ಒಂದು ಕಾಡಿನಲ್ಲಿ ಒಂದು ಸಿಂಹ ಮತ್ತು ಒಂದು ನರಿ ಸ್ನೇಹದಿಂದ ಇದ್ದವು. ಅವರಿಬ್ಬರ ಸ್ನೇಹಕ್ಕೆ ಕಾರಣವೊಂದಿತ್ತು. ಸಿಂಹಕ್ಕೆ ತನ್ನ ಜೊತೆ ಮಾತಾಡಲು ಒಬ್ಬ ಮಾತುಗಾರ ಬೇಕಿತ್ತು. ಹಾಗಾಗಿ ಮಾತಿನ ಮಲ್ಲನಾಗಿದ್ದ ಆ ನರಿಯ ಸ್ನೇಹ ಮಾಡಿಕೊಂಡಿತ್ತು.

ನರಿಗೆ ಕಷ್ಟಪಟ್ಟು ಬೇಡೆಯಾಡಿ, ಪ್ರಾಣಿಗಳನ್ನು ಹಿಡಿದು ಹೊಟ್ಟೆ ತುಂಬಿಸಿಕೊಳ್ಳುವುದು ಬರುತ್ತಿರಲಿಲ್ಲ. ಕಷ್ಟಪಡುವುದು ಅದರ ಜಾಯಮಾನದಲ್ಲೇ ಇರಲಿಲ್ಲ. ಹಾಗಾಗಿ ಸಿಂಹವು ತಾನು ಬೇಟೆಯಾಡಿ ತಂದ ಆಹಾರದಲ್ಲಿ ಮಿಕ್ಕಿದ್ದನ್ನು ನರಿಗೂ ಸ್ವಲ್ಪ ಕೊಡುತ್ತಿತ್ತು. ಬಿಟ್ಟಿ ಆಹಾರ ಸಿಗುತ್ತಿದ್ದುದರಿಂದ ನರಿಯು ಸಿಂಹದ ಜೊತೆಗಿತ್ತು.

ಹೀಗೆ ದಿನಗಳು ಕಳೆಯುತ್ತಿದ್ದವು. ಅದೊಂದು ದಿನ ಬೇಟೆಗಾರನೊಬ್ಬನ ಬಾಣಕ್ಕೆ ಸಿಲುಕಿ ಸಿಂಹ ಮೃತಪಟ್ಟಿತು. ಅಂದಿನಿಂದ ನರಿಗೆ ಆಹಾರದ ಸಮಸ್ಯೆ ಎದುರಾಯಿತು. ಒಂದು ದಿನ ಆಹಾರ ಹುಡುಕುತ್ತಾ ಹೊರಟಿತ್ತು ನರಿ. ಆಗ, ಯಾರೋ ಎಸೆದಿದ್ದ ಮಾಂಸದ ಚೂರೊಂದನ್ನು ಕಚ್ಚಿಕೊಂಡು ಕಾಗೆಯೊಂದು ನರಿಯ ಎದುರಿಗೇ ಹಾರುತ್ತಾ ಬಂದು ಅಲ್ಲೇ ಇದ್ದ ಮರವೊಂದರ ಮೇಲೆ ಕುಳಿತುಕೊಂಡಿತು. ಅದನ್ನು ನೋಡಿದ ನರಿಯ ಬಾಯಿಂದ ಜೊಲ್ಲು ಸುರಿಯತೊಡಗಿತು. ಕಾಗೆಯ ಬಾಯಿಂದ ಮಾಂಸವನ್ನು ಕಸಿದುಕೊಳ್ಳುವುದು ಹೇಗೆ ಎಂಬುದನ್ನು ಯೋಚಿಸಲು ಆರಂಭಿಸಿತು ನರಿ. ಆಗ ಅದಕ್ಕೆ ಈ ಹಿಂದೆ ತನ್ನ ತಾತ ಕಾಗೆಯೊಂದನ್ನು ಮರುಳುಗೊಳಿಸಿ ಅದರ ಬಾಯಿಂದ ಮಾಂಸ ಕಸಿದುಕೊಳ್ಳಲು ಮಾಡಿದ್ದ ಉಪಾಯ ನೆನಪಾಯಿತು.

ತಾನು ಕೂಡ ಏನಾದರೂ ಉಪಾಯ ಮಾಡಿ ಕಾಗೆಯನ್ನು ಮರುಳು ಮಾಡಿ ಆ ಮಾಂಸವನ್ನು ಪಡೆದುಕೊಳ್ಳಬೇಕೆಂದು ಯೋಚಿಸಿತು ಠಕ್ಕ ನರಿ. ಬಹಳ ಒಳ್ಳೆಯ ನರಿಯಂತೆ ಸೋಗುಹಾಕಿ ಕಾಗೆಯನ್ನು ಕುರಿತು ಹೀಗೆ ನುಡಿಯಿತು.

