂ ನಕ್ಕು ಸುಮ್ಮನಿರುತ್ತಿದ್ದೆ. ಎಷ್ಟೆಂದರೂ ನಮಗೆಲ್ಲ ದೊಡ್ಡವರಿದ್ದರಲ್ಲವೆ ಅವರು? ಅಲ್ಲದೆ, ನಮಗೆ ನಮ್ಮ ಕೆಲಸವೂ ಆಗಬೇಕಿತ್ತಲ್ಲ! ಅಂಥ ಗಳಿಗೆಗಳನ್ನು ಬಿಟ್ಟರೆ ಉಳಿದಂತೆ ಯಾವಾಗಲೂ ಸ್ವಲ್ಪ ಪೋಲಿಯಾಗಿ ತಮಾಷೆಮಾಡುತ್ತ ಹಾಡು, ವಾದ್ಯಸಂಗೀತಗಳನ್ನು ತಾಳ್ಮೆಯಿಂದ ಹೇಳಿಕೊಡುತ್ತಿದ್ದರು.

ಅಷ್ಟು ದೊಡ್ಡವರು, ನನ್ನ ಕೋರಿಕೆಗೆ ಒಪ್ಪಿ, ಪ್ರತಿದಿನವೂ ತಾಲೀಮಿಗೆ ಬಂದು, ಚಿಕ್ಕವಯಸ್ಸಿನಾದ ನನ್ನಂಥವನ ಮೊತ್ತಮೊದಲ ಪ್ರಯೋಗಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ನನ್ನ ಅದೃಷ್ಟ, ಅವರ ಅಗ್ಗಳಿಕೆ.

ಅವರ ಅಗ್ಗಳಿಕೆಯ ಬೇರೊಂದು ಮಗ್ಗುಲು ಕಾಣಿಸಿ ಈ ಬರಹ ಮುಗಿಸುತ್ತೇನೆ. ಸಂಧ್ಯಾ ಶರ್ಮ ಅವರು ತಮ್ಮ ಬರಹದಲ್ಲಿ ಹೇಳಿರುವ ಸಂಗತಿಗಳಿಗಿಂತ ಬೇರೆಯೇ ಆದ ಸಂಗತಿಯಿದು, ನನ್ನ ಮನಸ್ಸಿನಲ್ಲಿ ಯಾವಾಗಲೂ ನಿಂತಿರುವಂಥದು.

ಮಿನರ್ವಾ ಸರ್ಕಲ್ ಬಳಿಯಲ್ಲಿರುವ ಆ ನ್ಯೂ ಮಾಡರ್ನ್ ಹೊಟೇಲ್ ಹೆಸರುವಾಸಿಯಾದದ್ದು. ಹಿಂದಿನಿಂದಲೂ ಬರಹಗಾರರಿಗೆ, ನಾಟಕದವರಿಗೆ ಹಾಗೂ ಸಿನಿಮಾದವರಿಗೆ ಆಪ್ತವಾದದ್ದು. ಪದ್ಮಚರಣ ಅವರ ಬಿಡಾರ ಇದ್ದದ್ದು ಆ ಹೊಟೇಲಿನ ಎರಡು ಬೀದಿ ಈಚೆ. ಆ ಹೊಟೇಲಿನ ಮಾಲಿಕರು, ಶಿವರಾಮ ಕಾರಂತರ ಕೋರಿಕೆಯ ಮೇರೆಗೆ, ಅದು ದೊಡ್ಡ ಕಲಾವಿದರೊಬ್ಬರಿಗೆ ತಾವು ಮಾಡುವ ಸೇವೆ ಎಂದು ಭಾವಿಸಿ, ಆ ಹಿರಿಯ ಸಂಗೀತಗಾರರಿಗೆ ಊಟ, ತಿಂಡಿಯ ಕಾಯಂ ಆತಿಥ್ಯ ನೀಡುತ್ತಿದ್ದರು.

ಕೆಲವೊಮ್ಮೆ, ಸಂಜೆಯ ನಾಟಕದ ತಾಲೀಮು ಮುಗಿದಮೇಲೆ, ‘‘ಬಾ, ಈವತ್ತು ರಾತ್ರಿ ನನ್ನ ಜೊತೆ ಊಟಮಾಡು,’’ ಎಂದು ನನ್ನನ್ನು ಹೊಟೇಲಿಗೆ ಕರೆದೊಯ್ಯುತ್ತಿದ್ದರು. ಆ ವೇಳೆಗೆ ಹೊಟೇಲು ಸಾರ್ವಜನಿಕರಿಗೆ ಮುಚ್ಚಿರುತ್ತಿತ್ತು. ಅವರು ಊಟಮಾಡುತ್ತಿದ್ದದ್ದು ಹೊಟೇಲಿನ ಅಡಿಗೆಮನೆಗೆ ಅಂಟಿಕೊಂಡಿದ್ದ ಅರೆಗತ್ತಲ ಒಂದು ಒಳಕೋಣೆಯಲ್ಲಿ. ಅಂಥ ರಾತ್ರಿಗಳಲ್ಲಿ ಆ ಕೋಣೆಯಲ್ಲಿ ಅವರೊಡನೆ ಊಟಕ್ಕೆ ಕೂತಾಗ ನೋಡಿದ್ದೇನೆ: ಹೊಟೇಲಿನ ತೀರ ಎಳೆವಯಸ್ಸಿನ ಮಾಣಿಗಳು — ಹನ್ನೆರಡರಿಂದ ಹದಿನೈದು-ಹದಿನಾರರ ವಯಸ್ಸಿನವರು — ಆಗ ಅವರ ಸುತ್ತ ಸೇರುತ್ತಿದ್ದರು. ಪದ್ಮಚರಣರು ಅವರೊಡನೆ ತುಂಬ ಸಲಿಗೆಯಿಂದ ಹರಟುತ್ತ, ಅವರನ್ನು ಕಿಚಾಯಿಸುತ್ತ ಊಟಮಾಡುತ್ತಿದ್ದರು; ಅವರಿಗೂ ಸಲಿಗೆ ನೀಡಿದ್ದರು. ದಿನವೆಲ್ಲ ದುಡಿದು ದಣಿದಿದ್ದರೂ ಗೆಲುವಾಗಿರುತ್ತಿದ್ದ ಹಳ್ಳಿಗಾಡಿನ ಆ ಬಡಕಲು ಮೈ, ಬಟ್ಟಲಗಣ್ಣಿನ ಬಾಲಕರು, ‘‘ ಸಾರ್, ಒಂದು ರೆಕಾರ್ಡು ಹಾಡಿ. ಅಜ್ಜ, ಒಂದು ಪದ ಹೇಳಿ, ಅಜ್ಜ,’’ ಎಂದು ದುಂಬಾಲುಬಿದ್ದರೆ, ಅವರಿಗೋಸ್ಕರ, ಸಂತೋಷವಾಗಿ, ಭಾವಗೀತೆಯನ್ನೋ, ಅಥವಾ ಸಿನಿಮಾ ಹಾಡು, ಯಕ್ಷಗಾನದ ಪದ, ದಾಸರ ಪದ, ಇಲ್ಲ, ಜನಪದ ಗೀತೆಯನ್ನೋ, ಹಾಡುತ್ತಿದ್ದರು!

ಪದ್ಮಚರಣ ಎಂದರೆ ನನ್ನ ಮಟ್ಟಿಗೆ ಇದೇ: ಈ ಚಿತ್ರ: ಅವರ ಅಂತರಂಗ. ನೆನೆದಾಗ ಮನಸ್ಸು ಈಗಲೂ ತೇವಗೊಳ್ಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.