‘ಕಾಗೆಯಣ್ಣ.. ಕಾಗೆಯಣ್ಣ.. ನಿನ್ನ ಬಳಗವನ್ನು ಮರೆತು ನೀನೀಗ ಬಲು ಸ್ವಾರ್ಥಿ ಆಗಿಬಿಟ್ಟಿದ್ದೀಯಾ. ಹಿಂದೆಯೆಲ್ಲಾ ಅನ್ನದ ಅಗುಳನೊಂದ ಕಂಡರೆ ಎಲ್ಲರನ್ನೂ ಕೂಗಿ ಕೂಗಿ ಕರೆಯುತ್ತಿದ್ದೆ ನೀನು. ಎಲ್ಲರೊಡನೆ ಅದನ್ನು ಹಂಚಿಕೊಂಡು ತಿನ್ನುತ್ತಿದ್ದೆ. ಇಂದು ಕೂಡ ನೀನು ಹಾಗೇ ಮಾಡಬಾರದೇ? ನಿನ್ನ ಗೆಳೆಯರನ್ನು ಕೂಗಿ ಕರೆಯಬಾರದೆ. ಬಾಯಲ್ಲಿ ಇರುವ ಮಾಂಸವನ್ನು ಹಂಚಿಕೊಂಡು ತಿನ್ನಬಾರದೆ...’ ಎಂದು ಕೇಳಿತು ನರಿ. ಈ ಮಾತನ್ನು ಕೇಳಿ ಕಾಗೆ ಒಮ್ಮೆ ನರಿಯನ್ನು ನೋಡಿತು.

ಕಾಗೆ ತನ್ನನ್ನು ನೋಡಿದ್ದನ್ನು ಕಂಡ ನರಿಯು ತನ್ನ ಉಪಾಯ ಫಲಿಸಿತೆಂದು ಮನಸ್ಸಿನ ಒಳಗೇ ಹಿಗ್ಗುತ್ತಾ, ತನ್ನ ಮಾತಿಗೆ ಉತ್ತರ ನೀಡಲು ಕಾಗೆ ಬಾಯಿ ತೆರೆಯುತ್ತಲೇ ಮಾಂಸ ಕೆಳಗೆ ಬೀಳುವುದು ಎಂದುಕೊಳ್ಳುತ್ತ ಮಾಂಸಕ್ಕಾಗಿ ಕಾದು ಕುಳಿತಿತು. ನರಿಯು ಹಾಗೆ ಬಾಯಿ ತೆರೆದು ಕುಳಿತಿದ್ದಾಗ ಒಂದು ಗಳಿಗೆ ಸುಮ್ಮನೆ ಕುಳಿತಿದ್ದ ಕಾಗೆಯು ಮರುಕ್ಷಣವೇ ಸಾವಕಾಶವಾಗಿ ಮಾಂಸ ತಿನ್ನತೊಡಗಿತು. ನರಿಯು ನೋಡ ನೋಡುತ್ತಿರುವಂತೆಯೇ ಮಾಂಸದ ಚೂರು ಕಾಗೆಯ ಹೊಟ್ಟೆಗೆ ಇಳಿಯತೊಡಗಿತು. ಎಲ್ಲವನ್ನೂ ತಿಂದು ಮುಗಿಸಿ ತೇಗಿದ ಕಾಗೆಯು ಮರದಿಂದ ಕೆಳಗೆ ಹಾರಿ ನರಿಯ ಬಳಿಗೆ ಬಂದು ಹೀಗೆ ನುಡಿಯಿತು:

‘ನರಿಯಣ್ಣ, ಆಗ ನೀನು ಅದೇನೋ ಅನ್ನುತ್ತಿದ್ದೆ. ನನಗಾಗ ಏನೂ ಕೇಳಿಸಲಿಲ್ಲ. ಏಕೆಂದರೆ ನನ್ನ ಕಿವಿ ಸ್ವಲ್ಪ ಕಿವುಡು. ದೂರದಿಂದ ಯಾರಾದರೂ ಏನಾದರೂ ಹೇಳಿದರೆ ಸರಿಯಾಗಿ ಕೇಳಿಸುವುದಿಲ್ಲ. ಈಗ ಹೇಳು ಏನದು...’ ಎಂದಿತು ಕಾಗೆ. ಕಾಗೆಯ ಮಾತು ಕೇಳಿ ಬೆಸ್ತುಬಿದ್ದ ನರಿಯು, ‘ಅಯ್ಯೋ ಹೋಗಿ ಹೋಗಿ ಈ ಕಿವುಡು ಕಾಗೆಯ ಮುಂದೆ ನನ್ನ ಗಂಟಲು ಹರಿದುಕೊಂಡೆನಲ್ಲಾ ನನಗೆ ಬುದ್ಧಿಯಿಲ್ಲ’ ಎಂದು ತನ್ನನ್ನೇ ತಾನು ಶಪಿಸಿಕೊಂಡಿತು.

ಆದರೂ, ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಮುಖ ಕೊಂಕಿಸಿದ ನರಿಯು ‘ಆಹಾ... ಈ ಕಾಗೆಯ ಎಂಜಲನ್ನು ತಿನ್ನಲು ನಾನೇನು ಬರಗೆಟ್ಟು ಕೂತವನೇನು’ ಎಂದು ಮನಸ್ಸಿನಲ್ಲಿಯೇ ಗೊಣಗಿಕೊಳ್ಳುತ್ತಾ ಅಲ್ಲಿಂದ ಕಾಲು ಕಿತ್ತಿತು. ಅದು ಹೋಗುವುದನ್ನೇ ನೋಡುತ್ತಿದ್ದ ಕಾಗೆಯು ಮನಸ್ಸಿನಲ್ಲಿಯೇ ನಕ್ಕು ‘ನನ್ನ ತಾತನ ಹಾಗೆ ನಾನು ಕೂಡ ಪೆದ್ದು ಅಂದುಕೊಂಡೆಯಾ ನರಿಯಣ್ಣಾ? ಕಾಲ ಈಗ ಬದಲಾಗಿದೆ. ನಾವು ಕೂಡ ಬುದ್ದಿವಂತರಾಗಿದ್ದೇವೆ’ ಎಂದು ಹೇಳುತ್ತಾ ಅಲ್ಲಿಂದ ಪುರ್ರನೆ ಹಾರಿಹೋಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.